ಭಾಲ್ಕಿ: ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಮುಖ್ಯ. ಸೋತಾಗ ಖನ್ನತೆಗೆ ಒಳಗಾಗದೇ ಸೋಲೇ ಗೆಲುವಿನ ಮೆಟ್ಟಿಲೆಂದು ಭಾವಿಸಿ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಮನೋಜಕುಮಾರ
ಪಾಟೀಲ ಹೇಳಿದರು.
ಪಟ್ಟಣದ ಬಿಕೆಐಟಿ ಕಾಲೇಜಿನ ಕ್ರೀಡಾಂಗಣದಲ್ಲಿ ಜಿಲ್ಲಾ ಗೃಹ ರಕ್ಷಕದಳದ ವತಿಯಿಂದ ರವಿವಾರ ಆಯೋಜಿಸಿದ್ದ
ಜಿಲ್ಲಾಮಟ್ಟದ ವೃತ್ತಿಪರ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಪರ್ಧಾಳುಗಳು ಯಾವುದೇ ಕ್ರೀಡೆಗಳಲ್ಲೂ ಕ್ರೀಡಾ ಮನೋಭಾವದಿಂದ ಆಡಬೇಕು.
ಗೃಹ ರಕ್ಷಕ ದಳದ ವತಿಯಿಂದ ವೃತ್ತಿಪರ ಆಟಗಾರರಿಗೆ ಮಾತ್ರ ಕ್ರೀಡಾಕೂಟ ಆಯೋಜಿಸಿಲಾಗಿದ್ದು, ಇದರಲ್ಲಿ ಉತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟದಲ್ಲಿ ಗೆಲ್ಲುವ ಸ್ಪರ್ಧಾಳುಗಳು ನಾವಾಗಬೇಕು ಎಂದು ಆಟಗಾರರಲ್ಲಿ ಸ್ಫೂರ್ತಿ ತುಂಬಿದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯದರ್ಶಿ ಜಯರಾಜ ದಾಬಶೆಟ್ಟಿ ಮಾತನಾಡಿ, ದೇಶದಲ್ಲಿ ಶಾಂತಿ ನೆಲೆಸಲು ಗೃಹ ರಕ್ಷಕ ದಳ ಉತ್ತಮ ಕಾರ್ಯ ನಿರ್ವಹಿಸುತ್ತಲಿದೆ. ಖಾಯಂ ಉದ್ಯೋಗಿಗಳಾಗಿ ಪೊಲೀಸ್ ಇಲಾಖೆ ಮಾಡುತ್ತಿರುವ ಕಾರ್ಯವನ್ನು ಕಡಿಮೆ ಗೌರವಧನದಲ್ಲಿ ಗೃಹ ರಕ್ಷಕ ದಳದವರು ನಿರ್ವಹಿಸುತ್ತಿರುವುದು ಪ್ರಶಂಶನೀಯ.
ಎಲ್ಲಾ ಇಲಾಖೆಗಳಲ್ಲೂ ಗೃಹ ರಕ್ಷಕ ದಳ ಸಿಬ್ಬಂದಿ ಉತ್ತಮ ಸೇವೆ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು. ಗೃಹ ರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ರಾಜಕುಮಾರ ಮಾಸಿಮಾಡೆ ಪ್ರತಿಜ್ಞಾವಿಧಿ ಬೋಧಿಸಿದರು. ಗೃಹ ರಕ್ಷಕ ದಳದ ರಾಜಕುಮಾರ ಬಿರಾದಾರ, ಪುರಖಾನ, ದಿನೇಶ ಪತಂಗೆ, ರಾಜಕುಮಾರ ಪೆದ್ದೆ, ಪ್ರಭುರಾವ್, ದಿಲೀಪ ಜೊಳದಪೆR,
ಸತೀಶ ಉಪಸ್ಥಿತರಿದ್ದರು. ಘಟಕಾಧಿಕಾರಿ ರಾಜಕುಮಾರ ಪ್ರಭುಶೆಟ್ಟೆಪ್ಪಾ ಸ್ವಾಗತಿಸಿದರು. ಸುಧಾಕರ ಕರಕರೆ ವಂದಿಸಿದರು.
ಆರಕ್ಷಕ ಮಹಾನಿರ್ದೇಶಕರು ಹಾಗೂ ಗೃಹ ರಕ್ಷಕ ದಳದ ಮಹಾ ಸಮಾದೇಷ್ಟರ ಆದೇಶದಂತೆ ನಡೆಯುತ್ತಿರುವ ಗೃಹ ರಕ್ಷಕರ ವಾರ್ಷಿಕ ವೃತ್ತಿಪರ ಕ್ರೀಡಾಕೂಟವನ್ನು ಮೂರು ಹಂತಗಳಲ್ಲಿ ಆಯೋಜಿಸಿಲಾಗಿದೆ. ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳನ್ನು ವಿಭಾಗ ಮಟ್ಟಕ್ಕೆ ಕಳುಹಿಸಲಾಗುವುದು. ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ರಾಜ್ಯಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಅರ್ಹರಾಗುವರು.
ಎಸ್.ಬಿ.ಸ್ವಾಮಿ, ಗೃಹ ರಕ್ಷಕ ದಳದ ಜಿಲ್ಲಾ ಸಹಾಯಕ ಬೋಧಕ