Advertisement
ಸುಮಲತಾ ಅಂಬರೀಶ್ ಒಟ್ಟು 7,03,660 ಮತಗಳನ್ನು ಪಡೆದುಕೊಂಡು ವಿಜಯದ ನಗೆ ಬೀರಿದರೆ, ಮೈತ್ರಿ ಅಭ್ಯರ್ಥಿ ಕೆ.ನಿಖೀಲ್ ಕುಮಾರಸ್ವಾಮಿ 5,77,784 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
Related Articles
Advertisement
ಲೋಕಸಭಾ ಸಾರ್ವತ್ರಿಕ ಚುನಾವಣೆ ಹಾಗೂ ಉಪ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಜೆಡಿಎಸ್‌ಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಆಘಾತ ನೀಡಿದೆ. ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕಳೆದುಕೊಂಡಿರುವ ಜೆಡಿಎಸ್ ವರ್ಚಸ್ಸಿಗೆ ಇದೀಗ ಧಕ್ಕೆಯಾಗಿದೆ.
108 ಟೇಬಲ್‌ಗಳಲ್ಲಿ ಎಣಿಕೆ: ಮತ ಎಣಿಕೆ ನಡೆದ ಸರ್ಕಾರಿ ಮಹಾ ವಿದ್ಯಾಲಯದ 14 ಕೊಠಡಿಗಳಲ್ಲಿ ಹಾಕಿದ್ದ 108 ಟೇಬಲ್‌ಗಳಲ್ಲಿ ಎಣಿಕೆ ಕಾರ್ಯ ನಡೆಯಿತು. ಎರಡು ಇವಿಎಂ ಯಂತ್ರಗಳಲ್ಲಿ ಕ್ಲೋಸ್ ಬಟನ್ ಒತ್ತದ ಕಾರಣ ಅದನ್ನು ತಜ್ಞರು ವೀಕ್ಷಕರ ಸಮ್ಮುಖದಲ್ಲಿ ಕ್ಲೋಸ್ ಬಟನ್ ಒತ್ತಿ ಬಳಿಕ ಅದರಲ್ಲಿ ದಾಖಲಾಗಿರುವ ಮತಗಳನ್ನು ಎಣಿಕೆಗೆ ಪರಿಗಣಿಸಿದರು.
ಎಲ್ಲಾ ಇವಿಎಂಗಳಲ್ಲಿ ದಾಖಲಾಗಿರುವ ಮತಗಳ ಎಣಿಕೆ ನಂತರ ಪ್ರತಿ ವಿಧಾನಸಭಾ ಕ್ಷೇತ್ರದ ಐದು ವಿವಿ ಪ್ಯಾಟ್‌ಗಳನ್ನು ಎಣಿಕೆ ಮಾಡಲಾಯಿತು. ಜೊತೆಗೆ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 60ನೇ ಮತಗಟ್ಟೆಯಲ್ಲಿ ಅಣಕು ಮತದಾನದ ನಂತರದ ಮಾಕ್ ಪೋಲ್ ಕ್ಲಿಯರ್ ಮಾಡದೆ ಮತದಾನ ಪ್ರಕ್ರಿಯೆ ಆರಂಭಿಸಿದ್ದರಿಂದ ಹೆಚ್ಚುವರಿ ಮತಗಳು ದಾಖಲಾಗಿದ್ದವು. ಆ ಹಿನ್ನೆಲೆಯಲ್ಲಿ ಈ ಮತಕೇಂದ್ರದ ವಿವಿ ಪ್ಯಾಟ್‌ನ ಪೇಪರ್ ಸ್ಲಿಪ್‌ಗ್ಳನ್ನು ಎಣಿಕೆ ಮಾಡಲಾಯಿತು.
ಮತ ಎಣಿಕಾ ಕೇಂದ್ರದ ಒಳಗೆ ಮೊಬೈಲ್ ಫೋನ್‌ಗಳನ್ನು ಮಾಧ್ಯಮದವರು ಹಾಗೂ ಕೆಲವು ಅಧಿಕಾರಿಗಳನ್ನು ಹೊರತುಪಡಿಸಿ ಎಲ್ಲರಿಗೂ ನಿಷೇಧ ಹೇರಲಾಗಿತ್ತು. ಆದರೆ, ಕೆಲ ಏಜೆಂಟರು ಮತ ಎಣಿಕಾ ಕೇಂದ್ರಗಳೊಳಗೆ ಮೊಬೈಲ್‌ಗಳನ್ನು ತಂದು ಮಾತನಾಡುತ್ತಿದ್ದುದು ಕಂಡು ಬಂದಿತು.
ಬಿಗಿ ಭದ್ರತೆ: ಅತಿ ಸೂಕ್ಷ್ಮ ಕ್ಷೇತ್ರವೆಂದೇ ಬಿಂಬಿತವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಮತ ಎಣಿಕಾ ಕಾರ್ಯಕ್ಕೆ ಯಾವುದೇ ಅಡಚಣೆ ಉಂಟಾಗಬಾರದೆಂಬ ಕಾರಣಕ್ಕೆ ಮತ ಎಣಿಕಾ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಿಆರ್‌ಪಿಎಫ್, ಬಿಎಸ್‌ಎಫ್, ಕೆಎಸ್‌ಆರ್‌ಪಿ ಹಾಗೂ ಡಿಎಆರ್ ತುಕಡಿಗಳಲ್ಲದೆ, 400 ಮಂದಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿ ಭದ್ರತೆ ಒದಗಿಸಲಾಗಿತ್ತು. ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲಾಗಿತ್ತು.