Advertisement

ಕಬ್ಬಿಣದ ಕಡಲೆಯಾದ ಕಬ್ಬು ಬೆಳೆ ; ಕಬ್ಬು ದರ ಹೆಚ್ಚಿಸುವ ಬದಲು ಇಳಿಕೆ

02:45 PM Oct 13, 2022 | Team Udayavani |

ಧಾರವಾಡ: ಬೆಳೆದು ನಿಂತು ಕಬ್ಬು ಕಡಿಯಲು ಲಂಗರು ಹಾಕಿದ ಕಟಾವು ಗ್ಯಾಂಗ್‌ಗಳು, ಕಳೆದ ವರ್ಷಕ್ಕಿಂತ ಕಡಿಮೆ ಬೆಲೆ ಕೊಡುತ್ತೇವೆ ಎನ್ನುತ್ತಿರುವ ಸಕ್ಕರೆ ಕಾರ್ಖಾನೆಗಳು, ಕಡಿದ ಕಬ್ಬು ಹೊಲದಲ್ಲೇ ಉಳಿಯುವಂತೆ ಮಾಡುತ್ತಿರುವ ಕಬ್ಬಿನ ಕಾರ್ಖಾನೆಗಳ ಆಡಳಿತ ಮಂಡಳಿಗಳು, ಕಬ್ಬು ಸಾಗಾಣಿಕೆಗೆ ಅಡಚಣೆಯಾದ ಮಳೆ.

Advertisement

ಒಟ್ಟಿನಲ್ಲಿ ಸದ್ಯಕ್ಕೆ ಬೆಳೆದು ನಿಂತಿರುವ ಕಬ್ಬು ಸಾಗಾಣಿಕೆ ರೈತರಿಗೆ ಕಬ್ಬಿಣದ ಕಡಲೆಯಂತಾಗಿ ಹೋಗಿದ್ದಂತೂ ಸತ್ಯ.

ಹೌದು. ವರ್ಷದಿಂದ ವರ್ಷಕ್ಕೆ ಕಬ್ಬು ಬೆಳೆಯುವ ಪ್ರಮಾಣ ಧಾರವಾಡ ಜಿಲ್ಲೆಯಲ್ಲಿ ಅಧಿಕವಾಗುತ್ತಿದ್ದು,1.45 ಎಕರೆಯಿಂದ 1.75 ಲಕ್ಷ ಎಕರೆಗೆ ಏರಿಕೆಯಾಗಿದ್ದು, ಧಾರವಾಡ, ಅಳ್ನಾವರ, ಕಲಘಟಗಿ ಮತ್ತು ಹುಬ್ಬಳ್ಳಿ ತಾಲೂಕಿನ ರೈತರ ಕಬ್ಬು ಇದೀಗ ಕಟಾವಿಗೆ ಸನ್ನಿಹಿತವಾಗಿ ನಿಂತಿದೆ. ಅಷ್ಟೇಯಲ್ಲ ದಸರಾ ಹಬ್ಬದ ಸಂದರ್ಭದಲ್ಲಿಯೇ ಮಹಾರಾಷ್ಟ್ರದ ಬೀಡ, ಲಾಥೂರ್‌ ಮತ್ತು ಕೊಲ್ಲಾಪೂರ ಜಿಲ್ಲೆಗಳಿಂದ ನೂರಾರು ಗ್ಯಾಂಗ್‌ಗಳು ಕಬ್ಬು ಕಟಾವು ಮಾಡಲು ಈಗಾಗಲೇ ಜಿಲ್ಲೆಯ ಕಬ್ಬಿನ ತೋಟಗಳಲ್ಲಿ ಲಂಗರು ಹಾಕಿಯಾಗಿದೆ.

ಸಾಮಾನ್ಯವಾಗಿ ಈ ದಿನಗಳಲ್ಲಿ ಕಬ್ಬಿನ ತೂಕ ಅಧಿಕವಾಗಿರುವುದರಿಂದ ಅದರ ಒಂದಿಷ್ಟು ತೂಕವನ್ನು ರೈತರಿಗೆ ಹೇಳಿಯೇ ಕಾರ್ಖಾನೆಗಳು ಹೆಚ್ಚುವರಿಯಾಗಿ ಪಡೆದುಕೊಂಡು ಅದನ್ನು ಕಳೆದು ಉಳಿದ ಕಬ್ಬಿಗೆ ದರ ನೀಡುತ್ತವೆ. ಇದನ್ನು ರೈತರು ಕೂಡ ಒಪ್ಪಿದ್ದಾರೆ. ಆದರೆ ಇಡೀ ಧಾರವಾಡ ಜಿಲ್ಲೆಯ ಕಬ್ಬನ್ನು ಅತ್ಯಧಿಕ ಪ್ರಮಾಣದಲ್ಲಿ ನುರಿಸುವ ಹಳಿಯಾಳದ ಪ್ಯಾರಿ ಶುಗರ್ ಇದೀಗ ಇದ್ದಕ್ಕಿದ್ದಂತೆ ಕಬ್ಬಿನ ದರ ಕಡಿಮೆ ಮಾಡಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ದಿಢೀರ್‌ ಬೆಲೆ ಇಳಿಕೆ : ರೈತರ ಫಸಲು ಬಂದಾಗ ಪೇಟೆಯಲ್ಲಿ ಅವುಗಳ ಧಾರಣೆ ಕುಸಿತಗೊಳ್ಳುವುದು ಸಾಮಾನ್ಯ. ಭತ್ತ, ಹತ್ತಿ, ಈರುಳ್ಳಿ, ಸೋಯಾ, ಹೆಸರು ಇದಕ್ಕೆ ಹೊರತಾಗಿಲ್ಲ. ಇದೀಗ ಸರ್ಕಾರವೇ ನಿಗದಿ ಪಡಿಸಿದಂತೆ ರೈತರಿಂದ ಕಬ್ಬು ಖರೀದಿಸಬೇಕಾದ ಸಕ್ಕರೆ ಕಾರ್ಖಾನೆಗಳು ಕಳೆದ ವರ್ಷಕ್ಕಿಂತ ಕಡಿಮೆ ಬೆಲೆಗೆ ಕಬ್ಬು ತಂದು ಹಾಕುವಂತೆ ರೈತರಿಗೆ ಹೇಳುತ್ತಿರುವುದು ಕಬ್ಬು ಬೆಳೆಗಾರರ ಬೆನ್ನ ಮೂಳೆಯೇ ಮುರಿದಂತಾಗುತ್ತಿದೆ.

ಕಳೆದ ವರ್ಷ ಪ್ರತಿಟನ್‌ ಕಬ್ಬಿಗೆ 2590 ರೂ.ಗಳಷ್ಟು ಹಣ ನೀಡಿ ಖರೀದಿಸಿದ್ದ ಹಳಿಯಾಳದ ಖಾಸಗಿ ಸಕ್ಕರೆ ಕಾರ್ಖಾನೆ ಈ ವರ್ಷ 2370 ರೂ.ಗಳನ್ನು ಪ್ರತಿ ಟನ್‌ ಕಬ್ಬಿಗೆ ನೀಡುವುದಾಗಿ ಹೇಳುತ್ತಿದೆ. ಅಂದರೆ ಪ್ರತಿ ಟನ್‌ ಗೆ 220 ರೂ.ಗಳಷ್ಟು ಹಣ ರೈತರಿಗೆ ನಷ್ಟವಾಗುತ್ತಿದೆ. ಲೆಕ್ಕದಿಂದ ಈ ವರ್ಷದ ದುಬಾರಿ ವೆಚ್ಚದ ಆಧಾರದಲ್ಲಿ ಕನಿಷ್ಟ 2750 ರೂ.ಪ್ರತಿ ಟನ್‌ಗೆ ನೀಡಬೇಕು. ಆದರೆ ಕಳೆದ ವರ್ಷಕ್ಕಿಂತಲೂ ಕಡಿಮೆ ಹಣ ನೀಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ನಿಂತಲ್ಲೇ ನಿಂತ ಲೋಡ್‌ ಟ್ರ್ಯಾಕ್ಟರ್‌ಗಳು : ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಯಿಂದಲೂ ಅತ್ಯಧಿಕ ಪ್ರಮಾಣದಲ್ಲಿ ಕಬ್ಬು ನುರಿಸುತ್ತಿರುವುದು ಹಳಿಯಾಳದ ಪ್ಯಾರಿ ಶುಗರ್. ಆದರೆ ಈ ವರ್ಷ ರೈತರು ಮತ್ತು ಕಾರ್ಖಾನೆ ಮಾಲೀಕರ ಮಧ್ಯೆ ದರ ನಿಗದಿ ಸಂಬಂಧ ಏರ್ಪಟ್ಟಿರುವ ಕಲಹದಿಂದ ಸದ್ಯಕ್ಕೆ ಪ್ಯಾರಿ ಶುಗರ್ ಕಬ್ಬು ನುರಿಸುವುದನ್ನು ಸ್ಥಗಿತಗೊಳಿಸಿದೆ.

ಈಗಾಗಲೇ ಕಳೆದ ಒಂದು ವಾರದಿಂದ ತಮ್ಮ ಕಬ್ಬು ಕಟಾವು ಮಾಡಿಸಿ ಟ್ರ್ಯಾಕ್ಟರ್‌ಗಳಿಗೆ ಲೋಡ್‌ ಮಾಡಿಸಿದ್ದ ರೈತರು ತಮ್ಮ ಕಬ್ಬನ್ನು ಕಾರ್ಖಾನೆಗೆ ಸಾಗಿಸಿದ್ದಾರೆ. ಆದರೆ ಕಾರ್ಖಾನೆ ಆವರಣದಲ್ಲೂ ಕಬ್ಬಿನ ಟ್ರ್ಯಾಕ್ಟರ್‌ ನಿಲ್ಲಲು ಕೂಡ ಅವಕಾಶ ನೀಡುತ್ತಿಲ್ಲ ಎನ್ನುವ ಆರೋಪ ರೈತರಿಂದ ಕೇಳಿ ಬರುತ್ತಿದೆ. ಹೀಗಾಗಿ ತಾವು ಕಟಾವು ಮಾಡಿದ ಕಬ್ಬನ್ನು ಲೋಡ್‌ ಮಾಡಿ ರೈತರು ರಸ್ತೆ ಅಕ್ಕಪಕ್ಕ, ಹೊಲದ ಬದುಗಳಲ್ಲಿಯೇ ನಿಲ್ಲಿಸಿದ್ದಾರೆ.

ದುಬಾರಿ ಗ್ಯಾಂಗ್‌ ವಾರ್‌: ಇನ್ನು ಮಹಾರಾಷ್ಟ್ರದಿಂದ ಕಬ್ಬು ಕಟಾವು ಮಾಡಲು ಬಂದಿರುವ ಗ್ಯಾಂಗ್‌ಗಳನ್ನು ರೈತರು ಕಬ್ಬು ಕಟಾವು ಮಾಡಿದರೂ ಸರಿ, ಮಾಡದೇ ಇದ್ದರೂ ಸರಿ ಅವರ ಖರ್ಚು ನಿಭಾಯಿಸಬೇಕು. ಬಂದಿರುವ ಗ್ಯಾಂಗ್‌ಗಳು ಕಬ್ಬು ಕಟಾವಿಗೆ ಟನ್‌ ಗೆ 150-250 ರೂ.ಗಳವರೆಗೂ ಎಂಟ್ರಿ ಶುಲ್ಕ ಪಡೆಯುತ್ತಿವೆ. ಇದಲ್ಲದೇ ಅವರ ಹೊಟ್ಟೆ, ಬಟ್ಟೆ, ವಸತಿಗೆ ಕಬ್ಬು ಬೆಳೆದ ರೈತರೇ ವ್ಯವಸ್ಥೆ ಮಾಡಿಕೊಡಬೇಕಿದೆ.

ಇನ್ನು ಬೇಗನೆ ಕಬ್ಬು ಸಾಗಿಸುವ ತವಕದಲ್ಲಿ ರೈತರ ಮಧ್ಯೆಯೇ ಗ್ಯಾಂಗ್‌ಗಳಿಗಾಗಿ ಪೈಪೋಟಿ ಏರ್ಪಟ್ಟಿದ್ದು, ಹೆಚ್ಚಿನ ಹಣ ಮತ್ತು ಮುಂಗಡ ಹಣ ಪಾವತಿಸಿ ಗ್ಯಾಂಗ್‌ ತರಿಸಿಕೊಂಡಿದ್ದಾರೆ. ಇದೀಗ ಕಾರ್ಖಾನೆ ಕಬ್ಬು ನುರಿಸುವುದನ್ನು ಸ್ಥಗಿತಗೊಳಿಸಿದ್ದರಿಂದ ಈ ಗ್ಯಾಂಗ್‌ಗಳ ವೆಚ್ಚವನ್ನು ಕಬ್ಬು ಬೆಳೆಗಾರರೇ ಭರಿಸಬೇಕಿದೆ. ಮಳೆಯ ಆಘಾತ : ಈ ಮಧ್ಯೆ ಕಳೆದ ಮೂರು ದಿನಗಳಿಂದ ಧಾರವಾಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಕಬ್ಬು ಕಟಾವಿಗೆ ಅಡಚಣೆಯನ್ನುಂಟು ಮಾಡಿದೆ. ಅಷ್ಟೇಯಲ್ಲ ಈಗಾಗಲೇ ಕಡಿದ ಕಬ್ಬನ್ನು ಸಾಗಾಣಿಕೆ ಮಾಡಲು ಕೂಡ ಮಳೆಯಿಂದ ಕಬ್ಬಿನ ಗದ್ದೆಗಳಿಗೆ ಭಾರಿ ನೀರು ನುಗ್ಗಿದ್ದು, ಕಬ್ಬು ಲೋಡ್‌ ಮಾಡಲು ಲಾರಿ ಅಥವಾ ಟ್ರ್ಯಾಕ್ಟರ್‌ಗಳು ಹೊಲಗಳಲ್ಲಿ ಹೋಗದಂತಾಗಿದೆ.

ಪ್ರತಿವರ್ಷ ದಸರಾ-ದೀಪಾವಳಿಯಿಂದ ಯುಗಾದಿ ವರೆಗೂ ಅಂದರೆ ಆರು ತಿಂಗಳ ಕಾಲ ಕಬ್ಬು ಸಾಗಾಣಿಕೆ ಸುಗ್ಗಿ ನಡೆಯುತ್ತದೆ. ಹಳಿಯಾಳ, ಸವದತ್ತಿ, ಖಾನಾಪೂರ, ಬೈಲಹೊಂಗಲ್‌, ಬದಾಮಿ ಸೇರಿದಂತೆ ಅನೇಕ ಸಕ್ಕರೆ ಕಾರ್ಖಾನೆಗಳಿಗೆ ಧಾರವಾಡ ಜಿಲ್ಲೆಯಿಂದ ಕಬ್ಬು ಸಾಗಾಣಿಕೆಯಾಗುತ್ತದೆ. ಜಿಲ್ಲೆಯಲ್ಲಿ ಅಂದಾಜು 6-8 ಲಕ್ಷ ಟನ್‌ ಕಬ್ಬು ಉತ್ಪಾದನೆಯಾಗುತ್ತಿದ್ದು, ಜಿಲ್ಲೆಗೆ ಒಂದು ಸಕ್ಕರೆ ಕಾರ್ಖಾನೆಯಾಗಬೇಕು. ಹೊರ ಜಿಲ್ಲೆಯ ಗ್ಯಾಂಗ್‌ ಮತ್ತು ಕಬ್ಬಿನ ಕಾರ್ಖಾನೆಗಳನ್ನು ಅವಲಂಬಿಸಿ ಕಬ್ಬು ಬಳಸುವುದು ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ ಜಿಲ್ಲೆಯ ಕಬ್ಬು ಬೆಳೆಗಾರರು.

ಆಡಳಿತ ಮಂಡಳಿ ಯಾವಾಗಿದ್ದರೂ ರೈತರ ಪರವಾಗಿಯೇ ಇದೆ. ಈ ವರ್ಷದ ಖರ್ಚು ವೆಚ್ಚ ಎಲ್ಲವನ್ನು ನೋಡಿಕೊಂಡೇ ದರ ನಿಗದಿ ಮಾಡುತ್ತೇವೆ. ರೈತರು ಮತ್ತು ಕಾರ್ಖಾನೆ ಇಬ್ಬರಿಗೂ ಲಾಭವಾಗುವಂತೆ ಕ್ರಮ ವಹಿಸುತ್ತೇವೆ. ಪ್ಯಾರಿ ಶುಗರ್ ಹಿರಿಯ ಅಧಿಕಾರಿ.

ಕಳೆದ ವರ್ಷ 2590 ರೂ. ಪ್ರತಿಟನ್‌ ಕಬ್ಬಿಗೆ ನೀಡಲಾಗಿತ್ತು. ಈ ವರ್ಷ ಮತ್ತೆ ಬೀಜ, ಗೊಬ್ಬರ, ಉಳುಮೆಗೆ ಪೆಟ್ರೋಲ್‌ ದರ ಸೇರಿ ಎಲ್ಲರೂ ಏರಿಕೆಯಾಗಿದೆ. ಹೀಗಾಗಿ ಕನಿಷ್ಠ 2700 ರೂ.ಗಳನ್ನು ಪ್ರತಿಟನ್‌ಗೆ ನೀಡಬೇಕು. ಬಸವಂತಪ್ಪ ಕರಡಿಗುಡ್ಡ, ಕ್ಯಾರಕೊಪ್ಪ ರೈತ.

-ಡಾ|ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next