Advertisement

ನಗರ ಮಹಾಯೋಜನೆ ಅನುಮೋದನೆಗೆ ವಿಶೇಷ ಸಭೆ

12:38 PM Nov 16, 2018 | Team Udayavani |

ಸುಳ್ಯ : ನಗರ ಮಹಾಯೋಜನೆಗೆ ಅನುಮೋದನೆ ನೀಡುವ ಮೊದಲು ಅದರ ಸಾಧಕ-ಬಾಧಕಗಳ ಸಮಗ್ರ ಚರ್ಚೆ ನಡೆಸಬೇಕು ಎಂಬ ಸದಸ್ಯರ ಅಭಿಪ್ರಾಯ ಅನ್ವಯ ವಿಶೇಷ ಸಭೆ ಕರೆಯಲು ನ.ಪಂ. ಸಾಮಾನ್ಯ ಸಭೆ ನಿರ್ಣಯಿಸಿದೆ. ನಗರ ಪಂಚಾಯತ್‌ ಸಾಮಾನ್ಯ ಸಭೆ ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನ.ಪಂ. ಸಭಾಂಗಣದಲ್ಲಿ ನಡೆಯಿತು.

Advertisement

ವಿಷಯ ಸೂಚಿಯಡಿ ಪ್ರಸ್ತಾವಿಸಿದ ಸದಸ್ಯ ಮುಸ್ತಾಫ ಎಂ.ಕೆ., ಮಹಾ ಯೋಜನೆಯ ನಕಾಶೆ, ವರದಿಯ ಬಗ್ಗೆ ಕೂಲಂಕುಷ ಚರ್ಚೆ ಆಗಬೇಕು. ಅದು ನಗರಕ್ಕೆ ತೊಂದರೆ ಆಗುವಂತೆ ಇರಬಾರದು. ಹೊಸ ನಿಯಮ ಇಲ್ಲಿನ ಪರಿಸ್ಥಿತಿಗೆ ಅನುಕೂಲಕರವೇ ಎಂಬ ಬಗ್ಗೆ ಪರಿಶೀಲನೆ ನಡೆಸುವ ಉದ್ದೇಶದಿಂದ ಅದಕ್ಕಾಗಿ ವಿಶೇಷ ಸಭೆ ಕರೆದು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳೋಣ ಎಂದರು.

ನ.ಪಂ.ಸದಸ್ಯ ಎನ್‌.ಎ.ರಾಮಚಂದ್ರ ಮಾತ ನಾಡಿ, ಈ ಮಹಾಯೋಜನೆ ಅನುಷ್ಠಾನದಿಂದ ಅಪಾಯವೇ ಹೆಚ್ಚು. ಹೀಗಾಗಿ ಬೇಡ ಎಂದು ನಿರ್ಣಯಿಸೋಣ ಎಂದರು. ಅಂತಹ ಸಮಸ್ಯೆಗಳು ಇಲ್ಲ ವರದಿಯಲ್ಲಿರುವ ಅಂಶಗಳ ಬಗ್ಗೆ ಆಕ್ಷೇಪಣೆಗಳು ಇದ್ದಲ್ಲಿ ಸಲ್ಲಿಸಲು ಅವಕಾಶ ಇದೆ. ಸವಲತ್ತು ಲಭಿಸುವ ದೃಷ್ಟಿಯಿಂದ ಅನುಕೂಲ ಇದೆ ಎಂದು ಎಂಜಿನಿಯರ್‌ ಶಿವಕುಮಾರ್‌ ವಿವರಿಸಿದರು. ಸದಸ್ಯರಾದ ಉಮ್ಮರ್‌ ಕೆ.ಎಸ್‌., ಪ್ರೇಮಾ ಟೀಚರ್‌, ಗೋಪಾಲ ನಡುಬೈಲು, ರಮಾನಂದ ರೈ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡು ಅಭಿಪ್ರಾಯ ವ್ಯಕ್ತಪಡಿಸಿದರು. ಕೊನೆಗೆ ಸಭೆಯ ಸೂಚನೆಯಂತೆ ವಾರದೊಳಗೆ ವಿಶೇಷ ಸಭೆ ಕರೆಯಲು ನಿರ್ಧರಿಸಲಾಯಿತು.

ಸರಕಾರಿ ಖಾಲಿ ಜಾಗ, ಪಹಣಿ ಪತ್ರ ಪ್ರದರ್ಶನ
ನಗರದಲ್ಲಿ 13 ಎಕ್ರೆಗೂ ಅಧಿಕ ಸರಕಾರಿ ಖಾಲಿ ಜಮೀನು ಇರುವ ಪಹಣಿ ಪತ್ರ ದೊರೆತಿದೆ. ಇದಲ್ಲದೆ ಬೇರೆ ಖಾಲಿ ಜಮೀನು ಇದೆ. ಹಾಗಾಗಿ ನಿವೇಶನ ರಹಿತರಿಗೆ ನೀಡಲು ಭೂಮಿ ಇಲ್ಲ ಎನ್ನುವ ಉತ್ತರದಲ್ಲಿ ಹುರುಳಿಲ್ಲ ಎಂದು ಸದಸ್ಯ ಉಮ್ಮರ್‌ ಅವರು ಮೂರು ಪಹಣಿ ಪತ್ರ ಪ್ರದರ್ಶಿಸಿದರು.

ನಗರ ಪಂ.ಗೆ ಖಾಲಿ ಇರುವ ಸರಕಾರಿ ಜಮೀನು ಬಗ್ಗೆ ಮಾಹಿತಿ ಸಂಗ್ರಹಿಸಲು ಸಾಧ್ಯವಿಲ್ಲದಿದ್ದರೆ ಹೇಳಲಿ. ನಾವು ಆ ಕೆಲಸ ಮಾಡುತ್ತೇವೆ. ಕಂದಾಯ ಇಲಾಖೆಯಿಂದ ಪಹಣಿ ಪತ್ರ ಪಡೆದು ಕೊಡುತ್ತೇವೆ. ನೀವು ಆ ಸ್ಥಳದಲ್ಲಿ ಬಡವರಿಗೆ ಮನೆ ಕಟ್ಟಿ ಕೊಡಿ ಎಂದು ಉಮ್ಮರ್‌ ಆಗ್ರಹಿಸಿದರು.

Advertisement

ಇದೇ ವಿಚಾರವಾಗಿ ಧ್ವನಿಗೂಡಿಸಿದ ಗೋಕುಲ್‌ದಾಸ್‌, ನಿವೇಶನ ರಹಿತರಿಗೆ ಭೂಮಿ, ಮನೆ ನೀಡಬೇಕು ಎಂಬ ಬಗ್ಗೆ ಹಲವು ಸಭೆಗಳಲ್ಲಿ ಪ್ರಸ್ತಾಪವಾಗಿದ್ದರೂ, ಅದಕ್ಕೆ ಸ್ಪಂದನೆ ಸಿಕ್ಕಿಲ್ಲ. ನಾಲ್ಕೈದು ತಿಂಗಳು ಅವಧಿ ಉಳಿದಿದೆ. ನಾಲ್ಕೂವರೆ ವರ್ಷದಿಂದ ನಗರಾಡಳಿತ ಏಕೆ ಮೌನವಾಗಿದೆ ಎಂದು ಅವರು ಪ್ರಶ್ನಿಸಿದರು. ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಮತ್ತಾಡಿ ಅವರು ಭರವಸೆ ನೀಡಿದ ಬಳಿಕ ಚರ್ಚೆ ಕೊನೆಗೊಂಡಿತ್ತು.

ಬೀದಿ ಶ್ವಾನ ಸೆರೆ ದುಬಾರಿ..!
ನಗರದಲ್ಲಿ ಬೀದಿ ನಾಯಿ ಉಪಟಳ ಮಿತಿ ಮೀರಿರುವ ಬಗ್ಗೆ ವಿಷಯ ಪ್ರಸ್ತಾವಗೊಂಡಿತ್ತು. ಬೀದಿ ನಾಯಿ ಸೆರೆ ಕಾರ್ಯಾಚರಣೆ ವಹಿಸಿಕೊಟ್ಟರೆ ಒಂದು ನಾಯಿಗೆ 750 ರೂ. ವೆಚ್ಚ ತಗಲುತ್ತದೆ ಎಂದು ಆರೋಗ್ಯ ಅಧಿಕಾರಿ ಮಾಹಿತಿ ನೀಡಿದರು.

ಕ್ರೀಡಾಂಗಣ ಉದ್ಘಾಟನೆ ಆಗಿಲ್ಲ
ಕಳೆದ ಡಿಸೆಂಬರ್‌ನಲ್ಲಿ ಒಳಾಂಗಣ ಕ್ರೀಡಾಂಗಣ ಉದ್ಘಾಟಿಸುವುದಾಗಿ ಅಧ್ಯಕ್ಷರು ಹೇಳಿಕೆ ನೀಡಿ 11 ತಿಂಗಳು ಕಳೆದಿದೆ. ಈ ವಿಚಾರದಲ್ಲಿ ಆಡಳಿತ ವಿಫಲವಾಗಿದೆ ಎಂದು ಸದಸ್ಯರಾದ ಉಮ್ಮರ್‌, ಮುಸ್ತಾಫ, ಗೋಕುಲ್‌ದಾಸ್‌ ಮೊದಲಾದವರು ಆರೋಪಿಸಿದರು. ಇದು ನಿರ್ಮಿತ ಕೇಂದ್ರದ ನಡುವಿನ ಸಮಸ್ಯೆ. ಇಲ್ಲಿ ಚರ್ಚಿಸಿ ಪ್ರಯೋಜನ ಇಲ್ಲ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರು, ಹಾಗೆ ಹೇಳುವುದು ಸರಿಯಲ್ಲ. ನಿರ್ಮಿತ ಕೇಂದ್ರದ ಜತೆ ಚರ್ಚಿಸಿ ಅದಕ್ಕೆ ವೇಗ ಕೊಡುವುದು ಆಡಳಿತದ ಕರ್ತವ್ಯ. ನೀವು ಜವಬ್ದಾರಿಯಿಂದ ವಿಮುಖರಾದರೆ ಹೇಗೆ ಎಂದು ಅವರು ಪ್ರಶ್ನಿಸಿದರು. ಈ ಬಗ್ಗೆ ಚರ್ಚೆ ನಡೆದು, ಅಧ್ಯಕ್ಷೆ ಶೀಲಾವತಿ ಉತ್ತರಿಸಿ, ಕಾಮಗಾರಿ ಪೂರ್ಣವಾಗಿದೆ. ಉದ್ಘಾಟನೆಗೆ ದಿನಾಂಕ ನಿಗದಿ ಮಾಡಬಹುದು ಎಂದರು.

ಮಾತಿಗೆ ಅಗೌರವ: ಸಭಾತ್ಯಾಗಕ್ಕೆ ಮುಂದಾದ ಎನ್‌.ಎ. ರಾಮಚಂದ್ರ
ಸಭೆ ಆರಂಭದಲ್ಲಿ ಮಾತನಾಡಿದ ಎನ್‌.ಎ. ರಾಮಚಂದ್ರ, ಅಕೌಂಟೆಂಟ್‌ ರಮೇಶ್‌ ಅವರು ಸಭೆಯಲ್ಲಿದ್ದರೆ ತಾನು ಹೊರ ಹೋಗುತ್ತೇನೆ. ಇದಕ್ಕೆ ಕಾರಣವೇನೆಂದರೆ, ಕನ್ನಡ, ತುಳು ಸಾಹಿತ್ಯ ಸಮ್ಮೇಳನಕ್ಕೆ ನ.ಪಂ.ನೀಡುವ ಸಹಾಯಧನದ ಪ್ರಸ್ತಾವ ಜಿಲ್ಲಾಧಿಕಾರಿಗಳಿಗೆ ಕಳುಹಿಸಿರುವ ಬಗ್ಗೆ 40ಕ್ಕೂ ಅಧಿಕ ಪ್ರಮುಖರಿದ್ದ ಸಂದರ್ಭದಲ್ಲಿ, ಮಾಹಿತಿ ಕೇಳಲೆಂದು ತಾನು ರಮೇಶ್‌ ಅವರನ್ನು ಕರೆದಿದ್ದೆ. ಆದರೆ ಅವರು ಬಾರದೆ ಅಗೌರವ ತೋರಿದ್ದಾರೆ. ಇಂತಹ ಸಿಬಂದಿ ಇರುವ ಸಭೆಯಲ್ಲಿ ನಾನು ಇರುವುದು ಸೂಕ್ತ ಅಲ್ಲ ಎಂದು ಹೊರ ನಡೆಯಲು ಮುಂದಾದರು. ಈ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರು ಎನ್‌.ಎ. ರಾಮಚಂದ್ರ ಅವರನ್ನು ಸಮಾಧಾನಿಸುವ ಯತ್ನ ಮಾಡಿದ್ದರೂ, ಅವರು ಪಟ್ಟು ಬಿಡಲಿಲ್ಲ. ಕೊನೆಗೆ ಅಕೌಂಟೆಂಟ್‌ ರಮೇಶ್‌ ಸಭಾಂಗಣದಿಂದ ಹೊರ ನಡೆದ ಬಳಿಕ ರಾಮಚಂದ್ರ ಅವರು ತನ್ನ ಸ್ಥಾನಕ್ಕೆ ಮರಳಿದರು.

ಅರ್ಜಿ ಕೊಟ್ಟು ಸೇರಿಸಿಲ್ಲ, ಉಪಾಧ್ಯಕ್ಷರ ಆರೋಪ..!
ಉಚಿತ ನಳ್ಳಿ ನೀರು ಸಂಪರ್ಕ ಮತ್ತು ವಿದ್ಯುತ್‌ ಸಂಪರ್ಕ ಮಂಜೂರಾತಿ ಪಟ್ಟಿಯಲ್ಲಿ ಎಲ್ಲ ಅರ್ಜಿಗಳಿಗೆ ಮಂಜೂರಾತಿ ದೊರೆಯದಿರುವ ವಿಚಾರ ಕೆಲ ಕಾಲ ಚರ್ಚೆಗೆ ಈಡಾಯಿತು. ಸದಸ್ಯ ಉಮ್ಮರ್‌ ಅವರು, ಈ ಬಗ್ಗೆ ವಿಷಯ ಪ್ರಸ್ತಾವಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಉಪಾಧ್ಯಕ್ಷೆ ಹರಿಣಾಕ್ಷಿ, ಐದು ವರ್ಷ ಹಿಂದೆ ಹಲವಾರು ಮಂದಿ ಅರ್ಜಿ ಕೊಟ್ಟಿದ್ದರು. ಮಂಜೂರಾತಿ ಪಟ್ಟಿಯಲ್ಲಿ ಅವರ ಹೆಸರಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಉಪಾಧ್ಯಕ್ಷರೇ ಅಳಲು ವ್ಯಕ್ತಪಡಿಸುವ ಸ್ಥಿತಿ ಇದೆ. ಆಡಳಿತ ಮತ್ತು ಅಧಿಕಾರಿಗಳ ನಡುವೆ ಸಂಬಂಧವೇ ಇಲ್ಲದ ಸ್ಥಿತಿ ಇದ್ದರೆ ಜನರ ಪಾಡು ಏನು ಎಂದು ವಿಪಕ್ಷದ ಸದಸ್ಯರು ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next