ಬೆಂಗಳೂರು: ಬೇಸಿಗೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಎಂಟು ಜಿಲ್ಲೆಗಳಲ್ಲಿನ ನ್ಯಾಯಾಲಯಗಳ ಕಲಾಪ ಹಾಗೂ ಕಚೇರಿಗಳ ಕೆಲಸದ ಅವಧಿಯ ವೇಳಾಪಟ್ಟಿಯನ್ನುಬದಲಾವಣೆ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದ ಕಲಬುರಗಿ ಕಂದಾಯ ವಲಯದ ವ್ಯಾಪ್ತಿಗೆ ಬರುವ ಬೀದರ್, ಯಾದಗಿರಿ, ಕಲಬುರಗಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ಬೆಳಗಾವಿ ಕಂದಾಯ ವಲಯದ ವ್ಯಾಪ್ತಿಗೆ ಬರುವ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಬರುವ ಎಲ್ಲಾ ಸಿವಿಲ್, ಕ್ರಿಮಿನಲ್, ಕೌಟುಂಬಿಕ ಹಾಗೂ ಕಾರ್ಮಿಕ ನ್ಯಾಯಾಲಯದ ಕಲಾಪ ಹಾಗೂ ಆಯಾ ನ್ಯಾಯಾಲಯಗಳ ಅಧೀನದಲ್ಲಿ ಬರುವ ಕಚೇರಿಗಳ ಕೆಲಸದ ಅವಧಿಯನ್ನು ಬದಲಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ವಿ. ಶ್ರೀಶಾನಂದ ಅಧಿಸೂಚನೆ ಹೊರಡಿಸಿದ್ದಾರೆ.
ಅದರಂತೆ, ಏಪ್ರಿಲ್ 1ರಿಂದ ಮೇ 31ರವರೆಗೆ ಈ ಜಿಲ್ಲೆಗಳಲ್ಲಿನ ಎಲ್ಲ ನ್ಯಾಯಾಲಯದ ಕಲಾಪಗಳು ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿವೆ. ಅದೇ ರೀತಿ,
ಕಚೇರಿಗಳು ಬೆಳಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಾರ್ಯ ನಿರ್ವಹಿಸಲಿವೆ.