Advertisement

ಜಲ ಜಾಗೃತಿ ಸುಲಭವಾ?

03:45 AM Feb 06, 2017 | Harsha Rao |

ಒಮ್ಮೆ ಒಂದು ಚಿತ್ರ ಪ್ರಸಂಗ ನಡೆಯಿತು. ಜಲ ಸಂರಕ್ಷಣೆಯ ಕುರಿತ ಪುಸ್ತಕ ಓದಿದ ಮಿತ್ರರೊಬ್ಬರು ತಮ್ಮ ತಂದೆಯ
ಜೊತೆ ಚರ್ಚಿಸಿದರು. ಹತ್ತಾರು ಎಕರೆ ಹೊಲವಿರುವ ನಾವು ಒಂದು ಕೆರೆ ಮಾಡಬೇಕೆಂದು ಹೇಳಿದರು. ತಂದೆಗೂ ಪುಸ್ತಕ
ಓದಿಸಿ, ಚಿತ್ರ ತೋರಿಸಿ, ನೀರಿನ ಪರಿಸ್ಥಿತಿ ವಿವರಿಸಿದರು. ಆದರೆ ಹಿರಿಯರು ಕೆರೆ ನಿರ್ಮಾಣಕ್ಕೆ ಸಮ್ಮತಿ ಸೂಚಿಸಲಿಲ್ಲ.
ಇಷ್ಟು ವರ್ಷ ಕೃಷಿ ಮಾಡಿದ್ದೇವೆ, ಕೆರೆ ನಿರ್ಮಿಸಿದರೆ ಅರ್ಧ ಎಕರೆ ಭೂಮಿ ಕೆರೆಗೆ ಖರ್ಚಾಗಿ ಬೆಳೆ ತೆಗೆಯಲಾಗುವುದಿಲ್ಲ.
ವರ್ಷದಲ್ಲಿ ಯಾವಾಗಲೋ ಸುರಿವ ಮಳೆ ನಂಬಿಕೊಂಡು ಕೆರೆ ಮಾಡಿದರೆ ಅದರಲ್ಲಿ ನೀರು ತುಂಬುವುದಿಲ್ಲ. ಕಪ್ಪು
ಎರೆಹೊಲದ ಮಣ್ಣು ಕೆರೆ ನಿರ್ಮಿಸಲು ಸೂಕ್ತವಲ್ಲ. ಬಹುಬೇಗ ಕೆರೆ ನಾಶವಾಗುತ್ತದೆಂದರು. ಪುಸ್ತಕದ ಜಾnನವನ್ನು
ಅಪ್ಪನಿಗೆ ತಲುಪಿಸಿ ಅಲ್ಲಿಂದ ಹೊಲದಲ್ಲಿ ಕೆರೆ ನಿರ್ಮಿಸಲು ಕನಸು ಕಂಡು ಕೈಚೆಲ್ಲಿ ಕುಳಿತರು.

Advertisement

ಅಪ್ಪನ ಮನವೊಲಿಸಲು ಮಗನಿಗೆ ಸಾಧ್ಯವಾಗಿಲ್ಲವೆಂದರೆ ವಿಚಿತ್ರವೆನಿಸಬಹುದು. ಪದ ಓದಿ, ನಗರ ನೌಕರಿ ಸೇರಿದ
ಮಗನಿಗೆ ಅಪ್ಪನ ಹೊಲಕ್ಕೊಂದು ಕೆರೆ ಬಂದರೆ ಒಣ ಬೇಸಾಯದ ಬದುಕು ಕೊಂಚ ಬದಲಾಗುತ್ತದೆಂದು ಯೋಚಿಸಿದ್ದೇನೋ ನಿಜ. ಮಗ ಕೆರೆಗೆ ಹಣ ನೀಡುತ್ತೇನೆಂದರೂ ಅಪ್ಪ ಒಪ್ಪಲಿಲ್ಲ. ಕೆರೆ ಮಾಡಿಸಲು ಹೀಗೆ ಸೋತವರು ಎಲ್ಲೆಡೆ ಸಿಗುತ್ತಾರೆ. ಜಾಗೃತಿಯ ಕೆಲಸ ಎಷ್ಟು ಕಷ್ಟವೆಂದು ಹೇಳುತ್ತಾರೆ. ಮಗನ ಜಲ ಸಂರಕ್ಷಣೆಯ ಆಸಕ್ತಿಯನ್ನೂ, ಅಪ್ಪನ ನಿರಾಕರಣೆಯನ್ನೂ ಅವರವರ ಸ್ಥಳದಲ್ಲಿ ನಿಂತು ಸ್ವಲ್ಪ ಅವಲೋಕಿಸಬೇಕು. ಓದು, ಪ್ರವಾಸ, ಚರ್ಚೆಗಳ ಮೂಲಕ ನೀರಿನ ಪರಿಸ್ಥಿತಿ ಅರಿತವರು ಏನಾದರೂ ಮಾಡಲು ಹಂಬಲಿಸುತ್ತಾರೆ. ಕೆರೆ ನಿರ್ಮಾಣದ ತಾಂತ್ರಿಕ ವಿವರ ಗೊತ್ತಿಲ್ಲದಿದ್ದರೂ ಆಸಕ್ತಿಯಿಂದ ನೀರುಳಿಸುವ ಆಸೆ ವ್ಯಕ್ತಪಡಿಸುತ್ತಾರೆ. ಮಗನ ಅರಿವು ಅಪ್ಪನಿಗಿಲ್ಲ! ಬದುಕಿನ 40-45 ವರ್ಷಗಳನ್ನು ಹದ ಮಳೆ, ಒಣ ಬೇಸಾಯದಲ್ಲಿ ಬದುಕಿದವರು ಅವರು. ವಿಜಾಪುರದ ರೈತರಂತೆ ದೋಣಿ ನದಿ ತುಂಬಿ ಹರಿದರೆ ಓಣಿಯೆಲ್ಲ ಕಾಳೆಂದು ನಂಬಿದವರು.

ಬದಲಾದ ಪರಿಸರ ಪರಿಸ್ಥಿತಿ, ಕೆರೆ ನಿರ್ಮಾಣದ ಅಗತ್ಯ, ನೀರುಳಿಸಿ ಗೆದ್ದವರ ಯಶಸ್ಸು ಹಲವರಿಗೆ ಗೊತ್ತಿಲ್ಲ. ಲಕ್ಷಾಂತರ ಹಣ ಖರ್ಚುಮಾಡುವ ತಾಕತ್ತು, ಮನಸ್ಸು ಇಲ್ಲ. ಕೆರೆಗೆ ಖರ್ಚು ಮಾಡುವ ಹಣವನ್ನು ಹೊಸ ಎತ್ತು ಖರೀದಿ, ದೊಡ್ಡಿ ನಿರ್ಮಾಣ, ಮದುವೆ, ಮನೆ ಬಳಕೆಗೆ ಉಪಯೋಗಿಸಬಹುದೆಂದು ಸರಳವಾಗಿ ಯೋಚಿಸುತ್ತಾರೆ. ಹೊಲದ ಕೆರೆಯಲ್ಲಿ ನೀರು ನಿಲ್ಲಿಸುವುದು, ಆ ನೀರು ಬಳಸಿ ಬೆಳೆ ಗೆಲ್ಲುವ ಪ್ರಯೋಗಗಳಿಗೆ ಮನಸ್ಸು ಮಾಗಿರುವುದಿಲ್ಲ.

ಹಾಗಾದರೆ ಗೆಲ್ಲುವ ಸೂತ್ರ ಯಾವುದು? ಜಲ ಸಂರಕ್ಷಣೆಯ ಜನಾಂದೋಲನವನ್ನು ಗಟ್ಟಿಗೊಳಿಸಲು ಇರುವ ಸವಾಲು
ಸಂವಹನದ್ದಾಗಿದೆ. ಹಣ, ಭೂಮಿ, ಅವಕಾಶ ಎಲ್ಲ ಇದ್ದರೂ ಕೆರೆ ನಿರ್ಮಾಣಕ್ಕೆ ಮುಂದಾಗದೇ ಸಾವಿರ ಸಾವಿರ ಎಕರೆ
ಹೊಲಗಳು ನಿಂತಿರುವುದಕ್ಕೆ ಕಾರಣ ಹುಡುಕಿದರೆ ಇನ್ನಷ್ಟು ಇಂಥ ಸತ್ಯ ದರ್ಶನವಾಗುತ್ತದೆ. ಜನರ ಜೊತೆ ನಿಂತು ಅವರ ಮನವೊಲಿಸಲು ಜಲ ಸಂರಕ್ಷಣೆಯ ಮಾಹಿತಿಯಷ್ಟೇ ಸಾಲುವುದಿಲ್ಲ. ಮನಸ್ಸು ಅರ್ಥಮಾಡಿಕೊಂಡು ನಿಧಾನಕ್ಕೆ
ಅವರನ್ನು ನೀರಿಗೆ ಎಳೆಯಬೇಕು, ಇದಕ್ಕೆ ಸಂಯಮ ಬೇಕು.

ಸುತ್ತಲಿನ ಇಂಥ ಪರಿಸರದಲ್ಲಿ ಯಾರೆಲ್ಲ ಕೆರೆ ನಿರ್ಮಿಸಿ ಹೇಗೆ ಗೆದ್ದರೆಂದು ವಿವರಿಸಬೇಕು. ಕೆರೆಯ ಅನುಕೂಲತೆಗಳನ್ನು
ಎಳೆ ಎಳೆಯಾಗಿ ಬಿಡಿಸಿ ಹೇಳಬೇಕು. ಇನ್ನೊಬ್ಬರ ಮಾತನ್ನು ಕೇಳಬೇಕು, ಅನುಸರಿಸಬೇಕೆಂದು ಒಬ್ಬ ವ್ಯಕ್ತಿಗೆ ಅನಿಸಲು
ಉಪದೇಶ, ಸಲಹೆ, ಆದೇಶಗಳು ಸಾಲುವುದಿಲ್ಲ. ಪರಸ್ಪರ ವಿಶ್ವಾಸದ ಆತ್ಮೀಯ ವಾತಾವರಣ ಏರ್ಪಡಬೇಕು. ನೀರಿನ
ಕಷ್ಟಕ್ಕೆ ಕಾರಣ ಮನದಟ್ಟಾಗಬೇಕು. ಮಾತಿನಲ್ಲಿ ಖಚಿತತೆ, ಸಂದೇಹ ಪರಿಹರಿಸುವ ತಜ್ಞತೆ, ತಾಂತ್ರಿಕ ಅರಿವು, ಸರಳ ಭಾಷೆ ಕೂಡಾ ಮುಖ್ಯ. “ನಾನು ಹೇಳುತ್ತೇನೆ, ನೀನು ಮಾಡಬೇಕು’ ಎನ್ನುವ ನಿಲುವು ಇಲ್ಲಿ ಕೆಲಸ ಮಾಡುವುದಿಲ್ಲ. ನಮ್ಮ ಮಧ್ಯೆ ಜಲ ಸಂರಕ್ಷಣೆಯ ತಾಂತ್ರಿಕ ಪರಿಣತಿ ಪಡೆದ ಹಲವರಿದ್ದರೂ ಅವರ ಮಾತು ವಿಚಾರ ಸಂಕಿರಣ ದಾಟಿ ಹೊಲಕ್ಕೆ ಹೋಗದಿರುವುದಕ್ಕೆ ಮುಖ್ಯ ಕಾರಣ ಸಂವಹನ ಸಮಸ್ಯೆ. ಕೃಷಿಕರ ಜೊತೆ ಮಾತಾಡಲು ಭಾಷೆ ಮುಖ್ಯವಿದೆ. ಮನಸ್ಸು ಗೆಲ್ಲುವ ಮಾರ್ಗ ಅರಿಯಲು ಬರಹ ಸಲಹೆಗಳಿಗಿಂತ ಸಾಂದರ್ಭಿಕ ನಡೆಗಳು ಮುಖ್ಯವಾಗುತ್ತವೆ.

Advertisement

ಒಮ್ಮೆ ನಗರದ ಮನೆಯೊಂದರಲ್ಲಿ ತೆರೆದ ಬಾಗೆ ಛಾವಣಿಯ ನೀರಿಂಗಿಸುವ ರಚನೆ ಮಾಡಿಸುತ್ತಿದ್ದೆ. ಪಕ್ಕದ ಮನೆಯ ಯಜಮಾನ ಕಂಪೌಂಡ್‌ ಗೋಡೆಯಂಚಿನಲ್ಲಿ ನಿಂತು ನಮ್ಮ ಕೆಲಸ ನೋಡುತ್ತಿದ್ದರು. ಏನು ಮಾಡುತ್ತೀರೆಂದು
ವಿಚಾರಿಸುತ್ತಿದ್ದರು. ಛಾವಣಿಯ ಮಳೆ ನೀರನ್ನು ಭೂಮಿಗೆ ಇಂಗಿಸಿ ಬಾವಿಯ ಜಲ ಹೆಚ್ಚಿಸುವ ಕಾರ್ಯ ಮಾಡುತ್ತಿದ್ದೇವೆಂದು ವಿವರಿಸಿದೆ. ನಿಮ್ಮ ಛಾವಣಿಯ ನೀರು ವ್ಯರ್ಥವಾಗಿ ಗಟಾರದಲ್ಲಿ ಹರಿಯುತ್ತಿದೆ. ಇಲ್ಲಿಗೆ
ಬಿಡೋಣವೆಂದು ಹೇಳಿದೆ. ಯಾವುದಕ್ಕೂ ಹೆಂಡತಿಯನ್ನು ಕೇಳಿ ಹೇಳುತ್ತೇನೆಂದು ಸರ್ರನೇ ಮನೆಯೊಳಕ್ಕೆ ಹೋದವರು
ಮತ್ತೆ ಎರಡು ದಿನ ಸಿಗಲಿಲ್ಲ. ನೀರಿಂಗಿಸುವ ಕೆಲಸ ಮುಗಿಸಿ ಹೊರಡುವಾಗ ಮನೆಗೆ ಆಮಂತ್ರಿಸಿದರು. ನಮ್ಮ ಛಾವಣಿ
ನೀರನ್ನು ಅವರ ಮನೆಯ ಬಾವಿಗೆ ನೀಡಲು ನಮ್ಮ ಸಮ್ಮತಿ ಇಲ್ಲ, ಆದರೆ ನಮ್ಮ ಬಾವಿಯ ಪಕ್ಕದಲ್ಲಿ ಇದೇ ರಚನೆ
ಮಾಡಬೇಕೆಂದು ಆಗ್ರಹಿಸಿದರು. ಜಲಕೊಯ್ಲಿನ ಕೆಲಸ ಮುಗಿಯಿತು. ವ್ಯರ್ಥ ಹರಿಯುವ ನೀರನ್ನು ಬಾವಿಗೆ ಇಂಗಿಸಲು ಕೇಳಿದ ನೇರ ಮಾತು ಹೊಸ ಇಂಗುಗುಂಡಿ ನಿರ್ಮಾಣಕ್ಕೆ ಕಾರಣವಾಯಿತು. ಕಳೆದ ಜಲಕ್ಷಾಮದಲ್ಲಿ ಎಲ್ಲರ ಬಾವಿಗಳು ಒಣಗಿದಾಗ ಇವರ ಕತೆ ಅರಿಯಲು ಹೋಗಿದ್ದೆ. ಕ್ರಿ.ಶ 2004ರಲ್ಲಿ ಪೈಪೋಟಿಯಲ್ಲಿ ನೀರಿಂಗಿಸಿದ ರಚನೆ ಮಾಡಿದ ಇಬ್ಬರಿಗೂ ಜಲಭಾಗ್ಯ ದೊರಕಿದೆ.

ಅಕ್ಕಪಕ್ಕದ ಹತ್ತಾರು ಮನೆಗಳಿಗೆ ತುರ್ತು ಸಂದರ್ಭದಲ್ಲಿ ನೀರು ನೀಡುತ್ತಿರುವುದಾಗಿ ಹೇಳಿದರು. ನೀರು ನೀಡುವುದರ
ಜೊತೆಗೆ ಜಲ ಸಂರಕ್ಷಣೆಯ ಅನುಭವ ಪರಿಚಯಿಸಲು ಹೇಳಿದೆ.

ರಾಜ್ಯದ ವಿವಿಧ ಪ್ರದೇಶಗಳಲ್ಲಿ ಕ್ರಿ.ಶ 2001ರಿಂದ ಈವರೆಗೆ ನಡೆಸಿದ ಜಲಸಂರಕ್ಷಣೆ ಕುರಿತ ಸ್ಲೆ„ಡ್‌ ಪ್ರದರ್ಶನ
ಸಾವಿರಾರು. ಉಪನ್ಯಾಸದ ಬಳಿಕ ಒಂದೆರಡು ಮನೆಗೆ ಹೋಗಿ ಮಾದರಿ ರಚನೆಗೆ ಮಾರ್ಗದರ್ಶನ ನೀಡುತ್ತಿದ್ದೇನೆ.
ಇದರಿಂದ ಒಂದಿಷ್ಟು ಕೆಲಸ ನಡೆದಿದೆ. ಸಂವಹನ ಕೌಶಲ್ಯ ಬೆಳೆದರೆ ಮಾತ್ರ ಜನರನ್ನು ಗೆಲ್ಲಲು ಸಾಧ್ಯವಿದೆ. ಮಾತಿನ ಜೊತೆ ಮಾಡಿ ಹೇಳುವ ಅನುಭವವಿದ್ದರೆ ಅನುಕೂಲವಾಗುತ್ತದೆ. ಎರೆ ಹೊಲದಲ್ಲಿ ಕೆರೆ ಸಾಧ್ಯವಿಲ್ಲವೆಂದು ಹೇಳುವಾಗ
ರಾಯಚೂರಿನ ಮಾನ್ವಿ ತಾಲೂಕಿನ ಸಿಂಗಡದಿನ್ನಿಯೋ, ಗದಗದ ಲಕ್ಷೆ¾àಶ್ವರ ಹೊಲದ ಹಳೆಯ ಕೃಷಿ ಹೊಂಡಗಳನ್ನು
ನೆನಪಿಸಿ ವಿವರಿಸುವ ಚಾಕಚಕ್ಯತೆ ಇದ್ದರೆ ಮನಸ್ಸು ಗೆಲ್ಲಬಹುದು. ನೀರಿನ ಕುರಿತ ವೇದಿಕೆ ಉಪನ್ಯಾಸಕ್ಕೂ, ಮನೆಗೆ ಹೋಗಿ ಮಾತಾಡಿ ಮನಸ್ಸು ಗೆಲ್ಲುವುದಕ್ಕೂ ವ್ಯತ್ಯಾಸವಿದೆ.

ಬೇಸಿಗೆಯಲ್ಲಿ ನೀರಿಲ್ಲದೇ ತೊಂದರೆ ಅನುಭವಿಸಿದವರು ಜಲಸಂರಕ್ಷಣೆಯ ಕಾರ್ಯಕ್ರಮಕ್ಕೆ ಕರೆಯುತ್ತಾರೆ. ಒಂದಿಷ್ಟು
ತಡವಾಗಿ ಮಳೆಗಾಲದ ಆರಂಭದಲ್ಲಿ ಕಾರ್ಯಕ್ರಮಕ್ಕೆ ಹೋಗುತ್ತೇನೆ. ಮಳೆ ಸುರಿದಾಗ ಊರಿನ ಗುಡ್ಡದ ನೀರು ಹೇಗೆ ಓಡುತ್ತದೆಂದು ಅಲ್ಲಿ ನಿಂತು ವಿವರಿಸಿದಾಗ ಅದನ್ನು ಹೇಗೆ ಉಳಿಸಬಹುದೆಂದು ಅವರೇ ಸ್ಥಳ ಆಯ್ಕೆಗೆ ಮುಂದಾಗುತ್ತಾರೆ. ಗುಡ್ಡಗಾಡು, ಹೊಲ ಸುತ್ತಾಡುವುದರಿಂದ ನಮಗೆ ಜನರ ಮಾತಿನಲ್ಲಿ ಕಾಣಿಸುವ ಸಮಸ್ಯೆಗಿಂತ ಭಿನ್ನ ಸಂಗತಿಗಳು ಕಾಣಿಸುತ್ತವೆ. ವೈದ್ಯರು ರೋಗಿಯನ್ನು ಪರೀಕ್ಷಿಸದೇ ಚಿಕಿತ್ಸೆ ಸಾಧ್ಯವಿಲ್ಲ. ನಮ್ಮ ಜಲಜಾಗೃತಿಯ ಬಹುತೇಕ ಕಾರ್ಯಕ್ರಮಗಳು ಸಭಾಂಗಣದ ನಾಲ್ಕು ಗೋಡೆಯ ನಡುವೆ ನಡೆಯುತ್ತವೆ. ಮಾತಿನ ಮಲ್ಲರಾದ ನಾವು ಕತೆ ಉಪಕತೆಗಳನ್ನು ವರ್ಣರಂಜಿತವಾಗಿ ವಿವರಿಸುತ್ತ ಜನರನ್ನು ನಮ್ಮತ್ತ ಸೆಳೆಯಲು ಸಾಹಸ ಮಾಡುತ್ತೇವೆ. ಮಾತು
ಕೇಳಿದ ಜನ ಜಾnನಕ್ಕೆ ತಲೆದೂಗುತ್ತಾರೆ. ಎಲ್ಲ ಅರ್ಥವಾಯಿತು, ಪ್ರಶ್ನೆಗಳೇ ಇಲ್ಲವೆನ್ನುತ್ತಾರೆ. ಉಪನ್ಯಾಸ ಕೇಳಿ ಜಲ ಕಾಯಕಕ್ಕೆ ನಿಂತಾಗ ಸರಣಿ ಪ್ರಶ್ನೆಗಳು ಶುರುವಾಗುತ್ತವೆ.

ಸಂರಕ್ಷಣೆಗೆ ಉಪನ್ಯಾಸ ನೀಡುವುದು, ಜಲ ಸಂರಕ್ಷಣೆಯ ಮಾದರಿ ಮಾಡಿಸುವುದನ್ನೂ ಮಾಡುತ್ತಿರುವ ನನಗಂತೂ ಕಾಡು ಗುಡ್ಡ, ಹೊಲಗಳೇ ಹೆಚ್ಚು ಕಲಿಸಿವೆ. ನಮ್ಮಲ್ಲಿ ಮಳೆ ಬಹಳ ಕಡಿಮೆಯೆಂದು ಹೇಳಿದ ಹುಬ್ಬಳ್ಳಿಯ ತಡಸದ ಮಾವಿನ ತೋಟದಂಚಿನಲ್ಲಿ ದೊಡ್ಡ ಕಂದಕ ಕಾಣಿಸಿತು. ಇದೇನೆಂದು ವಿಚಾರಿಸಿದಾಗ ತೋಟದ 40-50 ಎಕರೆ ಕ್ಷೇತ್ರದ ನೀರು ಈ ದಾರಿಯಲ್ಲಿ ಹರಿಯುತ್ತದೆಂದು ವಿವರಿಸಿದರು. ಭೂಮಿಯ ನೀರೆಲ್ಲ ಒಟ್ಟಾಗಿ ಹೇಗೆ ಹರಿಯುತ್ತದೆಂದು ಸುತ್ತಾಡಿ ನೋಡಿದಾಗ ಹಳೆಯ ಸಣ್ಣಪುಟ್ಟ ಕೆರೆ ರಚನೆಗಳು ಕಾಣಿಸಿದವು. ಇವುಗಳ ಹೂಳು ತೆಗೆದು ಮಳೆ ನೀರು ಶೇಖರಿಸಿಲು ಸೂಚಿಸಿದೆ. “ನಮಗೇನೂ ಗೊತ್ತಿಲ್ಲ, ಈ ಕೆಲಸ ನೀವು ಮಾಡಿಸಿ ಕೊಡ್ತೀರಾ?’ ತಕ್ಷಣ ಕೇಳಿದರು.

ನಗರಗಳಲ್ಲಿ ಛಾವಣಿ ನೀರಿನ ಕೊಯ್ಲು ನಿರ್ಮಿಸಿ ದಶಕದ ಬಳಿಕವೂ ಈಗಲೂ ಕೆಲವರು ಪೋನ್‌ ಮಾಡುತ್ತಾರೆ….’
ನೀವು ನಿರ್ಮಿಸಿದ ಇಂಗುಗುಂಡಿಗೆ ನೀರು ಹೋಗುತ್ತಿಲ್ಲ, ಪೈಪ್‌ ನಲ್ಲಿ ಕಸ ಕಟ್ಟಿರಬೇಕು. ತೆಗೆದು ಕೊಡ್ತೀರಾ?’
ಕೇಳುತ್ತಿರುತ್ತಾರೆ. ಜಲ ಸಂರಕ್ಷಣೆಯ ಸರಳ ಕೆಲಸದ ವಿಚಿತ್ರ ಸಮಸ್ಯೆಗಳಿವು.

ವಿಚಿತ್ರ ನೋಡಿ, ಪೈಪಿನ ಕಸ ತೆಗೆಯಲು ಹತ್ತಿಪ್ಪತ್ತು ಕಿಲೋ ಮೀಟರ್‌ ಹೋಗುವ ಕೆಲಸದವರಿಗೆ ಎರಡು ಮೂರು ತಾಸಿನ ದುಡಿತಕ್ಕೆ ಹೆಚ್ಚೆಂದರೆ 100-150 ರೂಪಾಯಿ ಸಿಗಬಹುದು. ಇಷ್ಟು ಕಡಿಮೆ ಹಣಕ್ಕೆ ಕೆಲಸದವರು ಸಿಗುವುದಿಲ್ಲ. ಹೆಚ್ಚು ನೀಡಲು ಅಂಥ ದೊಡ್ಡ ಕೆಲಸವೂ ಇದಲ್ಲ. ಒಂದು ಪೈಪಿನ ಕಸ ತೆಗೆಯುವ ಸಣ್ಣ ಕೆಲಸಕ್ಕೆ 600 ರೂಪಾಯಿ ಕೇಳಿದರೆ ಕೆಲಸ ಮುಗಿದ ಬಳಿಕ ಎಲ್ಲರೂ ಟೀಕಿಸಬಹುದು. ಕಡಿಮೆ ಹಣಕ್ಕೆ ಮಾಡುವವರು ಯಾರು? ಉತ್ತರಿಸುವುದಕ್ಕೆ ಯಾರೂ ಸಿಗುವುದಿಲ್ಲ. ಮಳೆ ಕೊರತೆ, ಅಂತರ್ಜಲ ಕುಸಿತದ ಪ್ರಹಾರದ ಮಧ್ಯೆ ಸಂರಕ್ಷಣೆಯ ಆಂದೋಲನ ಕಟ್ಟುವುದು ಅಷ್ಟು ಸುಲಭವೇ?

Advertisement

Udayavani is now on Telegram. Click here to join our channel and stay updated with the latest news.

Next