Advertisement

ಟೈಟಲ್‌ ಸಮಸ್ಯೆ ಎದುರಿಸಿದ ‘ಗುಡ್ಡೆದ ಭೂತ’ಮನೋರಂಜನೆ ನೀಡಲು ಸಿದ್ಧ

01:41 AM Jan 07, 2017 | Karthik A |

ಹೊಸ ವರ್ಷದ ಮೊದಲ ಚಿತ್ರವಾಗಿ ಹಾರರ್‌ ಚಿತ್ರವೊಂದು ತುಳುನಾಡಿಗೆ ಎಂಟ್ರಿ ಪಡೆಯುತ್ತಿದೆ. ಟೈಟಲ್‌ ಸಮಸ್ಯೆಯ ಬಳಿಕ ಫಿಲ್ಮ್ ಛೇಂಬರನ್ನೇ ಬದಲಿಸಿಕೊಂಡು ಕೋಸ್ಟಲ್‌ವುಡ್‌ಗೆ ಕಾಲಿಡುತ್ತಿರುವ ಮೊದಲ ಚಿತ್ರ ಎಂಬ ಹೆಗ್ಗಳಿಕೆಯೂ ‘ಗುಡ್ಡೆದ ಭೂತ’ದ ಮೇಲಿದೆ. ಹೀಗಾಗಿ ಈ ಚಿತ್ರದ ಮೇಲೆ ಜನರ ಭರವಸೆ ಹೆಚ್ಚಿದೆ. ಕಳೆದ ವರ್ಷಾಂತ್ಯದಲ್ಲಿಯೇ ತೆರೆಗೆ ಬರಲಿದೆ ಎಂದು ಸುದ್ದಿಯಲ್ಲಿದ್ದ ಭೂತ ಜ. 6ರಂದು ಬಿಡುಗಡೆಗೆ ಸಿದ್ಧತೆ ನಡೆಸಿದೆ. ಆದರೆ ಪ್ರತಿ ಚಿತ್ರಗಳಿಗೂ ಎದುರಾಗುವಂತೆ ಈ ಚಿತ್ರಕ್ಕೂ ಥಿಯೇಟರ್‌ ಸಮಸ್ಯೆ ಎದುರಾಗಿದ್ದು, ಆರಂಭದಲ್ಲಿ ಕೆಲವೇ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

Advertisement

ತಮಿಳು ಚಿತ್ರರಂಗದಲ್ಲಿ ದುಡಿದ ಸಹ ನಿರ್ದೇಶಕನೊಬ್ಬ ಮೊದಲ ಬಾರಿಗೆ ತುಳು ಚಿತ್ರವನ್ನು ನಿರ್ದೇಶನ ಮಾಡಿರುವುದು ಇದರ ವಿಶೇಷತೆಯಾಗಿದೆ. ಗುಡ್ಡೆದ ಭೂತ ಚಿತ್ರದಲ್ಲಿ ನಾಯಕನಾಗಿ ಸಂದೀಪ್‌ ಭಕ್ತ, ನಾಯಕಿಯಾಗಿ ಅಶ್ವಿ‌ತಾ ನಾಯಕ್‌, ರಂಗಭೂಮಿ ಖ್ಯಾತ ಕಲಾವಿದ ದಿನೇಶ್‌ ಅತ್ತಾವರ್‌ ಸ್ತ್ರೀ ಪಾತ್ರದಲ್ಲಿ, ಕಲಾವಿದ ಚಿದಾನಂದ ಕಾಮತ್‌ ಕಾಸರಗೋಡು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸುಭಾಶ್‌ ಬೋಳಾರ್‌ ಸಂಗೀತ, ಆರ್‌.ಕೆ. ಅಂತೋನಿ ಹಾಗೂ ಸುರೇಂದ್ರ ಪಣಿಯೂರು ಛಾಯಾಗ್ರಹಣ ಮಾಡಿದ್ದಾರೆ. 

ಟೈಟಲ್‌ ಸಮಸ್ಯೆ ಏನು?
ತುಳುವಿನಲ್ಲಿ ಸಿದ್ಧವಾಗಿರುವ ‘ಗುಡ್ಡೆದ ಭೂತ’ಕ್ಕೆ ಕನ್ನಡದ ‘ಗುಡ್ಡದ ಭೂತ’ ತೊಂದರೆ ನೀಡಿತ್ತು. ಅಂದರೆ ಬೆಂಗಳೂರಿನ ಫಿಲ್ಮ್ ಛೇಂಬರ್‌ನಲ್ಲಿ ‘ಗುಡ್ಡದ ಭೂತ’ 2 ವರ್ಷಗಳ ಮೊದಲು ರಿಜಿಸ್ಟರ್‌ ಆಗಿದೆ. ಆದರೆ ಈ ಚಿತ್ರದ ಶೂಟಿಂಗ್‌ ಕಾರ್ಯ ಇನ್ನೂ ಆರಂಭಗೊಂಡಿಲ್ಲ. ಹೀಗಾಗಿ ‘ಗುಡ್ಡೆದ ಭೂತ’ ಚಿತ್ರತಂಡ ಬೆಂಗಳೂರಿನ ಛೇಂಬರ್‌ಗೆ ಅರ್ಜಿ ಸಲ್ಲಿಸಿದಾಗ ಛೇಂಬರ್‌ನವರು ಕನ್ನಡ ಚಿತ್ರ ತಂಡದಿಂದ ಒಂದು ಲೆಟರ್‌ ತರುವಂತೆ ಸೂಚಿಸಿದ್ದರು. ಆದರೆ ಅದನ್ನು ಕನ್ನಡ ಚಿತ್ರ ತಂಡ ನಿರಾಕರಿಸಿತ್ತು. ಟೈಟಲ್‌ ಬದಲಾಯಿಸುವಂತೆ ಛೇಂಬರ್‌ ಹೇಳಿದಾಗ ತುಳು ಚಿತ್ರತಂಡ ‘ತುಳುನಾಡ ಗುಡ್ಡೆದ ಭೂತ’, ‘ನಮ್ಮೂರ್ದ ಗುಡ್ಡೆದ ಭೂತ’ ಹಾಗೂ ‘ಗುಡ್ಡೆದ ಭೂತ ಉಂಡುಗೆ’ ಎಂಬ ಹೆಸರುಗಳನ್ನು ನೀಡಿತ್ತು. ಅದಕ್ಕೂ ಒಪ್ಪಿಗೆ ಸಿಗದಿದ್ದಾಗ ಹುಬ್ಬಳ್ಳಿ ಫಿಲ್ಮ್ ಛೇಂಬರ್‌ಗೆ ಶಿಫ್ಟ್‌ ಮಾಡಲಾಗಿತ್ತು. ಹಾರರ್‌ ಚಿತ್ರವಾದ ಚಿತ್ರಕ್ಕೆ ಕಾರಣ ಯು/ಎ ಸರ್ಟಿಫಿಕೇಟ್‌ ಲಭಿಸಿದ್ದು, ಈ ಸರ್ಟಿಫಿಕೇಟ್‌ ಪಡೆದುಕೊಂಡ 2ನೇ ತುಳುಚಿತ್ರ ಎನಿಸಲಿದೆ.  

ಹುಬ್ಬಳ್ಳಿಯಲ್ಲಿ ರಿಲೀಸ್‌!
ಹುಬ್ಬಳ್ಳಿಯ ತುಳು ಚಿತ್ರಪ್ರೇಮಿಗಳಿಗೆ ‘ಗುಡ್ಡೆದ ಭೂತ’ ಒಂದು ಸಂತಸದ ಸುದ್ದಿ ನೀಡಲಿದೆ. ಮುಂದಿನ ವಾರ ಹುಬ್ಬಳ್ಳಿಯಲ್ಲೂ ಚಿತ್ರ ತೆರೆಕಾಣಲಿದ್ದು, ಇಲ್ಲಿ ತೆರೆ ಕಂಡ ಮೊದಲ ಚಿತ್ರ ಎನಿಸಲಿದೆ. ಈ ವಾರ ಮಂಗಳೂರು, ಪುತ್ತೂರು, ಮೂಡಬಿದಿರೆ, ಕಾರ್ಕಳಗಳಲ್ಲಿ ಬಿಡುಗಡೆಯಾಗಲಿದೆ. ಕರಾವಳಿಯ ಉಳಿದೆಡೆ ಮುಂದಿನ ವಾರವೇ ಚಿತ್ರ ತೆರೆ ಕಾರಣಲಿದೆ. 

ಫೆಸ್ಟ್‌ನಲ್ಲಿ ಪ್ರದರ್ಶನ
ಈ ಚಿತ್ರವನ್ನು ಅನೇಕ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟ್‌ಗಳಿಗೆ ಕಳುಹಿಸಲಾಗಿದೆ. ಪಾಕಿಸ್ಥಾನದಲ್ಲಿ ಜನವರಿಯಲ್ಲಿ ನಡೆಯುವ ಎಫ್‌ಎಲ್‌ಐಯುಎಂಎಸ್‌ ಚಿತ್ರೋತ್ಸವದಲ್ಲಿ ಸ್ಥಾನ ಪಡೆದುಕೊಂಡಿದೆ. ರಷ್ಯಾದ ಲ್ಯಾಕ್‌ರೋನೋ, ಲಂಡನ್‌ ಫಿಲ್ಮ್ ಫೆಸ್ಟಿವಲ್‌ ಹಾಗೂ ಸ್ವಿಜರ್‌ಲ್ಯಾಂಡ್‌ ಫಿಲ್ಮ್ಫೆ ಸ್ಟಿವಲ್‌ನಲ್ಲೂ ಸ್ಥಾನ ಪಡೆದಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿರುವ ಈ ಚಿತ್ರ ಕೋಸ್ಟಲ್‌ವುಡ್‌ನ‌ಲ್ಲಿ ಸದ್ದು ಮಾಡುವ ಲಕ್ಷಣಗಳು ಕಂಡು ಬರುತ್ತಿದೆ. ಚಿತ್ರವು ಒಟ್ಟು 2.17 ಗಂಟೆ ಸಮಯದ್ದಾಗಿದ್ದು, ಫೆಸ್ಟ್‌ನಲ್ಲಿ ಭಾಗವಹಿಸಲು ಅನಗತ್ಯ ದೃಶ್ಯಗಳನ್ನು ತೆಗೆದು ಹಾಕಿ 1.40 ಗಂಟೆ ಸಮಯದ ಚಿತ್ರವನ್ನು ಮಾತ್ರ ಕಳುಹಿಸಲಾಗಿದೆ. ಆದರೆ ಚಿತ್ರಮಂದಿರಗಳಲ್ಲಿ ಪೂರ್ತಿ 2.17 ಗಂಟೆಗಳ ಚಿತ್ರ ಪ್ರದರ್ಶನವನ್ನು ಕಾಣಲಿದೆ. 

Advertisement

ಡಿಫರೆಂಟ್‌ ಆಗಿ ಮೂಡಿಬಂದಿದೆ
ತುಳುವಿನಲ್ಲಿ ಮೊದಲ ಪ್ರಯತ್ನ ಮಾಡಿದ್ದೇವೆ. ಈ ಹಿಂದೆ ತಮಿಳು ಚಿತ್ರರಂಗದಲ್ಲಿ ದುಡಿದ ಅನುಭವದಿಂದ ಹೊಸ ಪ್ರಯತ್ನದ ಮೂಲಕ ಚಿತ್ರ ನಿರ್ಮಿಸಿದ್ದೇವೆ. ಕೊಂಚ ಡಿಫರೆಂಟ್‌ ಆಗಿ ಚಿತ್ರ ಮೂಡಿಬಂದಿದ್ದು, ಚಿತ್ರಪ್ರೇಮಿಗಳಿಗೆ ಹೊಸ ಅನುಭವವನ್ನು ನೀಡಲಿದೆ. ಹೀಗಾಗಿ ‘ಗುಡ್ಡೆದ ಭೂತ’ವನ್ನು ಪ್ರೇಕ್ಷಕರು ಬೆಂಬಲಿಸುವ ನಿರೀಕ್ಷೆ ಇದೆ. ಜತೆಗೆ ಕನ್ನಡದಲ್ಲಿಯೂ ಚಿತ್ರವೊಂದನ್ನು ತೆಗೆಯುವ ಯೋಜನೆ ಇದೆ.  
– ಸಂದೀಪ್‌ ಪಣಿಯೂರು ನಿರ್ದೇಶಕರು, ‘ಗುಡ್ಡೆದ ಭೂತ’ ತುಳು ಚಿತ್ರ

ಬಂಟ್ವಾಳ: ಥಿಯೇಟರ್‌ ಇಲ್ಲ!
ತುಳು ಚಿತ್ರಗಳಿಗೆ ದ.ಕ. ಹಾಗೂ ಉಡುಪಿ ಜಿಲ್ಲೆಗಳೇ ದೊಡ್ಡ ಆದಾಯವನ್ನು ನೀಡುತ್ತಿವೆ. ಪ್ರಸ್ತುತ ದ.ಕ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಚಿತ್ರ ಮಂದಿರಗಳಿವೆ. ಆದರೆ ಬಂಟ್ವಾಳದ ಬಿ.ಸಿ. ರೋಡಿನ ಚಿತ್ರ ಮಂದಿರಕ್ಕೆ ಕಾನೂನು ತೊಡಕು ಎದುರಾಗಿರುವುದು ತುಳು ಚಿತ್ರರಂಗಕ್ಕೆ ದೊಡ್ಡ ಹೊಡೆತವನ್ನು ನೀಡುತ್ತಿದೆ. ಈ ಹಿಂದೆ ಬಿಡುಗಡೆಗೊಂಡ ತುಳುವಿನ 3 ಚಿತ್ರಗಳು ಬಂಟ್ವಾಳದಲ್ಲಿ ಬಿಡುಗಡೆಯಾಗಿಲ್ಲ. ಹೀಗಾಗಿ ಅದು ಚಿತ್ರ ತಂಡಕ್ಕೆ ಪೆಟ್ಟು ನೀಡಿತ್ತು. ಮುಂದಿನ ಚಿತ್ರಗಳಿಗೂ ಇದು ಹೊಡೆತ ನೀಡಲಿದೆ. ಥಿಯೇಟರ್‌ ಸಮಸ್ಯೆಗಳನ್ನು ಎದುರಿಸುತ್ತಿರುವ ತುಳು ಚಿತ್ರರಂಗಕ್ಕೆ ಇದು ಕೂಡ ದೊಡ್ಡ ತಲೆನೋವನ್ನು ಸೃಷ್ಟಿಸಿದೆ.

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next