ಚಿತ್ರದುರ್ಗ: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ವಿವಿಧ ಮಠಾಧೀಶರು, ಶಾಸಕರು ಹಾಗೂ ಗಣ್ಯರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಡಾ| ಶಿವಮೂರ್ತಿ ಮುರುಘಾ ಶರಣರು ನಗರದ ಹೊರವಲಯದ ಮಠದ ಕುರುಬಹಟ್ಟಿ ಸರ್ಕಾರಿ ಶಾಲೆಯಲ್ಲಿ ತೆರೆಯಲಾಗಿದ್ದ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಮುರುಘಾ ಶರಣರು ಮತ ಚಲಾಯಿಸಿದ ನಂತರ ಹಲವು ಮಠಾಧೀಶರು ಮತದಾನ ಮಾಡಿದರು.
ಮಠದ ಕುರುಬಹಟ್ಟಿ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮಡಿವಾಳ ಮಾಚಿದೇವ ಸ್ವಾಮೀಜಿ, ಕುಂಚಿಟಿಗ ಮಠದ ಡಾ| ಶಾಂತವೀರ ಸ್ವಾಮೀಜಿ, ಹರಳಯ್ಯ ಮಠದ ಶ್ರೀ ಹರಳಯ್ಯ ಸ್ವಾಮೀಜಿ, ಶ್ರೀ ತಿಪ್ಪೇರುದ್ರ ಸ್ವಾಮೀಜಿ, ಚಲವಾದಿ ಗುರುಪೀಠದ ಶ್ರೀ ಬಸವ ನಾಗಿದೇವ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಸಂಗನಬಸವ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ಪ್ರಮುಖ ಮಠಗಳ ಮಠಾಧೀಶರು ಒಟ್ಟಿಗೆ ಆಗಮಿಸಿ ಜನರ ಮಧ್ಯೆ ಸಾಲಾಗಿ ನಿಂತು ಮತ ಚಲಾಯಿಸಿದರು.
ಚಿತ್ರದುರ್ಗ ಶಾಸಕ, ಬಿಜೆಪಿ ಅಭ್ಯರ್ಥಿ ಜಿ.ಎಚ್. ತಿಪ್ಪಾರೆಡ್ಡಿ ಎಪಿಎಂಸಿ ಮತಗಟ್ಟೆ ಸಂಖ್ಯೆ 71ರ ಮತಗಟ್ಟೆಗೆ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಅವರ ಪತ್ನಿ ಅನುಸೂಯಾ, ಪುತ್ರ ಡಾ| ಸಿದ್ಧಾರ್ಥ, ಪುತ್ರಿ ಸಿಂಧು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಪಿ.ಎನ್. ರವೀಂದ್ರ ಸೆಂಟ್ ಜೋಸೆಫರ ಕಾನ್ವೆಂಟ್ ಶಾಲೆಯಲ್ಲಿ ಮತ ಚಲಾಯಿಸಿದರು. ಮಾಜಿ ಸಂಸದ ಜನಾರ್ದನಸ್ವಾಮಿ ಮತ್ತು ಅವರ ಪತ್ನಿ ಐಯುಡಿಪಿ ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕೆಎಚ್‌ಬಿ ಮತಗಟ್ಟೆ ಕೇಂದ್ರದಲ್ಲಿ ನಟಿ ಭಾವನಾ ಮತ ಚಲಾಯಿಸಿದರು. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದನ್ನಿಲ್ಲಿ ಸ್ಮರಿಸಬಹುದು.