Advertisement

ನಿಮ್ಗೆ ಚೆಂದ “ಸೂಟ್‌’ಆಗುತ್ತೆ!

06:00 AM Dec 19, 2018 | |

ಸೂಟ್‌ ಬರೀ ಕಚೇರಿಯ ದಿರಿಸಲ್ಲ. ಅದರಲ್ಲೂ ಪವರ್‌ ಸೂಟ್‌ ತಂದು ಕೊಡುವ ಲುಕ್ಕಿನ ಖದರ್ರೆ ಬೇರೆ… 

Advertisement

ಹಿಂದೆಲ್ಲಾ ಸೂಟ್‌ ಅನ್ನೋದು ಪುರುಷರಿಗೆ ಮಾತ್ರವೇ ಮೀಸಲು. ಈಗ ಹಾಗಲ್ಲ. ಸಮಾನತೆ ಕೂಗು ಕೇಳಿಬರುತ್ತಿರುವ ಈ ಕಾಲದಲ್ಲಿ ಹೆಂಗೆಳೆಯರೂ ಸೂಟನ್ನು ತೊಡುತ್ತಿದ್ದಾರೆ. ಸೂಟ್‌ ಬರೀ ಕಚೇರಿ ದಿರಿಸಲ್ಲ. ಹಾಗೆಂದು ಸೂಟನ್ನು ಸಮಯ ಸಂದರ್ಭ ನೋಡದೆ ಧರಿಸುವ ಹಾಗೂ ಇಲ್ಲ. ಅದರಲ್ಲೂ ಪವರ್‌ ಸೂಟ್‌ ಈಗೀಗ ಹೆಚ್ಚು ಪ್ರಸಿದ್ಧಿಗೆ ಬರುತ್ತಿದೆ. ಪವರ್‌ ಸೂಟ್‌ ಎಂದರೆ ಅದೇ ಕಪ್ಪು, ಬಿಳುಪು ಬಣ್ಣ ಎಂದುಕೊಳ್ಳಬೇಕಿಲ್ಲ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಲವು ಬಗೆಯ ಪವರ್‌ಸೂಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ವಿವಿಧ ವಿನ್ಯಾಸಗಳು, ಬಣ್ಣಗಳನ್ನು ಇವು ಒಳಗೊಂಡಿದೆ. 

1. ಕ್ಲಾಸಿಕ್‌
ಇದು ಫಾರ್ಮಲ್‌ ದಿರಿಸು. ಅಂದರೆ ಕಚೇರಿ, ಮೀಟಿಂಗ್‌ ಮುಂತಾದ ಕಚೇರಿ ಸಂಬಂಧಿ ಕೆಲಸಗಳ ವೇಳೆ ಕ್ಲಾಸಿಕ್‌ ಸೂಟನ್ನು ಧರಿಸಬಹುದು. ಬಿಳಿ ಬಣ್ಣದ ಶರ್ಟು, ಅದರ ಮೇಲೆ ಕಪ್ಪು ಕೋಟನ್ನು ಇದು ಒಳಗೊಂಡಿದೆ. ಬಿಸಿನೆಸ್‌ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರೂ ಈ ದಿರಿಸನ್ನು ಧರಿಸಬಹುದು. ಇದನ್ನು ಪಕ್ಕಾ ಕಚೇರಿ ದಿರಿಸೆಂದೇ ಗುರುತಿಸಲಾಗುತ್ತದೆ. 

2. ಪ್ಯಾಂಟ್‌ಸೂಟ್‌
ಇದು ಕ್ಲಾಸಿಕ್‌ ಪವರ್‌ಸೂಟ್‌ಗೆ ವ್ಯತಿರಿಕ್ತವಾದ ದಿರಿಸು. ಕ್ಯಾಶುವಲ್‌ ಸಂದರ್ಭಗಳಿಗೆ ಈ ದಿರಿಸು ಹೆಚ್ಚು ಹೊಂದುತ್ತದೆ. ಹೊಸ ಟ್ರೆಂಡ್‌ ಎಂದರೆ ಪುರುಷರು ಶರ್ಟಿನ ತೋಳನ್ನು ಮಡಚಿ, ಏರಿಸುವಂತೆ ಪ್ಯಾಂಟ್‌ ಸೂಟನ್ನು ತೊಟ್ಟವರು ಶರ್ಟನ್ನು ಮೇಲಕ್ಕೇರಿಸುವರು. ಅಷ್ಟೇ ಅಲ್ಲ, ಪ್ಯಾಂಟ್‌ ಸೂಟ್‌ನಲ್ಲಿ ಪ್ಯಾಂಟ್‌ ಬೆಲ್‌ ಬಾಟಂ ಅನ್ನು ಹೋಲುತ್ತದೆ. ಹೀಗಾಗಿ ಪ್ಯಾಂಟನ್ನೂ ಮೊಣಕಾಲಿನ ತುಸು ಕೆಳಗಿನವರೆಗೆ ಮಡಚುವುದು ಹೊಸ ಟ್ರೆಂಡ್‌. ಇದು ಸೂಟ್‌ಗೆ ಇನ್ನಷ್ಟು ಕ್ಯಾಶುವಲ್‌ ಲುಕ್ಕನ್ನು ಕೊಡುತ್ತದೆ.

3. ಸಕುರಾ ಬ್ಲಾಸಮ್‌
ಜಪಾನ್‌ನಲ್ಲಿ ಸಕುರಾ ಬ್ಲಾಸಮ್‌ ಎಂದರೆ ವಸಂತ ಋತು. ಅಲ್ಲಿ ಗುಲಾಬಿ ಬಣ್ಣದ ಹೂಗಳು ಬಿಡುವ ಕಾಲ. ಹೀಗಾಗಿ ಗುಲಾಬಿ ಬಣ್ಣದ ಸೂಟನ್ನು ಜಪಾನಿ ಹೆಸರಿನಲ್ಲೇ ಗುರುತಿಸಲಾಗುತ್ತದೆ. ತಿಳಿ ಪಿಂಕ್‌ ಬಣ್ಣದ ಸೂಟ್‌ ಕೂಡಾ ಆಫೀಸಿಗೆ ಹೋಗುವ ಹೆಂಗಳೆಯರ ಅಚ್ಚುಮೆಚ್ಚಿನ ಆಯ್ಕೆಯಾಗಿದೆ. ಬಿಳಿ ಬಣ್ಣದ ಕ್ಯಾಶುವಲ್‌ ಶರ್ಟ್‌ ಇದಕ್ಕೆ ಚೆನ್ನಾಗಿ ಹೊಂದುತ್ತದೆ. ಇದು ನೋಡಲಷ್ಟೇ ಅಕರ್ಷಕವಲ್ಲ ಧರಿಸಲೂ ತುಂಬಾ ಆರಾಮದಾಯಕ.

Advertisement

4. ಪಾಪ್‌ಸ್ಟಾರ್‌
ಸೂಟನ್ನು ಸ್ಲಿವ್‌ಲೆಸ್‌ ಮಾದರಿಯಲ್ಲಿಯೂ ತೊಡಬಹುದಾಗಿದೆ. ಆದರೆ, ಇದು ಕಾರ್ಪೊರೆಟ್‌ ಮೀಟಿಂಗುಗಳಿಗಂತೂ ಖಂಡಿತಾ ಹೊಂದಿಕೆಯಾಗುವುದಿಲ್ಲ. ಸ್ಲಿವ್‌ಲೆಸ್‌ ದಿರಿಸನ್ನು ಇಷ್ಟಪಡುವವರು ಪವರ್‌ಸೂಟಿನ ಈ ಮಾದರಿಯನ್ನು ಧರಿಸಬಹುದು. ಅಗಲವಾದ ಹೆಗಲಿನವರು ಈ ದಿರಿಸಿನಲ್ಲಿ ಚೆನ್ನಾಗಿ ಕಾಣುವರು. 

ಪವರ್‌ ಸೂಟ್‌ ಸಾಥಿಗಳು
ಟೋಟ್‌ ಬ್ಯಾಗ್‌, ಸರಳವಾದ ಕಿವಿಯೋಲೆ, ಮೆಟಾಲಿಕ್‌ ಕೈಗಡಿಯಾರ, ಹೆಚ್ಚು ಅಗಲವಾದ ತಂಪು ಕನ್ನಡಕ, ಹೆಡ್‌ ಬ್ಯಾಂಡ್‌, ಬೆಲ್ಟ್,  ಸ್ಕಾಫ್ì, ಸ್ಲಿಂಗ್‌ ಬ್ಯಾಗ್‌.

ಪವರ್‌ ಪ್ರದರ್ಶನದ ಸಂಕೇತ
ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಝಕರ್‌ಬರ್ಗ್‌ ಕ್ಯಾಶುವಲ್‌ ದಿರಿಸನ್ನೇ ಹೆಚ್ಚಾಗಿ ಉಡುವವರು. ಅವರಿಗೆ ಸಮವಸ್ತ್ರ ರೀತಿಯ ಉಡುಗೆ ತೊಡುಗೆ ಇಷ್ಟವಾಗುವುದೇ ಇಲ್ಲ. ಕಚೇರಿಯಲ್ಲೂ ಅಷ್ಟೆ. ಟೀ ಶರ್ಟ್‌, ಜೀನ್ಸ್‌ ಇದೇ ಅವರ ಸಮವಸ್ತ್ರ. ಇಂತಿಪ್ಪ ಅವರು ನ್ಯಾಯಾಲಯ ಪ್ರಕರಣವೊಂದರಲ್ಲಿ ಪಾಲ್ಗೊಳ್ಳಬೇಕಾಗಿ ಬಂದಾಗ ಉಟ್ಟಿದ್ದು ಸೂಟ್‌. ಜಗತ್ತಿನಾದ್ಯಂತ ಮಾರ್ಕ್‌ ಸೂಟ್‌ ತೊಟ್ಟಿದ್ದು ಸುದ್ದಿಯಾಗಿತ್ತು. ಅದರಲಿ, ಎಲ್ಲಿಗೆ ಹೋದರೂ ಸಾಂಪ್ರದಾಯಿಕ ದಿರಿಸಿನಲ್ಲೇ ಕಾಣಿಸಿಕೊಳ್ಳುವವರು ಅರಬರು. ಅರಬ್‌ ಸಂಸ್ಥಾನದ ಯುವರಾಜ ಲಂಡನ್‌ನಲ್ಲಿ ವ್ಯಾವಹಾರಿಕ ಮೀಟಿಂಗ್‌ನಲ್ಲಿ ಭಾಗವಹಿಸಬೇಕಾಗಿ ಬಂದಾಗ ಧರಿಸಿದ್ದು ಸೂಟ್‌. ನಮ್ಮಲ್ಲಿ ಮದುವೆ, ವಿದೇಶ ಪ್ರಯಾಣಕ್ಕೆಂದು ಮೀಸಲಿಡುವ ಸೂಟ್‌ ಅದಕ್ಕೂ ಮೀರಿದ ಅರ್ಥವ್ಯಾಪ್ತಿಯನ್ನು ಹೊಂದಿದೆ. ಒಂದೇ ಪದದಲ್ಲಿ ಹೇಳಬೇಕೆಂದರೆ “ಪವರ್‌’. ಎಲ್ಲೆಲ್ಲಿ ಶಕ್ತಿಪ್ರದರ್ಶನದ ಅಗತ್ಯವಿರುತ್ತದೋ ಅಲ್ಲೆಲ್ಲಾ ಸೂಟ್‌ಗಳನ್ನು ತೊಡುವ ಪದ್ಧತಿಯಿದೆ. 

 ಹವನ

Advertisement

Udayavani is now on Telegram. Click here to join our channel and stay updated with the latest news.

Next