Advertisement

ಬೇಸಗೆ ಬಿಸಿಗೆ ತಂಪೆರೆಯದ ಶುದ್ಧ ನೀರಿನ ಘಟಕ!

05:43 AM Feb 05, 2019 | |

ಸುಳ್ಯ : ಬೇಸಗೆಯ ಬಿಸಿಗೆ ತಂಪೆರೆ ಯಬೇಕಿದ್ದ ಶುದ್ಧ ನೀರಿನ ಘಟಕಗಳು ತಾಲೂಕಿನಲ್ಲಿ ಮಕಾಡೆ ಮಲಗಿವೆ ! ದ.ಕ. ಜಿಲ್ಲೆಯ ಭೌಗೋಳಿಕ ಲಕ್ಷಣಕ್ಕೆ ಸೂಕ್ತವಲ್ಲದ ಈ ಯೋಜನೆಗೆ ಆರಂಭದಲ್ಲೇ ಆಕ್ಷೇಪ ಕೇಳಿ ಬಂದಿತ್ತು. ಅದಾಗ್ಯೂ ಯೋಜನೆ ಅನುಷ್ಠಾನಿಸಲಾಗಿತ್ತು. ಬಹುತೇಕ ಘಟಕದ ಕಾಮಗಾರಿ ತಳ ಮಟ್ಟದಲ್ಲಿ ಬಾಕಿ ಆಗಿದೆ. ಪೂರ್ಣಗೊಂಡ ಎರಡು ಘಟಕಗಳೂ ಜನರಿಗೆ ಅನುಕೂಲವಾಗಿಲ್ಲ.

Advertisement

ಇದರಲ್ಲಿ ಕೆಆರ್‌ಡಿಐಎಲ್‌ 2 ಘಟಕ ಪೂರ್ಣಗೊಳಿಸಿದೆ. ಉಳಿದವು ನಿರ್ಮಾಣ ಹಂತದಲ್ಲಿವೆ. ಪೂರ್ಣಗೊಂಡ ಘಟಕದ ವೆಚ್ಚವನ್ನು ಗುತ್ತಿಗೆ ಸಂಸ್ಥೆಗೆ ಪಾವತಿಸಿರುವ ಮಾಹಿತಿ ಇದೆ. ಆರ್‌ಡಬ್ಲ್ಯುಎಸ್‌ ನಿರ್ಮಿ ಸಲು ಉದ್ದೇಶಿಸಿದ 11 ಘಟಕಗಳ ಪೈಕಿ 7 ಅಪೂರ್ಣ ಸ್ಥಿತಿಯಲ್ಲಿವೆ. 4 ಘಟಕಗಳನ್ನು ರದ್ದು ಮಾಡಲಾಗಿದೆ. ತಾ.ಪಂ., ಜಿ.ಪಂ. ಸಭೆಗಳಲ್ಲಿ ಚರ್ಚೆ ನಡೆದು, ಘಟಕದ ಆವಶ್ಯಕತೆ ಇಲ್ಲ ಎಂಬ ನಿರ್ಣಯವಾದ ಕಾರಣ ಕಾಮಗಾರಿ ಪ್ರಗತಿಯಲ್ಲಿದ್ದ 7 ಸಹಿತ 11 ಘಟಕಗಳನ್ನು ಕೈಬಿಡಲಾಗಿದೆ. ಗುಣಮಟ್ಟದ ಬಗ್ಗೆ ಆಕ್ಷೇಪ ವ್ಯಕ್ತವಾದ ಕಾರಣ ಕಾಮಗಾರಿ ಪ್ರಗತಿಯಲ್ಲಿದ್ದ‌ ಘಟಕಗಳಿಗೂ ಹಣ ಪಾವತಿ ಮಾಡಿಲ್ಲ.

ಏನಿದು ಯೋಜನೆ?
ಗ್ರಾಮ ಪಂಚಾಯತ್‌ ವ್ಯಾಪ್ತಿಯ ಜನಸಂದಣಿ ಪ್ರದೇಶದಲ್ಲಿ ದಿನದ 24 ಗಂಟೆ ನೀರೊದಗಿಸುವ ಯೋಜನೆ ಇದಾಗಿತ್ತು. ಈ ಸಂಬಂಧ ಪ್ರತಿ ಘಟಕಕ್ಕೆ 8.5 ಲಕ್ಷ ರೂ. ವೆಚ್ಚ ನಿಗದಿಪಡಿಸಿ ಬೆಂಗಳೂರಿನ ಸಂಸ್ಥೆಗೆ ಗುತ್ತಿಗೆ ನೀಡಲಾಯಿತು. ಗುತ್ತಿಗೆದಾರ ಸಂಸ್ಥೆಯ ನಿರ್ಲಕ್ಷ್ಯದ ಬಗ್ಗೆ ಎರಡು ವರ್ಷಗಳ ಅನಂತರ ಎಚ್ಚೆತ್ತ ಸರಕಾರ ಗುತ್ತಿಗೆ ರದ್ದುಗೊಳಿಸಿದೆ. ದ.ಕ.ಜಿ.ಪಂ.ನಲ್ಲಿ ಸದನ ಸಮಿತಿ ರಚಿಸಿ ಕಾಮಗಾರಿ ಕುರಿತು ಪರಿಶೀಲನೆ ನಡೆಸಲು ನಿರ್ಧರಿಸಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಗೆ ಸೂಕ್ತವಲ್ಲ
ದಕ್ಷಿಣ ಕನ್ನಡ ಜಿಲ್ಲೆಗೆ ಈ ಯೋಜನೆ ಸೂಕ್ತವಲ್ಲ ಅನ್ನುವ ಕುರಿತು ತಜ್ಞರು ಆರಂಭದಲ್ಲೇ ಅಭಿಪ್ರಾಯ ಮಂಡಿಸಿದ್ದರು. ಅರಂತೋಡು, ಬೆಳ್ಳಾರೆಯಲ್ಲಿ ಘಟಕ ಪೂರ್ಣಗೊಂಡರೂ ಅವುಗಳನ್ನು ಜನರು ಬಳಸುತ್ತಿರುವುದು ಕಡಿಮೆ. ತಾಲೂಕು ಪಂಚಾಯತ್‌ ಸಭೆಗಳಲ್ಲಿ ಘಟಕ ಅನುಷ್ಠಾನದ ಕುರಿತು ಅಪಸ್ವರ ಕೇಳಿ ಬಂದಿತ್ತು. ಕೆಲ ದಿನಗಳ ಹಿಂದೆ ಜಿ.ಪಂ.ನಲ್ಲಿ ಸದನ ಸಮಿತಿ ರಚಿಸಿ ಯೋಜನೆ ಸಾಧಕ ಬಾಧಕ ಪರಾಮರ್ಶೆಗೆ ನಿರ್ಧರಿಸಲಾಗಿತ್ತು.

ಹೇಗಿದೆ ಚಿತ್ರಣ?
2015-16ನೇ ಸಾಲಿನಲ್ಲಿ ಸರಕಾರ ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೇಲುಸ್ತುವಾರಿಯಲ್ಲಿ ಖಾಸಗಿ ಮತ್ತು ಸರಕಾರಿ ಸಹಭಾಗಿತ್ವದಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತು. ಕೆಆರ್‌ಐಡಿಎಲ್‌ ಮೂಲಕ 8 ಹಾಗೂ ಆರ್‌ಡಬ್ಲ್ಯುಎಸ್‌ ಮೂಲಕ 11 ಘಟಕ ನಿರ್ಮಾಣದ ಜವಾಬ್ದಾರಿ ಹಂಚಲಾಗಿತ್ತು.

Advertisement

ಹಣ ಪಾವತಿಸಿಲ್ಲ ಆರ್‌ಡಬ್ಲ್ಯುಎಸ್‌ ಇಲಾಖೆ ಮೂಲಕ 11 ಘಟಕಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿತ್ತು. ಈ ತಾಲೂಕಿಗೆ ಘಟಕದ ಅಗತ್ಯ ಇಲ್ಲ ಎಂಬ ಅಭಿಪ್ರಾಯ ಬಂದ ಕಾರಣ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಗುತ್ತಿಗೆ ಸಂಸ್ಥೆಗೆ ಹಣ ಪಾವತಿಸಿಲ್ಲ. -ಹನುಮಂತರಾಯಪ್ಪ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆರ್‌ಡಬ್ಲ್ಯುಎಸ್‌

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next