ಮೂಡುಬಿದಿರೆ: ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ. ಕಂಪೆನಿ ವಿರುದ್ಧದ ಎಲ್ಲ ದೂರುಗಳು ಮತ್ತು ಕ್ಲೇಮ್‌ಗಳನ್ನು ವಜಾಗೊಳಿಸಿ ಬೆಂಗಳೂರಿನ ಮಧ್ಯಸ್ಥಿಕೆ ನ್ಯಾಯಾಲಯ ಆದೇಶ ನೀಡಿದೆ ಎಂದು ಕಂಪೆನಿಯ ಕಾನೂನು ಮತ್ತು ಮ್ಯಾನೇಜ್‌ಮೆಂಟ್ ಸಲಹೆಗಾರ ಡಾ| ಲಕ್ಷ್ಮೀಶ ರೈ ತಿಳಿಸಿದ್ದಾರೆ.
ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ ಕಂಪೆನಿಯು ರೈಸ್‌ಮಿಲ್ ಯಂತ್ರೋಪಕರಣ ಗಳನ್ನು ಉತ್ಪಾದಿ ಸುತ್ತಿದ್ದು ಇದರ ವಿರುದ್ಧ ಎಸ್‌ಕೆಎಫ್ ಬಾಯ್ಲರ್ ಆ್ಯಂಡ್ ಡ್ರೈಯರ್ ಸಂಸ್ಥೆಯು ಉತ್ಛ ನ್ಯಾಯಲಯದಲ್ಲಿ ದಾವೆ ಹೂಡಿತ್ತು. ನ್ಯಾಯಲಯವು ವಿಚಾರಣೆಗಾಗಿ ಹೈಕೋರ್ಟ್‌ನ ನಿವೃತ್ತ ನ್ಯಾ| ಎಚ್.ಜಿ. ರಮೇಶ್ ಅವರನ್ನು ನೇಮಿಸಿತ್ತು. ಬೆಂಗಳೂರಿನ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನಿವೃತ್ತ ನ್ಯಾಯಾಮೂರ್ತಿ ಎಚ್.ಜಿ.ರಮೇಶ್ ಅವರು ವಾದ ಪ್ರತಿವಾದವನ್ನು ಪರಿಗಣಿಸಿ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ ವಿರುದ್ಧದ ಎಲ್ಲ ದೂರುಗಳನ್ನು ಹಾಗೂ ಕ್ಲೇಮ್‌ಗಳನ್ನು ವಜಾಗೊಳಿಸಿ ಆದೇಶ ನೀಡಿದ್ದಾರೆ ಎಂದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
2019ರಲ್ಲಿ ಎಸ್‌ಕೆಎಫ್ ಬಾಯ್ಲರ್ ಆ್ಯಂಡ್ ಡ್ರೈಯರ್ ಪ್ರೈ.ಲಿ ಹಾಗೂ ರಾಮಕೃಷ್ಣ ಆಚಾರ್ ಮತ್ತು ಇತರರ ನಡುವೆ ಆದ ಷೇರು ಖರೀದಿ ಒಪ್ಪಂದದ ಷರತ್ತು 8 ಮತ್ತು 9 ಕಾನೂನುಬಾಹಿರವಾಗಿದ್ದು ಇದು ಇಂಡಿಯನ್ ಕಾಂಟ್ರಾಕ್ಟ್ ಆ್ಯಕ್ಟ್‌ನ ಸೆಕ್ಷನ್ 27ಕ್ಕೆ ವಿರುದ್ಧವಾಗಿದೆ. ಹಾಗಾಗಿ ಎಸ್‌ಕೆಎಫ್ ಬಾಯ್ಲರ್ ಆ್ಯಂಡ್ ಡ್ರೈಯರ್ ಪ್ರೈ.ಲಿ. ಯಾವುದೇ ಪ್ರತಿಬಂಧಕ ಪರಿಹಾರಗಳಿಗೆ ಅರ್ಹರಲ್ಲ ಎಂದು ಘೋಷಿಸಿ ಅವರು ಸಲ್ಲಿಸಿದ ಮಧ್ಯಂತರ ಅರ್ಜಿಯನ್ನು ಕೂಡ ವಜಾಗೊಳಿಸಿದ್ದಾರೆ.
ಈ ತೀರ್ಪಿನಿಂದಾಗಿ ಎಸ್‌ಕೆಎಫ್ ಎಲಿಕ್ಸರ್ ಸಂಸ್ಥೆಯು ರೈಸ್‌ಮಿಲ್ ಯಂತ್ರೋಪಕರಣಗಳನ್ನು ಉತ್ಪಾದಿಸಿ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿ ತನ್ನ ಗ್ರಾಹಕರಿಗೆ ನೀಡುವಲ್ಲಿ ಯಾವುದೇ ತೊಂದರೆ ಇರುವುದಿಲ್ಲ ಎಂದು ಡಾ| ಲಕ್ಷ್ಮೀಶ ರೈ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ ಅಧ್ಯಕ್ಷ ಡಾ| ರಾಮಕೃಷ್ಣ ಆಚಾರ್, ಎಂ.ಡಿ ಪ್ರಜ್ವಲ್ ಆಚಾರ್, ಜಿ.ಎಂ.ಡಿ ತೇಜಸ್ ಆಚಾರ್, ಸಿಇಒ ಶ್ರೀನಿಧಿ ಅಯ್ಯಂಗಾರ್, ಹಿರಿಯ ಮಾರುಕಟ್ಟೆ ನಿರ್ದೇಶಕ ದೇವರಾಜ್ ಉಪಸ್ಥಿತರಿದ್ದರು.