ರಬಕವಿ ಬನಹಟ್ಟಿ: ಕೃಷಿಯಲ್ಲಿ ಲಾಭ ಮಾಡಿಕೊಳ್ಳಲು ರೈತರು ಏನೆಲ್ಲ ಪ್ರಯೋಗಗಳನ್ನು ಮಾಡುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಆಕರ್ಷಕ ಬೆಲೆಯುಳ್ಳ ಬೆಳೆಗಳನ್ನು ಬೆಳೆದು ಲಾಭ ಪಡೆಯಲು ನೋಡುತ್ತಾರೆ ಅಲ್ಲಿ ಕೆಲವೊಂದು ಸಲ ಯಶಸ್ವಿಯಾದರೆ, ಹೆಚ್ಚು ಸಲ ಅವರು ಬೆಳೆದ ಬೆಳೆ ಕೈಗೆ ಬರುವವರೆಗೆ ಬೆಲೆ ಇಳಿದು ಕೈ ಸುಟ್ಟುಕೊಳ್ಳುವುದೂ ಉಂಟು. ರಬಕವಿ ಬನಹಟ್ಟಿ ತಾಲೂಕಿನ ಹೊಸೂರಿನ ರೈತರಾದ ಕೃಷ್ಣಾ ನಿಂಗಸಾನಿ ಮತ್ತು ತಿಮ್ಮಣ್ಣ ನಿಂಗಸಾನಿ ತಮ್ಮ ತೋಟದ ಮೂರು ಎಕರೆ ಭೂ ಪ್ರದೇಶದಲ್ಲಿ ಸಕ್ಕರೆ ಗಡ್ಡೆಯನ್ನು ಬೆಳೆದು ಹೊಸ ಪ್ರಯೋಗದ ಮೂಲಕ ಹೊಸತನವನ್ನು ಸಾಧಿಸಲು ಹೊರಟಿದ್ದಾರೆ.
ಶುಗರ್ ಬೀಟ್ ಎಂದು ಕರೆಯಲಾಗುವ ಇದನ್ನು ಸಕ್ಕರೆ ಉತ್ಪಾದನೆ ಮಾಡಲು ಬಳಸುತ್ತಾರೆ. ಈ ಭಾಗದಲ್ಲಿ ಬೆರಳಣಿಕೆಯಷ್ಟು ರೈತರು ಮಾತ್ರ ಇದನ್ನು ಬೆಳೆಯುತ್ತಿದ್ದಾರೆ. ಅಂದಾಜು 120 ರಿಂದ 130 ದಿನಗಳ ಬೆಳೆಯಾಗಿದೆ. ನಂತರ ಗಡ್ಡೆಯನ್ನು ನೆಲದಿಂದ ಬೇರ್ಪಡಿಸಿ ಕಾರ್ಖಾನೆಗೆ ಕಳುಹಿಸಲಾಗುತ್ತದೆ. ಸಕ್ಕರೆ ಗಡ್ಡೆಯ ಗುಣಮಟ್ಟ ಚೆನ್ನಾಗಿ ಬಂದರೆ ಅದನ್ನು ಸಕ್ಕರೆ ಉತ್ಪಾದನೆಗೆ ಬಳಸುತ್ತಾರೆ. ಅಲ್ಲದೇ ಇದನ್ನು ಇಥೆನಾಲ್ ಉತ್ಪಾದನೆ ಮಾಡಲು ಕೂಡ ಬಳಸುತ್ತಾರೆ ಎಂದು ರೈತರಾದ ಕೃಷ್ಣಾ ನಿಂಗಸಾನಿ ವಿವರಿಸುತ್ತಾರೆ.
ಒಂದು ಎಕರೆಗೆ ಅಂದಾಜು1 ಕೆ.ಜಿ.ಯಷ್ಟು ಬೀಜ ಬೇಕಾಗುತ್ತದೆ. ಒಂದು ಕೆ.ಜಿ ಗೆ ರೂ.54೦೦ ಬೆಲೆಯಿದೆ. ಆದರೆ ಕಾರ್ಖಾನೆಯವರು ರಿಯಾಯ್ತಿ ದರದಲ್ಲಿ ಅರ್ಧದಷ್ಟು ಬೆಲೆಗೆ ನೀಡುತ್ತಾರೆ. ಒಂದು ಎಕರೆಯಲ್ಲಿ ಆಂದಾಜು 30 ರಿಂದ 35 ಟನ್‌ಗಳಷ್ಟು ಇಳುವರಿ ಬರಬಹುದು. ಒಂದು ಟನ್ ಸಕ್ಕರೆ ಗಡ್ಡೆಗೆ ರೂ.2200 ರಿಂದ ರೂ.25೦೦ ಬೆಲೆ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ರೈತರಾದ ಕೃಷ್ಣಾ ನಿಂಗಸಾನಿ.
ಈ ಬೆಳೆಗೆ ನೀರು ಮತ್ತು ಗೊಬ್ಬರದ ಬಳಕೆ ಕಡಿಮೆ, ವಾರಕ್ಕೆ ಒಂದು ಬಾರಿ ನೀರನ್ನು ನೀಡುವುದರ ಜೊತೆ ಭೂಮಿಯಲ್ಲಿ ತೇವಾಂಶ ಕಾಯ್ದುಕೊಂಡರೆ ಸಾಕಷ್ಟು ಪ್ರಮಾಣದಲ್ಲಿ ಇಳುವರಿ ಬರಬಹುದು. ಅದೇ ರೀತಿ ಗೊಬ್ಬರವನ್ನು ಕಡಿಮೆ ಪ್ರಮಾಣದಲ್ಲಿ ಬಳಸಬಹುದು. ಕೀಟ ಬಾಧೆ ತಡೆಯಲು ಔಷಧ ಸಿಂಪಟಣೆ ಮಾಡಲಾಗಿದೆ.
ರಬಕವಿ ಬನಹಟ್ಟಿ ತಾಲೂಕಿನ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಗೋದಾವರಿ ಬಯೋರಿಫೈನರ್ ಮಾರ್ಗದರ್ಶನದಲ್ಲಿ ಸಕ್ಕರೆ ಗಡ್ಡೆಯನ್ನು ಬೆಳೆಯುತ್ತಿದ್ದಾರೆ.
ಸಮೀರವಾಡಿ ಗೋದವರಿ ಸಕ್ಕರೆ ಕಾರ್ಖಾನೆಯ ಮಾಲೀಕರಾದ ಸಮೀರ ಸೋಮಯ್ಯ ಅವರು ನಿಂಗಸಾನಿ ಅವರ ಗದ್ದೆಗೆ ಭೇಟಿ ನೀಡಿ ಬೆಳೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಕ್ಕರೆ ಗಡ್ಡೆ ಯಶಸ್ವಿಯಾಗಿ ಬಂದರೆ ಕಬ್ಬಿಗೆ ಪರ್ಯಾಯವಾಗಿ ಬೆಳೆ ಆಗಬಹುದು. ಕಬ್ಬು 12 ತಿಂಗಳ ಬೆಳೆಯಾದರೆ ಇದು ನಾಲ್ಕುವರೆ ತಿಂಗಳ ಬೆಳೆಯಾಗಿದೆ
-ತಿಮ್ಮಣ್ಣ ನಿಂಗಸಾನಿ ರೈತರು, ಹೊಸೂರ
-ಕಿರಣ ಶ್ರೀಶೈಲ ಆಳಗಿ