ಮಂಡ್ಯ/ಬೆಳಗಾವಿ: ಭೀಕರ ಬರ ಹಾಗೂ ನೀರಿನ ಕೊರತೆಯು ರಾಜ್ಯದ ಕಬ್ಬು ಬೆಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ರಾಜ್ಯದಲ್ಲಿ ಮುಂಬರುವ ಕಬ್ಬು ಹಂಗಾಮಿನಲ್ಲಿ ಉತ್ಪಾದನೆ ಶೇ.30ರಷ್ಟು ಕುಸಿತವಾಗಲಿದೆ ಮಾತ್ರವಲ್ಲದೆ, ನೀರಿನ ಅಭಾವದಿಂದಾಗಿ ಬೇಸಗೆ ಹಂಗಾಮಿನಲ್ಲಿ ಕಬ್ಬು ಬೆಳೆ ನಿರೀಕ್ಷಿತ ಮಟ್ಟದಲ್ಲಿ ಬಿತ್ತನೆಯಾಗದ ಕಾರಣ ಈ ಬಾರಿ ಕಬ್ಬು ಅರೆಯುವಿಕೆಗೆ ಕಾರ್ಖಾನೆಗಳಿಗೆ ಕಬ್ಬಿನ ಬರ ಕಾಡಲಿದೆ.
ನೀರು ಗಣನೀಯವಾಗಿ ಕಡಿಮೆಯಾದ ಕಾರಣ ರಾಜ್ಯದಲ್ಲಿ ಬರುವ ಹಂಗಾಮಿನಲ್ಲಿ ಸುಮಾರು 80 ಲಕ್ಷ ಮೆಟ್ರಿಕ್ ಟನ್ ಕಬ್ಬು ಉತ್ಪಾದನೆ ಕಡಿಮೆ ಆಗಲಿದೆ ಎಂದು ಅಂದಾಜಿಸಲಾಗಿದೆ.
2022-24ರಲ್ಲಿ ರಾಜ್ಯದಲ್ಲಿ 6.60 ಕೋಟಿ ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿತ್ತು. ಈ ವರ್ಷ ಕಳೆದ ಹಂಗಾಮಿನಲ್ಲಿ 5.70 ಕೋಟಿ ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಬರುವ ಹಂಗಾಮಿನಲ್ಲಿ ಸುಮಾರು 80 ಲಕ್ಷ ಮೆಟ್ರಿಕ್ ಟನ್ ಕಡಿಮೆಯಾಗಲಿದೆ.
28 ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಹಂಗಾಮಿನಲ್ಲಿ 2.25 ಕೋಟಿ ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿತ್ತು. ಈಗ ಬರಗಾಲದ ಕಾರಣ ಸಾಕಷ್ಟು ಕಬ್ಬು ಒಣಗಿ ಹೋಗಿದ್ದು, ಸುಮಾರು 1.50ರಿಂದ 1.70 ಕೋಟಿ ಮೆಟ್ರಿಕ್ ಟನ್ ಕಬ್ಬು ನುರಿಸಬಹುದು ಎಂಬುದು ರೈತ ಮುಖಂಡರ ಅಭಿಪ್ರಾಯ.
ಮಂಡ್ಯ ಜಿಲ್ಲೆಯಲ್ಲೂ ಐದು ಕಾರ್ಖಾನೆಗಳಿವೆ. ಮೈಷುಗರ್ ಕಾರ್ಖಾನೆ ಹೊರತುಪಡಿಸಿ ಉಳಿದೆಲ್ಲ ಕಾರ್ಖಾನೆಗಳು ಪ್ರತಿವರ್ಷ 5 ಲಕ್ಷಕ್ಕೂ ಹೆಚ್ಚು ಟನ್ ಕಬ್ಬು ಅರೆಯುತ್ತಿದ್ದವು. ಆದರೆ ಈ ಬಾರಿ ಎಲ್ಲ ಕಾರ್ಖಾನೆಗಳಿಗೂ ಕಬ್ಬು ಸಿಗದಂತಾಗಿದೆ.
ಶೇ.80ರಷ್ಟು ಕಬ್ಬಿನ ಕೊರತೆ
2024-25ನೇ ಸಾಲಿನಲ್ಲಿ ಕಾರ್ಖಾನೆಗಳಿಗೆ ಶೇ.80ರಷ್ಟು ಕಬ್ಬಿನ ಕೊರತೆ ಉಂಟಾಗಿದೆ. ಭೀಕರ ಬರ ಹಾಗೂ ನೀರಿನ ಕೊರತೆಯಿಂದ ಕಬ್ಬು ಬೆಳೆ ಬಿತ್ತನೆಯಾಗಿಲ್ಲ. ಬೆಳೆದಿದ್ದ ಕಬ್ಬು ಕೂಡ ಬರದಿಂದ ಒಣಗಿದೆ.
ಸಕ್ಕರೆ, ಬೆಲ್ಲದ ದರ ಹೆಚ್ಚಳ ಸಾಧ್ಯತೆ
ಈ ಬಾರಿ ಕಾರ್ಖಾನೆಗಳಿಗೆ ಸಮರ್ಪಕವಾಗಿ ಕಬ್ಬು ಸಿಗುವ ಸಾಧ್ಯತೆ ಕಡಿಮೆ ಇರುವುದರಿಂದ ಸಕ್ಕರೆ ಉತ್ಪಾದನೆ ಕಡಿಮೆಯಾಗಲಿದೆ. ಇದರಿಂದ ಸಕ್ಕರೆ ದರ ಏರಿಕೆಯಾಗುವ ಸಾಧ್ಯತೆ ಇದೆ. ಜತೆಗೆ ಆಲೆಮನೆಗಳಿಗೂ ಕಬ್ಬೇ ಇಲ್ಲದಂತಾಗಿದೆ. ಇದರಿಂದ ಬೆಲ್ಲದ ಉತ್ಪಾದನೆಯೂ ಕುಸಿದು ದರವೂ ಹೆಚ್ಚಾಗುವ ಸಾಧ್ಯತೆ ಇದೆ.
– ಎಚ್. ಶಿವರಾಜು/ ಕೇಶವ ಆದಿ