Advertisement

ನ್ಯಾಯಕ್ಕಾಗಿ ಕಬ್ಬು ಬೆಳೆಗಾರರ ಮೊರೆ

12:55 PM Jan 17, 2021 | Adarsha |

ಮುದ್ದೇಬಿಹಾಳ: ಕಬ್ಬು ಕಟಾವು ವಿಷಯದಲ್ಲಿ ಸಕ್ಕರೆ ಕಾರ್ಖಾನೆಯ ಸುಪರ್‌ ವೈಸರ್‌ ಮತ್ತು ಕಟಾವು ಸಿಬ್ಬಂದಿ ನಿಯಮ ಗಾಳಿಗೆ ತೂರಿ ಮನಸೋ ಇಚ್ಛೆ ನಡೆದುಕೊಳ್ಳುತ್ತಿರುವುದನ್ನು ತಡೆದು ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ನಾಲತವಾಡ ಭಾಗದ ಕಬ್ಬು ಬೆಳೆಗಾರರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.
ಅವೈಜ್ಞಾನಿಕ ಕಬ್ಬು ಕಟಾವು ಮಾಡುತ್ತಿರುವುದರಿಂದ ಕಬ್ಬು ಬೆಳೆದ ಹಲವಾರು ರೈತರಿಗೆ ಆರ್ಥಿಕವಾಗಿ ಹಾನಿ ಆಗತೊಡಗಿದೆ. 2020-21ನೇ ಸಾಲಿನಲ್ಲಿ ಕಟಾವು ಮಾಡುವಾಗ ಮೊದಲು ಕ್ರಮವಾಗಿ ತಳಿಗಳಾದ 86, ಪ್ಯಾರಿ 265, 910 ಕಟಾವು ಮಾಡುವುದಾಗಿ ತಿಳಿಸಿ 2019-20ನೇ ಸಾಲಿನಲ್ಲಿ ಕಟಾವಿನ ದಿನಾಂಕದ ಆಧಾರದ ಮೇಲೆ ಕಬ್ಬು ಕಡಿಯುವ ಭರವಸೆ ನೀಡಲಾಗಿತ್ತು. ಆದರೆ ಸುಪರ್‌ವೈಸರ್‌ ಗಳು ನಿಯಮ ಗಾಳಿಗೆ ತೂರಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.

Advertisement

ಸುಪರ್‌ ವೈಸರ್‌ಗಳು ಪ್ರಭಾವ ಮತ್ತು ಹಣದ ಆಮಿಷಕ್ಕೆ ಬಲಿಯಾಗಿ ಬಡ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಹಣ ಪಡೆದು ಅಥವಾ ಪ್ರಭಾವಕ್ಕೆ ಒಳಗಾಗಿ 8 ತಿಂಗಳ ಕಬ್ಬನ್ನು ಕಟಾವು ಮಾಡಿದ ನಿದರ್ಶನ ನಮ್ಮಲ್ಲಿ ಇವೆ. ಇದರಿಂದ ಕಾರ್ಖಾನೆಯವರಿಗೆ, ರೈತರಿಗೆ ಸಾಕಷ್ಟು ನಷ್ಟ ಆಗುತ್ತದೆ ಎಂದು ಗೊತ್ತಿದ್ದರೂ ಇವರು ತಮ್ಮ ಆಟ ಮುಂದುವರಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ರಾಮ ಮಂದಿರ ದೇಶದ ಶಕ್ತಿ ದ್ಯೋತ್ಯಕ

ಕಬ್ಬು ಕಟಾವು ಮಾಡದಿರುವುದು ಒಂದೆಡೆಯಾದರೆ ಕಬ್ಬು ಕಟಾವು ಮಾಡುವ ಕೂಲಿ ಕಾರ್ಮಿಕರ ಕಿರಿಕಿರಿ ಮತ್ತೂಂದು ರೀತಿಯ ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ. 2 ಡಬ್ಬಿ ಕಟಾವು ಮಾಡುವುದಕ್ಕೆ 2000-4000 ರೂ.ವರೆಗೆ ಲಗಾಣಿ ಕೇಳುತ್ತಿದ್ದಾರೆ. ಇದು ರೈತರಿಗೆ ಹೊರೆಯಾಗತೊಡಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ನಮ್ಮ ಕಬ್ಬಿನ ಕಟಾವು ಯಾವಾಗ ಎಂದು ಸುಪರ್‌ ವೈಸರ್‌ ಗಳನ್ನು ಕೇಳಿದರೆ ನಾಳೆ ಬಾ, ನಾಡಿದ್ದು ಬಾ, ನೋಡೋಣ ಎಂದೆಲ್ಲ ಸಬೂಬು ಹೇಳಿ ಅಲೆದಾಡಿಸುತ್ತಿದ್ದಾರೆ ಹೊರತು ಕಟಾವು ಕುರಿತು ಸ್ಪಷ್ಟ ನಿರ್ಧಾರ ತಿಳಿಸುತ್ತಿಲ್ಲ. ಇವರು ಸರ್ವಾಧಿಕಾರಿಗಳಂತೆ ನಡೆದುಕೊಳ್ಳುತ್ತಿದ್ದಾರೆ. ಇವರ ಕೈ ಕಾಲು ಹಿಡಿಯುವ ಪರಿಸ್ಥಿತಿಗೆ ರೈತರಿಗೆ ಬಂದೊದಗಿದೆ ಎಂದು ತಿಳಿಸಿದ್ದಾರೆ.
ದಾಖಲೆಗೆ ಅನುಗುಣವಾಗಿ ಸರದಿ ಪ್ರಕಾರ ಅರ್ಹ ರೈತರ ಕಬ್ಬು ಕಟಾವು ಮಾಡಿದರೆ ಸಮಸ್ಯೆ ಆಗುವುದಿಲ್ಲ. ಈ ಬಗ್ಗೆ ಕಾರ್ಖಾನೆ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಬೇಕು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದಲ್ಲಿ ಕಬ್ಬು ಬೆಳೆಯುವ ರೈತರು ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ವಿಶ್ವನಾಥ ಡಿಗ್ಗಿ, ಈರಣ್ಣ ನಾಡಗೌಡ, ಪಾಪಣ್ಣ ಗಾದಿ, ಕುಮಾರ ಕೋಳೂರ, ಬಸವರಾಜ ಚಿನಿವಾರ, ಶರಣಪ್ಪ ಸರೂರ, ತಮ್ಮಣ್ಣ ಜಗ್ಲರ್‌, ಭವಾನಿ ಭೋಸಲೆ, ಮಾಂತು ಗಾದಿ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next