Advertisement

ನಗರಾದ್ಯಂತ ಸುಮಲತಾ ಬಿರುಸಿನ ಪ್ರಚಾರ

07:15 AM Mar 18, 2019 | Team Udayavani |

ಮಂಡ್ಯ: ಕದನ ಕುತೂಹಲ ಕ್ಷೇತ್ರವಾದ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಸ್ಪಧಾಕಾಂಕ್ಷಿ ಸುಮಲತಾ ಭಾನುವಾರ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸುವ ಮೂಲಕ ಪ್ರಚಾರಕ್ಕೆ ಬಿರುಸು ನೀಡಿದರು. ಚುನಾವಣೆಗೆ ಸ್ಪರ್ಧಿಸುವ ಕುರಿತು ಅಧಿಕೃತ ನಿರ್ಧಾರ ಕೈಗೊಳ್ಳುವ ಮುನ್ನಾ ದಿನವಾದ ಭಾನುವಾರ ನಗರದೆಲ್ಲೆಡೆ ಸಂಚರಿಸಿ ಮತಯಾಚನೆ ನಡೆಸಿದರು.

Advertisement

ಕಾಂಗ್ರೆಸ್‌ನ ಹಲವಾರು ಮುಖಂಡರ ಮನೆಗಳಿಗೆ ತೆರಳಿ ಚುನಾವಣೆಯಲ್ಲಿ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದರು. ಸುಮಲತಾ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಅದ್ಧೂರಿ ಸ್ವಾಗತದೊಂದಿಗೆ ಬರಮಾಡಿಕೊಂಡರು. ಹಲವು ಮುಖಂಡರ ಮನೆಗೆ ತೆರಳಿದ ಸುಮಲತಾ ಅವರಿಗೆ ಪೇಟ ತೊಡಿಸಿ, ಹಾರ ಹಾಕಿ ಅಭಿನಂದಿಸಿ ಚುನಾವಣೆಯಲ್ಲಿ ಬೆಂಬಲ ನೀಡುವ ಭರವಸೆ ನೀಡಿದರು.

ಬೆಳಗ್ಗೆ 6ಕ್ಕೆ ನಗರದ ಶ್ರೀ ಲಕ್ಷ್ಮೀಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ವೈರಮುಡಿ-ರಾಜಮುಡಿ ಕಿರೀಟ ಹಾಗೂ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದರು. ಬಳಿಕ ಶಂಕರಮಠದ ಶ್ರೀ ಆದಿ ಚುಂಚನಗಿರಿ ಮಠ, ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಕಾಂಗ್ರೆಸ್‌ ಪಕ್ಷದ ವಿವಿಧ ಮುಖಂಡರ ಮನೆಗಳಿಗೆ ಭೇಟಿ ನೀಡಿದರು.

ಪುಷ್ಪವೃಷ್ಠಿ: ಶಂಕರಮಠದಲ್ಲಿರುವ ನಗರಸಭೆ ಸದಸ್ಯ ನಹೀಂ ಮನೆಗೆ ಸುಮಲತಾ ಭೇಟಿ ನೀಡಿದ ವೇಳೆ ಪುಷ್ಪವೃಷ್ಟಿ ಮೂಲಕ ಅವರಿಗೆ ಸ್ವಾಗತ ಕೋರಲಾಯಿತು. ಮನೆಯೊಳಗೆ ಆಗಮಿಸಿದ ಸುಮಲತಾ, ಅವರೊಂದಿಗೆ ಆತ್ಮೀಯವಾಗಿ ಮಾತನಾಡಿದ ನಹೀಂ ಹಾಗೂ ಇನ್ನಿತರ ಕಾಂಗ್ರೆಸ್‌ ಮುಖಂಡರು, ಅಂಬರೀಶ್‌ ಇದ್ದಾಗ ನಾವೆಲ್ಲರೂ ಅವರ ಬೆಂಬಲಕ್ಕೆ ನಿಂತಿದ್ದೆವು. ಈಗ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.

ನಹೀಂ ಮನೆಯೊಳಗೆ ತೆರಳುವಾಗ ಹಾಗೂ ವಾಪಸ್‌ ಬರುವಾಗ ಸುಮಲತಾ ಅವರಿಗೆ ಮನೆ ಮೇಲೆ ನಿಂತಿದ್ದ ಮಕ್ಕಳು ಗುಲಾಬಿ ಹೂವಿನ ದಳ ಎರಚಿ ಸ್ವಾಗತಿಸಿದರು. ಸುಮಲತಾ ಹೋದೆಡೆಯಲ್ಲೆಲ್ಲಾ ಕುತೂಹಲದಿಂದಲೇ ಅವರನ್ನು ನೋಡಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದರು. ಕಾರಿನಲ್ಲಿ ಸುಮಲತಾ ತೆರಳುವ ವೇಳೆ ರಸ್ತೆಬದಿ ನಿಂತಿದ್ದ ಮಹಿಳೆಯರನ್ನು ಕರೆದು ಮಾತನಾಡಿಸಿ ಕುಶಲೋಪರಿ ವಿಚಾರಿಸಿದರು.

Advertisement

ಇದರಿಂದ ಮಹಿಳೆಯರೂ ಸಂತಸಗೊಂಡರು. ಕೆಲವು ಮಕ್ಕಳೊಂದಿಗೆ ಸುಮಲತಾ ಸೆಲ್ಫಿ ಫೋಟೋಗೂ ಫೋಸ್‌ ನೀಡಿ ಖುಷಿಪಡಿಸಿದರು. ಸಾರ್ವಜನಿಕರತ್ತ ನಗುಮೊಗದಿಂದ ಕೈ ಬಿಸುತ್ತಾ, ಜನರಿಗೆ ನಮಸ್ಕರಿಸುತ್ತಲೇ ಮುನ್ನಡೆಯುತ್ತಿದ್ದರು. ಬ್ರಾಹ್ಮಣ ಸಭಾ ಅಧ್ಯಕ್ಷ ಬೆಳ್ಳೂರು ಶಿವರಾಂ, ಸೇವಾ ಕಿರಣ ವೃದ್ಧಾಶ್ರಮ, ಸೊಸೈಟಿ ಚಂದ್ರು ಸೇರಿದಂತೆ ಹಲವಾರು ಕಾಂಗ್ರೆಸ್‌ ಮುಖಂಡರು, ಅಂಬರೀಶ್‌ ಅಭಿಮಾನಿಗಳ ಮನೆಗಳಿಗೆ ಭೇಟಿ ನೀಡಿ ಬೆಂಬಲ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next