Advertisement

ಸುಳ್ಯ ಬ್ಲಾಕ್‌ ಕಾಂಗ್ರೆಸ್‌: ಅತೃಪ್ತರಿಗೆ ಸದ್ಯ ಸಮಾಧಾನ

03:10 AM Jul 16, 2017 | |

ಸುಳ್ಯ: ಒಕ್ಕಲಿಗ ಸಮುದಾಯದ 200 ರಷ್ಟು ಮಂದಿ ಮುಖಂಡರು ಮತ್ತು ಬೆಂಬಲಿಗರು ಶನಿವಾರ ಬೆಳಗ್ಗೆ ನಗರದ ಅತಿಥಿಗೃಹದಲ್ಲಿ ಮೈಸೂರು ವಿಭಾಗದ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್‌ ಅವರನ್ನು ಭೇಟಿಯಾಗಿ ತಮ್ಮ ಅಹವಾಲುಗಳನ್ನು ಮಂಡಿಸಿದರು.

Advertisement

ಸುಮಾರು ಅರ್ಧ ಗಂಟೆವರೆಗೂ ಒಕ್ಕಲಿಗ ಸಮುದಾಯದ ಮುಖಂಡರು ತಮ್ಮ ಸಮುದಾಯವನ್ನು ಕಡೆಗಣಿಸುತ್ತಿರುವುದರ ಬಗ್ಗೆ ವಿಷ್ಣುನಾಥನ್‌ ಅವರಿಗೆ ವಿವರಿಸಿದರು. 

“ಜಿಲ್ಲೆಯ ಮೂರು ತಾಲೂಕಿನಲ್ಲಿ ಒಕ್ಕಲಿಗ ಸಮುದಾಯವಿದ್ದರೂ ಪ್ರಾತಿನಿಧ್ಯ ನೀಡಿಲ್ಲ. ತಾಲೂಕಿನಲ್ಲಿ ಶೇ. 60-70 ಒಕ್ಕಲಿಗ ಸಮುದಾಯವಿದ್ದರೂ ಅಧ್ಯಕ್ಷ ಪಟ್ಟ ಕಿತ್ತುಕೊಂಡು, ಸೂಕ್ತ ಸ್ಥಾನಮಾನ ನೀಡಿಲ್ಲ. ಬಿಜೆಪಿಯಲ್ಲಿ ಡಿ.ವಿ. ಸದಾನಂದ ಗೌಡ, ಶೋಭಾ ಕರಂದ್ಲಾಜೆ, ಆಶಾ ತಿಮ್ಮಪ್ಪ, ಅಲ್ಲದೇ ಪಕ್ಷ ಅನೇಕ ನಿಗಮ ಮಂಡಳಿಗಳಲ್ಲಿ ಗೌಡ ಸಮುದಾಯದ ಪ್ರತಿನಿಧಿಗಳಿಗೆ ಅವಕಾಶ ನೀಡಿದೆ. ಪಕ್ಷದ ಹುದ್ದೆಯಲ್ಲೂ ಸಾಕಷ್ಟು ಸ್ಥಾನಮಾನ ಕಲ್ಪಿಸಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ ಜಿಲ್ಲೆಯ ಇತರ ಅಲ್ಪಸಂಖ್ಯಾಕರ ಬಳಿಕ ಒಕ್ಕಲಿಗ ಸಮುದಾಯ ಎರಡನೇ ಸ್ಥಾನದಲ್ಲಿದರೂ ಪ್ರಾತಿನಿಧ್ಯ ನೀಡಿಲ್ಲ’ ಎಂದು ಮಾಜಿ ಅಧ್ಯಕ್ಷ ವೆಂಕಪ್ಪ ಗೌಡ ವಿವರಿಸಿದರು.

“ನಿಮ್ಮ ಬೇಡಿಕೆಗಳೆಲ್ಲವನ್ನು ಒಪ್ಪಿದ್ದೇನೆ. ನಿಮ್ಮ ಸಮುದಾಯಕ್ಕೆ ಕೊಡಬೇಕಾದ ಗೌರವವನ್ನು ಕೊಡಲೇಬೇಕು. ಈ ಬಗ್ಗೆ ರಾಜ್ಯ ಉಸ್ತುವಾರಿಗಳಾದ ವೇಣುಗೋಪಾಲ್‌ ಅವರ ಜತೆಗೆ ಚರ್ಚಿಸುವೆ’ ಎಂದು ವಿಷ್ಣುನಾಥನ್‌ ಭರವಸೆ ನೀಡಿದರು.

ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ನಿಮ್ಮ ಬೇಡಿಕೆಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಅವರೊಂದಿಗೆ ಮಾತನಾಡಿದ್ದೇನೆ. ಮಾಜಿ ಅಧ್ಯಕ್ಷ ವೆಂಕಪ್ಪ ಗೌಡ ಅವರು ಅತ್ಯುತ್ತಮ ನಾಯಕರು. ಅವರ ಬೇಡಿಕೆಗಳು ನನ್ನ ವ್ಯಾಪ್ತಿಯಲ್ಲಿಲ್ಲ. ಅವರು ಮನವಿ ನೀಡಿದರೆ ಮತ್ತೂಮ್ಮೆ ಪಕ್ಷದ ನಾಯಕಿರಿಗೆ ನೀಡುವೆ ಹಾಗೂ ಇನ್ನೊಂದು ಬಾರಿ ಅಧ್ಯಕ್ಷರ ಗಮನಸೆಳೆಯುವೆ ಎಂದರು.

Advertisement

ನಮ್ಮ ಸಮುದಾಯಕ್ಕೆ ಅವಕಾಶ ನೀಡಿ
ಪಕ್ಷದಲ್ಲಿ ಸಮುದಾಯದ ದಿವ್ಯಪ್ರಭಾ ಅವರಿಗೆ ಸಮಾಜ ಕಲ್ಯಾಣ ಮಂಡಳಿ ಹುದ್ದೆ ನೀಡಲಾಗಿದೆ. ಆದರೆ ಅವರು ಜಿಲ್ಲೆಯ ಅರೆಭಾಷಿಕ ಅಥವಾ ತುಳು ಸಮುದಾಯದ ಒಕ್ಕಲಿಗರಲ್ಲ. ಪಕ್ಷ ಕಟ್ಟಿದ ಇಲ್ಲಿನ ಒಕ್ಕಲಿಗ ನಾಯಕರಿಗೆ ಸೂಕ್ತ ಸ್ಥಾನ ಮಾನ ನೀಡಬೇಕಿತ್ತು ಎಂದು ತಮ್ಮ ಅಹವಾಲನ್ನು ವಿಷ್ಣುನಾಥನ್‌ ಅವರಿಗೆ ಒಕ್ಕಲಿಗ ಮುಖಂಡರು ತಿಳಿಸಿದರು. ಈ ಸಂದರ್ಭ ಶಾಂತಚಿತ್ತರಾಗಿಯೇ ಇದ್ದ ದಿವ್ಯಪ್ರಭಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಳಿಕ ಉಸ್ತುವಾರಿ ಸಚಿವ ರಮಾನಾಥ ರೈ ಆಗಮಿಸಿದರು.  ಇದೇ ವೇಳೆ ಕಿಕ್ಕಿರಿದ ಸಮುದಾಯದ ಮತ್ತು ಇತರೇ ಬೆಂಬಲಿಗ ನಾಯಕರ ಮಧ್ಯೆ ತೂರಿಬಂದ ದಿವ್ಯಪ್ರಭಾ ಅವರ ಪತಿ ಪರಶುರಾಮ ಚಿಲ್ತಡ್ಕ ತನ್ನ ಪತ್ನಿಯ ಬಗ್ಗೆ ಏನು ಮಾತನಾಡುವುದು ಎಂದು ತಿಳಿಯಲು ಮುನ್ನುಗ್ಗಿದಾಗ ಪೊಲೀಸ್‌ ಸಿಬಂದಿ ತಡೆದರು. ಸಚಿವ ರಮಾನಾಥ ರೈ ಅವರು ಏರುಸ್ವರದಿಂದ ಸಮಾಧಾನಿಸಿದರು.

ಸಮಾವೇಶದಲ್ಲಿ ಭಾಗಿ
ಅತಿಥಿಗೃಹದಿಂದ ತೆರಳುವಾಗ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳುವಂತೆ ಕಾರ್ಯ ದರ್ಶಿಗಳು ಮನವಿ ಮಾಡಿ ಸಚಿವ ರೊಂದಿಗೆ ತೆರಳಿದರು. ಬಳಿಕ ಒಕ್ಕಲಿಗ ಮುಖಂಡರು ಪರಸ್ಪರ ಚರ್ಚಿಸಿದರು. ಅದರಂತೆ ಬೇಡಿಕೆ ಈಡೇರಿಸುವ ಬಗ್ಗೆ ಕಾರ್ಯದರ್ಶಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರೋಣ. ಸಮಾವೇಶದಲ್ಲಿ ಪಾಲ್ಗೊಂಡು ವೇದಿಕೆ ಏರದಿರಲು ನಿರ್ಧರಿಸಿದರು. ಆದಾಗಲೇ ಸಮಾವೇಶ ಆರಂಭಗೊಂಡಿದ್ದು ಅಧ್ಯಕ್ಷ ಜಯಪ್ರಕಾಶ್‌ ರೈ ಎಲ್ಲರನ್ನೂ ಸ್ವಾಗತಿಸುತ್ತಿದ್ದರು. ಮುಖಂಡರಾದ ವೆಂಕಪ್ಪ ಗೌಡ, ಭರತ್‌ ಮುಂಡೋಡಿ, ಸೋಮಶೇಖರ ಕೊಯಿಂಗಾಜೆ, ಪಿ.ಎಸ್‌.ಗಂಗಾಧರ ಸಭಾಂಗಣಕ್ಕೆ ಆಗಮಿಸುತಿದ್ದಂತೆ, ವೇದಿಕೆ ಯಿಂದಿಳಿದು ಬಂದ ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮಿಥುನ್‌ ರೈ ಅವರು ಭರತ್‌ ಮುಂಡೋಡಿ, ವೆಂಕಪ್ಪ ಗೌಡರನ್ನು ವೇದಿಕೆಗೆ  ಕರೆದರಾದರೂ ಅವರು ವೇದಿಕೆ ಏರಲಿಲ್ಲ.

ಕೈ ಹಿಡಿದು ಕರೆತಂದ ಸಚಿವ ರೈ
ಒಂದು ತಾಸಿನ ಬಳಿಕ ಸಚಿವ ರಮಾನಾಥ ರೈ ಆಗಮಿಸಿ ವೇದಿಕೆಯಲ್ಲಿ ಆಸೀನರಾದರು. ಕೆಲಸಮಯ ಚಡಪಡಿಸಿದ ಸಚಿವರು ವೇದಿಕೆಯಿಂದ ಇಳಿದು, ಎದುರು ಸಾಲಿನಲ್ಲಿ ಕುಳಿತಿದ್ದ ವೆಂಕಪ್ಪ ಗೌಡರನ್ನು ಕೈಹಿಡಿದು ವೇದಿಕೆಗೆ ಕರೆದೊಯ್ದರು. ಈ ಸಂದರ್ಭ ವೆಂಕಪ್ಪ ಗೌಡ ತೀವ್ರ ಭಾವುಕರಾದರು.ಬಳಿಕ ಮಾತನಾಡಿದ ಸಚಿವ ರಮಾನಾಥ ರೈ ಸುಳ್ಯದೊಂದಿಗಿನ ತಮ್ಮ ಒಡನಾಟ, ವೆಂಕಪ್ಪ ಗೌಡ ಅವರ ಪರಿಶ್ರಮ, ಹೋರಾಟಗಳನ್ನು ನೆನಪಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next