Advertisement

ಗಣಿತ ಪ್ರಯತ್ನಿಸಿದರೆ ಸರಳ, ಸುಲಭ

02:57 PM Feb 07, 2017 | Karthik A |

ಎಸೆಸ್ಸಲ್ಸಿ ಪರೀಕ್ಷೆ ಮಾರ್ಚ್‌ 30ರಿಂದ ಆರಂಭ. ಸುಮಾರು ಎರಡು ತಿಂಗಳ ಅವಧಿ ಇದೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಪಠ್ಯದ ಪುನರಾವರ್ತನೆ ಮಾಡಲಾಗುತ್ತದೆ. ಹಾಗೆಯೇ ಕೊನೆಯ ಹಂತದ ಸಿದ್ಧತಾ ತಂತ್ರಗಳನ್ನು ರೂಪಿಸಿಕೊಳ್ಳುವ ಹೊತ್ತೂ ಸಹ. ಅದಕ್ಕಾಗಿಯೇ ಗಣಿತದ ತಯಾರಿ ಕುರಿತ ಸಲಹೆಗಳನ್ನು ಮಂಗಳೂರಿನ ಗೋರಿಗುಡ್ಡ ಕಿಟೆಲ್‌ ಮೆಮೋರಿಯಲ್‌ ಪ್ರೌಢಶಾಲೆ ಶಿಕ್ಷಕ ರಘುನಾಥ ಭಟ್‌ ಜಿ. ಅವರು ನೀಡಿದ್ದಾರೆ.  ಸಂಗ್ರಹ – ಕಿರಣ್‌ ಸರಪಾಡಿ

Advertisement

ಗಣಿತ ಕಷ್ಟವಾಗಲು ಪ್ರಮುಖ ಪ್ರಮುಖ ಕಾರಣಗಳು
1. ವಿಷಯವೇ ಕಷ್ಟ ಎಂದು ತಿಳಿದು ಕಲಿಯಲು ಹಿಂದೇಟು ಹಾಕುವುದು.

2. ಪ್ರಾಥಮಿಕ ಕಲಿಕೆಯ ಹಂತದಲ್ಲಿ ಗಣಿತದ ಮೂಲಕ್ರಿಯೆಗಳನ್ನು ಅರ್ಥೈಸುವುದಲ್ಲಿ ಹಿಂದೆ ಬಿದ್ದಿರುವುದು.

3. ಪ್ರಾಥಮಿಕ ಶಾಲೆಗಳಲ್ಲಿ ಗಣಿತ ಕಲಿಕೆಗೆ ಆವಶ್ಯಕವಾದ ವಾತಾವರಣ ಇಲ್ಲದಿರುವುದು.

4. ಗಣಿತವನ್ನು ಬರೆದು ಅಭ್ಯಾಸ ಮಾಡಿ ಅರ್ಥೈಸಿಕೊಳ್ಳುವಷ್ಟು ಸಮಯವನ್ನು ವಿದ್ಯಾರ್ಥಿಗಳು ನೀಡದಿರುವುದು. 

Advertisement

ಆದರೆ ಗಣಿತವು ಎಂದೂ ಕಷ್ಟದ ವಿಷಯವಲ್ಲ. ಪಬ್ಲಿಕ್‌ ಪರೀಕ್ಷೆಯಲ್ಲಿ ಗಣಿತದಲ್ಲಿ ಉಳಿದೆಲ್ಲಾ ವಿಷಯಗಳಿಗಿಂತ ಹೆಚ್ಚು ಮಂದಿ ನೂರಕ್ಕೆ ನೂರು ಅಂಕಗಳಿಸುತ್ತಾರೆ ಎಂಬುದು ಉತ್ಸಾಹ ಮೂಡಿಸುವ ಸಂಗತಿ. 

ಹೆಚ್ಚು ಅಂಕ ಗಳಿಸಲಿಕ್ಕೆ ತಯಾರಿ ತಯಾರಿ ಹೇಗಿರಬೇಕು?
1. ಗಣಿತದಲ್ಲಿ ಲೆಕ್ಕಗಳನ್ನು ಬಿಡಿಸುವಾಗ ಗಮನ ಪೂರ್ಣ ಲೆಕ್ಕದಲ್ಲಿಯೇ ಇದ್ದು, ಪರಿಹಾರದ ಹಂತಗಳನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳುವುದು. ಇದರಂತೆ ಅದೇ ಮಾದರಿಯ ಲೆಕ್ಕಗಳನ್ನು ಬಿಡಿಸುತ್ತಾ ಅಭ್ಯಾಸ ಮಾಡುವುದು. ತಾನೇ ಸ್ವತಃ ಲೆಕ್ಕ ಹಾಕಿಕೊಂಡು ಬಿಡಿಸಲು ಪ್ರಯತ್ನಿಸುವುದು.

2. ಹತ್ತನೆಯ ತರಗತಿಯ ಗಣಿತದಲ್ಲಿ 15 ಅಧ್ಯಾಯಗಳಿದ್ದು, ನೀಲ ನಕಾಶೆ(ಬ್ಲೂ ಪ್ರಿಂಟ್‌) ಆಧರಿಸಿ ವಿಭಜಿಸಿ 80 ಅಂಕಗಳಲ್ಲಿ ಪ್ರಶ್ನೆಪತ್ರಿಕೆ ತಯಾರಿಸುತ್ತಾರೆ. 

3. ಗಣಿತ ಪರೀಕ್ಷೆಯಲ್ಲಿ 80ರಲ್ಲಿ 12 ಅಂಕಗಳಷ್ಟು ಹೊಂದಿರುವ ಪ್ರಶ್ನೆಗಳು ಮಾತ್ರ ಸ್ವಲ್ಪ ಕಠಿನ ರೂಪವಾಗಿದ್ದು, ವಿದ್ಯಾರ್ಥಿಗಳು ತಾವು ಕಲಿತ ಪಠ್ಯದ ಅಂಶಗಳಲ್ಲಿ ನಿಜ ಜೀವನಕ್ಕೆ ಅನ್ವಯಿಸುವ ಪ್ರಶ್ನೆಗಳಾಗಿರುತ್ತವೆ. ಇವುಗಳನ್ನು ಬಿಡಿಸಲು ಹಿಂದಿನ ವರ್ಷದ ಗಣಿತ ಪ್ರಶ್ನೆ ಪತ್ರಿಕೆಗಳು, ಹಳೇ ಪಠ್ಯಕ್ರಮದಲ್ಲಿನ ಲೆಕ್ಕಗಳನ್ನು ಅಭ್ಯಾಸ ಮಾಡಬೇಕು. ಮುಖ್ಯವಾಗಿ ಶ್ರೇಣಿಗಳು, ಪೈಥಾಗೋರಸನ ಪ್ರಮೇಯ, ತ್ರಿಕೋನ ಮಿತಿ, ಸಂಭವನೀಯತೆ ಮತ್ತು ಕ್ಷೇತ್ರ ಗಣಿತ ಪಾಠದಲ್ಲಿ ಅನ್ವಯ ಪ್ರಶ್ನೆಗಳಿರುತ್ತವೆ.

4. ಪ್ರಶ್ನೆ ಪತ್ರಿಕೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತರಿಸುವ ರೀತಿಯಲ್ಲಿ 2 ಪ್ರಮೇಯಗಳು, 2 ಸ್ಪರ್ಶಕ ಎಳೆಯುವ ಚಿತ್ರಗಳು, ಜಮೀನು ನಕಾಶೆ, ನಕ್ಷೆ, ಮಾನಕ ವಿಚಲನೆ ಕಂಡು ಹಿಡಿಯುವ ಪ್ರಶ್ನೆಗಳಿರುತ್ತವೆ. ಅದಕ್ಕೆ ಗಮನ ನೀಡಬೇಕು. 

5. ಕ್ರಮ ಯೋಜನೆ ಮತ್ತು ವಿಕಲ್ಪಗಳು, ಬಹೂಪದೋಕ್ತಿಗಳು, ಕರಣೆಗಳು, ತ್ರಿಕೋನ ಮಿತಿ, ನಿರ್ದೇಶಾಂಕ ರೇಖಾ ಗಣಿತ ಹಾಗೂ ಕ್ಷೇತ್ರ ಗಣಿತ ಪಾಠಗಳಲ್ಲಿ ಮಾದರಿ ಲೆಕ್ಕಗಳನ್ನು ಹೆಚ್ಚಾಗಿ ಗಮನ ವಹಿಸಬೇಕು. ಪರೀಕ್ಷೆಯಲ್ಲಿ 30 ಅಂಕಗಳಷ್ಟು ಪಠ್ಯದಲ್ಲಿ ಬಿಡಿಸಿದ ಮಾದರಿ ಲೆಕ್ಕಗಳಲ್ಲೇ ಸಾಮಾನ್ಯವಾಗಿ ಕೇಳುವರು, ಗಮನ ಕೊಡಿ. 

6. ಹಿಂದಿನ ವರ್ಷಗಳ ಗಣಿತ ಪ್ರಶ್ನೆಪತ್ರಿಕೆಗಳನ್ನು ನೀವೇ ಬಿಡಿಸಲು ಅಭ್ಯಾಸ ಮಾಡಿ, ಪ್ರತಿಯೊಂದನ್ನೂ ನೀವೇ ಪ್ರಯತ್ನಿಸಿ, ಅಂತಿಮವಾಗಿ ಅನಿವಾರ್ಯವಾಗಿ ಇತರರ ಸಹಾಯವನ್ನು ಪಡೆಯಿರಿ. 

7. ಪ್ರತಿದಿನವೂ ಕನಿಷ್ಠ ಒಂದು ಗಂಟೆಯಾದರೂ ಗಣಿತ ಕಲಿಕೆಗೆ ಮೀಸಲಿಡಿ. 

8. ಪ್ರಮೇಯವಾಗಲೀ, ಚಿತ್ರವಾಗಲೀ, ಕಷ್ಟದ ಲೆಕ್ಕಗಳಾಗಿರಲಿ ಬರೆದು ಅಭ್ಯಾಸ ಮಾಡುವುದನ್ನು ಮರೆಯಬೇಡಿ. 

9. ಮನಸ್ಸಿನಲ್ಲಿ ಗಣಿತ ಕಲಿಕೆ ಸುಲಭ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅದು ನಿಮ್ಮೊಳಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕಷ್ಟದ ಲೆಕ್ಕಗಳು ಬಿಡಿಸಲು ಸಾಧ್ಯವಾದಾಗ ಖುಷಿ ಪಡಿ. 

10. ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆಪತ್ರಿಕೆ ನೀಡಿದಾಗ 15 ನಿಮಿಷ ಪ್ರಶ್ನೆಪತ್ರಿಕೆ ಓದುವುದಕ್ಕೆ ಮೀಸಲು. ಆ ಹೊತ್ತಿನಲ್ಲಿ ನೀವು ಉತ್ತರಿಸಬಹುದಾದ ಪ್ರಶ್ನೆಗಳನ್ನು ಗಮನಿಸಿ ಆ ಲೆಕ್ಕಗಳನ್ನು ಬಿಡಿಸುತ್ತಾ ಹೋಗಿ. ಪ್ರಶ್ನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು 2-3 ಬಾರಿ ಓದಿ. 

11. ಉತ್ತರ ಗೊತ್ತಿಲ್ಲವೆಂದು ಪ್ರಶ್ನೆ ಉತ್ತರಿಸದೇ ಇರಬೇಡಿ. ಪ್ರಯತ್ನಿಸಿ. ಕನಿಷ್ಠ ಪಕ್ಷ ಸಂಬಂಧಿಸಿದ ಸೂತ್ರವಾದರೂ ಬರೆದು ಬನ್ನಿ.

12. ನೀವು ಬರೆದ ಉತ್ತರಗಳನ್ನು ಪುನಃ ಓದಿ ತಪ್ಪುಗಳನ್ನು ಸರಿಪಡಿಸಲು ಮರೆಯಬೇಡಿ. 

13. ಸೂತ್ರಗಳು, ಮಗ್ಗಿ, ಮೂಲಕ್ರಿಯೆಗಳನ್ನು ಆದಷ್ಟು ಗಟ್ಟಿಗೊಳಿಸಿ. 

14. ಅಗತ್ಯವಿದ್ದಷ್ಟು ನಿದ್ರೆ ಮಾಡಿ ಆರೋಗ್ಯದ ಕುರಿತು ಎಚ್ಚರವಿರಲಿ. 

ಗಣಿತ ಸುಲಭ, ಆದರೆ ಪ್ರಯತ್ನವಷ್ಟೇ ಅದನ್ನು ಸುಲಭಗೊಳಿಸುವ ಹಾದಿ ಎಂಬುದು ನೆನಪಿರಲಿ. 

(ಮುಂದಿನ ವಾರ ವಿಜ್ಞಾನ)

Advertisement

Udayavani is now on Telegram. Click here to join our channel and stay updated with the latest news.

Next