ಕಾಪು: ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ನಡೆಯಲಿರುವ ಉಡುಪಿ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿಯವರ ನಾಗರಿಕ ಅಭಿನಂದನಾ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಜು. 20ರಂದು ಮಯೂರಾ ಹೊಟೇಲ್‌ನಲ್ಲಿ ಕಾಪು ಹೋಬಳಿಯ ಅಭಿಮಾನಿಗಳ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಭಿನಂದನಾ ಸಮಿತಿಯ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ವಿದೇಶದಲ್ಲಿ ಕೃಷ್ಣ ಪೂಜೆಯನ್ನು ನಡೆಸಿ, ಅಲ್ಲಿಯೇ ದೇವಾಲಯವೊಂದನ್ನು ನಿರ್ಮಿಸುವ ಮೂಲಕ ಪುತ್ತಿಗೆ ಶ್ರೀಗಳು ಅಸಾಧಾರಣವಾದ ಸಾಧನೆಯನ್ನು ಮಾಡಿದ್ದಾರೆ. ಪುತ್ತಿಗೆ ಶ್ರೀಗಳ ಅಭಿನಂದನಾ ಕಾರ್ಯಕ್ರಮವು ಅತ್ಯಂತ ವೈಶಿಷ್ಟÂಪೂರ್ಣ ಐತಿಹಾಸಿಕ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ಕಾಪುವಿನಿಂದಲೂ ಸಹಸ್ರಾರು ಸಂಖ್ಯೆ ಜನರು ಭಾಗವಹಿಸುವಂತಾಗಬೇಕು ಎಂದರು.
ಸಮಿತಿಯ ಉಪಾಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಪುತ್ತಿಗೆ ಶ್ರೀಗಳು ಪೂರ್ವಾಶ್ರಮದಲ್ಲಿ ಕಾಪು ಕ್ಷೇತ್ರದವರೇ ಆಗಿರುವುದರಿಂದ ಮತ್ತು ಪುತ್ತಿಗೆ ಮಠವೂ ಕಾಪು ಕ್ಷೇತ್ರ ವ್ಯಾಪ್ತಿಯಲ್ಲೇ ಬರುವುದರಿಂದ ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಿದೆ. ಕನಿಷ್ಠವೆಂದರೂ 100 ವಾಹನಗಳಲ್ಲಿ ಉಡುಪಿಗೆ ತೆರಳಿ ಕಾರ್ಯಕ್ರಮದಲ್ಲಿ ಭಾಗವಹಿಸೋಣ ಎಂದರು.
ಜೆಡಿಎಸ್‌ನ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಸಮಾಜರತ್ನ ಲೀಲಾಧರ ಶೆಟ್ಟಿ ಸಂದಭೋìಚಿತವಾಗಿ ಮಾತನಾಡಿ, ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಕಾಪು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ್ ಬಂಗೇರ, ವಿವಿಧ ಸಮುದಾಯಗಳ ಮುಖಂಡರಾದ ಜಯರಾಮ ಆಚಾರ್ಯ, ಜಗದೀಶ್ ಬಂಗೇರ, ಪ್ರವೀಣ್ ಕುಮಾರ್ ಗುರ್ಮೆ, ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಕಾಪು ಮೊದಲಾದವರು ಉಪಸ್ಥಿತರಿದ್ದರು.ಕಾಪು ಶ್ರೀ ಜನಾರ್ದನ ದೇವಸ್ಥಾನ ಬಳಿಯಿಂದ ವಾಹನ ಮೆರವಣಿಗೆ ಪುತ್ತಿಗೆ ಮಠಾಧೀಶರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಜು. 22ರಂದು ಸಂಜೆ 3.00 ಗಂಟೆಗೆ ಕಾಪು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದ ಮುಂಭಾಗದಿಂದ ವಾಹನ ಮೆರವಣಿಗೆ ಪ್ರಾರಂಭಗೊಳ್ಳಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಭೆಯಲ್ಲಿ ಸಾರ್ವಜನಿಕರಲ್ಲಿ ವಿನಂತಿಸಲಾಯಿತು.
ಕಾಪು ಪುರಸಭಾ ವಿಪಕ್ಷ ನಾಯಕ ಅರುಣ್ ಶೆಟ್ಟಿ ಪಾದೂರು ಸ್ವಾಗತಿಸಿದರು. ಪುರಸಭಾ ಸದಸ್ಯ ಅನಿಲ್ ಕುಮಾರ್ ವಂದಿಸಿದರು.