ಸುಳ್ಯ: ರಾಷ್ಟ್ರೀಯ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆ ಪ್ರಗತಿಯ ಐದು ತಿಂಗಳ ಅವಧಿಯಲ್ಲಿ ಸುಳ್ಯ ತಾಲೂಕಿನಲ್ಲಿ ಕಳಂಜ, ಐವರ್ನಾಡು ಗ್ರಾ.ಪಂ. ಗುರಿ ಮೀರಿದ ಸಾಧನೆ ತೋರಿದೆ.
ಐದು ತಿಂಗಳ ಪ್ರಗತಿ
2020ರ ಆರ್ಥಿಕ ವರ್ಷದ ಮೊದಲ ಐದು ತಿಂಗಳಲ್ಲಿ (ಎಪ್ರಿಲ್-ಆಗಸ್ಟ್) ಸುಳ್ಯ ತಾಲೂಕಿನಲ್ಲಿ ಕಳಂಜ ಗ್ರಾ.ಪಂ. 2,370 ಮಾನವ ದಿನಗಳನ್ನು ಬಳಸಿಕೊಂಡಿದ್ದು, ಶೇ. 116 ಪ್ರಗತಿ ಸಾಧಿಸಿ ಅಗ್ರಸ್ಥಾನದಲ್ಲಿದೆ. 4,511 ಮಾನವ ದಿನ ಬಳಸಿದ ಐವರ್ನಾಡು ಗ್ರಾ.ಪಂ. ಶೇ. 101 ಪ್ರಗತಿಯೊಂದಿಗೆ ಅನಂತರದ ಸ್ಥಾನದಲ್ಲಿದೆ. ದೊಡ್ಡ ಗ್ರಾ.ಪಂ. ಆಗಿರುವ ಅಮರಮುಟ್ನೂರು ಐದು ತಿಂಗಳ ಗುರಿಯಾಗಿದ್ದ 6,348 ಮಾನವ ದಿನಗಳ ಪೈಕಿ 2,689 ಮಾನವ ದಿನಗಳನ್ನು ಬಳಸಿ ಶೇ. 42 ರಷ್ಟು ಹಾಗೂ 3,682 ಮಾನವ ದಿನಗಳ ಗುರಿಯ ಪೈಕಿ 1,555 ಮಾನವ ದಿನಗಳನ್ನು ಬಳಸಿಕೊಂಡು ಅಂತಿಮ ಸ್ಥಾನದಲ್ಲಿದೆ.
93,284 ಗುರಿ; 70,464 ಬಳಕೆ
ಸುಳ್ಯ ತಾಲೂಕಿನ ವ್ಯಾಪ್ತಿಯ 25 ಗ್ರಾ.ಪಂ.ಗಳಿಗೆ ಆಗಸ್ಟ್ ತನಕ 93,284 ಮಾನವ ದಿನಗಳನ್ನು ಬಳಸುವ ಗುರಿ ನೀಡಲಾಗಿತ್ತು. ಇದರಲ್ಲಿ 70,464 ದಿನಗಳನ್ನು ಬಳಸಿಕೊಳ್ಳಲಾಗಿದೆ. 22,820 ಮಾನವ ದಿನಗಳನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಐದು ತಿಂಗಳ ಒಟ್ಟು ತಾಲೂಕುವಾರು ಪ್ರಗತಿ ಗಮನಿಸಿದರೆ ಶೇ. 76 ದಾಖಲಾಗಿದೆ. ಗ್ರಾ.ಪಂ. ಪ್ರಗತಿವಾರು ಪೈಕಿ ಕಳಂಜ ಶೇ. 116, ಐವರ್ನಾಡು ಶೇ. 101, ಪೆರುವಾಜೆ ಶೇ. 99, ಎಣ್ಮೂರು ಶೇ. 95, ಮರ್ಕಂಜ ಶೇ. 94, ಪಂಜ ಶೇ. 93, ಮಂಡೆಕೋಲು ಶೇ. 88, ಮಡಪ್ಪಾಡಿ ಶೇ. 87, ಕೊಡಿಯಾಲ ಶೇ. 86, ಸಂಪಾಜೆ ಶೇ. 85, ಅಜ್ಜಾವರ ಶೇ. 84, ಕನಕಮಜಲು ಶೇ. 82, ಜಾಲೂÕರು ಶೇ. 79, ಕಲ್ಮಡ್ಕ ಶೇ. 77, ಆಲೆಟ್ಟಿ ಶೇ. 74, ಅರಂತೋಡು ಶೇ. 71, ಬೆಳ್ಳಾರೆ ಶೇ. 66, ಹರಿಹರ ಪಲ್ಲತ್ತಡ್ಕ ಶೇ. 65, ಉಬರಡ್ಕ ಮಿತ್ತೂರು ಶೇ. 65, ನೆಲ್ಲೂರು ಕೆಮ್ರಾಜೆ ಶೇ. 62, ಬಾಳಿಲ ಶೇ. 60, ಗುತ್ತಿಗಾರು ಶೇ. 59, ಕೊಲ್ಲಮೊಗ್ರು ಶೇ. 54, ಅಮರನುಟ್ನೂರು ಶೇ. 42, ದೇವಚಳ್ಳ ಶೇ.42 ರಷ್ಟು ಪ್ರಗತಿ ಸಾಧಿಸಿದೆ.
ಕಿಂಡಿ ಅಣೆಕಟ್ಟು ನಿರ್ಮಾಣ ಸಾಧನೆ
ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಈ ಹಿಂದಿನ ಮೂರು ವರ್ಷಗಳಲ್ಲಿ 99 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ ಸಂಪಾದಿಸಿತು. 2016-17ರ ಅವಧಿಯಲ್ಲಿ ಆರಂಭಗೊಂಡ ಈ ಯೋಜನೆ ಜಿಲ್ಲೆಯ ಎಲ್ಲ ತಾ|ಗಳಲ್ಲಿ ಪ್ರಗತಿಯಲ್ಲಿದೆ. ಅಂರ್ತಜಲ ಹೆಚ್ಚಿಸುವ ನಿಟ್ಟಿನಲ್ಲಿ ವರ್ಷದಿಂದ ವರ್ಷಕ್ಕೆ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಹೆಚ್ಚುತ್ತಿದೆ. ಇದರಲ್ಲಿ ಸುಳ್ಯದ ಪಾಲು ಗರಿಷ್ಠ ನರೇಗಾದ ಅನುದಾನ ಪೈಕಿ ಶೇ. 65ರಷ್ಟನ್ನು ಜಲಸಂರಕ್ಷಣೆಗೆ ಬಳಸಬೇಕು ಎಂದು 2016-17ರಲ್ಲಿ ಜಿ.ಪಂ.ನಲ್ಲಿ ಯೋಜನೆ ರೂಪಿಸಿ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ 5 ಕಿಂಡಿ ಅಣೆಕಟ್ಟು ನಿರ್ಮಾಣದ ಗುರಿ ನೀಡಲಾಗಿತ್ತು. ಪ್ರತಿ ಅಣೆಕಟ್ಟಿಗೆ ಗರಿಷ್ಠ 5 ಲಕ್ಷ ರೂ. ಅನುದಾನ ನಿಗದಿಪಡಿಸಲಾಗಿತ್ತು. ಈ ಆರ್ಥಿಕ ವರ್ಷದಲ್ಲಿ ಕೂಡ ಸುಳ್ಯ ತಾಲೂಕಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಸಹಿತ ಜಲ ಸಂರಕ್ಷಣೆ ಪೂರಕ ಚಟುವಟಿಕೆ ಬಗ್ಗೆ ಯೋಜನೆ ರೂಪಿಸಲಾಗಿದೆ.
Related Articles
ಏನಿದು ಉದ್ಯೋಗ ಖಾತರಿ ?
ಗ್ರಾಮೀಣ ಭಾಗದಲ್ಲಿ ಪ್ರತಿ ಕುಟುಂಬಕ್ಕೆ ಆರ್ಥಿಕ ವರ್ಷದಲ್ಲಿ 100 ದಿನಗಳ ಉದ್ಯೋಗ ಒದಗಿಸುವ ಯೋಜನೆ ಇದಾಗಿದೆ. ಕೂಲಿ ದರ ವ್ಯಕ್ತಿಗೆ 275 ರೂ. ಆಗಿರುತ್ತದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಸಮಾನ ಕೂಲಿ ಪಾವತಿಸಲಾಗುತ್ತದೆ. ಆಯಾ ಗ್ರಾ.ಪಂ. ಇದರ ಅನುಷ್ಠಾನ ಜವಬ್ದಾರಿ ಹೊಂದಿದೆ. ಇಲ್ಲಿ ಜಾಬ್ ಕಾರ್ಡ್ ಹೊಂದಿದ ವ್ಯಕ್ತಿಗೆ ಸಾರ್ವಜನಿಕ ಹಾಗೂ ವೈಯಕ್ತಿಕ ಕಾಮಗಾರಿ ನಿರ್ವಹಿಸಲು ಅವಕಾಶ ಇದೆ. ವೈಯಕ್ತಿಕ ನೆಲೆಯಲ್ಲಿ ಈ ಬಾರಿ ಬಚ್ಚಲು ಗುಂಡಿ, ತೆರೆದ ಬಾವಿ ರಚನೆ, ಕೃಷಿ ಹೊಂಡ, ಇಂಗುಗುಂಡಿ, ಹಟ್ಟಿ, ಕೋಳಿ ಶೆಡ್, ಅಡಿಕೆ ನಾಟಿ ಸಹಿತ ವಿವಿಧ ಕೆಲಸ ಮಾಡಲು ಅವಕಾಶ ನೀಡಲಾಗಿದೆ.
ಸಾರ್ವಜನಿಕ ಕಾಮಗಾರಿಯಲ್ಲಿ ಅಂಗನವಾಡಿ ಕಟ್ಟಡ, ಸಂಪರ್ಕ ರಸ್ತೆ, ಶಾಲಾ ಶೌಚಾಲಯ, ಸಾರ್ವಜನಿಕ ಬಾವಿ ಮರಪೂರಣ ಘಟಕ, ಸಂತೆ ಮಾರುಕಟ್ಟೆ ಮೊದಲಾದ ಸರಕಾರಿ ಕೆಲಸಗಳನ್ನು ನರೇಗಾದ ಮೂಲಕ ಹಮ್ಮಿಕೊಳ್ಳಬಹುದಾಗಿದೆ.
25 ಗ್ರಾ.ಪಂ.ಗಳು
70,464 ಮಾನವ ದಿನ ಬಳಕೆ
ಕಿರಣ್ ಪ್ರಸಾದ್ ಕುಂಡಡ್ಕ