Advertisement

ಸೂಫಿ-ಶರಣರ ಸಂದೇಶಗಳು ಸೌಹಾರ್ದತೆಗೆ ಸಾಕ್ಷಿ

05:57 PM Dec 22, 2021 | Shwetha M |

ವಿಜಯಪುರ: ಸೂಫಿ ಸಂತರ ಭಾವೈಕ್ಯದ ನೆಲೆಯಾಗಿರುವ ಭಾರತದ ಶರಣರ ಬಸವಾದಿ ಶರಣರ ಜನ್ಮಭೂಮಿಯೂ ಹೌದು. ಈ ದೇಶದಲ್ಲಿ ಶಾಂತಿ ಸೌಹಾರ್ದ ಸ್ಥಾಪಿಸಲು ಸೂಫಿ ಸಂತರ- ಬಸವವಾದಿಗಳ ಶರಣರ ತತ್ವಗಳು ಮಹತ್ವದ ಪಾತ್ರ ವಹಿಸಿದೆ ಎಂದು ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ಪುನಾರಾಯ್ಕೆ ಆಗಿರುವ ಸುನೀಲಗೌಡ ಪಾಟೀಲ ಅಭಿಪ್ರಾಯಪಟ್ಟರು.

Advertisement

ನಗರದ ಹಜರತ್‌ ಹಾಶೀಂಪೀರ್‌ ಸೂಫಿ ದರ್ಗಾದಲ್ಲಿ ಮಹಿಬೂಬ ಏ ಸುಭಹಾನಿ ಹಜರತ ಸೈಯದನಾ ಗೌಸ ಪಾಕ ಇವರ ಸ್ಮರಣಾರ್ಥ (ಗ್ಯಾರವಿ ಶರೀಫ್‌) ದೊಡ್ಡ ಪ್ರಮಾಣದಲ್ಲಿ ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿಶ್ವ ಮಟ್ಟದಲ್ಲಿ ಭಾರತ ದೇಶ ಉನ್ನತಿ ಸಾಧಿಸಲು ಸೂಫಿ ಸಂತರ ಶರಣರ ಆಶೀರ್ವಾದ ಅಗತ್ಯ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸ್ವಾತಂತ್ರ್ಯ ಸುವರ್ಣ ಸಂಭ್ರಮ ಪ್ರಶಸ್ತಿ ಪಡೆದ ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ| ಪ್ರಭುಗೌಡ ಪಾಟೀಲ ಮಾತನಾಡಿ, ಪೀರ ಸೈಯದ ಮೊಹಮ್ಮದ ತನವೀರ ಹಾಶ್ಮಿ ಅವರು ಜಾತಿ-ಬೇಧವಿಲ್ಲದೇ ಮಾನವ ಕಲ್ಯಾಣಕ್ಕಾಗಿ ಸೇವೆ ಮಾಡುತ್ತಿದ್ದಾರೆ. ಇವರ ನೇತೃತ್ವದಲ್ಲಿ ನಡೆಸಿದ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸುವಲ್ಲಿ ಅತ್ಯಂತ ಹೆಚ್ಚಿನ ಕಾಳಜಿ ನೀಡಿದ್ದನ್ನು ಸ್ಮರಿಸಿದರು.

ಆಶೀರ್ವಚನ ನೀಡಿದ ಪೀರ ಸೈಯದ ಮೊಹಮ್ಮದ ತನವೀರ ಹಾಶ್ಮಿ, 9 ಶತಮಾನಗಳ ಹಿಂದೆ ಮಹಿಬೂಬ ಏ ಸುಭಹಾನಿ ಹಜರತ ಗೌಸ ಪಾಕ (ಮಹಾನ ಸೂಫಿ) ಇವರು ತಮ್ಮ ಖಾನಕಾ (ಆಶ್ರಮ)ದಲ್ಲಿ ಹಸಿದವರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದರು. ಗ್ಯಾರವಿ ಶರೀಫ್‌ ಹೆಸರಿನ ಈ ಅನ್ನದಾಸೋಹ ಪರಂಪರೆಯನ್ನು ನಾವು ಕೂಡ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದರು.

ಎಲ್ಲ ಸೂಫಿ ಸಂತರು ತಮ್ಮ ತಮ್ಮ ಆಶ್ರಮಗಳಲ್ಲಿ ಜಾತೀಯತೆ ಮಾಡದೇ, ಧರ್ಮ ಸಮನ್ವಯದಿಂದ ನಡೆದುಕೊಂಡಿದ್ದಾರೆ. ಹಸಿದವರಿಗೆ ಅನ್ನ ದಾಸೋಹ ಮಾಡುವ ಮಹೋನ್ನತ ಪರಂಪರೆಯನ್ನು ಹಾಕಿಕೊಟ್ಟಿದ್ದಾರೆ. ಹಸಿವು ಹಾಗೂ ಅನ್ನಕ್ಕೆ ಯಾವ ಧರ್ಮ-ಜಾತಿಯ ಹಂಗಿಲ್ಲ ಎಂಬುದನ್ನು ಸಮಾಜಕ್ಕೆ ಸರ್ವ ಕಾಲಕ್ಕೂ ಮನವರಿಕೆ ಮಾಡಿಕೊಡುತ್ತಲೇ ಬಂದಿದ್ದಾರೆ ಎಂದು ಬಣ್ಣಿಸಿದರು.

Advertisement

ನಮ್ಮ ಪ್ರವಾದಿ ಹಜರತ ಸೈಯಿದನಾ ಮೊಹಮ್ಮದ ಸಲ್ಲಲಾಹು ಅಲೈ ಹಿ ವ ಸಲ್ಲಮ್‌ ರವರ ದಿವ್ಯ ವಾಣಿಯ ( ಹದೀಸ ಶರೀಫ್‌) ಪ್ರಕಾರ ಪುಣ್ಯದ ಕೆಲಸಗಳಲ್ಲಿ ಅತ್ಯಂತ ಶ್ರೇಷ್ಠ ಮತ್ತು ಪುಣ್ಯದ ಕೆಲಸ ಹಸಿದವನಿಗೆ ಅನ್ನ ಕೊಡುವದು. ಸೂಫಿ ಸಂದೇಶದಲ್ಲಿ ಮೊದಲು ನೀನು ಮಾನವನಾಗು. ನಂತರ ನೀನು ಹಿಂದೂ, ಮುಸ್ಲಿಂ, ಸಿಖ್‌, ಕ್ರೈಸ್ತ ಇತ್ಯಾದಿಯಾಗು ಎಂದು ಸಂದೇಶ ನೀಡಿದ್ದಾರೆ ಎಂದರು.

ದರ್ಗಾದ ಪೀಠಾಧಿಪತಿಗಳು, ಧಾರ್ಮಿಕ ವಿದ್ವಾಂಸರು, ರಾಜಕೀಯ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next