ಗುವಾಹಟಿ : ಕಳೆದ ವಾರ ಅಸ್ಸಾಂ-ಅರುಣಾಚಲ ಪ್ರದೇಶ ಗಡಿಗೆ ಸಮೀಪದಲ್ಲಿ ಪತನಗೊಂಡಿದ್ದ ಭಾರತೀಯ ವಾಯು ಪಡೆಯ ಸುಖೋಯ್ 30 ಯುದ್ಧ ವಿಮಾನದ ನಾಪತ್ತೆಯಾಗಿರುವ ಇಬ್ಬರು ಪೈಲಟ್‌ಗಳಲ್ಲಿ ಒಬ್ಟಾತನ ರಕ್ತಸಿಕ್ತ ಬೂಟು, ಅರೆಸುಟ್ಟ ಪಾನ್ ಕಾರ್ಡ್ ಮತ್ತು ಹಣದ ಪರ್ಸ್ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಹಾಗಿದ್ದರೂ ಈ ನತದೃಷ್ಟ ಯುದ್ಧ ವಿಮಾನದ ಕಾಣೆಯಾಗಿರುವ ಇಬ್ಬರು ಪೈಲಟ್‌ಗಳ ಗತಿ ಏನಾಗಿದೆ ಎಂಬುದು ಈ ತನಕವೂ ಗೊತ್ತಾಗಿಲ್ಲ; ಮಾತ್ರವಲ್ಲ ಅವರ ಶವಗಳು ಕೂಡ ಪತ್ತೆಯಾಗಿಲ್ಲ.
ಶೋಧ ಹಾಗೂ ರಕ್ಷಣಾ ತಂಡಕ್ಕೆ ಕಳೆದ ಮೇ 28ರಂದು ಯುದ್ಧ ವಿಮಾನದ ಬ್ಲಾಕ್ ಬಾಕ್ಸ್ ಸಿಕ್ಕಿತ್ತು. ವಿಮಾನ ಪತನಗೊಂಡಿದ್ದ ದಟ್ಟಾರಣ್ಯದಲ್ಲಿ ಪೈಲಟ್‌ಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದ ತಂಡಕ್ಕೆ ಈ ಅತ್ಯಮೂಲ್ಯ ಬ್ಲಾಕ್ ಬಾಕ್ಸ್ ಸಿಕ್ಕಿತ್ತಾದರೂ ಪೈಲಟ್‌ಗಳ ಶವ ಎಲ್ಲೂ ಕಂಡು ಬರಲಿಲ್ಲ.
“ಪ್ರತಿಕೂಲ ಹವಾಮಾನ ಇರುವ ಹೊರತಾಗಿಯೂ ಶೋಧ ಕಾರ್ಯಾಚರಣೆ ಈಗಲೂ ನಡೆಯುತ್ತಿದೆ; ಆದರೂ ಕಾಣೆಯಾಗಿರುವ ಇಬ್ಬರು ಪೈಲಟ್‌ಗಳ ಬಗ್ಗೆ ಮಾತ್ರ ಯಾವುದೇ ಮಾಹಿತಿ, ಕುರುಹು ಲಭಿಸಿಲ್ಲ’ ಎಂದು ಭಾರತೀಯ ಸೇನಾ ಮೂಲಗಳು ಹೇಳಿವೆ.
ಮೇ 23ರಂದು ನಿಗೂಢವಾಗಿ ನಾಪತ್ತೆಯಾಗಿದ್ದ ಸುಖೋಯ್ ಜೆಟ್ ವಿಮಾನದ ಅವಶೇಷಗಳು ತೇಜ್‌ಪುರ ನಗರದಿಂದ ಸುಮಾರು 60 ಕಿ.ಮೀ. ದೂರದ ದಟ್ಟಾರಣ್ಯದಲ್ಲಿ ಮೇ 26ರಂದು ಪತ್ತೆಯಾಗಿದ್ದವು.