ಕಂಪ್ಲಿ: ಬಹುದಿನದ ಬೇಡಿಕೆಯಾಗಿರುವ ಕಂಪ್ಲಿ ಸಕ್ಕರೆ ಕಾರ್ಖಾನೆಗೆ ಮುಂದಿನ ತಿಂಗಳ ಏಪ್ರಿಲ್ 1ರಂದು ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ಪಟ್ಟಣದ ಸಕ್ಕರೆ ಕಾರ್ಖಾನೆ ಸ್ಥಳಕ್ಕೆ ಸೋಮವಾರ ತಜ್ಞರ ತಂಡದ ಜೊತೆಗೆ ಭೇಟಿ ನೀಡಿ ಕಂಪ್ಲಿ ಸಕ್ಕರೆ ಕಾರ್ಖಾನೆ ನಕಾಶೆ ವೀಕ್ಷಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಕಂಪ್ಲಿ ಸಕ್ಕರೆ ಕಾರ್ಖಾನೆಗೆ ಸಂಬಂಧಿ ಸಿದಂತೆ ಯಾವುದೇ ಅರೋಪ ಪ್ರತ್ಯಾರೋಪಗಳಿಲ್ಲ. ಕಂಪ್ಲಿ ರೈತರ ಬಹುದಿನದ ಬೇಡಿಕೆಯಂತೆ ಕಂಪ್ಲಿ ಸಕ್ಕರೆ ಕಾರ್ಖಾನೆಯನ್ನು ಅತಿ ಶೀಘ್ರದಲ್ಲೇ ಆರಂಭಿಸಲಾಗುವುದು. ಕಂಪ್ಲಿ ಸಕ್ಕರೆ ಕಾರ್ಖಾನೆ ನಕಾಶೆಯನ್ನು ತಜ್ಞರು ಸಿದ್ಧಪಡಿಸಿದ್ದು,
ಅತಿ ವೇಗದಲ್ಲಿ ಕಾರ್ಯದೊಂದಿಗೆ ಕಾರ್ಖಾನೆ ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡುವ ಜತೆಗೆ ಉದ್ಯೋಗಗಳನ್ನು ಕಲ್ಪಿಸಲಾಗುವುದು.
ಕೇಂದ್ರ ಸಚಿವರು ಹಾಗೂ ರಾಜ್ಯದ ಸಿಎಂ ಅವರನ್ನು ಆಹ್ವಾನಿಸಿ ಅವರ ಸಮ್ಮುಖದಲ್ಲೇ ಬರುವ ಏಪ್ರಿಲ್ 1ರಂದು ಕಂಪ್ಲಿ ಸಕ್ಕರೆ ಕಾರ್ಖಾನೆಗೆ ಭೂಮಿಪೂಜೆ ಸಲ್ಲಿಸುವ ಮೂಲಕ ಪ್ರಾರಂಭಿಸಲಾಗುವುದು ಎಂದರು.
ಬೆಂಗಳೂರು ಕ್ವಿಟ್ ಸಮಾಲೋಚಕ ಬಸವರಾಜ್ ಸಜ್ಜನ್ ಮಾತನಾಡಿ, ಸಚಿವ ಬಿ. ಶ್ರೀರಾಮುಲು ಅವರ ಅಧ್ಯಕ್ಷತೆಯಲ್ಲಿ ಕಂಪ್ಲಿ ಸಕ್ಕರೆ ಕಾರ್ಖಾನೆ ಅತಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ರೈತರ ಒಳಿತಿಗಾಗಿ 3500 ರಿಂದ 5000 ಟಿಸಿ ಸಕ್ಕರೆ ಕಾರ್ಖಾನೆಯಾಗಿದೆ. 14 ಮೆಗಾವ್ಯಾಟ್ ಪವರ್ ಜನರೇಟರ್ ಹಾಗೂ 150 ಕೆಎಲ್ಪಿಡಿ ಇಥೇನಾಲ್ ಪೆಟ್ರೋಲ್ ಮಿಕ್ಸ್ ಮಾಡುವಂತದ್ದು, ಒಟ್ಟು ಸುಗರ್ ಕಾಂಪ್ಲೆಕ್ಸ್ ಮತ್ತು ಇಥೇನಾಲ್ ಕಾಂಪ್ಲೆಕ್ಸ್ ಪ್ಲಾನ್ ಮಾಡಲಾಗಿದೆ.
ಕ್ರಿಯಾಯೋಜನೆ ಪ್ರಕಾರ ಅತಿ ವೇಗವಾಗಿ ಸಕ್ಕರೆ ಕಾರ್ಖಾನೆ ಕಾಮಗಾರಿ ನಡೆಯುತ್ತಿದೆ. 15 ಮತ್ತು 20 ದಿನದಲ್ಲಿ ಪ್ರೊಜೆಕ್ಟ್ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಇದೇ ವರ್ಷದ ಡಿಸೆಂಬರ್ 20ರಂದು ಪೂರ್ಣಗೊಳಿಸಿ 2023 ಫೆಬ್ರವರಿಯಲ್ಲಿ ಕಬ್ಬು ನುರಿಸಲಾಗುವುದು. ಆರು ತಿಂಗಳ ನಂತರ ಇಥೇನಾಲ್ ಆರಂಭಿಸಲಾಗುವುದು. ರೈತರು ಕಬ್ಬು ಬೆಳೆಯಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಅಡ್ವೆಸರ್ ಸುನೀಲ್‌ನಾಥ್, ಪರಿಸರ ತಜ್ಞ ಹೇಮಂತ್ ರಾಜಕುಮಾರ್, ಇಥೇನಾಲ್‌ನ ನಿತೀಶ್ ಚೌಹಾಣ್, ಸಿವಿಲ್ ವಿನ್ಯಾಸಕ ಬಸವರಾಜ್ ಸಿರಿ, ಪುರಸಭೆ ಸದಸ್ಯರಾದ ಎನ್. ರಾಮಾಂಜಿನೀಯಲು, ಸಿ.ಆರ್.ಹನುಮಂತ, ಆರ್.ಆಂಜಿನೇಯ್ಯ, ಮುಖಂಡರಾದ ಅಬ್ದುಲ್ ಅಜೀಜ್, ಅಬ್ದುಲ್ ಸಾಬ್, ಪಿ.ಬ್ರಹ್ಮಯ್ಯ, ಎನ್.ಪುರುಷೋತ್ತಮ, ವಿ.ವಿದ್ಯಾಧರ, ಟಿ. ರಬಿಯಾ ನಿಸಾರ್ ಸೇರಿದಂತೆ ಅನೇಕರಿದ್ದರು.