Advertisement
ಏನೆಕಲ್ಲು ಮತ್ತು ಐನೆಕಿದು ಗಡಿ ಭಾಗವಾದ ಮಲಯಾಳದಿಂದ ಐನೆಕಿದು ಮಾರ್ಗವಾಗಿ ಹರಿಹರವರೆಗೆ 6 ಕಿ.ಮೀ. ನಷ್ಟು ರಸ್ತೆಯಿದೆ. ನಾಲ್ಕಾರು ವರ್ಷಗಳ ಹಿಂದೆ ವಿವಿಧ ಯೋಜನೆಯಡಿ ಅಲ್ಲಲ್ಲಿ ಡಾಮರೀಕರಣವಾಗಿತ್ತು. ಅವೆಲ್ಲವೂ ಈಗ ಪೂರ್ತಿ ಕಿತ್ತುಹೋಗಿ ಹೊಂಡಗುಂಡಿಗಳಾಗಿವೆ. ರಸ್ತೆಯ ನೀರು ಹರಿದು ಹೋಗಲು ಸೂಕ್ತ ಚರಂಡಿಯೂ ಇಲ್ಲ. ಮಳೆಯಾದರೆ ರಸ್ತೆಯಲ್ಲಿನ ಹೊಂಡದಲ್ಲಿ ಪೂರ್ತಿ ನೀರು ನಿಂತು ಸಂಚರಿಸಲು ಅಸಾಧ್ಯವಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಕಾಡು ಬೆಳೆದು ರಸ್ತೆಯನ್ನು ಆಕ್ರಮಿಸಿದೆ. ಇದೇ ಮಾರ್ಗದಲ್ಲಿ ಆನೆಗಳ ಅಲೆದಾಟ ಇದ್ದು ರಾತ್ರಿ ವೇಳೆ ಅಪಾಯಕಾರಿ ಕೂಡ. ಹೀಗಾಗಿ ರಾತ್ರಿ ವೇಳೆ ಹದಗೆಟ್ಟ ರಸ್ತೆ ಒಂದೆಡೆಯಾದರೆ, ಆನೆಗಳ ಅಲೆದಾಟ ಭಯ ಮತ್ತೂಂದೆಡೆ. ಇವುಗಳೆರಡರ ಸಂಕಷ್ಟದಲ್ಲಿ ನಿತ್ಯ ವಿದ್ಯಾರ್ಥಿಗಳು, ಉದ್ಯೋಗಿಗಳು, ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಅನಿವಾರ್ಯವಾಗಿ ಪ್ರಯಾಣಿಸಬೇಕಾಗಿದೆ.
ನಿತ್ಯ ಇದೇ ಮಾರ್ಗದಲ್ಲಿ ಐನೆಕಿದು ಸಮೀಪ ಕೋಟೆ, ಕುಡುಮುಂಡೂರು, ಬಸವನಗುಡಿ, ಬಾಳುಗೋಡು ಮಾಗವಾಗಿ ಉಪ್ಪುಕಳ ಸಂಪರ್ಕಿಸುವ ಸುಮಾರು 18 ಕಿ.ಮೀ. ನಷ್ಟು ದೂರದ ರಸ್ತೆಯೂ ತೀವ್ರ ಹದಗೆಟ್ಟಿದೆ. 2007-08ರಲ್ಲಿ ಗ್ರಾಮ ಸಡಕ್ ಯೋಜನೆಯಡಿ ಡಾಮರು ಕಾಮಗಾರಿಗಾಗಿ ಸರ್ವೆ ನಡೆದು ಎಸ್ಟೀಮೇಟ್ ತಯಾರಿಗೊಂಡಿತ್ತಾದರೂ ಅನುದಾನ ಬಿಡುಗಡೆಯಾಗಲಿಲ್ಲ. ಅಂದಿನಿಂದ ಇದುವರೆಗೆ ಡಾಮರೀಕರಣ ಯೋಜನೆ ಕನಸಾಗಿಯೇ ಉಳಿದಿದೆ. ಇದೇ ಯೋಜನೆ ಮತ್ತೆ ಜಾರಿಗೊಳಿಸುವ ಬಗ್ಗೆ ಜನಪ್ರತಿನಿಧಿಗಳು ಪ್ರಯತ್ನದಲ್ಲಿದ್ದಾರೆ. ದುರಸ್ತಿಗಾಗಿ ಅನುದಾನ ಮೀಸಲಿರಿಸಿರುವುದಾಗಿ ಹೇಳುತ್ತಿದ್ದರೂ ಇದುವರೆಗೆ ದುರಸ್ತಿಗೊಂಡಿಲ್ಲ. ಮಲಯಾಳದಿಂದ ಐನೆಕಿದು ಮಾರ್ಗವಾಗಿ ಹರಿಹರ ಸಂಪರ್ಕಿಸುವ 6 ಕಿ.ಮೀ. ರಸ್ತೆಯ ಪರಿಸ್ಥಿತಿ ಕೂಡ ತೀವ್ರ ಹದಗೆಟ್ಟಿದೆ. ಮಲಯಾಳದಿಂದ ಐನೆಕಿದು- ಉಪ್ಪುಕಳ ರಸ್ತೆ ಡಾಮರೀಕರಣಗೊಂಡರೆ ಮತ್ತೆ ಐನೆಕಿದುವಿನಿಂದ – ಹರಿಹರ ಮಾರ್ಗವರೆಗೆ ಅಂದಾಜು 3 ಕಿ.ಮೀ. ರಸ್ತೆ ಮಾತ್ರ ಉಳಿಯಲಿದೆ. ಉಳಿದ ಯೋಜನೆಯಡೀ ದುರಸ್ತಿ ಗೊಳಿಸಿದರೆ ಗ್ರಾಮೀಣ ಪ್ರದೇಶವಾದ ಹರಿಹರ, ಬಾಳುಗೋಡು, ಕೊಲ್ಲಮೊಗ್ರ, ಕಲ್ಮಕಾರು ಭಾಗಗಳಿಂದ ಆಗಮಿಸುವ ಜನರಿಗೆ ಚಿಂತೆ ಇಲ್ಲ ಎನ್ನುತ್ತಾರೆ ಸ್ಥಳೀಯರು.
Related Articles
ಜಿ.ಪಂ. ವತಿಯಿಂದ ಮಲಯಾಳ- ಹರಿಹರ ರಸ್ತೆ ದುರಸ್ತಿಗಾಗಿ 4.50 ಲಕ್ಷ ರೂ. ಹಾಗೂ ರಸ್ತೆ ಸುರಕ್ಷತಾ ಯೋಜನೆಯಡಿ 4.50 ಲಕ್ಷ ರೂ., ಅಲ್ಲದೇ ತಾ.ಪಂ. ಅನುದಾನದಲ್ಲಿ 2 ಲಕ್ಷ ರೂ. ಕೂಡಾ ಇರಿಸಿದ್ದೇವೆ. ಮಳೆ ಕಡಿಮೆಯಾಗುತ್ತಿದ್ದಂತೆ ತೀವ್ರ ಹದಗೆಟ್ಟ ಭಾಗಗಳಲ್ಲಿ ದುರಸ್ತಿ, ಮಲಯಾಳ ರಸ್ತೆಯ ಆರಂಭದಲ್ಲಿ ಬೆಳಕಿನ ವ್ಯವಸ್ಥೆಗಳು ನಡೆಯಲಿವೆ. 2007-08 ರಲ್ಲಿ ಕಳುಹಿಸಿದ್ದ ಗ್ರಾಮ ಸಡಕ್ ಕಾಮಗಾರಿ ಪ್ರಸ್ತಾವನೆ ಮಂಜೂರಾತಿಯಾಗಿಲ್ಲ.
– ಆಶಾ ತಿಮ್ಮಪ್ಪ, ಜಿ.ಪಂ. ಸದಸ್ಯರು
Advertisement