Advertisement

ಏಲಕ್ಕಿ ನಾಡಿಗಿಂತ ಸಕ್ಕರೆ ನಾಡು ಸಮ್ಮೇಳನ ಭಿನ್ನ: ಡಾ| ಮಹೇಶ್‌ ಜೋಶಿ

11:53 PM Dec 16, 2024 | Team Udayavani |

ಬೆಂಗಳೂರು: ನನ್ನ ಅವಧಿಯ ಸಮ್ಮೇಳನದಲ್ಲಿ ಅಂಗೀಕರಿಸಲಾದ ನಿರ್ಣಯಗಳು ಕಾರ್ಯಗತವಾಗುತ್ತವೆ. ಕಳೆದ ಬಾರಿ ಹಾವೇರಿ ಸಾಹಿತ್ಯ ಸಮ್ಮೇಳನ ದಲ್ಲಿ 3 ನಿರ್ಣಯಗಳನ್ನು ಅಂಗೀಕರಿಸಲಾಗಿತ್ತು. ಅದು ಜಾರಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹೇಳಿದ್ದಾರೆ.

Advertisement

ಸಕ್ಕರೆ ನಾಡು ಮಂಡ್ಯದಲ್ಲಿ ಡಿ. 20ರಿಂದ 3 ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ
ಸಮ್ಮೇಳನದ ಹಿನ್ನೆಲೆಯಲ್ಲಿ ಉದಯವಾಣಿಗೆ ಸಂದರ್ಶನ ನೀಡಿದ್ದು, ಆಯ್ದ ಭಾಗ ಇಲ್ಲಿದೆ.

“ಏಲಕ್ಕಿ ನಾಡು’ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿ ಯಾಗಿತ್ತು. ಈ ವರ್ಷ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನ ಆ ಸಮ್ಮೇಳನಕ್ಕಿಂತ ಹೇಗೆ ಭಿನ್ನವಾಗಿರಲಿದೆ?
ಹಾವೇರಿ ಸಮ್ಮೇಳನದಲ್ಲಿ ಆಗಿರುವಂತ ಕೆಲವು ನ್ಯೂನತೆಗಳು, ಕೊರತೆಗಳನ್ನು ಈ ವರ್ಷ ಪುನರಾವರ್ತನೆ ಆಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಪರಿಷತ್ತಿನ ಅಧ್ಯಕ್ಷನಾಗಿ ನನಗೆ ಅದು ಮೊದಲ ಸಮ್ಮೇಳನವಾಗಿತ್ತು. ಜತೆಗೆ ಸವಾಲಿನಿಂದ ಕೂಡಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ಜನರು ಸೇರುತ್ತಾರೋ, ಇಲ್ಲವೋ ಎಂಬ ಅನುಮಾನ ಇತ್ತು. ಆದರೆ ಮಂಡ್ಯ ಸಮ್ಮೇಳನಕ್ಕೆ ಹೆಚ್ಚಿನ ಕಾಲಾವಕಾಶ ಸಿಕ್ಕಿರುವುದರಿಂದ ಮತ್ತಷ್ಟು ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತದೆ.

ಹಾವೇರಿ ಸಮ್ಮೇಳನದ ವೇಳೆ “ಮನೆ ಮನೆಗೆ ಪರಿಷತ್ತಿನ ಅಧ್ಯಕ್ಷರು’ ಕಾರ್ಯ ಕ್ರಮ ರೂಪಿಸಿ ಹಳ್ಳಿಗಳ ಮನೆಗಳಲ್ಲಿ ವಾಸ್ತವ್ಯ ಹೂಡಿದ್ದೀರಿ. ಈ ಬಾರಿಯೂ ಆ ಪರಂಪರೆಯನ್ನು ಮುಂದುವರಿಸುವಿರಾ?
ಇಲ್ಲ. ಈ ಬಾರಿ ಅಧ್ಯಕ್ಷರ ವಾಸ್ತವ್ಯ ಇರುವುದಿಲ್ಲ. ಕಾರಣ ನನ್ನ ಆರೋಗ್ಯ ಸರಿಯಾಗಿಲ್ಲ. ಆಸ್ಪತ್ರೆಯ ಪಕ್ಕದಲ್ಲೇ ನಾನಿರಬೇಕಾದ ಪರಿಸ್ಥಿತಿಯಿದೆ.

ಸಮ್ಮೇಳನಕ್ಕೆ ಸರಕಾರ ನೀಡುವ ಅನುದಾನ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅಕ್ಷರ ಜಾತ್ರೆ ಬದಲು ಅನುದಾನದ ಜಾತ್ರೆ ಆಗುತ್ತಿದೆ ಎಂಬ ಆರೋಪಗಳಿವೆ?
ಹಿಂದಿನ ಸಮ್ಮೇಳನಕ್ಕೂ ಈಗ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಮೊದಲು ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆ ಎಷ್ಟಿತ್ತು? ಈಗ ಎಷ್ಟಿದೆ? 5 ಲಕ್ಷ ಸದಸ್ಯರಿದ್ದಾರೆ. ಇದನ್ನು 1 ಕೋಟಿ ಮಾಡುವ ಗುರಿಯಿದೆ. ಮುಂದಿನ 2 ವರ್ಷದಲ್ಲಿ ಈ ಗುರಿ ತಲುಪುವ ನಿರೀಕ್ಷೆಯಿದೆ. ಹಾಗಾಗಿ ಸಂಖ್ಯೆ ಅಧಿಕವಾದಾಗ ಸಹಜವಾಗಿ ವ್ಯವಸ್ಥೆಗಳು ಜಾಸ್ತಿ ಆಗುತ್ತವೆ. ಹೆಚ್ಚು ಹಣ ಖರ್ಚಾಗುತ್ತದೆ.

Advertisement

ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಲೇಖಕಿಯರನ್ನು ಪರಿಗಣಿಸಬೇಕು ಎಂಬ ಕೂಗೆದ್ದಿತ್ತು?
ಮಹಿಳೆಯರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಗೊ.ರು. ಚನ್ನಬಸಪ್ಪ ಅವರ ಕೊಡುಗೆ ಅವರ ಹಿರಿತನದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಇಷ್ಟು ಹಿರಿತನವಿರುವಂತಹ ಲೇಖಕಿಯರು ನಮ್ಮಲ್ಲಿಲ್ಲ. ಕಾರ್ಯಕಾರಿ ಸಮಿತಿ ಗೊರುಚ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದೆ. ಮುಂದಿನ ಸಮ್ಮೇಳನದಲ್ಲಿ ಲೇಖಕಿಯರನ್ನು ಪರಿಗಣಿಸಬಹುದು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಸಾಹಿತಿಗಳೇ ಆಗಿರಬೇಕು ಎಂಬ ನಿಯಮ ಪರಿಷತ್ತಿನ ಬೈಲಾದಲ್ಲಿ ಇದೆಯಾ?
ಹಾಗೇನಿಲ್ಲ. ಸಮ್ಮೇಳನ ಹೇಗೆ ನಡೆಯಬೇಕು ಎಂದು ಬೈಲಾದಲ್ಲಿದೆ ಹೊರತು ಸಮ್ಮೇಳನದ ಅಧ್ಯಕ್ಷರು ಮತ್ತು ಅವರ ಆಯ್ಕೆ ಯಾವ ರೀತಿಯಲ್ಲಿ ಇರಬೇಕು ಎಂಬ ಚೌಕಟ್ಟು ಇಲ್ಲ. ಆ ಹಿನ್ನೆಲೆಯಲ್ಲಿ ಅಧ್ಯಕ್ಷರ ಆಯ್ಕೆ ಬಗ್ಗೆ ತಜ್ಞರ ಸಮಿತಿ ರಚನೆ ಮಾಡಿ, ಅಲ್ಲಿ ಚರ್ಚೆಯಾಗಿ ಮುಂದಿನ ನಿರ್ಣಯ ಕೈಗೊಳ್ಳಲಾಗುತ್ತದೆ.

ಸಮ್ಮೇಳನದ ಪ್ರತಿನಿಧಿಗಳ ನೋಂದಣಿ ಶುಲ್ಕ ಏರಿಕೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ?
ನೋಂದಣಿ ಶುಲ್ಕ ಕಾಲಕಾಲಕ್ಕೆ ಬದಲಾಗಬೇಕು, ಇದು ಅನಿವಾರ್ಯ. 3 ದಿನಗಳಿಗೆ 4 ಸಾವಿರ ರೂ. ಪಡೆಯಲಾಗುತ್ತಿದೆ. ಒಂದು ಸಾವಿರ ರೂಪಾಯಿಯಲ್ಲಿ ಇವತ್ತು ವಾಸ್ತವ್ಯ ಹೂಡಲು ಕೋಣೆಗಳು ದೊರೆಯು ತ್ತವೆಯಾ?. ಪ್ರತಿನಿಧಿಗಳಿಗೆ ಊಟ, ವಸತಿ ಸೇರಿ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಮಾಂಸಾಹಾರ ವಿಚಾರವಾಗಿ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ?
ಊಟದ ವಿಚಾರವನ್ನು ಆಯಾ ಸಮಿತಿಗಳು ನಿರ್ಧಾರ ಮಾಡುತ್ತವೆ. ಯಾವುದೇ ಬದಲಾವಣೆ ಮಾಡಬೇಕಾದರೂ ಏಕ ವ್ಯಕ್ತಿಯಾಗಿ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಸರಕಾರ ಏನು ಕೊಡುತ್ತದೆಯೋ ಅದನ್ನು ನೀಡಲಾಗುತ್ತದೆ. 

ಈ ವರ್ಷ ಸಮ್ಮೇಳನ ಗೋಷ್ಠಿಗಳು ಭಿನ್ನವಾಗಿರಲಿವೆಯಾ?
ಹೌದು. ಹೊಸದಾಗಿ ಕೆಲವು ಗೋಷ್ಠಿಗ ಳನ್ನು ಸೇರಿಸಲಾಗಿದೆ. ರಾಜಕೀಯ ಮತ್ತು ಸಾಹಿತ್ಯ ಕುರಿತ ಗೋಷ್ಠಿ ಸೇರಿ ಇನ್ನೂ ಹಲವು ಗೋಷ್ಠಿಗಳನ್ನು ಅಳವಡಿಸಲಾಗಿದೆ. ಮಹಾತ್ಮಗಾಂಧಿಜಿ ಅವರನ್ನು ಸ್ಮರಿಸುವ ಕೆಲಸ ಸಾಹಿತ್ಯ ಸಮ್ಮೇಳನದಲ್ಲಿ ನಡೆಯಲಿದೆ. ಶತಮಾನೋತ್ಸವ ಪೂರೈಸಿದ ಸಾಧಕರನ್ನು ಸ್ಮರಿಸಲಾಗುವುದು.

 

Advertisement

Udayavani is now on Telegram. Click here to join our channel and stay updated with the latest news.

Next