Advertisement
ರಾಜಧಾನಿ ಕೀವ್, ಖಾರ್ಕಿವ್, ಖೆರ್ಸಾನ್, ಮರಿಯುಪೋಲ್, ವೋಲ್ನೋವಾಖಾ ಬಳಿಕ, ಈಗ ಸುಮಿಯಲ್ಲಿಯೂ ರಷ್ಯಾದ ಪಡೆಗಳು ಭಾರೀ ಪ್ರಮಾಣದ ಶೆಲ್, ಬಾಂಬ್ ದಾಳಿ ನಡೆಸುತ್ತಿವೆ. ಸದ್ಯ ಇಲ್ಲಿ ಭಾರತದ 700 ವಿದ್ಯಾರ್ಥಿಗಳಿದ್ದು, ಇವರನ್ನು ಕರೆತರುವುದೇ ದೊಡ್ಡ ಸವಾಲು ಎಂದು ವಿದೇಶಾಂಗ ಇಲಾಖೆ ಹೇಳಿದೆ. ರಷ್ಯಾ ಜತೆ ಸಂಪರ್ಕದಲ್ಲಿರುವ ವಿದೇಶಾಂಗ ಇಲಾಖೆ, ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಸಲುವಾಗಿ ಈ ನಗರದಲ್ಲಿ ಕದನ ವಿರಾಮ ಘೋಷಿಸಲು ಮನವಿ ಮಾಡಿದೆ. ಅದಕ್ಕೆ ಸ್ಪಂದಿಸಿರುವ ರಷ್ಯಾ, ಇಲ್ಲಿರುವ ಭಾರತೀಯರ ಸ್ಥಳಾಂತರಕ್ಕಾಗಿ 100 ಬಸ್‌ಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ.
ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ದ್ವಂದ್ವ ಸಲಹೆಯಿಂದಾಗಿ ಸುಮಿಯಲ್ಲಿರುವ ವಿದ್ಯಾರ್ಥಿಗಳು ಗೊಂದಲಕ್ಕೆ ಈಡಾಗಿದ್ದಾರೆ. ಒಮ್ಮೆ ನಗರಗಳನ್ನು ಬಿಟ್ಟು, ಗಡಿಯತ್ತ ಹೋಗಿ ಎಂಬ ಸಲಹೆ ನೀಡಲಾಗುತ್ತದೆ. ಮತ್ತೂಮ್ಮೆ ಇದ್ದಲ್ಲೇ ಇರಿ ಎನ್ನಲಾಗುತ್ತದೆ. ಯಾವುದನ್ನು ಪಾಲಿಸಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು. ಸುಮಿಯು ನೆರೆಯ ದೇಶಗಳಾದ ರೊಮೇನಿಯಾ, ಪೋಲೆಂಡ್, ಹಂಗೇರಿ ದೇಶಗಳಿಂದ ದೂರವಿದ್ದು, ರಷ್ಯಾಕ್ಕೆ ಸನಿಹದಲ್ಲಿರುವ ನಗರ. ಸುಮಿಯಲ್ಲಿ ರಷ್ಯಾ ದಾಳಿ ಹೆಚ್ಚಾದಂತೆ, ಮೊದಲಿಗೆ ಗಡಿಗೆ ತೆರಳಲು ಸೂಚನೆ ನೀಡಲಾಗಿತ್ತು. ಈಗ ಭೀಕರ ದಾಳಿ ನಡೆಯುತ್ತಿದೆ, ಬಂಕರ್ ಬಿಟ್ಟು ಬರಬೇಡಿ ಎಂದು ಸೂಚಿಸಲಾಗಿದೆ. ನಮ್ಮಲ್ಲಿದ್ದ ಆಹಾರ, ನೀರು ಸಹಿತ ಎಲ್ಲ ಅತ್ಯಗತ್ಯ ವಸ್ತುಗಳು ಖಾಲಿಯಾಗುತ್ತಿವೆ. ಹೆಚ್ಚು ದಿನ ಇಲ್ಲೇ ಇರಲು ಸಾಧ್ಯವಿಲ್ಲ ಎಂದು ವೀಡಿಯೋ ಮೂಲಕ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
Related Articles
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಆಪರೇಷನ್ ಗಂಗಾ ಪ್ರಕ್ರಿಯೆ ನಡೆಯುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಶನಿವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ವಿದೇಶಾಂಗ ಸಚಿವ ಜೈಶಂಕರ್ ಮತ್ತು ಪಿಯೂಶ್ ಗೋಯಲ್ ಭಾಗಿಯಾಗಿದ್ದರು. ಸುಮಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಕರೆತರುವ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆಯಾಗಿದೆ ಎಂದು ಮೂಲಗಳು ಹೇಳಿವೆ.
Advertisement
ಎರಡು ನಗರಗಳಲ್ಲಿ ಕೊಂಚ ಕದನ ವಿರಾಮಮರಿಯುಪೋಲ್ ಮತ್ತು ವೋಲ್ನೋವಾಖಾ ನಗರರದ ಮೇಲೆ ರಷ್ಯಾ ಪಡೆಗಳು ಭಾರೀ ಪ್ರಮಾಣದಲ್ಲಿ ದಾಳಿ ನಡೆಸಿವೆ. ಈ ದಾಳಿಯಲ್ಲಿ ಜನವಸತಿ ಪ್ರದೇಶಗಳೂ ಜರ್ಝರಿತವಾಗಿವೆ. ಹೀಗಾಗಿ, ಶನಿವಾರ ಬೆಳಗ್ಗಿನಿಂದ ಕೆಲವು ಗಂಟೆಗಳ ಕಾಲ ರಷ್ಯಾ ಕದನ ವಿರಾಮ ಘೋಷಿಸಿತ್ತು. ಕದನ ವಿರಾಮ ಸಂದರ್ಭದಲ್ಲಿ ನಗರದಿಂದ ಬೇರೆ ಕಡೆಗೆ ಹೋಗುವಂತೆ ಇಲ್ಲಿನ ನಾಗರಿಕರಿಗೆ ರಷ್ಯಾ ಸಲಹೆ ನೀಡಿತ್ತು. ಸಂಜೆ 5.30ರ ವೇಳೆಗೆ ರಷ್ಯಾ ಕದನ ವಿರಾಮವನ್ನು ಹಿಂದೆಗೆದು ದಾಳಿ ಆರಂಭಿಸಿದೆ. ಸ್ಥಳೀಯ ಅಧಿಕಾರಿಗಳ ಪ್ರಕಾರ, ಕದನ ವಿರಾಮ ಘೋಷಿಸಿದ್ದ ವೇಳೆಯಲ್ಲೂ ರಷ್ಯಾ ಪಡೆಗಳು ಶೆಲ್ ದಾಳಿ ಮುಂದುವರಿಸಿದ್ದವು. ಹೀಗಾಗಿ, ಬಂಕರ್ ಬಿಟ್ಟು ರಸ್ತೆಗೆ ಬಂದಿದ್ದ ಜನರು ತೀವ್ರ ಆತಂಕಕ್ಕೀಡಾಗಿದ್ದರು. ಹೀಗಾಗಿ, ಮರಿಯುಪೋಲ್ ನಗರದ ಮೇಯರ್, ಜನರನ್ನು ಬಂಕರ್‌ಗಳಿಗೆ ಮರಳುವಂತೆ ಸೂಚಿಸಿದರು. ಇದನ್ನು ನಿರಾಕರಿಸುವ ರಷ್ಯಾ, ಉಕ್ರೇನ್‌ನ ಅಧಿಕಾರಿಗಳೇ ಜನರಲ್ಲಿ ಭಯ ಹುಟ್ಟಿಸಿ ನಗರ ಬಿಟ್ಟು ಹೋಗದಂತೆ ತಡೆದಿದೆ ಎಂದು ಆರೋಪಿಸಿದೆ. ನಾವು ಭಾರತೀಯರು ಸಹಿತ ಬೇರೆ ದೇಶದವರನ್ನು ಉಕ್ರೇನ್‌ನಿಂದ ಸ್ಥಳಾಂತರಿಸಲು ಸಿದ್ಧವಿದ್ದರೂ ಉಕ್ರೇನ್ ತಡೆಯುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿಯೂ ದೂರಿದೆ. ಕದನ ವಿರಾಮಕ್ಕೆ ಮನವಿ
ಸುಮಿ ನಗರದ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದ್ದು, ಭಾರತದ 700 ವಿದ್ಯಾರ್ಥಿಗಳು ಅಲ್ಲಿ ಸಿಲುಕಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಸದ್ಯ ಈ ನಗರದಲ್ಲಿ ಬಾಂಬ್ ಮತ್ತು ವಾಯು ದಾಳಿಯಾಗುತ್ತಿದ್ದು, ವಿದ್ಯಾರ್ಥಿಗಳನ್ನು ಆದ್ಯತೆ ಮೇರೆಗೆ ಕರೆತರುವುದಾಗಿ ಅದು ಹೇಳಿದೆ. ಅಲ್ಲದೆ ಸುಮಿಯಲ್ಲಿ ಕದನ ವಿರಾಮ ಘೋಷಿಸುವಂತೆ ರಷ್ಯಾ ಜತೆ ಮನವಿ ಮಾಡುವುದಾಗಿ ವಿದೇಶಾಂಗ ಇಲಾಖೆ ತಿಳಿಸಿದೆ. ಜತೆಗೆ, ಬೇರೆ ಮಾರ್ಗಗಳ ಮೂಲಕ ವಿದ್ಯಾರ್ಥಿಗಳನ್ನು ವಾಪಸ್ ಕರೆತರಲು ಸಾಧ್ಯವೇ ಎಂಬ ಬಗ್ಗೆಯೂ ಪರಿಶೀಲಿಸುವುದಾಗಿ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗಚಿ ತಿಳಿಸಿದ್ದಾರೆ. ಸುಮಿ ಸ್ಥಿತಿಯಂತೂ ತೀರಾ ಕಳವಳಕಾರಿಯಾಗಿದೆ. ಅಲ್ಲಿ ನಿರಂತರ ಶೆಲ್ ದಾಳಿ ಮತ್ತು ಹಿಂಸಾಚಾರ ನಡೆಯುತ್ತಿದೆ. ಸಾರಿಗೆ ವ್ಯವಸ್ಥೆಯೂ ಸರಿಯಾಗಿಲ್ಲ ಎಂದು ತಿಳಿಸಿದ್ದಾರೆ. ನೋ ಫ್ಲೈ ಝೋನ್ ಅಪಾಯ!
ಉಕ್ರೇನ್ ವಾಯು ಪ್ರದೇಶವನ್ನು ನೋ ಫ್ಲೈ ಝೋನ್ ಎಂದು ಘೋಷಿಸಿ ಎಂಬ ಅಲ್ಲಿನ ಅಧ್ಯಕ್ಷ ಝೆಲೆನ್‌ಸ್ಕಿ ಅವರ ಮನವಿಯನ್ನು ನ್ಯಾಟೋ ತಳ್ಳಿ ಹಾಕಿರುವಂತೆಯೇ, ರಷ್ಯಾ ಕೂಡ ಈ ಬಗ್ಗೆ ನ್ಯಾಟೋ ದೇಶಗಳಿಗೆ ಕಠಿನ ಸಂದೇಶ ರವಾನಿಸಿದೆ. ಒಂದು ವೇಳೆ ನ್ಯಾಟೋ ದೇಶಗಳು ಉಕ್ರೇನ್ ವಾಯು ಪ್ರದೇಶವನ್ನು ನೋ ಫ್ಲೈ ಝೋನ್ ಎಂದು ಘೋಷಿಸಿದರೆ, ಮೂರನೇ ದೇಶವು ಈ ಸಂಘರ್ಷದಲ್ಲಿ ಇಣುಕಿದಂತೆ ಆಗುತ್ತದೆ. ಆಗ ಮುಂದೆ ಆಗುವ ಬೆಳವಣಿಗೆಗಳಿಗೆ ನಾವು ಜವಾಬ್ದಾರರಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ನ್ಯಾಟೋ ದೇಶಗಳಿಗೆ ಸೂಚಿಸಿದ್ದಾರೆ. ಇಂಥ ಸಂದರ್ಭದಲ್ಲಿ ನಮ್ಮ ಎದುರಾಳಿಗಳು ಎಷ್ಟೇ ಸಂಖ್ಯೆಯಲ್ಲಿ ಬಂದರೂ, ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಖಡಕ್ಕಾಗಿಯೇ ಎಚ್ಚರಿಕೆ ನೀಡಿದ್ದಾರೆ. ಭಾರತದಲ್ಲಿ ಇಂಟರ್ನ್ ಶಿಪ್ ಗೆ ಅವಕಾಶ
ಉಕ್ರೇನ್‌ನಲ್ಲಿ ಎಂಬಿಬಿಎಸ್ ಮಾಡಿದವರು ಇನ್ನು ಭಾರತದಲ್ಲೇ ಇಂಟರ್ನ್ ಶಿಪ್ ಗೆ ಮಾಡಬಹುದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಶನಿವಾರ ಹೇಳಿದೆ. ಯುದ್ಧ ಪೀಡಿತ ದೇಶದಲ್ಲಿ ಎಂಬಿಬಿಎಸ್ ಪೂರ್ತಿಗೊಳಿಸಿ, ಸ್ವದೇಶಕ್ಕೆ ವಾಪಸಾದವರಿಗೆ ಈ ನಿರ್ಧಾರ ಅನ್ವಯವಾಗಲಿದೆ. ಆಯಾ ರಾಜ್ಯಗಳ ವೈದ್ಯಕೀಯ ಮಂಡಳಿಗಳು ಕೂಡ ಈ ಅಂಶವನ್ನು ಪರಿಗಣಿಸಿ ಇಂಟರ್ನ್ಶಿಪ್‌ಗೆ ಅವಕಾಶ ಕಲ್ಪಿಸಬಹುದು ಎಂದು ಎನ್‌ಎಂಸಿ ತಿಳಿಸಿದೆ. ಆದರೆ ಇದಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಎಬಿ) ನಡೆ ಸುವ ಫಾರಿನ್ ಮೆಡಿಕಲ್ ಗ್ರಾಜುವೇಟ್ ಎಕ್ಸಾಮಿನೇಷನ್ (ಎಫ್ಎಂಜಿಇ) ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿರಬೇಕು. ಈ ಅರ್ಹತೆ ಹೊಂದಿದ ವೈದ್ಯ ವಿದ್ಯಾರ್ಥಿಗಳಿಗೆ ಮಾತ್ರ ದೇಶದಲ್ಲಿ ಇಂಟರ್ನ್ ಶಿಪ್ ಗೆ ನೋಂದಣಿ ಮಾಡಲು ಅರ್ಹತೆ ದೊರೆಯುತ್ತದೆ. ಅವರಿಂದ ಯಾವುದೇ ಶುಲ್ಕ ಪಡೆಯುವುದಿಲ್ಲ ಎಂಬ ಬಗ್ಗೆ ಮೆಡಿಕಲ್ ಕಾಲೇಜುಗಳಿಂದ ಲಿಖಿತವಾಗಿ ಹೇಳಿಕೆಯನ್ನು ರಾಜ್ಯ ವೈದ್ಯಕೀಯ ಮಂಡಳಿಗಳು ಪಡೆದುಕೊಳ್ಳಬೇಕು. ದೇಶದಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದವರಿಗೆ ಯಾವ ರೀತಿಯಲ್ಲಿ ಶಿಷ್ಯ ವೇತನ ಮತ್ತು ಇತರ ಸವಲತ್ತುಗಳನ್ನು ನೀಡಲಾಗುತ್ತದೆಯೋ, ಅದನ್ನು ವಿದೇಶದಲ್ಲಿ ವೈದ್ಯ ಪದವಿ ಪೂರ್ತಿಗೊಳಿಸಿದವರಿಗೂ ನೀಡಬೇಕು ಎಂದೂ ಎನ್‌ಎಂಸಿ ಸ್ಪಷ್ಟಪಡಿಸಿದೆ. 13,300 ಮಂದಿ ವಾಪಸ್
ಉಕ್ರೇನ್‌ನ ನೆರೆಹೊರೆಯ ದೇಶಗಳಿಂದ ಇದುವರೆಗೆ 13,300 ಮಂದಿಯನ್ನು 63 ವಿಮಾನಗಳ ಮೂಲಕ ಕರೆತರಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಆಪರೇಶನ್ ಗಂಗಾ ಮೂಲಕ 13 ವಿಮಾನಗಳು ಬರಲಿವೆ. ಖಾರ್ಕಿವ್ ಮತ್ತು ಪಿಸೋಚಿನ್ ನಗರಗಳಿಂದ ಹೆಚ್ಚು ಕಡಿಮೆ ಎಲ್ಲ ವಿದ್ಯಾರ್ಥಿಗಳನ್ನು ಕರೆತರಲಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ರವಿವಾರ 11 ವಿಮಾನಗಳಲ್ಲಿ 2,200 ಮಂದಿ ಭಾರತೀಯರು ತವರಿಗೆ ಮರಳಲಿದ್ದಾರೆ.