ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಬೆಂಗಳೂರಿನಲ್ಲಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದ ರೈತರು ತಮ್ಮ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ 15 ದಿನಗಳ ಗಡುವು ವಿಧಿಸಿ ಪ್ರತಿಭಟನೆಯನ್ನು ಸೋಮವಾರ ಸಂಜೆ ವಾಪಸ್ ಪಡೆದಿದ್ದಾರೆ.
ಕಬ್ಬು ಬಾಕಿ ಹಣ ಪಾವತಿಸುವಂತೆ ಒತ್ತಾಯಿಸಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಪ್ರತಿಭಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು.
ನಾಳೆ ನಡೆಯಲಿರುವ ರೈತರ ಸಭೆಯಲ್ಲಿ ಕಬ್ಬು ಬಾಕಿ ಹಣ ಪಾವತಿ ಮಾಡುವ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳುವಂತೆ ಹಾಗೂ ರೈತರ ವಿಚಾರದಲ್ಲಿ ಮಾತನಾಡುವಾಗ ಎಚ್ಚರದಿಂದ ಇರಿ ಎಂದು ಸಂಪುಟ ಸಹೋದ್ಯೋಗಿಗಳು ಸಲಹೆ ನೀಡಿದ್ದರು. ಅಷ್ಟೇ ಅಲ್ಲ ರೈತರ ಕುರಿತು ನೀಡಿದ ಹೇಳಿಕೆ ಬಗ್ಗೆ ಕ್ಷಮೆಯಾಚಿಸಲೂ ಸಿದ್ದ ಎಂದು ಕುಮಾರಸ್ವಾಮಿ ಹೇಳಿದ್ದರು.
ಕಬ್ಬಿಗೆ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ, ಸಿಎಂ ಕುಮಾರಸ್ವಾಮಿ ಅವರು ನೀಡಿದ್ದ ಬೇಜವಾಬ್ದಾರಿ ಹೇಳಿಕೆಗೆ ಕ್ಷಮೆ ಕೇಳಬೇಕೆಂಬ ಪಟ್ಟು ಹಿಡಿದು ರೈತರು ಇಂದು ಬೆಂಗಳೂರಿಗೆ ಆಗಮಿಸಿ, ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದ್ದರು. ಆದರೆ ಪೊಲೀಸರು ಫ್ರೀಡಂ ಪಾರ್ಕ್ ನಲ್ಲಿಯೇ ಪ್ರತಿಭಟನಾ ನಿರತ ರೈತರನ್ನು ತಡೆದಿದ್ದರು. ಇದರಿಂದ ಆಕ್ರೋಶಿತರಾದ ರೈತರು ರಸ್ತೆ ಮೇಲೆಯೇ ಕುಳಿತು ಧರಣಿ ನಡೆಸಿದ್ದರು.
ಈ ಸಂದರ್ಭದಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ಅವರು ರೈತರ ಜೊತೆ ಮಾತುಕತೆ ನಡೆಸಿದ್ದರು. ಈ ವೇಳೆ 30 ಬೇಡಿಕೆಗಳ ಪಟ್ಟಿಯನ್ನು ಕೊಟ್ಟು, ಹಂತ, ಹಂತವಾಗಿ ತಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಮತ್ತೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿ ಪ್ರತಿಭಟನೆಯನ್ನು ಕೈಬಿಟ್ಟಿರುವುದಾಗಿ ರೈತ ಮುಖಂಡ ಕೆಟಿ ಗಂಗಾಧರ್ ತಿಳಿಸಿದ್ದಾರೆ.