Advertisement

ಸುಳ್ಯ ಸರಕಾರಿ ಪಿಯು ಕಾಲೇಜ್‌ : ಬಗೆಹರಿಯದ ಉಪನ್ಯಾಸಕರ ಕೊರತೆ

06:35 AM Aug 24, 2017 | |

ಸುಳ್ಯ: ತಾಲೂಕಿನ ಅತೀ ದೊಡ್ಡ ಸರಕಾರಿ ಕಾಲೇಜೆಂಬ ಹೆಗ್ಗಳಿಕೆ ಹೊಂದಿರುವ ಸರಕಾರಿ ಪದವಿ ಪೂರ್ವ ಕಾಲೇಜು ಇದೀಗ ಉತ್ತಮ ಫಲಿತಾಂಶದಿಂದಾಗಿ ಎಲ್ಲರ ಗಮನ ಸೆಳೆಯುತ್ತಿದ್ದರೂ ಉಪನ್ಯಾಸಕರ ಕೊರತೆ ಅದರ ಆರೋಗ್ಯವನ್ನು ಹದಗೆಡಿಸುತ್ತಿದೆ.

Advertisement

ತಾಲೂಕು ವ್ಯಾಪ್ತಿಯಿಂದ ಮಾತ್ರವಲ್ಲ, ಹಾಸನ, ಮಡಿಕೇರಿಯಿಂದಲೂ ಮಕ್ಕಳು ಈ ಕಾಲೇಜಿಗೆ ಸೇರುತ್ತಿದ್ದಾರೆ. ಹಿಂದುಳಿದ ವರ್ಗವರಿಗಾಗಿ ಹಾಸ್ಟೆಲ್‌ ಸೌಲಭ್ಯ ಇರುವುದು ಇದರ ಧನಾತ್ಮಕ ಅಂಶ. ಈ ಕಾಲೇಜಿನಲ್ಲಿ ಹೆಣ್ಮಕ್ಕಳು ಅಧಿಕ ಸಂಖ್ಯೆಯಲ್ಲಿದ್ದಾರೆ.ಆದರೂ ಮೂಲ ಸೌಕರ್ಯಗಳ ಕೊರತೆ ಕಾಲೇಜನ್ನು ಕಾಡುತ್ತಿದೆ. 

ಹಲವು ವರ್ಷಗಳಿಂದ ಖಾಲಿ !
ಕನ್ನಡ ಉಪನ್ಯಾಸಕರು 2009 ರಲ್ಲಿ ವರ್ಗಾವಣೆಯಾಗಿದ್ದು, ಯಾರೂ ಬಂದಿಲ್ಲ. ಇತಿಹಾಸದ ಉಪನ್ಯಾಸಕರು 2000 ರಲ್ಲಿ ಭಡ್ತಿ ಹೊಂದಿ ತೆರಳಿದ್ದು, ಹೊಸಬರ ನೇಮಕ ವಾಗಿಲ್ಲ. ಬೋಧಕೇತರ ವಿಭಾಗದ ಎಲ್ಲ ಹುದ್ದೆಗಳು ಖಾಲಿ ಇವೆ. ಗ್ರಂಥ ಪಾಲಕರ ಹುದ್ದೆ 2013ರಲ್ಲಿ ನಿಯೋಜನೆಗೊಂಡಿದ್ದರೂ ಭರ್ತಿಯಾಗಿಲ್ಲ. 

ಪಿಲ್ಲರ್‌ ಹಂತದಲ್ಲಿ ಕಾಮಗಾರಿ ಸ್ಥಗಿತ
ನಬಾರ್ಡ್‌ ಸಹಯೋಗದಲ್ಲಿ 83.20 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ 20.50 ಲಕ್ಷ ರೂ. ಮಾತ್ರ ಅನುದಾನ ಬಂದಿದ್ದು, ಉಳಿದ ಹಣ ಬಾರದ ಕಾರಣ ನೂತನ ಕಟ್ಟಡದ ಕಾಮಗಾರಿ   ಪಿಲ್ಲರ್‌ ಹಂತದಲ್ಲೇ ಸ್ಥಗಿತಗೊಂಡಿದೆ. ತಾಲೂಕು ಮೀಸಲಾತಿ ಕೋಟಾದಡಿ 65 ಲಕ್ಷ ರೂ. ಬಿಡುಗಡೆಯಾಗಿದ್ದು, ಹಳೆ ಕಟ್ಟಡದ ಮಾಳಿಗೆ ಮೇಲೆ 6 ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ.  ಹೆಣ್ಮಕ್ಕಳ ನೂತನ ಶೌಚಾಲಯಕ್ಕೆ 2.5 ಲಕ್ಷ ಮಂಜೂರಾಗಿದ್ದು ಕಾಮಗಾರಿ ಇನ್ನೂ ಆರಂಭವಾಗಿಲ್ಲ.ಕಾಲೇಜಿನ ಹಳೆ ಕಟ್ಟಡ ಶಿಥಿಲಗೊಳ್ಳುತ್ತಿದ್ದು, ಕಟ್ಟಡದ ಮಾಡು, ಕಿಟಕಿ, ವಯರಿಂಗ್‌, ಲ್ಯಾಬ್‌, ಬಾಗಿಲುಗಳನ್ನು ದುರಸ್ತಿಗೊಳಿಸಬೇಕಿದೆ.


ಪೀಠೊಪಕರಣಗಳ ಬದಲಾವಣೆ,ತಡೆಗೋಡೆ ನಿರ್ಮಾಣ, ಉತ್ತಮ ಸಭಾಭವನ, ಲ್ಯಾಬ್‌ ನವೀಕರಣ-ಇವು ಆಗಬೇಕಾದ ಕೆಲಸಗಳು. ತಾಲೂಕಿನಲ್ಲೇ ಅತಿ ವಿಶಾಲವಾದ ಕ್ರೀಡಾಂಗಣ ಹೊಂದಿದ್ದರೂ ಪ.ಪೂ.ಕಾಲೇಜಿಗೆ ಒಬ್ಬರೇ ಒಬ್ಬ ದೈಹಿಕ ಶಿಕ್ಷಕರಿಲ್ಲ. ಆದಷ್ಟು ಬೇಗ ಇವು ಬಗೆಹರಿದರೆ ಒಳ್ಳೆಯದೆಂಬುದು ವಿದ್ಯಾರ್ಥಿಗಳ ಆಗ್ರಹ. 

ಉತ್ತಮ ಫ‌ಲಿತಾಂಶ
ಇತ್ತೀಚಿನ ವರ್ಷಗಳಲ್ಲಿ ಶೇಕಡವಾರು ಉತ್ತಮ ಫ‌ಲಿತಾಂಶ ದಾಖಲಿಸುತ್ತಿದೆ. ಕಳೆದ ವರ್ಷ ಮೂರು ವಿಭಾಗಗಳಲ್ಲಿ ಶೇ. 95 ಫಲಿತಾಂಶ ದಾಖಲಾಗಿತ್ತು. ವಿಜ್ಞಾನದಲ್ಲಿ ಶೇ. 97.22 ಫಲಿತಾಂಶ ಪಡೆದು ತಾಲೂಕಿನಲ್ಲೇ ಪ್ರಥಮ ಸ್ಥಾನ ಪಡೆದಿತ್ತು. ಈ ವರ್ಷದಲ್ಲಿ ದ್ವಿತೀಯ ಪಿ.ಯು. ವಿಜ್ಞಾನ ವಿಭಾಗದಲ್ಲಿ 60, ಕಲಾ ವಿಭಾಗದಲ್ಲಿ ಎ. ಮತ್ತು ಬಿ ವಿಭಾಗದಲ್ಲಿ ಒಟ್ಟು 98, ಇನ್ನು ವಾಣಿಜ್ಯ ವಿಭಾಗದಲ್ಲೂ ಇದೇ ರೀತಿ ಎರಡು ವಿಭಾಗದಲ್ಲಿ 175 ಮಂದಿ ಮಕ್ಕಳಿದ್ದಾರೆ. ಪ್ರಥಮ ಪಿ.ಯು.ಸಿಗೆ ವಿಜ್ಞಾನ ವಿಭಾಗದಲ್ಲಿ 170 ಮಕ್ಕಳಿದ್ದು, ಕೊಠಡಿಗಳಿವೆ. ಉಪನ್ಯಾಸಕರ ಕೊರತೆ ಇದೆ.

Advertisement

ಈ ಕಾಲೇಜಿನ ಸಮಸ್ಯೆಯೇ ಬೇರೆ. ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟಿದೆ. ಆದರೆ ಉಪನ್ಯಾಸಕರ ಕೊರತೆ ಸದಾ ಕಾಡುತ್ತಿದೆ. ಆದರೂ ಫ‌ಲಿತಾಂಶಕ್ಕೇನೂ ಬರವಿಲ್ಲವೆಂಬುದು ಸದ್ಯದ ಸ್ಥಿತಿ.

ಸಾಕಷ್ಟು ವಿದ್ಯಾರ್ಥಿಗಳು
ಪ್ರಥಮ ಪಿಯುಸಿಯಲ್ಲಿ 402 ಮತ್ತು ದ್ವಿತೀಯ ಪಿಯುಸಿ ಯಲ್ಲಿ 321 ಮಂದಿ ಕಲಿಯುತ್ತಿದ್ದಾರೆ. ಕಾಲೇಜಿಗೆ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಕಾಮಗಾರಿ ಪೂರ್ಣಗೊಂಡರೆ ಕೊಠಡಿ ಕೊರತೆ ನೀಗಲಿದೆ. ಖಾಲಿ ಇರುವ ಉಪನ್ಯಾಸಕರು ಮತ್ತು ಬೋಧಕೇತರರ ಹುದ್ದೆಗಳನ್ನು ತುಂಬಲು ಸರಕಾರ ಆಸಕ್ತಿ ತೋರಬೇಕಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳೂ ಆಸಕ್ತಿ ವಹಿಸಬೇಕಿದೆ. 

ಹಂತ ಹಂತವಾಗಿ ಈಡೇರುತ್ತಿದೆ
ನಬಾರ್ಡ್‌ ಸಹಯೋಗದಡಿ ನೂತನ ಕಟ್ಟಡಕ್ಕೆ ಬಿಡುಗಡೆಯಾದ ಹಣದಲ್ಲಿ 20.50  ಲಕ್ಷ ರೂ. ಬಂದಿದ್ದು, ಉಳಿದ ಅನುದಾನ ಬರಲಿದೆ. ಸ್ಥಗಿತಗೊಂಡ ಕಟ್ಟಡ ಮತ್ತೆ ಆರಂಭಿಸಲಾಗುವುದು. ಉಪನ್ಯಾಸಕರ, ಬೋಧಕೇತರರ ಖಾಲಿಯಾದ ಹುದ್ದೆಗಳು ತುಂಬಿಕೊಡಲು ಸರಕಾರಕ್ಕೆ ಒತ್ತಡ ತರುವೆ.
– ಎಸ್‌. ಅಂಗಾರ. 
ಶಾಸಕರು,ಅಧ್ಯಕ್ಷರು,
ಕಾಲೇಜು ಅಭಿವೃದ್ಧಿ ಸಮಿತಿ

ಹಂತ ಹಂತವಾಗಿ ಈಡೇರುತ್ತಿದೆ ಉತ್ತಮ ಫಲಿತಾಂಶ ನೀಡುತ್ತಿರುವ ಈ ಕಾಲೇಜಿನಲ್ಲಿ ಒಳ್ಳೆಯ ಉಪನ್ಯಾಸಕರಿದ್ದಾರೆ. ಮೂಲ ಸೌಲಭ್ಯ ಗಳು ಒಂದೊಂದಾಗಿ ಈಡೇರುತ್ತಿವೆ.
– ಚಿದಾನಂದ ಎಂ.ಎಸ್‌.
ಪ್ರಾಂಶುಪಾಲರು

– ಗಂಗಾಧರ ಮಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next