ಮಂಡ್ಯ: ಮೋಕ್ಷಕ್ಕಾಗಿ ದೆಹಲಿಯಲ್ಲಿ ಕುಟುಂಬದ 11 ಮಂದಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದ ಬೆನ್ನಲ್ಲೇ ಮಂಡ್ಯದಲ್ಲೂ ಸಹ ಮಾಂತ್ರಿಕನೋರ್ವ ಕುಟುಂಬವೊಂದಕ್ಕೆ ಆತ್ಮಹತ್ಯೆಗೆ ಪ್ರಚೋದಿಸಿರುವ ಘಟನೆ ಬೆಳಕಿಗೆ ಬಂದಿದೆ!
ತಾಲೂಕಿನ ಮಾರಗೌಡನ ಹಳ್ಳಿ ಗ್ರಾಮದ ಅನಿತಾ ಕುಟುಂಬಕ್ಕೆ ಮೈಸೂರಿನ ಮಂಗಳ ಮುಖೀಮಾಂತ್ರಿಕನೋರ್ವ ಮೋಕ್ಷಕ್ಕಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಮಹಿಳೆ ಮಾಂತ್ರಿಕನ ವಿರುದ್ಧ ಪೊಲೀಸರ ಬಳಿ ಹೇಳಿಕೊಂಡರೂ, ದೂರು ಮಾತ್ರ ದಾಖಲಾಗಿಲ್ಲ.
ಸ್ಥಳೀಯ ನಿವಾಸಿ ಅನಿತಾ ಅವರು ಹುಣಸೂರಿನ ವ್ಯಕ್ತಿಯೊಬ್ಬರನ್ನು ಮದುವೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈ ಮಧ್ಯೆ ತನ್ನ ಪತಿಗೆ ಮೈಸೂರಿನಲ್ಲಿ ಮಂಗಳಮುಖೀ ಮಾಂತ್ರಿಕ ನೋರ್ವ ಪರಿಚಯವಾಗಿದ್ದ. ಪತಿ ಆಗಾಗ ಜ್ಯೋತಿಷ್ಯ ಕೇಳಲು ಹೋಗುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಮಾಂತ್ರಿಕ, ಮೋಕ್ಷ ದೊರಕಬೇಕಾದರೆ ನೀವು ಭಗವಂತನ ಹೆಸರಿನಲ್ಲಿ ಧ್ಯಾನ ಮಾಡುತ್ತಾ, ಆತ್ಮಹತ್ಯೆ ಮಾಡಿಕೊಂಡಲ್ಲಿ ನಿಮಗೆ ಮೋಕ್ಷ ದೊರೆಯುತ್ತದೆ ಎನ್ನುವುದಾಗಿ ಹೇಳಿ ಪ್ರಚೋದಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಪತಿ, ಅನಿತಾಳಿಗೆ ತಿಳಿ ಸಿದ್ದ. ಆದರೆ ಅದರ ಬಗ್ಗೆ ಅಷ್ಟಾಗಿ ಆಕೆ ಮತ್ತು ಕುಟುಂಬದವರು ಗಮನ ನೀಡಲಿಲ್ಲ. ಅಷ್ಟಕ್ಕೇ ಸುಮ್ಮನಾಗದ ಮಾಂತ್ರಿಕ ಮತ್ತೆ ಮತ್ತೆ ಅನಿತಾ ಕುಟುಂಬದವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ, ಮೋಕ್ಷಕ್ಕಾಗಿ ಆತ್ಮಹತ್ಯೆಗೆ ಶರಣಾಗುವಂತೆ ಪೀಡಿಸುತ್ತಿದ್ದ ಎಂದು ಹೇಳಲಾಗಿದೆ.
ಈತನ ಕಾಟದಿಂದ ಬೇಸತ್ತ ಅನಿತಾ ಕುಟುಂಬದವರು ಆತನ ಬಳಿಗೆ ಸುಳಿಯುವುದನ್ನೇ ಬಿಟ್ಟಿದ್ದರು. ಆದರೂ ಮಾಂತ್ರಿಕನ ಕಾಟ ತಪ್ಪಿರಲಿಲ್ಲ. ಹೀಗಾಗಿ ಮಹಿಳೆ ಹುಣಸೂರು ಪೊಲೀಸರಿಗೆ ದೂರು ನೀಡಲು ಮುಂದಾದರಾದರೂ, ಪೊಲೀಸರು ದೂರು ದಾಖಲಿಸಿಕೊಳ್ಳದೇ ವಾಪಸ್ ಕಳುಹಿಸಿದ್ದರು. ಇತ್ತೀ ಚೆಗೆ ದೆಹಲಿಯಲ್ಲಿ ಒಂದೇ ಕುಟುಂಬದ ಹನ್ನೊಂದು ಮಂದಿ ಆತ್ಮ ಹತ್ಯೆ ಮಾಡಿ ಕೊಂಡ ಹಿನ್ನೆಲೆಯಲ್ಲಿ ಅನಿತಾ ಅವರು ವಾಹಿನಿಗಳಲ್ಲಿ ಬಂದ ಸುದ್ದಿ ಕಂಡು, ಇದೇ ರೀತಿ ಮಾಂತ್ರಿಕ ಮೋಕ್ಷಕ್ಕಾಗಿ ತಮಗೆ ಆತ್ಮ ಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡುತ್ತಿದ್ದಾನೆಂದು ಆರೋಪಿಸಿದ್ದಾರೆ.
ಸದ್ಯ ಅನಿತಾ ಅವರು ಮೈಸೂರು ತಾಲೂಕು ಹುಣಸೂರಿ ನಲ್ಲಿ ವಾಸವಾಗಿರುವ ಕಾರಣ ಅವರ ತವರೂರಾಗಿರುವ ಮಾರಗೌಡನ ಹಳ್ಳಿ ಗ್ರಾಮದಲ್ಲಿರುವ ಅವರ ಪೋಷಕರನ್ನು ಸಂಪರ್ಕಿಸಲು ಕೆರಗೋಡು ಠಾಣೆ ಪೊಲೀಸರು ಯತ್ನಿಸುತ್ತಿದ್ದು, ಅವರಿಂದ ಮಾಹಿತಿ ಕಲೆ ಹಾಕಲು ನಿರತರಾಗಿದ್ದಾರೆ.