Advertisement

ಆತ್ಮಹತ್ಯೆ: ತಡೆಯುವ ಕ್ರಮಗಳು

06:00 AM Sep 23, 2018 | |

ಹಿಂದಿನ ವಾರದಿಂದ- ಆತ್ಮಹತ್ಯೆ ತಡೆ ಮತ್ತು ನಿಯಂತ್ರಣ
ಆತ್ಮಹತ್ಯೆಯು ಒಂದು ಸಂಕೀರ್ಣ ಸಮಸ್ಯೆಯಾಗಿದ್ದು, ಹೀಗಾಗಿ ಪ್ರತಿಬಂಧಕ ಪ್ರಯತ್ನಗಳಲ್ಲಿ ಆರೋಗ್ಯ ಕ್ಷೇತ್ರ ಹಾಗೂ ಶಿಕ್ಷಣ, ಕಾರ್ಮಿಕ, ಕೃಷಿ, ಉದ್ಯಮ, ನ್ಯಾಯ, ಕಾನೂನು ಮತ್ತು ಸುವ್ಯವಸ್ಥೆ, ರಕ್ಷಣೆ, ನೀತಿ ನಿಯಮಗಳು ಮತ್ತು ಮಾಧ್ಯಮಗಳಂತಹ ಇತರ ಕ್ಷೇತ್ರಗಳ ಸಹಭಾಗಿತ್ವ ಮತ್ತು ಸಹಯೋಗ ಅಗತ್ಯವಾಗಿದೆ. ಆತ್ಮಹತ್ಯೆಯಂತಹ ಸಂಕೀರ್ಣ ವಿಚಾರದ ಮೇಲೆ ಏಕರೂಪದ ಪರಿಹಾರ ಪ್ರಯತ್ನ ಫ‌ಲ ನೀಡುವ ಸಾಧ್ಯತೆ ಕಡಿಮೆ; ಹೀಗಾಗಿ ಸಮಗ್ರ ಮತ್ತು ಸಂಘಟಿತ ಪ್ರಯತ್ನಗಳು ನಡೆಯಬೇಕು. ಆತ್ಮಹತ್ಯೆಗಳನ್ನು ತಡೆಯುವುದು ಸಾಧ್ಯ. ಆತ್ಮಹತ್ಯೆ ಮತ್ತು ಆತ್ಮಹತ್ಯೆಯ ಪ್ರಯತ್ನಗಳನ್ನು ತಡೆಯಲು ಜನಸಮುದಾಯ, ಉಪ ಜನಸಮುದಾಯ ಮತ್ತು ವೈಯಕ್ತಿಕ ನೆಲೆಯಲ್ಲಿ  ತೆಗೆದುಕೊಳ್ಳಬಹುದಾದ ಅನೇಕ ಕ್ರಮಗಳಿವೆ. ಇವುಗಳೆಂದರೆ: 
–  ಆತ್ಮಹತ್ಯೆ ಮಾರ್ಗಗಳ ಲಭ್ಯತೆಯನ್ನು ಕಡಿಮೆ ಮಾಡುವುದು (ಉದಾಹರಣೆಗೆ, ಕೀಟನಾಶಕಗಳು, ಶಸ್ತ್ರಾಸ್ತ್ರಗಳು, ಕೆಲವು ಔಷಧಗಳು)
–  ಮಾಧ್ಯಮಗಳಲ್ಲಿ ಜವಾಬ್ದಾರಿಯುತವಾಗಿ ವರದಿ ಮಾಡುವುದು
– ಮದ್ಯಪಾನದ ಹಾನಿಕಾರಕ ಬಳಕೆಯನ್ನು ಕಡಿಮೆ ಮಾಡಲು ಮದ್ಯಪಾನ ನೀತಿಗಳನ್ನು ಜಾರಿಗೆ ತರುವುದು
– ಮಾನಸಿಕ ಸಮಸ್ಯೆಗಳು, ಮಾದಕ ದ್ರವ್ಯ ಬಳಕೆಯಂತಹ ತೊಂದರೆಗಳು, ದೀರ್ಘ‌ಕಾಲಿಕ ನೋವು ಮತ್ತು ಹಠಾತ್‌ ಭಾವನಾತ್ಮಕ ತೊಂದರೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ಕ್ಷಿಪ್ರವಾಗಿ ಗುರುತಿಸುವುದು, ಚಿಕಿತ್ಸೆ ನೀಡುವುದು ಮತ್ತು ಆರೈಕೆ ನಡೆಸುವುದು
– ವಿಶೇಷೇತರ ಆರೋಗ್ಯ ಕಾರ್ಯಕರ್ತರನ್ನು ಆತ್ಮಹತ್ಯಾತ್ಮಕ ವರ್ತನೆಯ ವಿಶ್ಲೇಷಣೆ ಮತ್ತು ನಿರ್ವಹಣೆಯ ಬಗ್ಗೆ ತರಬೇತುಗೊಳಿಸುವುದು
– ಆತ್ಮಹತ್ಯೆಗೆ ಪ್ರಯತ್ನಿಸಿದವರಿಗೆ ಅನುಸರಣೆ ಆರೈಕೆ ಒದಗಿಸುವುದು ಹಾಗೂ ಸಮಾಜದ ಬೆಂಬಲಕ್ಕೆ ಅವಕಾಶ ಒದಗಿಸುವುದು. 

Advertisement

ನಿಮ್ಮ ಆತ್ಮಹತ್ಯಾತ್ಮಕ ಯೋಚನೆಗಳನ್ನು 
ನಿಭಾಯಿಸುವುದು ಹೇಗೆ?

– ನಿಮಗೆ ಹೇಗೆ ಅನ್ನಿಸುತ್ತಿದೆ ಎಂಬುದನ್ನು ವಿಶ್ವಾಸಾರ್ಹ ಕುಟುಂಬ ಸದಸ್ಯರು, ಗೆಳೆಯ-ಗೆಳತಿಯರು ಅಥವಾ ಸಹೋದ್ಯೋಗಿಯ ಜತೆಗೆ ಹಂಚಿಕೊಳ್ಳಿ.
– ನಿಮಗೆ ನೀವೇ ಹಾನಿ ಮಾಡಿಕೊಳ್ಳುವ ತತ್‌ಕ್ಷಣದ ಸಾಧ್ಯತೆ ಇದೆ ಎಂಬುದಾಗಿ ನೀವು ಭಾವಿಸಿದರೆ ಸಹಾಯವಾಣಿಯಂತಹ ತುರ್ತು ಸೇವೆಗೆ ಕರೆ ಮಾಡಿ ಅಥವಾ ಖುದ್ದು ಸಂಪರ್ಕಿಸಿ. 
– ವೈದ್ಯರು, ಮಾನಸಿಕ ಆರೋಗ್ಯ ತಜ್ಞರು, ಆಪ್ತ ಸಮಾಲೋಚಕರು ಅಥವಾ ಸಮಾಜ ಕಾರ್ಯಕರ್ತರನ್ನು ಸಂಪರ್ಕಿಸಿ. 
– ಹಾನಿಯ ಪೂರ್ವ ಅನುಭವ ಹೊಂದಿರುವ ವ್ಯಕ್ತಿ ಅಥವಾ ಸ್ವಸಹಾಯ ಗುಂಪನ್ನು ಕಂಡುಹುಡುಕಿ ಸಹಾಯ ಪಡೆಯಿರಿ. ಭಾವನೆಗಳನ್ನು ಉತ್ತಮಪಡಿಸಿಕೊಳ್ಳಲು ಈ ಮೂಲಕ ಪರಸ್ಪರ ಸಹಕರಿಸಬಹುದು. 

ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯದಲ್ಲಿರುವ 
ಇತರರಿಗೆ ನೀವು  ಹೇಗೆ ಸಹಾಯ ಮಾಡಬಹುದು?

ಬಹುತೇಕ ಸಂದರ್ಭದಲ್ಲಿ ಇತರರಲ್ಲಿ ಆತ್ಮಹತ್ಯೆಯ ಅಪಾಯದ ಬಗ್ಗೆ ಮಾತುಕತೆ ನಡೆಸಲು ನಾವು ಹಿಂಜರಿಯುತ್ತೇವೆ. ಆದರೆ ನೆನಪಿಡಿ, ಆತ್ಮಹತ್ಯೆಗಳನ್ನು ತಡೆಯಬಹುದು. ಆತ್ಮಹತ್ಯೆಯ ಬಗ್ಗೆ ಮಾತುಕತೆ ನಡೆಸುವುದರಿಂದ ಬಾಧಕವಿಲ್ಲ. ಆತ್ಮಹತ್ಯೆಯ ಬಗ್ಗೆ ಮಾತನಾಡುವುದರಿಂದ ಆತ್ಮಹತ್ಯೆಯನ್ನು ಪ್ರೋತ್ಸಾಹಿಸಿದಂತಾಗುವುದಿಲ್ಲ. ಅದರಿಂದ ಸಾಮಾನ್ಯವಾಗಿ ಖನ್ನತೆ, ಒತ್ತಡ ನಿವಾರಣೆಯಾಗಿ ಪರಸ್ಪರ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. 
– ನೀವು ಕಳವಳ ಹೊಂದಿರುವ ವ್ಯಕ್ತಿಯ ಜತೆಗೆ ಮಾತನಾಡಲು ಸರಿಯಾದ ಸಮಯ ಮತ್ತು ಶಾಂತವಾದ ಸ್ಥಳವನ್ನು ಆರಿಸಿಕೊಳ್ಳಿ. ನೀವು ಅವರ ಬವಣೆ, ಸಮಸ್ಯೆಗಳ ಬಗ್ಗೆ ಆಲಿಸಲು ಇದ್ದೀರಿ ಎಂಬ ವಿಶ್ವಾಸ ಅವರಲ್ಲಿ ಮೂಡಬೇಕು. 
– ವೈದ್ಯರು, ಮನೋವೈದ್ಯರು, ಆಪ್ತಸಮಾಲೋಚಕರು, ಸಾಮಾಜಿಕ ಕಾರ್ಯಕರ್ತರಂತಹ ವೃತ್ತಿಪರರಿಂದ ಸಹಾಯ ಪಡೆಯುವಂತೆ ಆ ವ್ಯಕ್ತಿಯನ್ನು ಪ್ರೋತ್ಸಾಹಿಸಿ. ಭೇಟಿಯ ಸಮಯದಲ್ಲಿ ನೀವೂ ಜತೆಗೂಡುವ ಭರವಸೆ ನೀಡಿ.
– ವ್ಯಕ್ತಿ ತತ್‌ಕ್ಷಣ ಅಪಾಯದಲ್ಲಿದ್ದರೆ ಆತ ಅಥವಾ ಆಕೆಯನ್ನು ಏಕಾಂಗಿಯಾಗಿ ಇರಲು ಬಿಡಬೇಡಿ. ತುರ್ತು ಸೇವೆಗಳು, ಬಿಕ್ಕಟ್ಟು ಸಹಾಯವಾಣಿ, ಆರೋಗ್ಯ ಸೇವಾ ವೃತ್ತಿಪರರಂತಹ ವೃತ್ತಿಪರರ ಸಹಾಯ ಪಡೆಯಿರಿ ಅಥವಾ ಕುಟುಂಬ ಸದಸ್ಯರ ನೆರವು ಪಡೆಯಿರಿ. 
– ಆ ವ್ಯಕ್ತಿ ನಿಮ್ಮ ಜತೆಗೆಯೇ ವಾಸಿಸುವುದಾದರೆ ಸ್ವಹಾನಿ ಎಸಗುವ ವಸ್ತುಗಳು (ಉದಾಹರಣೆಗೆ, ಕೀಟನಾಶಕಗಳು, ಶಸ್ತ್ರಾಸ್ತ್ರಗಳು ಅಥವಾ ಔಷಧಗಳು) ಅವರ ಕೈಗೆ ಸಿಗದಂತೆ ಎಚ್ಚರಿಕೆ ವಹಿಸಿ. 
– ವ್ಯಕ್ತಿಯ ಬಗ್ಗೆ ಸತತ ನಿಗಾ ಇರಿಸಿ, ಆತ/ ಆಕೆ ಹೇಗಿದ್ದಾರೆ ಎಂಬುದನ್ನು ಗಮನಿಸುತ್ತಿರಿ. ಆತ್ಮಹತ್ಯೆ ಒಂದು ಜಾಗತಿಕ ಸಾಮಾಜಿಕ ಆರೋಗ್ಯ ಸಮಸ್ಯೆಯಾಗಿದ್ದು, ಇದರ ಬಗ್ಗೆ ನಾವೆಲ್ಲರೂ ಗಮನ ಹರಿಸಬೇಕು. ಆತ್ಮಹತ್ಯೆಗಳನ್ನು ತಡೆಯುವುದು ಖಂಡಿತ ಸಾಧ್ಯ; ಆದರೆ ಅದಕ್ಕೆ ಚಟುವಟಿಕೆಗಳ ಸರಣಿಯನ್ನೇ ನಡೆಸಬೇಕಾಗುತ್ತದೆ. ಮಕ್ಕಳು ಮತ್ತು ಯುವ ಜನತೆ ನೆಮ್ಮದಿಯಿಂದ ಜೀವಿಸಲು ಸಾಧ್ಯವಾದ ವಾತಾವರಣ ನಿರ್ಮಾಣ, ಮಾನಸಿಕ ಸಮಸ್ಯೆಗಳನ್ನು ಸರಿಯಾದ ಸಮಯಕ್ಕೆ ಪರಿಣಾಮಕಾರಿ ಚಿಕಿತ್ಸೆಯ ಮೂಲಕ ಪರಿಹರಿಸುವುದು, ಅಪಾಯಾಂಶಗಳನ್ನು ನಿವಾರಿಸುವಂತಹ ಕ್ರಮಗಳೆಲ್ಲವೂ ಇದರಲ್ಲಿ ಒಳಗೊಳ್ಳುತ್ತವೆ. ಮಾಹಿತಿ ಮತ್ತು ಜ್ಞಾನದ ಸರಿಯಾದ ಪ್ರಸರಣ, ಅರಿವಿನ ಮಟ್ಟವನ್ನು ಎತ್ತರಿಸುವುದು ಆತ್ಮಹತ್ಯೆ ತಡೆಯಲ್ಲಿ ಅವಿಭಾಜ್ಯ ಅಂಶಗಳು. ಆತ್ಮಹತ್ಯೆಗಳನ್ನು ಪ್ರತಿಬಂಧಿಸುವಲ್ಲಿ ಪ್ರತಿಯೊಬ್ಬರೂ ಕೊಡುಗೆ ನೀಡಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next