Advertisement

ಸುಲ್ತಾನ್‌ ಬತ್ತೇರಿ ರಸ್ತೆ ನಿರ್ಮಾಣ ಸವಾಲು

09:20 AM Oct 13, 2022 | Team Udayavani |

ಮಹಾನಗರ: ಮಂಗಳೂರಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಸುಲ್ತಾನ್‌ ಬತ್ತೇರಿಯನ್ನು ಸಂಪರ್ಕಿಸುವ ಮುಖ್ಯರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಹಲವು ಅಡ್ಡಿ ಆತಂಕಗಳಿದ್ದು, ಉರ್ವ ಮಾರುಕಟ್ಟೆಯಿಂದ ಬತ್ತೇರಿ ವರೆಗಿನ ರಸ್ತೆ ಪೂರ್ಣಗೊಳಿಸುವುದು ಸ್ಥಳೀಯಾಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

Advertisement

ರಸ್ತೆ ಅಭಿವೃದ್ಧಿಗೆ ಪ್ರವಾಸೋದ್ಯಮ ಮತ್ತು ಪಿಡಬ್ಲೂéಡಿ ಇಲಾಖೆಯಿಂದ ತಲಾ 1.25 ಕೋಟಿ ರೂ.ಬಿಡುಗಡೆಯಾಗಿದೆ. ಜತೆಗೆ ರಸ್ತೆ ಅಗಲೀಕರಣ ಮತ್ತು ಚರಂಡಿ ನಿರ್ಮಾಣಕ್ಕೆ ಪ್ರೀಮಿಯಂ ಎಫ್‌ಎಆರ್‌ ನಡಿ ಮೊತ್ತ ತೆಗೆದಿಡಲಾಗಿದೆ. ಆದರೆ ಸ್ಥಳೀಯವಾಗಿರುವ ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ರಸ್ತೆ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಹಳೆಯ ಯುಜಿಡಿ ವ್ಯವಸ್ಥೆಯ ಸಮಸ್ಯೆ, ರಸ್ತೆ ಅಗಲೀಕರಣಕ್ಕೆ ಭೂಮಿ ಬಿಟ್ಟುಕೊಡುವಲ್ಲಿ ಆಗುತ್ತಿರುವ ವಿಳಂಬ ಮೊದಲಾದವುಗಳಿಂದ ವಿಳಂಬವಾಗಿದೆ. ಇದರಿಂದ ಸುಲ್ತಾನ್‌ ಬತ್ತೇರಿ ಕಡೆಗೆ ವಾಹನಗಳಲ್ಲಿ ಸಂಚರಿಸುವವರು ಸಮಸ್ಯೆ ಅನುಭವಿಸುವಂತಾಗಿದೆ.

80 ಮೀ. ನಿಂದ 50 ಮೀ.ಗೆ.

ಸರಕಾರದ ನಿರ್ದೇಶನದಂತೆ ಆರಂಭದಲ್ಲಿ 80 ಮೀ. ಅಗಲದ ರಸ್ತೆ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಅದರೆ ಸ್ಥಳೀಯ ಪರಿಸ್ಥಿತಿಯನ್ನು ನೋಡಿ ಅದನ್ನು ಬಳಿಕ 60 ಮೀ.ಗೆ ಇಳಿಸಲಾಗಿತ್ತು. ಅಷ್ಟಾದರೂ ಹಲವು ಮನೆಗಳನ್ನು ತೆರವುಗೊಳಿಸಬೇಕಾದ ಅಗತ್ಯ ಕಂಡುಬಂದ ಹಿನ್ನೆಲೆಯಲ್ಲಿ ಪ್ರಸ್ತುತ 50 ಮೀ. ಅಗಲದ ರಸ್ತೆ ನಿರ್ಮಾಣಕ್ಕೆ ನಿರ್ಧರಿ ಸಲಾಗಿದೆ. ಇದರಲ್ಲಿ 40 ಮೀ. ರಸ್ತೆ ಹಾಗೂ ಎರಡೂ ಬದಿ ತಲಾ 5 ಮೀ. ಪಾದಾಚಾರಿ ಮಾರ್ಗ, ಮಳೆ ನೀರು ಚರಂಡಿ ಮೊದಲಾದವುಗಳು ಸೇರಿವೆ. ಆದರೆ ಸರಕಾರದಿಂದ ಇದಕ್ಕೆ ಅನುಮತಿ ಇನ್ನೂ ಸಿಕ್ಕಿಲ್ಲ. ಕೌನ್ಸಿಲ್‌ನಿಂದ ತಿದ್ದುಪಡಿ ಮಾಡಿ ಮುಡಾದಿಂದ ಸರಕಾರಕ್ಕೆ ಹೋಗಿದೆ. ಸರಕಾರದಿಂದ ಅನುಮತಿಗೆ ನಿರೀಕ್ಷಿಸಲಾಗುತ್ತಿದೆ.

ಶೇ.25ರಷ್ಟು ಕೆಲಸ

Advertisement

ಸುಮಾರು ಒಂದು ಕಿ.ಮೀ. ಉದ್ದದ ರಸ್ತೆಯಲ್ಲಿ ಪ್ರಸ್ತುತ ಶೇ.25ರಷ್ಟು ಮಾತ್ರ ಅಗಲೀಕರಣ ಮಾಡಲಾಗಿದೆ. ಸುಲ್ತಾನ್‌ ಬತ್ತೇರಿ ಕಡೆಯಿಂದ ಕೆಲಸ ನಡೆಯುತ್ತಿದ್ದು, ಒಂದು ಸ್ಟ್ರೆಚ್‌ಗೆ ಕಾಂಕ್ರೀಟ್‌ ಆಗಿದೆ.

ಮಳೆ ನೀರು ಚರಂಡಿ ಕೆಲಸವೂ ನಡೆಯುತ್ತಿದೆ. ಆದರೆ ಆಲ್ಲಿಂದ ಮುಂದಕ್ಕೆ ಆಗಲೀಕರಣವೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದ್ದರಿಂದ ಮುಂದಿನ ಹಂತದಲ್ಲಿ ವಾಹನ ಸಂಚಾರಕ್ಕೆ ಅನುಕೂಲ ವಾಗುವಂತೆ ಕಾಂಕ್ರೀಟ್‌ ರಸ್ತೆ ನಿರ್ಮಿಸಿ, ಅನಂತರದಲ್ಲಿ ಉಳಿದ ಕೆಲಸಗಳನ್ನು ಹಂತ ಹಂತದಲ್ಲಿ ನಿರ್ವಹಿಸುವುದು ಸದ್ಯದ ಯೋಜನೆಯಾಗಿದೆ.

ಶೀಘ್ರ ಕಾಮಗಾರಿ ಆರಂಭ: ಕಾಂಕ್ರೀಟ್‌ ರಸ್ತೆ ನಿರ್ಮಾಣ ಯಾವುದೇ ಕ್ಷಣದಲ್ಲಿ ಮಾಡಲು ಗುತ್ತಿಗೆದಾರರು ಸಿದ್ಧರಿದ್ದಾರೆ. ಆದರೆ ಆದಕ್ಕೆ ಬೇಕಾದ ಪೂರ್ವ ತಯಾರಿಯಲ್ಲಿ ಸ್ವಲ್ಪ ಸಮಸ್ಯೆಯಾಗುತ್ತಿದೆ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ನಿರ್ವಹಿಸಬೇಕಾಗಿದೆ. ಒಂದು ಸಲಕ್ಕೆ ಕಾಮಗಾರಿಯಾದರೆ ಮುಂದಿನ ದಿನಗಳಲ್ಲಿ ಮತ್ತೆ ಸಮಸ್ಯೆಯಾಗಬಾರದು. ಆದ್ದರಿಂದ ಜಲಸಿರಿ, ಗೇಲ್‌ ಗ್ಯಾಸ್‌ ಪೈಪ್‌ ಲೈನ್‌, ಮ್ಯಾನ್‌ ಹೋಲ್‌ ಮೊದಲಾದವುಗಳನ್ನು ಸರಿಯಾಗಿ ನಿರ್ಮಿಸಿ ಕಾಮಗಾರಿ ಮಾಡಲಾಗುವುದು. – ಜಗದೀಶ್‌ ಶೆಟ್ಟಿ ಬೊಳೂರು, ಕಾರ್ಪೋರೇಟರ್‌

 

Advertisement

Udayavani is now on Telegram. Click here to join our channel and stay updated with the latest news.

Next