Advertisement

ರಾಜಕೀಯ ಕೆಸರೆರಚಾಟದ ಬಳಿಕ ಕೆಸರಿನ ಅಭಿಷೇಕ!

10:47 AM Jul 16, 2018 | |

ಸುಳ್ಯ : ಸುಳ್ಯ-ಅಜ್ಜಾವರ-ಮಂಡೆ ಕೋಲು-ಅಡೂರು ಅಂತಾರಾಜ್ಯ ಸಂಪರ್ಕ ರಸ್ತೆ ತೀವ್ರ ಸ್ವರೂಪದಲ್ಲಿ ಹದೆಗೆಟ್ಟಿದ್ದು, ವಾಹನ ಸವಾರರು, ಪಾದಚಾರಿಗಳ ಪಾಲಿಗೆ ಮೃತ್ಯುಕೂಪವಾಗಿ ಪರಿವರ್ತನೆಗೊಂಡಿದೆ. ರಸ್ತೆಯ ಶೇ. 90 ಭಾಗ ಹೊಂಡಗಳಿಂದಲೇ ತುಂಬಿದೆ. ಹೊಂಡ ತಪ್ಪಿಸಿ ವಾಹನ ಚಲಾಯಿಸಲು ಸರ್ಕಸ್‌ ಮಾಡಬೇಕು. ಮಳೆ ಸಂದರ್ಭ ಕೆಸರು, ಚರಂಡಿ ನೀರು ರಸ್ತೆಯಲ್ಲೇ ನಿಂತು ಅಪಘಾತಕ್ಕೆ ಕಾರಣವಾಗಿದೆ.

Advertisement

ರಾಜಕೀಯ ಪ್ರತಿಷ್ಠೆ
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಸ್ತೆಗೆ ಅನುದಾನ ಒದಗಿಸುವ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ಆರೋಪ- ಪ್ರತ್ಯಾರೋಪಗಳ ಸುರಿಮಳೆ ಆಗಿತ್ತು. ಮತ ಎಣಿಕೆ ಮುಗಿದೊಡನೆ ಅಭಿವೃದ್ಧಿ ಮಾಡುವ ಆಶ್ವಾಸನೆ ನೀಡಿ, ಜನರಲ್ಲಿ ಮತ ಕೇಳಿದ್ದರು. ಫಲಿತಾಂಶ ಪ್ರಕಟಗೊಂಡು ಎರಡು ತಿಂಗಳು ಕಳೆದಿವೆ. ಹೊಸ ರಸ್ತೆ ಬಿಡಿ; ಹೊಂಡಕ್ಕೆ ತೇಪೆ ಹಾಕಲು ಕೂಡ ಸಾಧ್ಯವಾಗಿಲ್ಲ.

ಕೋಟಿ ಅನುದಾನ!
ಎರಡು ವರ್ಷಗಳ ಹಿಂದೆ ಸುಳ್ಯ ಶಾಸಕ ಎಸ್‌. ಅಂಗಾರ ಅವರ ಶಿಫಾರಸ್ಸಿನ ಮೇರೆಗೆ ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿ 4 ಕೋಟಿ ರೂ. ಅನುದಾನ ಮಂಜೂರುಗೊಂಡಿತ್ತು.  ಸಿಆರ್‌ಎಫ್ ನಿಧಿಯಿಂದಲೂ 6 ಕೋಟಿ ರೂ. ಮಂಜೂರಾಗಿತ್ತು. ಒಂದೇ ರಸ್ತೆಗೆ ಎರಡು ಅನುದಾನ ಮಂಜೂರಾದ ಕಾರಣ, ರಾಜ್ಯ ಸರಕಾರದ 4 ಕೋಟಿ ರೂ. ಅನುದಾನವನ್ನು ಬೇರೆ ರಸ್ತೆಗೆ ವರ್ಗಾಯಿಸಿ, ಸಿಆರ್‌ಎಫ್‌ ನಿಧಿ ಬಳಸಲು ಉದ್ದೇಶಿಸಲಾಗಿತ್ತು. ಆದರೆ ಸಿಆರ್‌ ಎಫ್‌ ಅನುದಾನಕ್ಕೆ ಟೆಂಡರ್‌ ಪ್ರಕ್ರಿಯೆ ನಡೆಯಲಿಲ್ಲ. ಉದ್ದೇಶಪೂರ್ವಕವಾಗಿ ರಾಜ್ಯ ಸರಕಾರ ಅನುದಾನ ತಡೆ ಹಿಡಿದಿದೆ ಎಂದು ಬಿಜೆಪಿ ಆರೋಪಿಸಿದರೆ, ಸಿಆರ್‌ಎಫ್‌ ಕೇಂದ್ರದ ನಿಧಿ ಆಗಿದ್ದು, ಅಲ್ಲಿಂದ ರಾಜ್ಯಕ್ಕೆ ಹಣ ಬಾರದಿರುವ ಕಾರಣ ಬಿಡುಗಡೆ ಆಗಿಲ್ಲ ಎಂದು ಕಾಂಗ್ರೆಸ್‌ ಪ್ರತ್ಯಾರೋಪ ಮಾಡಿತ್ತು. ಇದೇ ವಿಚಾರವಾಗಿ ಪಕ್ಷವೊಂದರ ಮುಖಂಡರು ಅಧಿಕಾರಿಯ ಜತೆಗೆ ನಡೆಸಿದ ಸಂಭಾಷಣೆಯ ಧ್ವನಿಸುರಳಿ ವೈರಲ್‌ ಆಯಿತು. ಇದು ಬಿಟ್ಟರೆ ರಸ್ತೆ ದುರಸ್ತಿ ಕಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿ.ಎಂ. ತವರೂರು
ಇದು ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ಹುಟ್ಟೂರಿಗೆ ತೆರಳುವ ರಸ್ತೆ. ಸದಾನಂದ ಗೌಡ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರಸ್ತೆಯ ಸಂಪೂರ್ಣ ಅಭಿವೃದ್ಧಿಗೆ 10 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಥಮ ಹಂತದಲ್ಲಿ ನಾಲ್ಕು ಕೋಟಿ ಬಿಡುಗಡೆಗೊಂಡು, ಕಾಂತಮಂಗಲ ಸೇತುವೆ ಬಳಿಯಿಂದ ವೃತ್ತದ ತನಕದ 500 ಮೀ., ಅಜ್ಜಾವರ ಪೇಟೆಯಲ್ಲಿ 500 ಮೀ. ಕಾಂಕ್ರೀಟ್‌ ಹಾಗೂ ಮಂಡೆಕೋಲಿನಿಂದ ಕೇರಳ ಗಡಿ ತನಕದ 4 ಕಿ.ಮೀ. ರಸ್ತೆ ಡಾಮರು ಕಂಡಿತ್ತು. ಅನಂತರ ಮುಖ್ಯಮಂತ್ರಿ ಸ್ಥಾನದಿಂದ ಸದಾನಂದ ಗೌಡರು ಕೆಳಗಿದರು. ಮುಂದಿನ ಅನುದಾನ ಬಾರದೆ, ಅಭಿವೃದ್ಧಿ ಅರ್ಧದಲ್ಲೇ ಮೊಟಕುಗೊಂಡಿತ್ತು.

ಪ್ರಮುಖ ಸಂಪರ್ಕ ರಸ್ತೆ
ಸುಳ್ಯ-ಮಂಡೆಕೋಲು 14 ಕಿ.ಮೀ. ರಸ್ತೆ ಇದು. ಕಾಂತಮಂಗಲ ಸೇತುವೆ ತನಕ ನ.ಪಂ. ವ್ಯಾಪ್ತಿ, ಕಾಂತಮಂಗಲ-ಅಡ್ಪಂ ಗಾಯ ತನಕ ಜಿ.ಪಂ.ವ್ಯಾಪ್ತಿ, ಅಡ್ಪಂಗಾಯ-ಕೇರಳ ಗಡಿ ತನಕ ಲೋಕೋಪಯೋಗಿ ವ್ಯಾಪ್ತಿಗೆ ಸೇರಿದೆ. ಇದೇ ರಸ್ತೆ ಮೂಲಕ ಆಡಾRರು-ಪೇರಾಲು-ಮಂಡೆಕೋಲು ಹಾಗೂ ಕರ್ನಾಟಕ, ಕೇರಳ ಭಾಗದ ಗಡಿ ಗ್ರಾಮಗಳಿಗೆ ಸಂಪರ್ಕ ಸಾಧ್ಯವಾಗುತ್ತದೆ.

Advertisement

ಟೆಂಡರ್‌ ಆಗಬೇಕಷ್ಟೆ
ಸಿಆರ್‌ಎಫ್‌ ನಿಧಿಯಿಂದ 6 ಕೋಟಿ ರೂ. ಅನುದಾನಕ್ಕೆ ಟೆಂಡರ್‌ ಪ್ರಕ್ರಿಯೆ ಆಗಬೇಕಷ್ಟೆ. ಟೆಂಡರ್‌ ಆದ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ. 
 - ಮಣಿಕಂಠನ್‌ ಸಹಾಯಕ
    ಎಂಜಿನಿಯರ್‌, ಜಿ.ಪಂ.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next