ಬೆಂಗಳೂರು: ಅಂಬಿ, ದೇಶ ವಿದೇಶಗಳಲ್ಲಿ ಸ್ನೇಹಿತರನ್ನು ಹೊಂದಿದ್ದಾರೆ. ಅವ್ರು ನಮ್ಮಿಂದ ದೂರ ಹೋಗಿರಬಹುದು. ಆದರೆ ಅಂಬರೀಶ್ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಇದ್ದಾರೆ. ಸ್ನೇಹ ಅಂದರೆ ಏನು ಎಂಬುದನ್ನು ಅಂಬರೀಶ್ ಚೆನ್ನಾಗಿ ಅರಿತುಕೊಂಡಿದ್ದರು ಎಂದು ಮುಖ್ಯಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಶುಕ್ರವಾರ ಫಿಲ್ಮ್ ಛೇಂಬರ್ ನಿಂದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಅಂಬರೀಶ್ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮಂಡ್ಯ ಜಿಲ್ಲೆ ಜನತೆ ಒರಟರಾದರೂ ಅಷ್ಟೇ ಹೃದಯವಂತರು. ಅಂಬರೀಶ್ ಗೆ ಹುಟ್ಟುತ್ತಲೇ ಒರಟುತನ ಬಂದಿದೆ. ಆದರೆ ಅಷ್ಟೇ ಒಳ್ಳೆಯ ಹೃದಯವಂತರಾಗಿದ್ದರು. ಚಿತ್ರರಂಗದಲ್ಲಿನ ಸಮಸ್ಯೆಯನ್ನು ಬಹುಬೇಗನೆ ಇತ್ಯರ್ಥಪಡಿಸುತ್ತಿದ್ದ ನಾಯಕ ಅವರು. ಆದರೆ ಈಗ ಎಲ್ಲವೂ ನೆನಪಾಗಿ ನಮ್ಮೊಂದಿಗಿದೆ ಎಂದರು.
ಮೈಸೂರಿನಲ್ಲಿ ಫಿಲ್ಮ್ ಸಿಟಿಯನ್ನು ಮಾಡುವ ಹಾಗೂ ರಾಮನಗರದಲ್ಲಿ ಸಿನಿಮಾ ಯೂನಿರ್ವಸಿಟಿ ಮಾಡುವ ಯೋಚನೆ ಇದ್ದಿರುವುದಾಗಿ ಕುಮಾರಸ್ವಾಮಿ ತಿಳಿಸಿದರು.
ಅಭಿಯ ಮೊದಲ ಚಿತ್ರ ನೋಡಬೇಕೆಂಬ ಆಸೆ ಇತ್ತು: ಸುಮಲತಾ
ರಾಜನಾಗಿದ್ದ ಅಂಬರೀಶ್ ರಾಜನಾಗೇ ಹೋಗಿದ್ದಾರೆ. ಅಭಿಯ ಮೊದಲ ಚಿತ್ರ ನೋಡಬೇಕು ಅಂತ ಅವರಿಗೆ(ಅಂಬಿ) ತುಂಬಾ ಆಸೆ ಇತ್ತು ಎಂದು ಪತ್ನಿ ಸುಮಲತಾ ಹೇಳಿದರು. ಅಂಬಿ ನನ್ನ ಗಂಡ, ಸ್ನೇಹಿತ, ತಂದೆ, ನನಗೆ ಒಳ್ಳೆಯ ಅಣ್ಣ ಜೊತೆಗೆ ಅವರು ನನ್ನ ಅಂಬರೀಶ್ ಎಲ್ಲರ ಅಂಬರೀಶ್. ಅವರನ್ನು ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ ಎಂದು ಹೇಳಿ ಸುಮಲತಾ ಭಾವುಕರಾದರು.