ಪಾಂಡವಪುರ: ಜಿಲ್ಲೆಯ ಜನ ಪ್ರಬುದ್ಧರು ಹಾಗೂ ಹೃದಯವಂತರು. ಅಂಬರೀಶ್ ಅಣ್ಣ ಜಿಲ್ಲೆಯ ಜನರ ಮೇಲಿಟ್ಟಿರುವ ಪ್ರೀತಿ ವಿಶ್ವಾಸ ಉಳಿಸಿಕೊಳ್ಳಲು ಸುಮಲತಾ ಅಂಬರೀಶ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಅವರನ್ನು ಗೆಲ್ಲಿಸುವುದು ನಮ್ಮ ಧರ್ಮ ಎಂದು ನಟ ಯಶ್ ಮನವಿ ಮಾಡಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ಮತ ಪ್ರಚಾರದಲ್ಲಿ ಮಾತನಾಡಿದ ಅವರು, ಸುಮಲತಾ ಅವರು ಅಂಬರೀಶ್ ಅಣ್ಣನವರ ಧರ್ಮಪತ್ನಿ. ಜಿಲ್ಲೆಯ ಸೊಸೆ.
ಜಿಲ್ಲೆಯ ಜನತೆ ಸುಮಲತಾ ಅವರನ್ನು ಗೆಲ್ಲಿಸುವುದು ಅಂಬರೀಶ್ ಅಣ್ಣನ್ನ ಗೆಲ್ಲಿಸಿದಂತೆ. ಜಿಲ್ಲೆಯ ಜನರ ಸೇವೆ ಮಾಡಲು ಜನತೆ ಸುಮಲತಾ ಅವರಿಗೊಂದು ಅವಕಾಶ ಮಾಡಿಕೊಡಬೇಕು. ಮಂಡ್ಯದ ಹೆಣ್ಣು ಮಗಳ ಶಕ್ತಿ ಇಂಡಿಯಾದಲ್ಲಿ ಪ್ರದರ್ಶನವಾಗಬೇಕು. ಅದನ್ನು ಜಿಲ್ಲೆಯ ಜನತೆ ತೋರಿಸಬೇಕು ಎಂದು ಮನವಿ ಮಾಡಿದರು.
ಜನರಲ್ಲಿ ಗೊಂದಲ ಸೃಷ್ಟಿಸುವುದಕ್ಕಾಗಿ ಸುಮಲತಾ ಅವರೊಂದಿಗೆ ಇನ್ನೂ ಮೂರು ಜನ ಸುಮಲತಾ ಎಂಬ ಹೆಸರಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಜಿಲ್ಲೆಯ ಜನರು ಬುದ್ದಿವಂತರು ಎನ್ನುವುದು ಅವರಿಗೆ ಗೊತ್ತಿಲ್ಲ. ಎಷ್ಟೇ ಜನ ಸುಮಲತಾ ಅವರನ್ನು ನಿಲ್ಲಿಸಿದರೂ ಜಿಲ್ಲೆಯ ಜನತೆ ಸುಮಲತಾ ಅಂಬರೀಶ್ ಅವರಿಗೆಯೇ ಮತ ಹಾಕಲಿದ್ದಾರೆ.
ಚುನಾವಣೆಯ ಇವಿಎಂ ಯಂತ್ರದಲ್ಲಿ ಕ್ರಮ ಸಂಖ್ಯೆ 20ರ ಕಹಳೆ ಊದುತ್ತಿರುವ ರೈತನ ಗುರುತಿಗೆ ಮತ ನೀಡಬೇಕು ಎಂದು ಕೋರಿದರು. ರೈತನಾಯಕಿ ಸುನೀತಾಪುಟ್ಟಣ್ಣಯ್ಯ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅವರು ರೈತಸಂಘದ ಕಾರ್ಯಕರ್ತರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ ಎಂದು ಸುದ್ದಿಗೋಷ್ಠಿಯಲ್ಲಿ ನನಗೆ ಸಲಹೆ ನೀಡಿದ್ದಾರೆ.
ಚುನಾವಣೆಯಲ್ಲಿ ಕಾರ್ಯಕರ್ತರು ಯಾರ ಮಾತನ್ನೂ ಕೇಳ್ಳೋದಿಲ್ಲ, ಫೇಸ್‌ಬುಕ್, ವ್ಯಾಟ್ಸಾಪ್‌ಗ್ಳಲ್ಲಿ ಎಲ್ಲಾ ಪಕ್ಷದ ಕಾರ್ಯಕರ್ತರು ಟೀಕೆಟಿಪ್ಪಣಿಗಳನ್ನು ಮಾಡುತ್ತಿದ್ದಾರೆ. ಕಾರ್ಯಕರ್ತರನ್ನು ನಿಯಂತ್ರಣ ಮಾಡಲು ನಮ್ಮಿಂದ ಸಾಧ್ಯವಿಲ್ಲ. ಸಾಧ್ಯವಾದರೆ ಸಚಿವ ಪುಟ್ಟರಾಜು ಅವರೇ ನಿಯಂತ್ರಣ ಮಾಡಲಿ ಎಂದರು.
ಬಳಿಕ ತಿಮ್ಮನಕೊಪ್ಪಲು, ಚಿಕ್ಕಬ್ಯಾಡರಹಳ್ಳಿ, ತಾಳಶಾಸನ, ಕನಗನಮರಡಿ, ನುಗ್ಗಹಳ್ಳಿ, ಚಿಕ್ಕಮರಳಿ, ಪಟ್ಟಸೋಮನಹಳ್ಳಿ, ಚಿಕ್ಕಾಡೆ, ದೇವೇಗೌಡನಕೊಪ್ಪಲು, ಪಾಂಡವಪುರ ಟೌನ್, ಹರಳಹಳ್ಳಿ, ಕೆನ್ನಾಳು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಯಶ್ ಸುಮಲತಾ ಪರಪ್ರಚಾರ ನಡೆಸಿದರು. ರೈತನಾಯಕಿ ಸುನೀತಾ, ತಾಲೂಕು ಬಿಜೆಪಿ ಅಧ್ಯಕ್ಷ ಪ.ಮಾ.ರಮೇಶ್, ರೈತ ಮುಖಂಡರಾದ ಕೆಂಪೂಗೌಡ, ಗೋವಿಂದೇಗೌಡ, ಕ್ಯಾತನಹಳ್ಳಿ ದಯಾನಂದ ಮತ್ತಿತತರರಿದ್ದರು.