ಹಳೆಯಂಗಡಿ: ಮಕ್ಕಳಲ್ಲಿನ ಕ್ರೀಡಾ ಉತ್ಸಾಹಕ್ಕೆ ಪೋಷಕರು ಸೂಕ್ತ ಸಮಯದಲ್ಲಿ ಪ್ರೋತ್ಸಾಹ ನೀಡಬೇಕು. ಬೇಸಗೆ ರಜೆಯನ್ನು ವ್ಯರ್ಥ ಮಾಡದೆ, ಕ್ರೀಡೆಯನ್ನು ಅಭ್ಯಸಿಸುವ ಮೂಲಕ ಸಿಕ್ಕಿದ ಅವಕಾಶಗಳನ್ನು ಸದುಪಯೋಗಿಸಬೇಕು ಎಂದು ಹಿರಿಯ ಸಮಾಜ ಸೇವಕ ನಾಗಭೂಷಣ್ ರೆಡ್ಡಿ ಹೇಳಿದರು. ಹಳೆಯಂಗಡಿ ಟಾರ್ಪೋಡೇಸ್ ನ್ಪೋರ್ಟ್ಸ್ ಕ್ಲಬ್ ತೋಕೂರು ಇದರ ಸಂಯೋಜನೆಯಲ್ಲಿ ಮೇ 13ರಂದು ಪ್ರಾರಂಭಗೊಂಡ ವಿಶೇಷ ಕ್ರೀಡಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಲಬ್‌ನ ಮಾರ್ಗದರ್ಶಕ ಡಾ| ಅರವಿಂದ ಭಟ್ ಸುರತ್ಕಲ್ ಮಾತನಾಡಿ, ಟಾರ್ಪೋಡೇಸ್ ಕ್ಲಬ್ ಗ್ರಾಮೀಣ ಭಾಗದ ಮಕ್ಕಳಲ್ಲಿನ ಕ್ರೀಡಾ ಕ್ಷಮತೆಯನ್ನು ಗುರುತಿಸಿ, ವೇದಿಕೆಯನ್ನು ನೀಡುತ್ತಿರುವುದರಿಂದ ಜಿಲ್ಲಾ ರಾಜ್ಯೋತ್ಸವದಂತಹ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದೆ. ಇದರ ಅವಕಾಶವನ್ನು ಸ್ಥಳೀಯರು ಮುಕ್ತವಾಗಿ ಪಡೆಯಬೇಕು ಎಂದರು.
ಕ್ಲಬ್‌ನ ಅಧ್ಯಕ್ಷ ಗೌತಮ್ ಶೆಟ್ಟಿ ಮಾತನಾಡಿ, ಗ್ರಾಮೀಣ ಭಾಗದ ಕ್ರೀಡಾ ಪಟುಗಳಿಗೆ ಅವಕಾಶ ನೀಡಲು, ಹಳೆಯಂಗಡಿ, ತೋಕೂರು, ಮೂಲ್ಕಿ ಬಪ್ಪನಾಡು ದೇಗುಲದ ಬಳಿಯ ನೇಚರ್ ಟೆಂಪಲ್ ವಸತಿ ಸಮುಚ್ಚಯದಲ್ಲಿ, ಪಡುಬಿದ್ರಿಯ ಸಾಗರ್ ವಿದ್ಯಾ ಮಂದಿರದ ಬಳಿಯಲ್ಲಿ ಶಿಬಿರ ನಡೆಸಲಾಗುತ್ತಿದೆ. ಆರೋಗ್ಯ ಶಿಬಿರದ ಜತೆಗೆ ನಿರಂತರವಾಗಿ ಕ್ರೀಡೆಯಿಂದ ಮನೋವಿಕಾಸ ಹಾಗೂ ಆತ್ಮಸ್ಥೈರ್ಯ ಹೆಚ್ಚಿಸುವ ಉದ್ದೇಶ ನಮ್ಮದು ಎಂದರು.
ಮುಖ್ಯ ತರಬೇತುದಾರ ವಿವೇಕ್ ಮಾಹಿತಿ ನೀಡಿದರು. ಕ್ರಿಕೆಟ್ ತರಬೇತುದಾರ ನಿತಿನ್ ಮೂಲ್ಕಿ, ರಹೀಂ, ಟೇಬಲ್ ಟೆನ್ನಿಸ್ ತರಬೇತುದಾರ ಅಶ್ವಿನ್, ಬ್ಯಾಡ್ಮಿಂಟನ್ ತರಬೇತುದಾರ ಸಂತೋಷ್, ವಿವೇಕ್, ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಗೌತಮ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.
ಸರಕಾರಿ ಶಾಲಾ ಮಕ್ಕಳಿಗೆ ತರಬೇತಿ
ಟಾರ್ಪೋಡೇಸ್ ಸ್ಪೋರ್ಟ್ಸ್ ಕ್ಲಬ್ ನಿಂದ ನಡೆಯುತ್ತಿರುವ ವಿಶೇಷ ತರಬೇತಿಯನ್ನು ಈ ಬಾರಿ ಸ್ಥಳೀಯ ಸರಕಾರಿ ಶಾಲೆಯ ಮಕ್ಕಳಿಗೂ ವಿಸ್ತರಣೆ ಮಾಡಲಾಗಿದೆ. ಒಟ್ಟು 45 ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. ಅವರಿಗೆ ದಿನದಲ್ಲಿ ಕ್ರೀಡಾ ಸಲಕರಣೆಗಳ ಸಹಿತ ಕ್ಲಬ್‌ನಿಂದ ಮಾರ್ಗದರ್ಶನ ನೀಡಲಾಗುವುದು ಎಂದು ನಾಗಭೂಷನ್ ಹೇಳಿದರು.