Advertisement
ಲಕ್ನೋ ಮೂಲದ ಅತುಲ್ ಉಪಾಧ್ಯ(55) ಮೃತವ್ಯಕ್ತಿ, ಇದಕ್ಕೂ ಮೊದಲು ತನ್ನ ಪತ್ನಿ ಮಮತಾ ಉಪಾಧ್ಯ(51) ಕೊಂದಿದ್ದಾನೆ. ಬಳಿಕ ಆರೇಳು ವರ್ಷಗಳಿಂದ ಸಾಕಿದ ಲ್ಯಾಬ್ರಡಾರ್ ತಳಿಯ ನಾಯಿಯನ್ನು ಆರನೇ ಮಹಡಿಯಿಂದ ಬಿಸಾಡಿ ಹತ್ಯೆಗೈದಿದ್ದಾರೆ.
Related Articles
Advertisement
ಬಿದ್ದ ಶಬ್ದ ಕೇಳಿದ ಭದ್ರತಾ ಸಿಬ್ಬಂದಿ ಹಾಗೂ ಅಪಾರ್ಟ್‌ಮೆಂಟ್‌ನ ಇತರೆ ನಿವಾಸಿಗಳು ಬಂದು ನೋಡಿದಾಗ ಅತುಲ್ ಮೃತಪಟ್ಟಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಆಧಾರದ ಮೇಲೆ 11 ಗಂಟೆ ಸುಮಾರಿಗೆ ಸ್ಥಳಕ್ಕೆ ಧಾವಿಸಿದ ಸದಾಶಿವನಗರ ಪೊಲೀಸರು ಸ್ಥಳ ಪರಿಶೀಲಿಸಿ,
ಅತುಲ್ ಫ್ಲ್ಯಾಟ್‌ಗೆ ಹೋಗಿ ನೋಡಿದಾಗ ಪತ್ನಿಯನ್ನು ಬರ್ಬರವಾಗಿ ಕೊಂದಿರುವುದು ಬೆಳಕಿಗೆ ಬಂದಿದೆ. ನಂತರ ಪೊಲೀಸರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಬಂದ ವಿಧಿ ವಿಜ್ಞಾನ ಪರೀಕ್ಷಾ ಕೇಂದ್ರದ ಅಧಿಕಾರಿಗಳು ಕೊಠಡಿಯಲ್ಲಿದ್ದ ಡೆತ್‌ನೋಟ್ ಹಾಗೂ ಘಟನೆಗೆ ಸಂಬಂಧಿಸಿದ ಕೆಲ ಸಾಕ್ಷ್ಯಗಳನ್ನು ಸಂಗ್ರಹಿಸಿದರು.
ದುರ್ಘಟನೆ ವೇಳೆ ಅತುಲ್ ಉಪಾಧ್ಯ ಸಹೋದರನ ಪುತ್ರ ಮನೆಯಲ್ಲಿ ಇರಲಿಲ್ಲ. ಬೆಳಗ್ಗೆ ಒಂಭತ್ತು ಸುಮಾರಿಗೆ ಕಾಲೇಜಿಗೆ ತೆರಳಿದ್ದರು. ಹೀಗಾಗಿ ಆತನಿಗೆ ಘಟನೆಗೆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಮಮತಾ ಉಪಾಧ್ಯಯ ಸಹೋದರಿ ಅಮೆರಿಕಾದಲ್ಲಿ ವಾಸವಾಗಿದ್ದು, ಅತುಲ್ ಸಂಬಂಧಿಕರು ಮುಂಬೈನಲ್ಲಿ ನೆಲೆಸಿದ್ದಾರೆ. ಇಬ್ಬರಿಗೂ ಮಾಹಿತಿ ನೀಡಲಾಗಿದೆ. ಬುಧವಾರ ಬೆಳಗ್ಗೆ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಸದಾಶಿವನಗರ ಪೊಲೀಸರು ಹೇಳಿದರು.
ಡೆತ್‌ನೋಟ್‌ನಲ್ಲಿ ಏನಿದೆ?: ಕೃತ್ಯಕ್ಕೂ ಮೊದಲು ಡೆತ್‌ನೋಟ್ ಬರೆದಿಟ್ಟಿರುವ ಅತುಲ್ ಉಪಾಧ್ಯ, ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ನೋವು ತಾಳಲು ಸಾಧ್ಯವಾಗುತ್ತಿಲ್ಲ. ನಮ್ಮನ್ನು ನೋಡಲು ಯಾರೂ ಇರಲಿಲ್ಲ. ಹೀಗಾಗಿ ಈ ರೀತಿ ಮಾಡುತ್ತಿದ್ದೇವೆ. ಸ್ವಾರ್ಥಕ್ಕಾಗಿ ಈ ಕೃತ್ಯ ಎಸಗಲಿಲ್ಲ ಎಂದು ಉಲ್ಲೇಖೀಸಿದ್ದಾರೆ. ಆದರೆ, ಪತಿ, ಪತ್ನಿ ಇಬ್ಬರಲ್ಲಿ ಯಾರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು ಎಂಬುದು ತಿಳಿದಿಲ್ಲ. ಮರಣೋತ್ತರ ಪರೀಕ್ಷೆ ಹಾಗೂ ತನಿಖೆ ಬಳಿಕ ಸ್ಪಷ್ಟತೆ ಸಿಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಬಿಟ್ಟಿರಲಾರದೆ ಪ್ರೀತಿಯ ನಾಯಿ ಹತ್ಯೆ!: ಇದೊಂದು ಅಪರೂಪದ ಘಟನೆ. ಪತ್ನಿಯನ್ನು ಬರ್ಬರವಾಗಿ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಅತುಲ್ ಉಪಾಧ್ಯ, ಕಳೆದ ಆರೇಳು ವರ್ಷಗಳಿಂದ ಪ್ರೀತಿಯಿಂದ ಸಾಕಿರುವ ಲ್ಯಾಬ್ರಡಾರ್ ತಳಿಯ ನಾಯಿಯನ್ನು ಮಹಡಿಯಿಂದ ಬಿಸಾಡಿ ಕೊಂದಿದ್ದಾರೆ.
ಮೂಕ ಪ್ರಾಣಿಯನ್ನು ಅಮಾನವೀಯವಾಗಿ ಕೊಂದಿರುವ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಅಪಾರ್ಟ್‌ಮೆಂಟ್ ನಿವಾಸಿಗಳು ಹೇಳುವ ಪ್ರಕಾರ, ಅತುಲ್ ಉಪಾಧ್ಯ ನಾಯಿಯನ್ನು ಮಗುವಿನಂತೆ ಪ್ರೀತಿಸುತ್ತಿದ್ದರು. ಅದಕ್ಕೆ ಒಂದು ಸಣ್ಣ ನೋವಾದರೂ ಬಹಳ ನೊಂದುಕೊಳ್ಳುತ್ತಿದ್ದರು. ಹೀಗಾಗಿ ತಾವು ಮೃತಪಟ್ಟ ಬಳಿಕ ನಾಯಿ ಅನಾಥವಾಗುತ್ತದೆ ಎಂದು ಭಾವಿಸಿ ಅದನ್ನು ಕೊಂದಿರಬಹುದು ಎಂದು ಹೇಳಿರುವುದಾಗಿ ಪೊಲೀಸರು ಹೇಳಿದರು.