Advertisement
ಬಿಸಿಲಿನ ತೀವ್ರತೆ ಕಳೆದ ವರ್ಷಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ದಾಖಲಾಗಿರುವುದರಿಂದ ಕೃಷಿ ಭೂಮಿಗೆ ನೀರಿನ ಅಗತ್ಯತೆ ಹೆಚ್ಚಿದೆ. ಆದರೆ ವಿದ್ಯುತ್ ಕೈ ಕೊಡುತ್ತಿರುವ ಕಾರಣ ಒಂದೆಡೆ ಬಿಸಿಲ ಬೇಗೆ, ನೀರಿನ ಬರದಿಂದ ಅಡಿಕೆ ತೋಟ ಸಹಿತ ಆರ್ಥಿಕ ಬೆನ್ನೆಲುಬಾಗಿದ್ದ ಬೆಳೆಗಳು ಕರಟಿವೆ.
ಪುತ್ತೂರು-ಸುಳ್ಯ ನಡುವಿನ 33 ಕೆವಿ ಸಬ್‌ಸ್ಟೇಷನ್ ಹಳೆ ತಂತಿ ಬದಲಾವಣೆ ಬಳಿಕ ಲೋ ವೋಲ್ಟೇಜ್‌ಗೆ ಕೊಂಚ ಪರಿಹಾರ ಸಿಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಹೊಸ ಸಂಪರ್ಕದಾರರು ಸೇರ್ಪಡೆ ಆಗುತ್ತಿದ್ದು, ಇರುವ ಸಂಗ್ರಹ ಸಾಮರ್ಥ್ಯದಿಂದಲೇ ವಿದ್ಯುತ್ ಹರಿಸಬೇಕಾಗಿರುವ ಕಾರಣ ಮತ್ತಷ್ಟು ಒತ್ತಡ ಹೆಚ್ಚಿದೆ. 12.75 ಮೆ.ವ್ಯಾ. ಕೊರತೆ
ತಾಲೂಕಿನಲ್ಲಿ 32,300 ಗೃಹ, 11,500 ಕೃಷಿ ಪಂಪ್‌ಸೆಟ್, 4,900 ವಾಣಿಜ್ಯ, 500 ಕೈಗಾರಿಕೆ ಸೇರಿದಂತೆ ಒಟ್ಟು 49,200 ಬಳಕೆದಾರರಿದ್ದಾರೆ. 16 ಫೀಡರ್‌ಗಳಿವೆ. 25 ಕೆವಿಎ, 63 ಕೆವಿಎ, 100 ಕೆವಿಎ ಸಾಮಥ್ಯದ ಒಟ್ಟು 1,970 ವಿದ್ಯುತ್ ಪರಿವರ್ತಕಗಳಿವೆ. ದಿನವೊಂದಕ್ಕೆ 14.25 ಮೆ.ವ್ಯಾ.ಬೇಡಿಕೆ ಇದ್ದು, 24 ತಾಸು ತ್ರಿಫೇಸ್ ಸೌಲಭ್ಯ ಒದಗಿಸಲು 27 ಮೆ. ವ್ಯಾ. ಆವಶ್ಯಕತೆಯಿದೆ. ಹಾಗಾಗಿ ಪ್ರಸ್ತುತ 12.75 ಮೆ.ವ್ಯಾ. ವಿದ್ಯುತ್ ಕೊರತೆ ಇದೆ.
Related Articles
ತಾಲೂಕಿನಲ್ಲಿ ಒಟ್ಟು 1,970 ವಿದ್ಯುತ್ ಪರಿವರ್ತಕಗಳಿವೆ. ಮೆಸ್ಕಾಂ ಮಾಹಿತಿ ಪ್ರಕಾರ 100ರಿಂದ 150 ಟಿ.ಸಿ.ಗಳಲ್ಲಿ ಓವರ್‌ಲೋಡ್ ಸಮಸ್ಯೆಯಿದೆ. ಬಹುತೇಕ ಹಳೆ ಟಿ.ಸಿ. ಬದಲಾಯಿಸಿ ಹೊಸ ಟಿ.ಸಿ. ಅಳವಡಿಸಿರುವ ಕಾರಣ ಸಮಸ್ಯೆ ಕಡಿಮೆ ಆಗುತ್ತಿದೆ ಅನ್ನುತ್ತಾರೆ ಅಧಿಕಾರಿಗಳು. ಆದರೆ ಈ ಬಾರಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಓವರ್‌ಲೋಡ್ ಸಮಸ್ಯೆ ಇದೆ.
Advertisement
ವಿದ್ಯುತ್ ಪರಿವರ್ತಕ ತನ್ನ ಸಾಮರ್ಥ್ಯಕ್ಕಿಂತ ಅಧಿಕ ಬಳಕೆದಾರರನ್ನು ಹೊಂದಿರುವುದೇ ಓವರ್‌ಲೋಡ್‌ಗೆ ಕಾರಣವೆನಿಸಿದೆ. ಉದಾಹರಣೆಗೆ 25 ಕೆವಿಎ ಸಾಮರ್ಥ್ಯದ ಟಿ.ಸಿ.ಯಿಂದ 5 ಎಚ್.ಪಿ. ಸಾಮರ್ಥ್ಯದ ನಾಲ್ಕು ಪಂಪ್‌ಸೆಟ್‌ಗೆ ಕನೆಕ್ಷನ್ ನೀಡಬಹುದು. ಪ್ರಸ್ತುತ ಸಿಂಗಲ್, ತ್ರಿಫೇಸ್, ಟು-ತ್ರಿ ಹೀಗೆ 25ಕ್ಕೂ ಅಧಿಕ ಕನೆಕ್ಷನ್‌ಗಳಿವೆ. ಇದರಿಂದ ಟಿ.ಸಿ.ಗೆ ಒತ್ತಡ ತಾಳಲಾಗುತ್ತಿಲ್ಲ. ಈ ಎಲ್ಲ ಪಂಪ್‌ಸೆಟ್‌ಗಳು ಏಕಕಾಲದಲ್ಲಿ ಚಾಲೂ ಆದಾಗ, ಪಂಪ್‌ಸೆಟ್‌ಗಳು ಆಫ್ ಆಗುವುದು, ಚಾಲೂ ಆಗದೇ ಇರುವುದು, ಚಾಲು ಆದರೂ ನೀರಿನ ಹರಿವು ಕಡಿಮೆ ಆಗಿರುವುದು ಮೊದಲಾದ ಸಮಸ್ಯೆಗಳು ಉಂಟಾಗುತ್ತದೆ. ತಾಲೂಕಿನ ಕೃಷಿಕರನ್ನು ಈ ಸಮಸ್ಯೆ ಬಹುವಾಗಿ ಕಾಡುತ್ತಿವೆ.
ನಸುಕಿನ ಜಾವ ತ್ರಿಫೇಸ್ತ್ರಿಫೇಸ್ ಅವಧಿ ವಾರಕ್ಕೊಮ್ಮೆ ಬದಲಾಗುತ್ತಿರುತ್ತದೆ. ಬೆಳಗ್ಗೆ 6ರಿಂದ ಅಪರಾಹ್ನ 2, 2ರಿಂದ ರಾತ್ರಿ 10, 10ರಿಂದ ಬೆಳಗ್ಗೆ 6ರ ಅವಧಿಯಲ್ಲಿ ಪೂರೈಕೆ ಮಾಡಲಾಗುತ್ತದೆ. ಈ ಅವಧಿಯಲ್ಲಿ ಹಲವು ಕಾರಣಗಳಿಂದ ವಿದ್ಯುತ್ ಕಡಿತವಾಗುತ್ತದೆ. ಮರು ಸಂಪರ್ಕವಾದರೆ ಮತ್ತೆ ಪಂಪ್ ಚಾಲೂ ಮಾಡಬೇಕು. ರಾತ್ರಿ ಅವಧಿ 10ರಿಂದ ಬೆಳಗ್ಗೆ 6 ಗಂಟೆ ಮಧ್ಯೆ ನಸುಕಿನ ಜಾವ ವಿದ್ಯುತ್ ಕೈ ಕೊಟ್ಟು, ಕರೆಂಟ್ ಮರಳಿ ಬಂದರೆ ಬಳಕೆದಾರ ಮತ್ತೆ ಪಂಪ್ ಆನ್ ಮಾಡಲು ಸಾಧ್ಯವಿಲ್ಲ. ಹೆಚ್ಚು ಒತ್ತಡವಿಲ್ಲದ ಈ ಹೊತ್ತಿನಲ್ಲಿ ತ್ರಿಫೇಸ್ ಕಡಿತ ಮಾಡಬಾರದು ಎನ್ನುವುದು ಕೃಷಿಕರ ಆಗ್ರಹ. ಪರಿಹಾರವೇನು?
110 ಕೆ.ವಿ. ಸಬ್‌ಸ್ಟೇಷನ್ ನಿರ್ಮಾಣವಾಗದೆ ಸುಳ್ಯದ ಸಮಸ್ಯೆ ಬಗೆ ಹರಿಯುವುದು ಅನುಮಾನ. ಈ ಸತ್ಯ ಎಲ್ಲ ರಾಜಕೀಯ ಪಕ್ಷಗಳಿಗೆ, ಜನಪ್ರತಿನಿಧಿಗಳಿಗೆ ತಿಳಿದಿದೆ. ಹಾಗಿದ್ದು ಸರಕಾರದ ಹಂತದಲ್ಲಿ ಒತ್ತಡ ತಂದು ಕಾಮಗಾರಿ ಅನುಷ್ಠಾನವಾಗಿಲ್ಲ. ಇಲ್ಲಿನ ವಿದ್ಯುತ್ ಕಣ್ಣಾಮುಚ್ಚಾಲೆಗೆ ಈಗಿನ ವ್ಯವಸ್ಥೆಯಲ್ಲಿ ಪರಿಹಾರ ಒದಗಿಸುವ ಶಕ್ತಿ ಮೆಸ್ಕಾಂಗೆ ಇಲ್ಲ. ಪ್ರಸ್ತುತ ಪುತ್ತೂರು ತಾಲೂಕಿನ ಮಾಡಾವಿನಲ್ಲಿ 110 ಕೆ.ವಿ. ಸಬ್ ಸ್ಟೇಷನ್ ಕಾಮಗಾರಿ ಪೂರ್ಣಗೊಂಡಲ್ಲಿ, ಬೆಳ್ಳಾರೆ ಹಾಗೂ ಸುಳ್ಯದ ಕೆಲ ಭಾಗಗಳಿಗೆ ಅನುಕೂಲವಾಗಲಿದೆ. ಇದರಿಂದ ಸುಳ್ಯದ 33 ಕೆ.ವಿ. ಹೊರೆ ಕೊಂಚ ತಗ್ಗಬಹುದು. ಆ ಕಾಮಗಾರಿಗೆ ವೇಗ ಕೊಡುವ ಕೆಲಸ ಆಗಬೇಕು. ಸಮಸ್ಯೆ ಕಡಿಮೆಯಾಗಿದೆ
ತಾಲೂಕಿನಲ್ಲಿ ಲಭ್ಯ ಇರುವ ಸಾಮರ್ಥ್ಯ ಆಧರಿಸಿ ವಿದ್ಯುತ್ ಪೂರೈಸಲಾಗುತ್ತಿದೆ. ಸಾವಿರಕ್ಕೂ ಅಧಿಕ ಹಳೆಯ ಟಿ.ಸಿ. ಬದಲಾಯಿಸಿ ಹೊಸ ಟಿ.ಸಿ. ಅಳವಡಿಸಿದ ಕಾರಣ ಓವರ್‌ಲೋಡ್ ಸಮಸ್ಯೆ ಸಾಕಷ್ಟು ಕಡಿಮೆ ಆಗಿದೆ.
-ಹರೀಶ್
ಸಹಾಯಕ ಎಂಜಿನಿಯರ್
ಸುಳ್ಯ 33 ಕೆ.ವಿ. ಸಬ್‌ಸ್ಟೇಷನ್. ಮೆಸ್ಕಾಂ ಸುಳ್ಯ ಕಿರಣ್ ಪ್ರಸಾದ್ ಕುಂಡಡ್ಕ