Advertisement

ಸುಮನಹಳ್ಳಿ ಮೇಲ್ಸೇತುವೆ 10 ದಿನ ಬಂದ್‌

12:16 AM Nov 03, 2019 | Lakshmi GovindaRaju |

ಬೆಂಗಳೂರು: ಸುಮನಹಳ್ಳಿ ವೃತ್ತದ ಮೇಲ್ಸೇತುವೆಯಲ್ಲಿ ಗುಂಡಿ ಬಿದ್ದಿದ್ದು ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಮುಂದಿನ 10 ದಿನಗಳ ಕಾಲ ಸಂಚಾರ ಸ್ಥಗಿತಗೊಳಿಸಲಾಗಿದೆ. ಕಳೆದ ಒಂದು ತಿಂಗಳಿನಿಂದ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸುಮನಹಳ್ಳಿ ಮೇಲ್ಸೇತುವೆ ಮೇಲೆ ಗುಂಡಿ ಸೃಷ್ಟಿಯಾಗಿದ್ದು, ರಸ್ತೆಯ ಕಾಂಕ್ರೀಟ್‌ ಸಂಪೂರ್ಣವಾಗಿ ಕಿತ್ತು ಹಳ್ಳ ಬಿದ್ದಿದೆ.

Advertisement

ಮೈಸೂರು ರಸ್ತೆಯಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಹೊರವರ್ತುಲ ರಸ್ತೆಯ ಭಾಗವಾಗಿರುವ ಸುಮನಹಳ್ಳಿ ಮೇಲ್ಸೇತುವೆ ಪ್ರತಿನಿತ್ಯ 70 ಸಾವಿರಕ್ಕೂ ಅಧಿಕ ವಾಹನ ಸವಾರರಿಗೆ ಅನುಕೂಲವಾಗುತಿದೆ¤. ರಾತ್ರಿ ವೇಳೆ ಅತೀ ಹೆಚ್ಚು ಭಾರೀ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಿದ್ದವು. ಇದೀಗ ಮೇಲ್ಸೆತುವೆ ಮೇಲೆ ಗುಂಡಿ ಬಿದ್ದಿರುವುದರಿಂದ ವಾಹನ ಸಂಚಾರ ನಿಷೇಧಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌, 2007ರಲ್ಲಿ ಸುಮನಹಳ್ಳಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಚಾಲನೆ ನಿಡಿತ್ತು. 2010ಕ್ಕೆ ಕಾಮಗಾರಿ ಪೂರ್ಣಗೊಳಿಸಿ ಮೇಲ್ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ನಂತರ 2016ರಲ್ಲಿ ಬಿಡಿಎ ಮೇಲ್ಸೇತುವೆ ನಿರ್ವಹಣೆಯನ್ನು ಬಿಬಿಎಂಪಿಗೆ ನೀಡಿದೆ. ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದ ಮೇಲ್ಸೇತುವೆಯ ಕಾಂಕ್ರೀಟ್‌ ಸ್ಟ್ರಕ್ಚರ್‌ ಸ್ಲಾಬ್‌ ಹಾಳಾಗಿದೆ.

ಕನಿಷ್ಠ 30 ವರ್ಷ ಜೀವಿತಾವಧಿ ಹೊಂದಿರುವ ರಸ್ತೆ ಇಷ್ಟು ಬೇಗ ಹಾಳಾಗುತ್ತಿರುವುದು ಬೇಸರ ತರುತ್ತಿದೆ ಎಂದರು.ಮೇಲ್ಸೇತುವೆ ಮೇಲೆ ಗುಂಡಿ ಬಿದ್ದಿರುವುದು ಗಂಭೀರ ಪ್ರಕರಣವಾಗಿದ್ದು, ನಾಗರಬಾವಿಯಿಂದ ಗೊರಗುಂಟೆಪಾಳ್ಯದ ತನಕ ನಿರ್ಮಾಣವಾಗಿರುವ ಹೊರ ವರ್ತುಲ ರಸ್ತೆಯ ಸ್ಯಾಂಪಲ್‌ಗ‌ಳನ್ನು ತೆಗೆದುಕೊಂಡು ಸಂಪೂರ್ಣವಾಗಿ ಸ್ಕ್ಯಾನ್‌ ಮಾಡಿ ಕಾಮಗಾರಿಯ ಗುಣಮಟ್ಟದ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ.

ಈ ವರದಿಯನ್ನು ಸಿವಿಲ್‌ ಏಡ್‌ ಟೆಸ್ಟ್‌ ಎಂಬ ಖಾಸಗಿ ಟೆಕ್ನಿಕಲ್‌ ಏಜೆನ್ಸಿಗೆ ವಹಿಸಲಾಗಿದೆ. ನ.4ರಂದು ವರದಿ ಸಿದ್ಧವಾಗಲಿದ್ದು, ಮೇಲ್ಸೇತುವೆಯ ಗುಂಡಿಗೆ ಕಳಪೆ ಕಾಮಗಾರಿ ಕಾರಣವೇ ಅಥವಾ ಕಳಪೆ ನಿರ್ವಹಣೆ ಕಾರಣವೇ ಎಂಬುದು ತಿಳಿಯಲಿದೆ. ನಂತರ ತಪ್ಪಿತಸ್ಥರ ವಿರುದ್ಧ ಕಾನೂನಿನ್ವಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

Advertisement

ಈಗಾಗಲೇ ನಗರ ಸಂಚಾರ ಪೊಲೀಸ್‌ ಆಯುಕ್ತರಿಗೆ ಪರ್ಯಾಯ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡಲು ಸೂಚನೆ ನೀಡಲಾಗಿದ್ದು, ಮುಂದಿನ 10 ದಿನಗಳ ಕಾಲ ಮೇಲ್ಸೇತುವೆ ಬಳಕೆಯನ್ನು ನಿಷೇಧಿಸಲಾಗಿದೆ. ಈಗಾಗಲೇ ದುರಸ್ತಿ ಕಾಮಗಾರಿ ಪ್ರಾರಂಭವಾಗಿದ್ದು, ಎರಡು ದಿನಗಳಲ್ಲಿ ಕಾಮಗಾರಿ ಮುಗಿಸುವುದಾಗಿ ತಿಳಿಸಿದ್ದಾರೆ. ಎರಡು ದಿನಗಳಲ್ಲೇ ಕಾಮಗಾರಿ ಪೂರ್ಣಗೊಂಡರೂ ಪರಿಸ್ಥಿತಿಯನ್ನು ಆಧರಿಸಿ ಮೇಲ್ಸೇತುವೆ ಬಳಕೆಗೆ ಅವಕಾಶ ನೀಡಲಾಗುವುದು. ಹೀಗಾಗಿ, ಸದ್ಯ ದ್ವಿಚಕ್ರ ವಾಹನಗಳನ್ನು ಕೂಡ ಮೇಲ್ಸೇತುವೆ ಪ್ರವೇಶಿಸದಂತೆ ತಡೆಯಲಾಗಿದೆ ಎಂದು ಹೇಳಿದರು.

ಮೇಲ್ಸೇತುವೆ ನಿರ್ವಹಣೆಗೆ ಅನುದಾನ ಕೊರತೆ: ನಗರದಲ್ಲಿ ಒಟ್ಟು 14 ಸಾವಿರ ಕಿ.ಮೀ.ಉದ್ದದ ರಸ್ತೆಗಳಿದ್ದು, ಈ ಪೈಕಿ 1400 ಕಿ.ಮೀ. ಮುಖ್ಯರಸ್ತೆಗಳಿವೆ. ಮುಖ್ಯರಸ್ತೆಗಳ ನಿರ್ವಹಣೆಗೆ ವಾರ್ಷಿಕ 50 ಕೋಟಿ ರೂ. ಮೀಸಲಿಡಲಾಗಿದೆ. ಆದರೆ, ಸದರಿ ಅನುದಾನ ಸಾಕಾಗುತ್ತಿಲ್ಲ. ರಸ್ತೆಗಳ ನಿರ್ಮಾಣದಂತೆ ನಿರ್ವಹಣೆಗೂ ಒತ್ತು ನೀಡಬೇಕಾಗಿದೆ. ಹೀಗಾಗಿ, ರಸ್ತೆ ನಿರ್ವಹಣೆಗೆ ಹೆಚ್ಚು ಅನುದಾನ ನೀಡಬೇಕು. ಆಗ ಮಾತ್ರ ರಸ್ತೆಗಳ ಜೀವಿತಾವಧಿ ಹೆಚ್ಚಲಿದೆ ಎಂದು ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ತಿಳಿಸಿದರು.

ಕಪ್ಪು ಪಟ್ಟಿಯಲ್ಲಿರುವ ಸಂಸ್ಥೆ: 2007ರಲ್ಲಿ ಮೇಲ್ಸೇತುವೆ ಕಾಮಗಾರಿಯನ್ನು ಚೆನೈ ಮೂಲದ ಈಸ್ಟ್‌ ಕೋಸ್ಟ್‌ ಕನ್ಸ್‌ಟ್ರಕ್ಷನ್‌ ಕಂಪನಿಗೆ ನೀಡಲಾಗಿತ್ತು. ಪ್ರಸ್ತುತ ಈ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next