ಅಫಜಲಪುರ: ರೈತರ ಸಮಸ್ಯೆಗಳಿಗೆ ಸರ್ಕಾರ ಶಾಶ್ವತ ಪರಿಹಾರ ನೀಡುವುದಿಲ್ಲ, ರೈತ ಪರ ಸಂಘಟನೆಗಳು ಪ್ರತಿಭಟನೆ ನಿಲ್ಲಿಸುವುದಿಲ್ಲ, ನೂರಾರು ಬೇಡಿಕೆಗಳಲ್ಲಿ ಕೆಲವಾರು ಬೇಡಿಕೆಗಳು ಈಡೇರಿದರೆ ಖುಷಿ ಪಡುವ
ರೈತರಿಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಈಗ ರೈತರ ಬೇಡಿಕೆ ಈಡೆರುವುದೇ? ಕಬ್ಬು ಬೆಳೆಗಾರರ ಪ್ರತಿಭಟನೆ ನಿಲ್ಲುವುದೇ? ಎನ್ನುವ ಪ್ರಶ್ನೆ ಕಾಡತೊಡಗಿದೆ.
ತಾಲೂಕಿನ ಹವಳಗಾದಲ್ಲಿರುವ ರೇಣುಕಾ ಸಕ್ಕರೆ ಕಾರ್ಖಾನೆ ಎದುರು ಕಬ್ಬಿಗೆ ನ್ಯಾಯಯುತ ಬೆಲೆ ನೀಡಬೇಕೆಂದು
ತಾಲೂಕಿನ ಕಬ್ಬು ಬೆಳೆಗಾರ ರೈತರು ಸಂಘಟನೆ ಮಾಡಿಕೊಂಡು ಧರಣಿ ಕುಳಿತಿದ್ದಾರೆ. ಕಾರ್ಖಾನೆಯವರು ಕಬ್ಬಿಗೆ ತೀರಾ ಕಡಿಮೆ ದರ ನಿಗದಿಪಡಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ರೇಣುಕಾ ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್ ಕಬ್ಬಿಗೆ 2200 ರೂಪಾಯಿ ದರ ನಿಗದಿಗೊಳಿಸಿದ್ದಾರೆ, ಬೇರೆ ಕಡೆಯಲ್ಲಿ 3100 ರೂ. ದರ
ನಿಗದಿಗೊಳಿಸಿದ್ದಾರೆ. ಹೀಗಾಗಿ ರೈತರು ಮತ್ತಷ್ಟು ಸಹನೆ ಕಳೆದುಕೊಳ್ಳುವಂತಾಗಿದೆ.
ಕಬ್ಬು ನುರಿಸುವುದು ಶುರುವಾಗಿದೆ ಎಂದು ರೈತರಿಗೆ ಗೊತ್ತಾದ ತಕ್ಷಣ ಕಬ್ಬು ಕಟಾವಿಗೆ ಮುಂದಾಗಿದ್ದಾರೆ. ಅಲ್ಲದೆ ಅನೇಕ ರೈತರು ಕಬ್ಬು ಕಟಾವು ಮಾಡಿ ಕಾರ್ಖಾನೆ ಮುಂದೆ ತಂದು ಕಬ್ಬಿನ ಗಾಡಿಗಳನ್ನು ನಿಲ್ಲಿಸಿದ್ದಾರೆ. ಕಾರ್ಖಾನೆಯ ಧೋರಣೆ ಖಂಡಿಸಿ ತಾಲೂಕು ಕಬ್ಬು ಬೆಳೆಗಾರರ ಸಂಘದವರು ಕಾರ್ಖಾನೆಯ ಮುಂದೆ ಎರಡು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪ್ರತಿಭಟನೆ ಎರಡು ದಿನ ದಾಟಿ ಮೂರನೆ ದಿನಕ್ಕೆ ಕಾಲಿಟ್ಟಿದೆ. ಆದರೂ ಕಾರ್ಖಾನೆಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ತಾಲೂಕಿನ ಶಾಸಕರು, ಮಾಜಿ ಶಾಸಕರು, ಜಿ.ಪಂ ಉಪಾದ್ಯಕ್ಷರು, ಸದಸ್ಯರು ಅನೇಕ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಮಠಗಳ ಮಠಾಧಿಶರು ಬಂದು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಆದರೆ ಕಾರ್ಖಾನೆಯವರು ಮಾತ್ರ ಪ್ರತಿಭಟನಾ ನಿರತರ ಕೂಗು ಕೇಳುತ್ತಿಲ್ಲ ಎಂದು ಪ್ರತಿಭಟನಾ ನಿರತ ರೈತರು
ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ತಾಲೂಕಿನ ಏಕೈಕ ಸಕ್ಕರೆ ಕಾರ್ಖಾನೆಯಾಗಿರುವ ರೇಣುಕಾ ಸಕ್ಕರೆ ಕಾರ್ಖಾನೆ ತಾಲೂಕಿನ ರೈತರ ಹಿತ ಕಾಪಾಡುವುದಕ್ಕಿಂತಲೂ ಕಾರ್ಖಾನೆಯ ಲಾಭದ ಕಡೆಗೆ ಹೆಚ್ಚಿನ ಒಲವು ತೋರಿಸದಂತೆ ಕಾಣುತ್ತಿದೆ. ಒಟ್ಟಿನಲ್ಲಿ ತಾಲೂಕಿನ ಕಬ್ಬು ಬೆಳೆಗಾರರ ಸಂಕಷ್ಟಗಳಿಗೆ ಕೊನೆ ಇಲ್ಲದಂತಾಗಿದ್ದು ವರ್ಷದಿಂದ ವರ್ಷಕ್ಕೆ ರೈತರ ಸಮಸ್ಯೆಗಳ ಸರಮಾಲೆ ಹೆಚ್ಚಾಗುತ್ತಿದೆ.
ಮಲ್ಲಿಕಾರ್ಜುನ ಹಿರೇಮಠ್
ಮಾಲೀಕರಿಂದ ಭರವಸೆ : ರೈತರ ಪ್ರತಿಭಟನೆ ಕುರಿತು ಆಡಳಿತಾ ಕಾರಿಗಳೊಂದಿಗೆ ಮತ್ತು ಕಾರ್ಖಾನೆಯ ಮಾಲೀಕರೊಂದಿಗೆ ಮಾತನಾಡಿದ್ದೇನೆ. ಅವರು ಚರ್ಚಿಸಿ ರೈತರ ಸಮಸ್ಯೆಗಳಿಗೆ ಉತ್ತರ ನೀಡುವುದಾಗಿ ಭರವಸೆ ನೀಡಿದ್ದಾರೆ. ಇನ್ನು ಕಬ್ಬು ಕಟಾವು ಮಾಡಿರುವ ರೈತರಿಗೆ ನಮ್ಮ ಕೇನ್ ಮ್ಯಾನೇಜರ್ ಅವರು ಕಬ್ಬು ಹಾಳಾಗದಂತೆ ಮತ್ತು ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಿದ್ದಾರೆ.
ಎನ್. ಮಲ್ಲಿಕಾರ್ಜುನ, ಜಿ.ಎಂ ರೇಣುಕಾ ಸಕ್ಕರೆ ಕಾರ್ಖಾನೆ