Advertisement

ಸೂಗೂರ(ಕೆ): ನವರಾತ್ರಿ ಬ್ರಹ್ಮೋತ್ಸವಕ್ಕೆ ತೆರೆ

02:50 PM Oct 23, 2018 | Team Udayavani |

ಕಾಳಗಿ: ಸೂಗೂರ(ಕೆ) ಗ್ರಾಮದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ನಡೆದ ಬ್ರಹ್ಮೋತ್ಸವ ಕಾರ್ಯಕ್ರಮ ಸೋಮವಾರ ಸಂಭ್ರಮದಿಂದ ತೆರೆ ಕಂಡಿತು. ನವರಾತ್ರಿ ನಿಮಿತ್ತ ನಡೆದ ಬ್ರಹ್ಮೋತ್ಸವ ಕಾರ್ಯಕ್ರಮದಲ್ಲಿ ಪ್ರತಿದಿನ ಒಂದೊಂದು ವಾಹನವನ್ನು ದೇವಸ್ಥಾನದ ಆವರಣದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

Advertisement

ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ಗರುಡವಾಹನ ಶ್ರೇಷ್ಠವಾದರೆ, ಸೂಗೂರ(ಕೆ) ಗ್ರಾಮದ ವೆಂಕಟೇಶ್ವರ ದೇವಸ್ಥಾನದಲ್ಲಿ ಗಜವಾಹನ ಶ್ರೇಷ್ಠವಾಗಿದೆ. ಅದರಂತೆ ರವಿವಾರ ಬೆಳಗ್ಗೆ 6:00ಕ್ಕೆ ಮೂಲ ಮೂರ್ತಿಗೆ ವಿಶೇಷ ಅಭಿಷೇಕ, 7:00ಕ್ಕೆ ತುಳಸಿ ಅರ್ಚನೆ ನಡೆಯಿತು. ಬೆಳಗ್ಗೆ 5:00ಕ್ಕೆ ತಿರುಮಲ ತಿರುಪತಿಯ ಅರ್ಜುನದಾಸ ಮಹಾರಾಜರು ಗಜವಾಹನ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹನುಮಾನ ಮಂದಿರದ ಮಾರ್ಗವಾಗಿ ತೆರಳಿದ ಮೆರವಣಿಗೆ ಐದು ಕಡೆಗಳಲ್ಲಿ ಆರತಿ ಮಾಡುತ್ತ ದೇವಸ್ಥಾನಕ್ಕೆ ತಲುಪಿತು. ಮೆರವಣಿಗೆಯುದ್ದಕ್ಕೂ ಗ್ರಾಮದ 5 ತಂಡದ ಮಕ್ಕಳು ಗುಂಪು ಕೋಲಾಟ, ಲೇಜಿಮ್‌ ನಂತಹ ಅನೇಕ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 

ಕೊನೆ ದಿನವಾದ ಸೋಮವಾರ ಬೆಳಗ್ಗೆ 7:00ರಿಂದ ವೆಂಕಟೇಶ್ವರ ಸ್ವಾಮಿ ಮೂರ್ತಿ ಹೊತ್ತ ಪಲ್ಲಕ್ಕಿ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಹನುಮಾನ ಮಂದಿರದ ಪಕ್ಕದಲ್ಲಿರುವ ಪುಷ್ಕರಣಿಯಲ್ಲಿ ವೆಂಕಟೇಶ್ವರ ಸ್ವಾಮಿ ಮೂಲ ಮೂರ್ತಿಗೆ ತಿರುಮಲ ತಿರುಪತಿಯ ಅರ್ಜುನದಾಸ ಮಹಾರಾಜ, ದೇವಸ್ಥಾನ ಸಂಚಾಲಕ ಕೃಷ್ಣದಾಸ ಮಹಾರಾಜ, ಪ್ರಧಾನ ಅರ್ಚಕ ಪವಾನದಾಸ ಮಹಾರಾಜ ಅವರ ನೇತೃತ್ವದಲ್ಲಿ ಚಕ್ರಸ್ನಾನ ನಡೆದ ಬಳಿಕ ಬ್ರಹ್ಮೋತ್ಸವ ತೆರೆಕಂಡಿತು. 9 ದಿನಗಳ ಬ್ರಹ್ಮೋತ್ಸವದಲ್ಲಿ ಸ್ವಯಂ ಸೇವಕಿ ಪದ್ಮಪ್ರಿಯಾ ನೇತೃತ್ವದಲ್ಲಿ ಕಲಬುರಗಿ ಸರದಾರ ವಲ್ಲಬಾಯಿ ಪಟೇಲ್‌ ಪ್ರೌಢಶಾಲೆ ಸ್ಕೌಟ್ಸ್‌ ಗೈಡ್ಸ್‌ ಮಕ್ಕಳು ರಕ್ಷಣೆ ನೀಡಿ ಶಿಸ್ತು ಕಾಪಾಡಿದರು. ಗ್ರಾಮದ ಮುಖಂಡರಾದ ಪರಮೇಶ್ವರ ಪಾಟೀಲ, ಶರಣಯ್ಯ ಮಠಪತಿ, ಬಸವಂತರಾವ ಪೊಲೀಸ್‌ಪಾಟೀಲ, ಚಂದ್ರಕಾಂತ ರೆಮ್ಮಣ್ಣಿ, ಹಣಮಂತರಾವ ಮುಚ್ಚೆಟ್ಟಿ, ಸಿದ್ದು ಕೇಶ್ವಾರ, ಸಂಜು ರಾಠೊಡ, ಅಣಪ್ಪ ಜಾಧವ, ಖತಲಪ್ಪ ಅಂಕನ, ಅಣಪ್ಪ ರಾಠೊಡ, ಮಾಣಿಕರಾವ ಪೊಲೀಸ್‌ಪಾಟೀಲ, ಜಗದೀಶ ಶಂಕನೋರ, ಜಗನಾಥ ಕೊಳ್ಳಿ, ಅಣ್ಣರಾವ ಗಡ್ಡಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next