Advertisement

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

05:35 PM Apr 13, 2024 | Team Udayavani |

ದೇವನಹಳ್ಳಿ: ಮಳೆಯ ಕೊರತೆಯಿಂದ ಗ್ರಾಮಾಂತರ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದೆ. ಹೀಗಾಗಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಬೇಸಿಗೆಯ ರಜೆಯಲ್ಲೂ ವಿತರಿಸಲು ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಂಡಿದೆ.

Advertisement

ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಸರ್ಕಾರವು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿದೆ. ನಾಲ್ಕು ತಾಲೂಕುಗಳ ಬೇಸಿಗೆ ರಜೆ ಅವಧಿಯಲ್ಲೂ ಮಧ್ಯಾಹ್ನದ ಬಿಸಿಯೂಟ ಯೋಜನೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು, ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ಮಕ್ಕಳಿಗೆ ಬಿಸಿಯೂಟ ವಿತರಣೆ ಮಾಡಲಾಗುತ್ತದೆ. ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಒಟ್ಟು 41 ದಿನಗಳ ಕಾಲ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಶಾಲೆಗಳನ್ನು ಗುರುತಿಸಲಾಗಿದೆ. ಅಡುಗೆ ಮಾಡುವವರ ನೇಮಕ, ಆಹಾರ ಧಾನ್ಯಗಳ ವಿತರಣೆ ವ್ಯವಸ್ಥೆಯನ್ನು ಕೂಡ ಶಿಕ್ಷಣ ಇಲಾಖೆ ಮಾಡಿಕೊಂಡಿದೆ.

ಬಿಸಿಯೂಟ ಕೇಂದ್ರದಲ್ಲಿ ಊಟದ ತಟ್ಟೆ, ಲೋಟ ತೊಳೆಯಲು, ಕುಡಿಯುವ ನೀರಿಗೆ ಸಮಸ್ಯೆ ಆದಲ್ಲಿ ಸ್ಥಳೀಯ ಶಾಲಾಡಳಿತ ವ್ಯವಸ್ಥೆ ಮಾಡುತ್ತದೆ.

ನೀರಿಗೆ ಸಮಸ್ಯೆ ಆಗದಂತೆ ಕ್ರಮ: ಬಿಸಿಲಿನ ತಾಪ ಹೆಚ್ಚು ಇರುವ ಜಿಲ್ಲೆಗಳಲ್ಲಿ ಅಡುಗೆ ಸಿಬ್ಬಂದಿ 8 ಗಂಟೆಗೆ ಹಾಜರಾಗಿ ಮಕ್ಕಳಿಗೆ 10ರಿಂದ 10:30ರೊಳಗೆ ಬಿಸಿಯೂಟ ನೀಡಬೇಕು. ಇತರೆ ಜಿಲ್ಲೆಗಳಲ್ಲಿ 12:30 ರಿಂದ 2 ಗಂಟೆವರೆಗೂ ನೀಡುವ ವ್ಯವಸ್ಥೆ ಮಾಡಬೇಕಿದೆ. ಬಿಸಿಯೂಟ ಕೇಂದ್ರಗಳಿಗೆ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಲು ಜಿಪಂ, ತಾಪಂ, ಗ್ರಾಮ ಪಂಚಾಯಿತಿ ಹಾಗೂ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳ ಅಗತ್ಯ ಕ್ರಮ ವಹಿಸಲು ಸೂಚನೆ ನೀಡಲಾಗಿದೆ. ಬಿಸಿಯೂಟ ಕೇಂದ್ರದಲ್ಲಿ ಸಲಹೆ ಪೆಟ್ಟಿಗೆ ಅಳವಡಿಸಲಾಗುತ್ತದೆ. ಕುಂದುಕೊರತೆ ಇದ್ದಲ್ಲಿ ಅದರಲ್ಲಿ ಪತ್ರ ಬರೆದು ಹಾಕಬಹುದು. ಚೈನ್‌ ಸೇವಾ ಸಂಸ್ಥೆಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕ್ರಮವಹಿಸಲಾಗಿದೆ.

ಎಸ್‌ಎಂಎಸ್‌ ತಂತ್ರಾಂಶದ ಮೂಲಕ ಬಿಸಿಯೂಟ ಸ್ವೀಕರಿಸಿದ ಮಕ್ಕಳ ಮಾಹಿತಿ ಸೇರಿಸಲಾಗುತ್ತದೆ. ಬಿಸಿಯೂಟವನ್ನು ರಜಾ ದಿನಗಳಲ್ಲಿ ಮಕ್ಕಳಿಗೆ ವಿತರಿಸಲು ಬೆಂಗಳೂರು ಗ್ರಾಮಂತರ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿ ಕೊಳ್ಳಲಾಗಿದೆ. ಇದಕ್ಕಾಗಿ ತಾಲೂಕು ಮಟ್ಟದಲ್ಲಿ ಎಸ್‌ಆರ್‌ಪಿ ಸಭೆ ಮೂಲಕ ಅಗತ್ಯ ಕ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿ 855 ಶಾಲೆಗಳಲ್ಲಿ ಒಟ್ಟು 1103 ಮಂದಿ ಅಡುಗೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಬೆಳಗ್ಗೆ 10ಕ್ಕೆ ಶಾಲೆಗೆ ಹಾಜರಾಗಿ 12:30 ರಿಂದ 2 ಗಂಟೆವರೆಗೆ ಮಕ್ಕಳಿಗೆ ಬಿಸಿಯೂಟ ನೀಡುವ ಕಾರ್ಯವನ್ನು ಮಾಡಬೇಕು ಎಂದು ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಹೇಳಿದ್ದಾರೆ.

Advertisement

ಬಿಸಿಯೂಟ ಕಾರ್ಯಕ್ರಮದ ಸಿದ್ಧತೆ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಕೂಡ ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಸೂಚನೆ ನೀಡಲಿದ್ದಾರೆ. ವಿವಿಧ ಶಾಲಾ ಮುಖ್ಯ ಶಿಕ್ಷಕರು ಕೂಡ ಪಿಸಿ ಊಟ ಸಮರ್ಪಕವಾಗಿ ಪೂರೈಕೆಯಾಗುತ್ತಿರುವ ಬಗ್ಗೆ ಗಮನ ಹರಿಸಬೇಕು ಎಂದು ವಿವರಿಸಿದ್ದಾರೆ. ಬೇಸಿಗೆಯಲ್ಲಿ ಬಿಸಿಯೂಟಕ್ಕೆ 4 ತಾಲೂಕುಗಳಿಂದ 37,173 ಮಕ್ಕಳು ನೋಂದಾಯಿಸಿ ಕೊಂಡಿದ್ದಾರೆ. ಮಕ್ಕಳ ಸಂಖ್ಯೆ ಆಧರಿಸಿ ಜಿಲ್ಲೆಯ 855 ಶಾಲೆಗಳಲ್ಲಿ ಬಿಸಿಯೂಟ ವಿತರಿಸಲು ಕ್ರಮ ವಹಿಸಲಾಗಿದೆ. ಕೆಲವರು ರಜೆ ಹಿನ್ನೆಲೆಯಲ್ಲಿ ಊರುಗಳಿಗೆ ಹೋಗುತ್ತಾರೆ. ಕೆಲವರು ಕಾರಣಾಂತರಗಳಿಂದ ಬಿಸಿಯೂಟದಿಂದ ದೂರ ಉಳಿಯುವ ಸಾಧ್ಯತೆ ಇದೆ. ಉಳಿದ ಮಕ್ಕಳಿಗೆ ಮಧ್ಯಾಹ್ನದ ಊಟ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆ.

ಗ್ರಾಮಾಂತರ ಜಿಲ್ಲೆಯ 4 ತಾಲೂಕು ಗಳಲ್ಲಿನ ಸರ್ಕಾರಿ,ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿ ಮಕ್ಕಳಿಗೆ ರಜೆ ಅವಧಿಯಲ್ಲಿ ಬಿಸಿಯೂಟ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾಮಾಂತರ ಜಿಲ್ಲೆಯಲ್ಲಿ 32173 ಮಕ್ಕಳು ನೋಂದಾ ಯಿಸಿಕೊಂಡಿದ್ದಾರೆ. ಅಡುಗೆಗೆ ಬೇಕಾದ ಧಾನ್ಯ, ತರಕಾರಿ ಇತರೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ●ಲಲಿತಮ್ಮ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ

-ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next