Advertisement

ಸುಳ್ಯ: ಸರಕಾರಿ  ಇಲಾಖೆ  ತಳ್ಳೋ ಗಾಡಿಗಳಿಗೆ ಮುಕ್ತಿ ನೀಡಿ

03:24 PM May 02, 2017 | Team Udayavani |

ಸುಳ್ಯ:  ಪೆನ್ನು, ಪೇಪರ್‌ ವ್ಯವಹಾರದಿಂದ ಡಿಜಿಟಲ್‌ ತಂತ್ರಜ್ಞಾನ ದತ್ತ ಇಲಾಖಾ ಕಾರ್ಯಗಳು ತೆರೆದು ಕೊಂಡಿದ್ದರೂ  ಸರಕಾರಿ ಇಲಾಖಾ ವಾಹನಗಳು ತಳ್ಳೋ ಸ್ಥಿತಿಯಲ್ಲಿವೆ.

Advertisement

ಹೊಸ ವಾಹನಗಳ ಖರೀದಿಗೆ ಮೀನ-ಮೇಷ ಎಣಿಸುತ್ತಿರುವ ಇಲಾಖೆಗಳು ಒಂದಲ್ಲ. ಹೆಚ್ಚಿನ ಇಲಾಖಾ ವಾಹನಗಳು ಮತ್ತೆ ಮತ್ತೆ ಗ್ಯಾರೇಜ್‌ನತ್ತ ಮುಖ ಮಾಡುತ್ತಲೇ ಇವೆ. ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಕಚೇರಿಯಲ್ಲಿ 1997 ಮಾಡೆಲ್‌ನ ಒಂದು ಹಳೆಯ ಜೀಪು ಇದೆ. ಕಿಲೋಮೀಟರ್‌ಗಟ್ಟಲೆ ಓಡಾಡಿ ಸುಸ್ತಾಗಿ ಗೋಡೌನ್‌ ಸೇರಿತ್ತು. ಹಳೆ ಜೀಪು ತುಕ್ಕು ಹಿಡಿದು ಹಾಳಾಗುವ ಮೊದಲು ಅದನ್ನು ಮಾರಾಟ ಮಾಡುವುದೊಳಿತು ಎಂದು ಕೊನೆಗೂ ಇಲಾಖೆ ಹರಾಜು ಮಾಡಿತು.

ಬಾಡಿಗೆ ವಾಹನಕ್ಕೆ ಮೊರೆ 
ಶಿಕ್ಷಣ ಇಲಾಖೆಯ ಕೆಲಸ ಕಾರ್ಯಗಳಿಗೆ, ಶಾಲಾ ಭೇಟಿ ಮಾಡುವ, ಎಸೆಸೆಲ್ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಕ್ಕೆ ಒಯ್ಯುವ ವೇಳೆ ಹಲವು ಬಾರಿ ಜೀಪು ಕೈಕೊಟ್ಟಿದೆ. ಈ ವರ್ಷ ಬಾಡಿಗೆ ವಾಹನವನ್ನು ಅವಲಂಬಿಸಿ ಪ್ರಶ್ನೆಪತ್ರಿಕೆಗಳನ್ನು ಆಯಾಯ ಪರೀಕ್ಷಾ ಕೇಂದ್ರಗಳಿಗೆ ವಿತರಿಸಲಾಗಿತ್ತು. ಹೊಸ ಜೀಪು ಒದಗಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಇತರ ಇಲಾಖೆಗಳಲ್ಲೂ 
ಕೃಷಿ ಇಲಾಖೆ, ಸಿಡಿಪಿಒ, ತಾಲೂಕು ಪಂಚಾಯತ್‌ನಲ್ಲಿಯೂ ಸಹ ಇಂಥದ್ದೇ ಸುಸ್ತಾದ ಹಳೆಯ ಜೀಪುಗಳಿವೆ. ಹೊಸ ಜೀಪುಗಳು ಬಂದಂತೆ ದುರಸ್ತಿ ಮಾಡಲ ಸಾಧ್ಯವಾದ ವಾಹನಗಳು ಶೆಡ್‌ ಇಲ್ಲವೇ ಮರದಡಿ ಸೇರುತ್ತವೆ. ಅಲ್ಲೇ ಅದು ತುಕ್ಕು ಹಿಡಿದು ಮಣ್ಣಾಗುತ್ತವೆ. ಹೀಗಾಗಲು ಬಿಡದೆ ಕೂಡಲೇ ಟೆಂಡರ್‌ ಕರೆದು ಅದನ್ನು ಮಾರಾಟ ಮಾಡುವ ವ್ಯವಸ್ಥೆಯಾದರೆ ಸರಕಾರದ ಬೊಕ್ಕಸಕ್ಕೆ ಒಂದಿಷ್ಟು ಹಣ ಜಮಾ ಆಗಬಹುದು ಎಂಬುದು ನಾಗರಿಕರ ಆಶಯ. ಪೊಲೀಸ್‌ ಇಲಾಖೆ, ಅರಣ್ಯ ಇಲಾಖೆಗಳಲ್ಲಿ ಸೀಜ್‌ ಮಾಡಿದ ಅನೇಕ ವಾಹನಗಳು ತುಕ್ಕು ಹಿಡಿಯುತ್ತಿವೆ. ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ವರೆಗೂ ಇವುಗಳಿಗೆ ಮುಕ್ತಿ ಸಿಗುವುದಿಲ್ಲ.

ತಾಲೂಕಿನತ್ತ ಗಮನಹರಿಸಿ
ಸರಕಾರ ಬದಲಾದಂತೆ ನೂತನವಾಗಿ ಸಚಿವರಾಗಿ ಆಯ್ಕೆಯಾದವರು ಹಿಂದಿನ ಹಳೆ ವಾಹನದತ್ತ ಕಣ್ಣೆತ್ತಿ ನೋಡುವುದಿಲ್ಲ. ಹೊಸ ಸರಕಾರ ಬಂದಂತೆ ಅವರ ವಾಹನವೂ ಹೊಚ್ಚ ಹೊಸದಾಗಬೇಕು. ಹಿಂದಿನ ವಾಹನಗಳು ಗೂಡು ಸೇರುತ್ತವೆ. ಅವುಗಳನ್ನು ಸ್ವಲ್ಪ ದುರಸ್ತಿಗೊಳಿಸಿ ಇತ್ತ ತಾಲೂಕಿನ ಇಲಾಖಾ ಕಚೇರಿಗಳಿಗೆ ಕಳುಹಿಸಿಕೊಡುವ ಚಿಂತನೆ ನಡೆದರೆ ಸೂಕ್ತ ಎನ್ನುತ್ತಾರೆ ಸಾರ್ವಜನಿಕರು.

Advertisement
Advertisement

Udayavani is now on Telegram. Click here to join our channel and stay updated with the latest news.

Next