Advertisement

ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್‌ ಕಲಾಂ ಜತೆ ಕಾರ್ಯನಿರ್ವಹಿಸಿದ್ದ ಕನ್ನಡದ ವಿಜ್ಞಾನಿ ಇನ್ನಿಲ್ಲ

06:48 PM Jul 02, 2021 | Team Udayavani |

ಬೆಂಗಳೂರು: ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್‌ ಕಲಾಂ ಅವರ ಜತೆಗೆ ಕಾರ್ಯನಿರ್ವಹಿಸಿದ್ದ ರಕ್ಷಣಾ ಇಲಾಖೆಯ ಮಾಜಿ ವಿಜ್ಞಾನಿ ಹಾಗೂ ಕನ್ನಡದ ಖ್ಯಾತ ವಿಜ್ಞಾನ ಬರಹಗಾರ ಸುಧೀಂದ್ರ ಹಾಲ್ದೊಡ್ಡೇರಿ (61)ಇನ್ನಿಲ್ಲ.

Advertisement

ಹೃದಯಾಘಾತದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆಷ್ಟೇ ಜೆ.ಪಿ.ನಗರದ 1ನೇ ಹಂತದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಶುಕ್ರವಾರ ಮಧ್ಯಾಹ್ನ 1ಗಂಟೆ ವೇಳೆ ಚಿಕಿತ್ಸೆ ಫ‌ಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪತ್ನಿ ಸುಮಾ ಮತ್ತು ಪುತ್ರಿಯರಾದ ಮೇಘನಾ, ಮಾಧುರ್ಯ ಅವರನ್ನು ಅಗಲಿದ್ದಾರೆ. ಸುಧೀಂದ್ರ ಹಾಲ್ದೊಡ್ಡೇರಿ ಅವರ ಮೃತ ದೇಹವನ್ನು ಕುಟುಂಬಸ್ಥರು ಬೆಂಗಳೂರು ಮೆಡಿಕಲ್‌ ಕಾಲೇಜಿಗೆ ದಾನಮಾಡಿದ್ದಾರೆ ಎಂದು ಕುಟುಂಬದ ಆಪ್ತರು ತಿಳಿಸಿದ್ದಾರೆ.

ಜೂ.21ರಂದು ಪುತ್ರಿಯನ್ನು ಬನಶಂಕರಿಯ ಇಟ್ಟುಮಡುವಿನಲ್ಲಿರುವ ಅಳಿಯನ ಮನೆಗೆ ಬಿಟ್ಟು ಕಾರಿನಲ್ಲಿ ಪತ್ನಿಯೊಂದಿಗೆ ರಾಗಿಗುಡ್ಡದ ಸಮೀಪ ಇರುವ ತಮ್ಮ ನಿವಾಸಕ್ಕೆ ಮರಳುತ್ತಿದ್ದಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಿದುಳು ನಿಷ್ಕ್ರಿಯವಾಗುವ ಸ್ಥಿತಿಯಲ್ಲಿದ್ದ ಕಾರಣ, ಕೆಲವು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.

ಇದನ್ನೂ ಓದಿ : ನೌಕರಿ ತೊರೆದು ಸಾವಯವ ರೈತರಾದ ಎಂಜಿನಿಯರಿಂಗ್‌ ಕಾಲೇಜು ಪ್ರಾಚಾರ್ಯ

ಬಾಹ್ಯಕಾಶಕ್ಷೇತ್ರದ ಬಗ್ಗೆ ಅಪಾರ ಒಲವು ಹೊಂದಿದ್ದ ಸುಧೀಂದ್ರ ಹಾಲ್ದೊಡ್ಡೇರಿ ಅವರು ಅತ್ಯಂತ ಕ್ಲಿಷ್ಟಕರವಾದ ವಿಜ್ಞಾನದ ವಿಷಯಗಳನ್ನು ತುಂಬಾ ಸರಳವಾಗಿ ಬರೆಯುವ ಮೂಲಕ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದರು.

Advertisement

ಡಾ.ಎಪಿಜೆ ಅಬ್ದುಲ್‌ ಕಲಾಂ ಜತೆಗೆ ಕೆಲಸ: ಏರೋಸ್ಪೇಸ್‌ ಎಂಜಿನಿಯರಿಂಗ್‌ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದ ಸುಧೀಂದ್ರ ಹಾಲೊªಡ್ಡೇರಿ ಅವರು ಕೇಂದ್ರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ದಲ್ಲಿ ವಿಜ್ಞಾನಿಯಾಗಿ 22 ಕಾರ್ಯನಿರ್ವಹಿಸಿದ್ದರು. ಡಿಆರ್‌ಡಿಒದಲ್ಲಿದ್ದ ವೇಳೆ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್‌ ಕಲಾಂ ಜತೆಗೆ ಕೆಲಸ ನಿರ್ವಹಿಸಿದ್ದ ಕೀರ್ತಿ ಇವರದ್ದಾಗಿದೆ ಎಂದು ಸುಧೀಂದ್ರ ಹಾಲ್ದೊಡ್ಡೇರಿ ಅವರ ಸಹೋದ್ಯೋಗಿ ಜಿ.ಪಿ.ರಾಮಣ್ಣ ತಿಳಿಸಿದ್ದಾರೆ.
ಎಚ್‌ಎಎಲ್‌ನಲ್ಲಿ ಕೆಲಸ ನಿರ್ವಹಿಸಿದ್ದ ಅವರು ತೇಜಸ್‌, ಜಾಗ್ವಾರ್‌, ಕಿರಣ್‌ ಹಾಗೂ ಚೀತಾ ವಿಮಾನ ಹಾಗೂ ಸೀ ಕಿಂಗ್‌ ಹೆಲಿಕಾಪ್ಟರ್‌ ಎಂಜಿನ್‌ ಅಭಿವೃದ್ಧಿಗೆ ಕೊಡುಗೆ ನೀಡಿದ್ದರು ಎಂದು ಹೇಳಿದ್ದಾರೆ.

ಎತ್ತರದ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಹೆಲಿಕಾಪ್ಟರ್‌ಗಳ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವಾಯುಪಡೆ ರಚಿಸಿದ್ದ ತಾಂತ್ರಿಕ ಸಮಿತಿಯ ಸದಸ್ಯರಾಗಿದ್ದರು. ರಾಜ್ಯ ಸರ್ಕಾರದ “ಅತ್ಯುತ್ತಮ ವಿಜ್ಞಾನ ಸಂವಹನಕಾರ’ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದರು.ಸ್ವಯಂ ನಿವೃತ್ತ ಪಡೆದ ಬಳಿಕ ಅವರು ಜೈನ್‌ ಹಾಗೂ ಅಲೆಯನ್ಸ್‌ ವಿವಿಗಳಲ್ಲಿ ಏರೋಸ್ಪೇಸ್‌ ಎಂಜಿನಿಯರ್‌ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ಗಣ್ಯರ ಕಂಬನಿ:
ವಿಜ್ಞಾನಿ ಸುಧೀಂದ್ರ ಹಾಲೊªಡ್ಡೇರಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ವೈಜ್ಞಾನಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದ ಸುಧೀಂದ್ರ ಹಾಲೊªಡ್ಡೇರಿ ಅವರಿಗೆ ಬರೆಯುವ ಕಲೆ ಕರಗತವಾಗಿತ್ತು ಅವರ ನಿಧನದಿಂದ ಕನ್ನಡ ಅಕ್ಷರಲೋಕ ಅತ್ಯುತ್ತಮ ಲೇಖಕರನ್ನು ಕಳೆದುಕೊಂಡಿದೆ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next