Advertisement

ಸುಮತೀಂದ್ರ ನಾಡಿಗ ಇನ್ನಿಲ್ಲ

06:00 AM Aug 08, 2018 | Team Udayavani |

ಬೆಂಗಳೂರು: ಹಿರಿಯ ಕವಿ, ವಿಮರ್ಶಕ ಸುಮತೀಂದ್ರ ನಾಡಿಗ (83) ಇನ್ನಿಲ್ಲ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಡಿಗ ಅವರು ಮಂಗಳವಾರ ಬೆಳಗ್ಗೆ 6.29ರ ವೇಳೆ ಹೃದಯಾಘಾತದಿಂದ ಬನ್ನೇರುಘಟ್ಟ ರಸ್ತೆಯ ಪೋರ್ಟಿಸ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪತ್ನಿ ಮಾಲತಿ, ಪುತ್ರಿಯರಾದ ಸ್ವಪ್ನ ಮತ್ತು ರಶ್ಮಿ ಹಾಗೂ ಪುತ್ರ ಅಪೂರ್ವ ಸೇರಿ ಅಪಾರ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ. ಜು.31ರಂದು ಕಿಡ್ನಿ, ಉಸಿರಾಟದ ತೊಂದರೆಯಿಂದಾಗಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸುದ್ದಿ ತಿಳಿದ ಸಾರಸ್ವತ ಲೋಕದ ಹಿರಿಯರು ನಾಡಿಗ ಅವರ ಜೆ.ಪಿ. ನಗರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

Advertisement

ಸಾಹಿತಿ ಚಂದ್ರಶೇಖರ ಪಾಟೀಲ, ಚುಟುಕು ಕವಿ ಡುಂಡಿರಾಜ್‌, ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌, ವೈ.ಕೆ ಮುದ್ದುಕೃಷ್ಣ ಸೇರಿ ಹಲವರು ಅಂತಿಮ ನಮನ ಸಲ್ಲಿಸಿದರು. ಸಂಜೆ 5 ಗಂಟೆಗೆ ಬನಶಂಕರಿಯ ಚಿತಾಗಾರದಲ್ಲಿ ಬ್ರಾಹ್ಮಣ ವಿಧಿವಿಧಾನ ಪ್ರಕಾರ ಅಂತ್ಯಕ್ರಿಯೆ ನಡೆಯಿತು.ಕಾವ್ಯದ ಬಗ್ಗೆ ವಿಶೇಷ ಅಧ್ಯಯನ: ಚಿಕ್ಕಮಗಳೂರು ಜಿಲ್ಲೆ ಕಳಸದಲ್ಲಿ 1935ರ ಮೇ 4ರಂದು ಜನಿಸಿದ ಸುಮತೀಂದ್ರ ನಾಡಿಗರು, ಮೈಸೂರು ವಿವಿ ಮತ್ತು ಅಮೆರಿಕದ ಫಿಲಡೆಲ್ಫಿಯಾ ವಿವಿಗಳಿಂದ ಇಂಗ್ಲಿಷ್‌ ಎಂ.ಎ. ಪದವಿ ಪಡೆದಿದ್ದರು. ಇಂಗ್ಲಿಷ್‌, ಕನ್ನಡ ಸಾಹಿತ್ಯದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅವರು, 1985ರಲ್ಲಿ ಬೆಂಗಳೂರು ವಿವಿಯಿಂದ ಕನ್ನಡದಲ್ಲಿ ಡಾಕ್ಟರೇಟ್‌ ಗಳಿಸಿದ್ದರು.

“ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು’ ಎಂಬ ವಿಷಯದ ಮೇಲೆ ಪ್ರೌಢ ಪ್ರಬಂಧ ಮಂಡಿಸಿದ್ದ ಅವರು, ಗೋಪಾಲಕೃಷ್ಣ ಅಡಿಗ ಮತ್ತು ಕೆ.ಎಸ್‌. ನರಸಿಂಹಸ್ವಾಮಿಯವರ ಕಾವ್ಯದ ಬಗ್ಗೆ ವಿಶೇಷವಾದ ಅಧ್ಯಯನ ಮಾಡಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. 1996-1999ರ ಅವಧಿಯಲ್ಲಿ ನ್ಯಾಷನಲ್‌ ಬುಕ್‌ ಟ್ರಸ್ಟ್‌ ಅಧ್ಯಕ್ಷರಾಗಿದ್ದ ಇವರಿಗೆ ಹರಿದ್ವಾರದ ಗುರುಕುಲ ಕಾಂಗ್ದಿ ವಿವಿ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದೆ.

ಸಾಹಿತ್ಯ ಕೊಡುಗೆ: ಅಧ್ಯಾಪನ ವೃತ್ತಿಯಲ್ಲಿದ್ದುಕೊಂಡು ಸಾಹಿತ್ಯ ಕ್ಷೇತ್ರಕ್ಕೆ ನಿರಂತರ ಕೊಡುಗೆ ನೀಡಿರುವ ಅವರು, ಕಾವ್ಯ, ಸಣ್ಣಕಥೆ, ವಿಮರ್ಶೆ, ಅನುವಾದ ಪ್ರಕಾರಗಳಲ್ಲಿ ಸೇವೆ ಸಲ್ಲಿಸಿದ್ದರು. ನಾಡಿಗರು ಬರೆದಿರುವ “ದಾಂಪತ್ಯ ಗೀತ’ ಮತ್ತು “ಪಂಚಭೂತಗಳು’ ಕವನ ಸಂಕಲನಗಳು ಪ್ರಸಿದಿಟಛಿ
ಪಡೆದಿದ್ದು ಇಂಗ್ಲಿಷ್‌, ಸಂಸ್ಕೃತ, ಬಂಗಾಳಿ, ಮಲಯಾಳ ಸೇರಿ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. “ಮೌನದಾಚೆಯ ಮಾತು’, “ನಾಲ್ಕನೆಯ ಸಾಹಿತ್ಯ ಚರಿತ್ರೆ’, “ಮತ್ತೂಂದು ಸಾಹಿತ್ಯ ಚರಿತ್ರೆ,”ಅಡಿಗರು ಮತ್ತು ನವ್ಯಕಾವ್ಯ’ ಮತ್ತಿತರ ವಿಮರ್ಶ ಕೃತಿಗಳನ್ನು ರಚಿಸಿದ್ದರು. ಮಕ್ಕಳ ಸಾಹಿತ್ಯಕ್ಕೂ
ಕೊಡುಗೆ ನೀಡಿರುವ ನಾಡಿಗರು,”ಡಕ್ಕಣಕ್ಕ ಡಕ್ಕಣ’, “ಧ್ರುವ ಮತ್ತು ಪ್ರಹ್ಲಾದ’, “ದಿಡಿಲಕ್‌ ದಿಡಿಲಕ್‌’, “ಗೂಬೆಯ ಕಥೆ’, “ಇಲಿ ಮದುವೆ’, “ಗಾಳಿಪಟ’, ಮತ್ತು “ಹನ್ನೊಂದು ಹಂಸಗಳು’ ಎಂಬ ಮಕ್ಕಳ ನಾಟಕಗಳನ್ನು ರಚಿಸಿದ್ದರು.

ಸಾಹಿತ್ಯದ ಅಭಿರುಚಿ ಬೆಳೆಸಿದ ನಾಡಿಗರು ಅಲ್ಲಿ ಅನಾಥ ಭಾವನೆ ಕಾಡುತ್ತಿತ್ತು. ನೆರೆಯ ಸ್ನೇಹಿತನನ್ನು ಕಳೆದುಕೊಂಡ ಮನಸು ಮರುಗುತ್ತಿತ್ತು. ಮಾಲೀಕನಿಲ್ಲದೆ ಟೆರೇಸ್‌ ತೋಟ ಬಣಗುಡುತ್ತಿತ್ತು. ದೊರೆಯಿಲ್ಲದ ಆಸನದ ಮುಂದೆ ಲೇಖನಿಗಳು, ಪುಸ್ತಕಗಳು ಬಿಡಿ, ಬಿಡಿಯಾಗಿ ಬಿದ್ದಿದ್ದವು. ಈ ಸನ್ನಿವೇಶ ಕಂಡು ಬಂದಿದ್ದು, ಸಾಹಿತಿ ಸುಮತೀಂದ್ರ ನಾಡಿಗ ಅವರು ನೆಲೆಸಿದ್ದ ಜೆಪಿ ನಗರದ 6ನೇ ಹಂತದ ಮಾಯಾ ಇಂದ್ರಪ್ರಸ್ಥಾ ಅಪಾರ್ಟ್‌ಮೆಂಟ್‌ನ 1ನೇ ಮಹಡಿಯ, ಎಸ್‌-12 ನಿವಾಸದಲ್ಲಿ. 

Advertisement

ನವ್ಯಕಾವ್ಯಘಟ್ಟದ ಸಾಹಿತಿ ಸುಮತೀಂದ್ರ ನಾಡಿಗರು ತಾವು ಉಳಿದುಕೊಂಡ ಅಪಾರ್ಟ್‌ಮೆಂಟ್‌ನಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿದ್ದರು. 106 ಕುಟುಂಬಗಳು ವಾಸವಾಗಿರುವ ಈ ಅಪಾರ್ಟ್‌ ಮೆಂಟ್‌ನಲ್ಲಿ ನಾಡಿಗರು ತಿಂಗಳಿಗೆ ಒಂದು ಸಾಹಿತ್ಯದ ಕುರಿತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ದಕ್ಷಿಣ ಭಾರತ ಮತ್ತು ಉತ್ತರ ಭಾರತದವರು ಇಲ್ಲಿ ನೆಲೆಸಿದ್ದು, ಅವರೆಲ್ಲರಿಗೂ ಸಾಹಿತ್ಯದ ಹುಚ್ಚು ಹಿಡಿಸಿದ್ದರು. ತಮ್ಮ ನೆರೆಯವರಿಗೂ ತಾವು ಬರೆದ ಪುಸ್ತಕ ಗಳನ್ನು ಓದಲು ಕೊಡುತ್ತಿದ್ದರು. ಎಲ್ಲಾ ಸಾಹಿತಿಗಳ ರೀತಿಯಲ್ಲಿ ಇರಲಿಲ್ಲ. ಎಲ್ಲರನ್ನೂ ನಗಿಸುತ್ತಿದ್ದರು. ಮಕ್ಕಳೊಂದಿಗೆ ಅಕ್ಕರೆಯಿಂದ ಮಾತನಾಡುತ್ತಿದ್ದರು. ಅವರು ಕನ್ನಡ ಸಾಹಿತ್ಯ ಲೋಕದ ಸಾಧಕರು ಎಂಬುವುದು ತಿಳಿದಿದ್ದೇ ಇತ್ತೀಚೆಗೆಷ್ಟೇ ಟಿವಿಯೊಂದರ ಸಿಬ್ಬಂದಿ ಇಲ್ಲಿಗೆ ಸಂದರ್ಶನಕ್ಕೆಂದು ಬಂದಾಗ ಎಂದು, ಅಪಾರ್ಟ್‌ ಮೆಂಟ್‌ನ ಅಧ್ಯಕ್ಷ ಕೇಸರಿ ಪ್ರಸಾದ್‌ ಹೇಳಿದರು.

ನಾಡಿಗರು “ಶ್ರೀವತ್ಸ ಸ್ಮತಿ’ ಎಂಬ ಕೃತಿಯನ್ನು ಬರೆದಿದ್ದರು. ಕೆಲವೇ ದಿನಗಳಲ್ಲಿ ಅದು ಬಿಡುಗಡೆಯಾಗಬೇಕಾಗಿತ್ತು. ಆದರೆ ಅದು ಬಿಡುಗಡೆಯಾಗುವ ಮುನ್ನವೇ ಹೀಗಾಯಿತು. ಅಪ್ಪ ಆಸ್ಪತ್ರೆ ಯಲ್ಲಿದ್ದಾಗ ಮನೆಗೆ ಹೋಗೋಣ. ಎಲ್ಲರೂ ಸೇರಿ ಕಾರ್ಡ್ಸ್ ಆಡೋಣ ಎಂದು ಹಂಬಲಿಸುತ್ತಿದ್ದರು ಎಂದು ಪುತ್ರಿ ಸ್ವಪ್ನ ಕಣ್ಣೀರಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next