ಸುಳ್ಯ: ಸುಳ್ಯದ ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ಕುಸಿತಗೊಂಡ ಹಿನ್ನೆಲೆ ಸುಳ್ಯ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಭೀತಿ ಎದುರಾಗುವ ಕ್ಷಣದಲ್ಲಿ ಉತ್ತಮ ಮಳೆಯಾ ಗಿದ್ದರಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಇದೀಗ ಹಲವು ದಿನಗಳಲ್ಲಿ ಸುಳ್ಯದಲ್ಲಿ ಉತ್ತಮ ಮಳೆಯಾದ್ದರಿಂದ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ.
ಮಾರ್ಚ್ ಅಂತ್ಯದ ವೇಳೆಗಾಗ್ಗೆ ಸುಳ್ಯ ನಗರಕ್ಕೆ ಈ ಬಾರಿ ನೀರಿನ ಸಮಸ್ಯೆ ಎದುರಾಗುವ ಸ್ಥಿತಿ ನಿರ್ಮಾಣವಾಗಿ ಸುಳ್ಯ ನಗರ ಪಂಚಾಯತ್ ವತಿಯಿಂದ ಜಾಗೃತಿ ಕಾರ್ಯ ನಡೆಸಲಾಗಿತ್ತು. ಎಪ್ರಿಲ್ ತಿಂಗಳ ಮಧ್ಯಕ್ಕೆ ಸುಳ್ಯ ನಗರಕ್ಕೆ ಪ್ರಮುಖವಾಗಿ ಕುಡಿಯುವ ನೀರು ಸರಬರಾಜಾಗುವ ಪಯಸ್ವಿನಿ ಹೊಳೆಯಲ್ಲಿ ನೀರಿನ ಮಟ್ಟ ಕುಸಿತಗೊಂಡಿತ್ತು. ಮೇ ಆರಂಭದಲ್ಲಿ ಸಮಸ್ಯೆ ಬಿಗಡಾಯಿಸಲಿದೆ ಎಂಬ ಕ್ಷಣದಲ್ಲಿ ಸುಳ್ಯ, ಮಡಿಕೇರಿ ಭಾಗದಲ್ಲಿ ಮಳೆ ಸುರಿದು ಸಮಸ್ಯೆ ದೂರ ಮಾಡಿತು.
ಈಗಂತೂ ಉತ್ತಮ ಮಳೆಯಾಗಿರುವು ದರಿಂದ ಪಯಸ್ವಿನಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಹೊಳೆಯಲ್ಲಿ ನೀರಿನ ಹರಿವು ಆರಂಭಗೊಂಡಿದೆ. ಇದರಿಂದಾಗಿ ಈ ವರ್ಷ ಸುಳ್ಯ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಬಹುತೇಕ ದೂರವಾದಂತಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭಗೊಳ್ಳಲಿದೆ. ಮುಂದಿನ ವರ್ಷ ನಗರಕ್ಕೆ ನೀರು ಸರಬರಾಜಾಗಲು ನಿರ್ಮಾಣ ಗೊಳ್ಳುತ್ತಿರುವ ಕಿಂಡಿ ಅಣೆಕಟ್ಟು ಬಳಕೆಗೆ ಸಿದ್ಧವಾಗುವ ನಿರೀಕ್ಷೆ ಇದ್ದು, ನೀರಿನ ಸಮಸ್ಯೆ ಉದ್ಭವ ಆಗದು ಎಂಬ ನಿರೀಕ್ಷೆ ಜನರದ್ದು.