Advertisement

2017 : ಮುನ್ನೂರ ಅರವತ್ತೈದರ ಹೊಸ ಕಟ್ಟು!

02:07 AM Jan 01, 2017 | Team Udayavani |

ಪ್ರತಿ ಹೊಸತಿಗೂ ನಾನಾ ಅರ್ಥ; ಹಳತಿಗೆ ಒಂದೇ ಅರ್ಥ. ಮತ್ತೂಂದು ಹೊಸ ವರ್ಷ ಬಂದಿದೆ. ನಿರೀಕ್ಷೆಗಳ ಮೂಟೆ ನಮ್ಮೆದುರು ಬಿದ್ದಿರುವಾಗ ಎಷ್ಟು ಬೇಕೋ ಅಷ್ಟನ್ನು ಆಯ್ದುಕೊಂಡು ಅವಕಾಶಗಳಾಗಿಸಿಕೊಳ್ಳಬಹುದು. ಕ್ಯಾಶ್‌ ಲೆಸ್‌ ದುನಿಯಾದಲ್ಲಿ ಅವಕಾಶಗಳನ್ನಷ್ಟೇ ನಗದೀಕರಿಸಿಕೊಳ್ಳಬಹುದು !

Advertisement

ಮುನ್ನೂರ ಅರವತ್ತೈದು ದಿನಗಳ ಒಂದು ಕಟ್ಟನ್ನು ವಾಪಸು ಕಟ್ಟಿ ಬದಿಗಿರಿಸಿ, ಎದುರಿಗಿರುವ ಹೊಸ  ಕಟ್ಟನ್ನು ಬಿಡಿಸಿ ಹರಡಿಕೊಂಡಿರುವ ಕ್ಷಣವಿದು. ಇದರಲ್ಲೂ ಅಷ್ಟೇ ಎಲೆಗಳಿವೆ. ಮೊದಲ ಎಲೆಯ ಆರಂಭ ಹೀಗೆ-” ಪರಿಶ್ರಮದ ಪರಿಮಳಕ್ಕೆ ಮಾತ್ರ ಜಗತ್ತನ್ನು ಸುತ್ತುವ ಸಾಮರ್ಥ್ಯವಿರುತ್ತದೆ’. ಪ್ರತಿ ದಿನಕ್ಕೂ ಇಂಥದೊಂದು ಜಗತ್ತನ್ನು ಸುತ್ತುವ ಹಂಬಲವಿರುತ್ತದೆ; ಪರಿಮಳವಾಗಿ ರೂಪುಗೊಳ್ಳುವ ತವಕವಿರುತ್ತದೆ. ಅದು ಸಾಧ್ಯವಾಗುವುದು ನಮ್ಮ ಸಾಧ್ಯತೆಗಳ ಕುಲುಮೆಯಲ್ಲಿ. ನಿತ್ಯ ಬರುವ ಸೂರ್ಯನಿಗೆ ಕ್ಯಾಲೆಂಡರ್‌ ಇರುವುದಿಲ್ಲವಂತೆ. ಹಾಗೆಯೇ ಸಾಧನೆಗೆ ಹೊರಟವನಿಗೆ ದಿನಗಳ ಲೆಕ್ಕವಾಗಲೀ, ಗಂಟೆಗಳ ತಕರಾರು ಆಗಲೀ ಇರದು. ಅಂಥದೇ ಪ್ರೇರಣೆಯಲ್ಲಿ ಮತ್ತೂಂದು ವರ್ಷವನ್ನು ಎದುರುಗೊಳ್ಳುತ್ತಿದ್ದೇವೆ. 

ಸಂಭ್ರಮವನ್ನು ಕಟ್ಟಿಕೊಂಡು ಹಾರಲು ಮತ್ತಷ್ಟು ದಿನಗಳೆಂಬುದು ಧನಾತ್ಮಕ ದೃಷ್ಟಿಕೋನ. ಜನವರಿಯನ್ನು ಹೇಗೂ ನೋಡಬಹುದು. ಚೈತ್ರ ಬರುತ್ತಿದೆ, ವಸಂತ ಬರುತ್ತಿದ್ದಾನೆ, ಮಾವು ಸಂಭ್ರಮಿಸುತ್ತದೆ, ಕೋಗಿಲೆಯ ದನಿ ಕೇಳುತ್ತದೆ ಎಂದೂ ಹೇಳುವುದು ಆಶಾವಾದಿ. ಇನ್ನು ಬರುವುದು ಬೇಸಗೆ. ನೀರಿಗೆ ಕಷ್ಟ, ಸಿಕ್ಕಾಪಟ್ಟೆ ಬಿಸಿಲು, ಹೇಗಪ್ಪಾ ಕಳೆಯೋದು ಎಂಬುವವನು ವಾಸ್ತವವಾದಿ. ಬದುಕಿಗೆ ಎರಡೂ ಬೇಕು. ಯಾವುದರ ಮೇಲೂ ಅತಿಯಾಗಿ ಅವಲಂಬಿಸದೇ ಸಂದರ್ಭಗಳಿಗೆ ತನ್ನಲ್ಲೇ ಉತ್ತರ ಕಂಡುಕೊಳ್ಳುವವನದು ಬದುಕಿನ ಹಾದಿ !

2016 – ಹತ್ತಾರು ವೈವಿಧ್ಯತೆಗಳನ್ನು ನಮ್ಮ ಬದುಕಿಗೆ ತುಂಬಿತು. ತಂತ್ರಜ್ಞಾನದಿಂದ ಆರಂಭಿಸಿ ಎಲ್ಲದರಲ್ಲೂ ಸೊಗಸನ್ನು ತುಂಬಿದ್ದು ಸುಳ್ಳಲ್ಲ. 2017 ರಲ್ಲೂ ಅಂಥದೇ ನಿರೀಕ್ಷೆಯಿದೆ.  ಕಟ್ಟಿನಲ್ಲಿ ಎಲ್ಲವೂ ಇರುತ್ತವೆ. ದುಃಖವೂ ಇರುತ್ತದೆ, ಸುಖವೂ ಇರುತ್ತದೆ. ನಾವು ಅದನ್ನು ವಿಶ್ಲೇಷಿಸಲು ತೆಗೆದುಕೊಳ್ಳುವ ಬದಿ ಎಲ್ಲವನ್ನೂ ಹೇಳುತ್ತದೆ. 

ಒಂದು ಮಗು ಅಪ್ಪನಲ್ಲಿ ಗಲಾಟೆ ಮಾಡಿ ನೂರು ಪುಗ್ಗೆಗಳನ್ನು ತರಿಸಿಕೊಂಡಿತು. ಮನೆಯಲ್ಲಿ ಎಲ್ಲವನ್ನೂ ಕಟ್ಟಬೇಕೆಂಬ ಹಠ ಅದರದ್ದು. ಹತ್ತಾರು ಬಣ್ಣದ ಪುಗ್ಗೆ ಊದಿ ಊದಿ ಕಟ್ಟುತ್ತಾ ಹೋದರು. ಮಧ್ಯೆ ಒಂದು ಒಡೆದುಹೋಯಿತು. ಅದಾದ ಎರಡು ಕ್ಷಣದಲ್ಲಿ ಮತ್ತೂಂದು ಒಡೆದು ಹೋಯಿತು. ಮಗು, ‘ಛೇ’ ಎನ್ನುವಂತೆ ಮುಖ ಮಾಡಿತು. ಆಗ ಅಪ್ಪನೆಂದ, ‘ಒಡೆದಿದ್ದು ಬರೀ ಎರಡು..ಇನ್ನೂ ತೊಂಬತ್ತೆಂಟು ಚೆನ್ನಾಗಿವೆ’ ಎಂದನಂತೆ. ಹಳೆ ವರ್ಷದಲ್ಲಿ ಹೀಗೆ ಒಡೆದು ಹೋದ ಪುಗ್ಗೆಗಳು ಒಂದೆರಡಿರಬಹುದು. ಗಾಳಿ ಊದಿಕೊಂಡು ಮನೆಗೆ ಬಣ್ಣ ತುಂಬಿರುವ ತೊಂಬತ್ತೆಂಟು ಚೆನ್ನಾಗಿಯೇ ಇವೆಯಲ್ಲ ! 2017 ರಲ್ಲಿ ಆ ಸಂಖ್ಯೆ ತೊಂಬತ್ತೂಂಬತ್ತಾಗಲಿ ಎಂದು ಬಯಸೋಣ.

Advertisement

ನಿತ್ಯವೂ ಬೆಳಗ್ಗೆಗೆ ರಾತ್ರಿಯಾಗುತ್ತೇನಲ್ಲಾ ಎಂಬ ಆತಂಕ; ರಾತ್ರಿಗೆ ಬೆಳಗ್ಗೆಯಾಗಿಬಿಡುವೆ ಎಂಬ ಸಂಭ್ರಮ. ಇಡೀ ದಿನದ ಗಂಟಿನಲ್ಲಿ ಎರಡೂ ಇದೆ. ಆತಂಕ ಮತ್ತು ಸಂಭ್ರಮ. ಖುಷಿಯ ಸಂಗತಿಯೆಂದರೆ ರಾತ್ರಿಯಾದ ಮೇಲೆ ಬೆಳಗ್ಗೆ ಬರುವ ಸೊಗಸು. ಅಲ್ಲಿಗೆ ಸಂಭ್ರಮದ ಮೆರವಣಿಗೆಗೆ ಕೊನೆ ಇಲ್ಲ.

ಹೊಸ ವರ್ಷದ ಶುಭಾಶಯಗಳು…

Advertisement

Udayavani is now on Telegram. Click here to join our channel and stay updated with the latest news.

Next