Advertisement

ಹತ್ತು ದಿನ ಕಳೆದರೆ ಕುಡಿಯುವ ನೀರಿಗೆ ಹರಸಾಹಸ ಅನಿವಾರ್ಯ!

12:17 AM Mar 15, 2017 | Karthik A |

ಬಜಪೆ: ಮಳವೂರು, ಬಜಪೆ, ಪೆರ್ಮುದೆ ಮತ್ತು ಎಕ್ಕಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪ್ರದೇಶಗಳಲ್ಲಿ ಹತ್ತು ದಿನಗಳೊಳಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿದೆ. ಈ ಮಧ್ಯೆ ಕಾಮಗಾರಿ ಮುಗಿದಿರುವ ವೆಂಟೆಡ್‌ ಡ್ಯಾಂ ಉದ್ಘಾಟನೆಗೆ ಸಚಿವರು ಪುರುಸೊತ್ತು ಮಾಡಿಕೊಂಡು ಬಂದರೆ ಈ ಗ್ರಾ.ಪಂ.ಗಳ ನೀರಿನ ಕೊರತೆ ಸ್ವಲ್ಪ ದಿನಗಳಿಗಾದರೂ ಕರಗಲಿದೆ. ಈ ಗ್ರಾಮ ಪಂಚಾಯತ್‌ಗಳು ಮಳವೂರು ವೆಂಟೆಡ್‌ ಡ್ಯಾಂನ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಸೌಲಭ್ಯ ಸಿಗುತ್ತದೆಂದು ಕಾದು ಕುಳಿತಿವೆ. ಇದರ ಉದ್ಘಾಟನೆ ಮುಂದೂಡುತ್ತಿರುವುದೇ ಸಮಸ್ಯೆಗೆ ಕಾರಣವಾಗಿದೆ. ನೀರಿನ ಸಮಸ್ಯೆ ಶೀಘ್ರ ಪರಿಹಾರಕ್ಕಾಗಿ ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡಬೇಕಾದ ಅನಿವಾರ್ಯ ಗ್ರಾ.ಪಂ.ಗಳದ್ದು. ಕುಡಿಯುವ ನೀರಿಗೆ ಕೊಳವೆ ಬಾವಿಯನ್ನೇ ಅವಲಂಬಿಸಿರುವ ಈ ಗ್ರಾಮ ಪಂಚಾಯತ್‌ಗಳಿಗೆ ಜಲಕ್ಷಾಮ ತಟ್ಟುವ ಭೀತಿ ಇದೆ. ಈಗಾಗಲೇ ಕೆಲವು ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಇನ್ನೂ ಕೆಲವೆಡೆ ನೀರಿನ ಹರಿವು ಕುಸಿತ ಕಂಡಿದೆ.

Advertisement

ಎಲ್ಲೆಲ್ಲಿ ಸಮಸ್ಯೆ?
ಮಳವೂರು 

ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕೆಂಜಾರು ಗ್ರಾಮದ ತತ್ತಾಡಿ, ಮರವೂರು ಗ್ರಾಮದ ಸಿದ್ಧಾರ್ಥ ನಗರ, ಗುಂಡಾವು ಪದವು, ಶಾಂತಿಗುಡ್ಡೆ, ಪಾಂಚಕೋಡಿಯಲ್ಲಿ ಈಗಾಗಲೇ ಸಮಸ್ಯೆ ಆರಂಭವಾಗಿದೆ. ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕುಸಿತದಿಂದ ಈ ಸಮಸ್ಯೆ ತಲೆದೋರಿದೆ. ಟ್ಯಾಂಕರ್‌ನಿಂದಲೇ ನೀರು ನೀಡಬೇಕಾದ ಸ್ಥಿತಿ ಇದೆ. 

ಬಜಪೆ
ಇಲ್ಲಿ ಒಂದನೇ ವಾರ್ಡ್‌ ಮತ್ತು ಮೂರನೇ ವಾರ್ಡ್‌ ಪ್ರದೇಶದಲ್ಲಿ ನೀರಿನ ಸಮಸ್ಯೆ ಇದೆ. ಒಂದನೇ ವಾರ್ಡ್‌ನಲ್ಲಿ ಸ್ವಾಮಿಲಪದವು, ದೊಡ್ಡಿಕಟ್ಟ,ಅಡ್ಕಬಾರೆ, ಮೂರನೇ ವಾರ್ಡ್‌ನಲ್ಲಿ ಬಜಪೆ ಪೇಟೆ ಪ್ರದೇಶ, ಕಲ್ಲಜರಿಯಲ್ಲಿ  ಕುಡಿಯುವ ನೀರಿನ ಸಮಸ್ಯೆ ಕಾಡಲಿದೆ. ಹದಿನೈದು ದಿನಗಳೊಳಗೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ. ಈ ಬಾರಿ ಹೊಸ ಕೊಳವೆಬಾವಿಯಿಂದ ಇಂಟರ್‌ ಲಿಂಕ್‌ ಮಾಡಿ ನೀರು ಪೂರೈಸಲಾಗುತ್ತಿದೆ. ಸಾರ್ವಜನಿಕರು ನೀರಿನ ಸದ್ಬಳಕೆ ಮಾಡಿದರೆ ಒಂದು ತಿಂಗಳು ಪರವಾಗಿಲ್ಲ. 

ಪೆರ್ಮುದೆ 
ಪಂಚಾಯತ್‌ ಸಮೀಪದ  ಕೊಳವೆ ಬಾವಿ ಬತ್ತಿದೆ. ಈಗಾಗಲೇ ನೀರಿನ ಸಮಸ್ಯೆ ಉಂಟಾಗಿದ್ದು, ಸುಮಾರು 80 ಮನೆಗಳು ಈ ವ್ಯಾಪ್ತಿಯಲ್ಲಿ ಇವೆ. ಕುತ್ತೆತ್ತೂರು ಗ್ರಾಮದ ಮೂಡುಪದವು ಮೆಣಸುಕಾಡಿನ ಕೊಳವೆ ಬಾವಿ ಬತ್ತಿದೆ.ಒಂದೇ ಕೊಳವೆ ಬಾವಿಯಿಂದ ಸುಮಾರು 180  ಮನೆಗಳಿಗೆ ನೀರು ಪೂರೈಸಲಾಗುತ್ತಿದೆ. ಈಗಾಗಲೇ ಕೊಳವೆ ಬಾವಿಯ ಅಂತರ್ಜಲ ಮಟ್ಟ ಕುಸಿದಿದೆ.

ಎಕ್ಕಾರು 
ತೆಂಕ ಎಕ್ಕಾರು ಗ್ರಾಮದ ರೋಯಲ್‌ ಬಸ್‌ ನಿಲ್ದಾಣ, ಹುಣ್ಸೆಕಟ್ಟೆ, ಕಾವರಬೆಟ್ಟು, ಪಲ್ಲದ ಕೋಡಿ, ಬಡಗ ಎಕ್ಕಾರು ಗ್ರಾಮದ ಬುಡುಗಾಡು,ಮೇಲೆಕ್ಕಾರು, ಮಚ್ಚಾರು ಪ್ರದೇಶದಲ್ಲಿ ಈಗಾಗಲೇ ನೀರಿನ ಅಭಾವ ಕಂಡು ಬಂದಿದೆ. 2 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಬುಡಿಗಾಡು ಪ್ರದೇಶಕ್ಕೆ ವಾರದೊಳಗೆ ಹೊಸ ಕೊಳವೆಬಾವಿ ಕೊರೆದು ನೀರು ನೀಡಲಾಗುವುದು. ಇನ್ನೂ ಮಳವೂರು ವೆಂಟೆಡ್‌ ಡ್ಯಾಂ ನೀರು ಬರದಿದ್ದರೆ ತಿಂಗಳೊಳಗೆ ನೀರಿನ ಕಠಿನ ಸಮಸ್ಯೆ ಬರಲಿದೆ.

Advertisement

ಮಳವೂರು ವೆಂಟೆಡ್‌ ಡ್ಯಾಂ ಕಾಮಗಾರಿ ಪೂರ್ಣಬಹುಗ್ರಾಮ ನೀರಿನ ಯೋಜನೆಯಾದ ಮಳವೂರು ವೆಂಟೆಡ್‌ ಡ್ಯಾಂನ ಕಾಮಗಾರಿ ಬಹುತೇಕ ಮುಗಿದಿದ್ದು, ಉದ್ಘಾಟನೆಗೆ ಸಚಿವರನ್ನು ಕಾಯಲಾಗುತ್ತಿದೆ. ಈಗಾಗಲೇ ಹಲವು ಬಾರಿ ಮುಂದೂಡಲಾಗಿದೆ. ಉದ್ಘಾಟನೆಗೆ ಇನ್ನೂ ದಿನ ಮುಂದೂಡಿದರೆ ನೀರಿನ ಸಮಸ್ಯೆ ಬರುವುದು ಗ್ರಾ.ಪಂ.ನ ಜನರಿಗೆ. ಈ ನಾಲ್ಕು ಗ್ರಾ.ಪಂ.ಗಳು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಬರುವಂಥವು.

Advertisement

Udayavani is now on Telegram. Click here to join our channel and stay updated with the latest news.

Next