Advertisement

ವೇದ-ಆಯುಷ್ಯವನ್ನು ಒರೆಗೆ ಹಚ್ಚಿದ ವೇದಜ್ಞ

11:29 PM Feb 25, 2023 | Team Udayavani |

“ಸರ್‌ ನೀವು ಇನ್ನು ಎಷ್ಟು ವರ್ಷ ಬದುಕುತ್ತೀರಾ?’ -ಪತ್ರಕರ್ತೆಯೊಬ್ಬರ ಪ್ರಶ್ನೆ.”ವೇದಗಳ ಪ್ರಕಾರ ಮನುಷ್ಯನ ಅಂದಾಜು ವಯಸ್ಸು 120 ವರ್ಷ. ನಾನೇನಾದ್ರು 120 ವರ್ಷಗಳಿಗಿಂತ ಮೊದಲು ಸತ್ತರೆ ನಾನು ವೇದಗಳು ಹೇಳುವಂತೆ ಬದುಕಿಲ್ಲ ಎಂದು ತಿಳಿ’- ವೇದಜ್ಞನ ಉತ್ತರ.

Advertisement

ವೇದಜ್ಞನಿಗೆ 112 ವರ್ಷ. “ಇನ್ನೂ ಎಂಟು ವರ್ಷ ಇವರು ಇರುತ್ತಾರಾ?-ಪತ್ರಕರ್ತೆಯ ಮನಸ್ಸಿನಲ್ಲಿ ಈ ಲೆಕ್ಕಾಚಾರ ನಡೆಯುತ್ತಿತ್ತು.

1897ರ ಎಪ್ರಿಲ್‌ 20ರಂದು ಜನಿಸಿದ ವೇದಜ್ಞ 2020ರ ಫೆ. 27ರಂದು ನಿಧನ ಹೊಂದುವಾಗ ಬರೋಬ್ಬರಿ 122 ವರ್ಷ 313 ದಿನಗಳು. ಇಹಲೋಕ ತ್ಯಜಿಸಿ ಮೂರು ವರ್ಷಗಳಾಗುತ್ತಿವೆ. ನಿಧನ ಹೊಂದಿದ ದಿನವೇ ಆ ಪತ್ರಕರ್ತೆ 10 ವರ್ಷಗಳ ಹಿಂದಿನ ಸಂದರ್ಶನದ ಆ ವಾಕ್ಯವನ್ನು ನೆನಪಿಸಿಕೊಂಡು “ಯಾರಲ್ಲೂ ಕೇಳಬಾರದ, ಯಾರೂ ಉತ್ತರಿಸಲಾಗದ ಪ್ರಶ್ನೆ ಕೇಳಿದೆ. ಕಡ್ಡಿ ಮುರಿದಂತೆ ಉತ್ತರಿಸಿದ್ದರು. ನಾನು ನಂಬಲೇ ಬೇಕಾಯಿತು’ ಎಂದು ಉದ್ಗರಿಸಿದರು.

ಪುರಾಣಗಳಲ್ಲಿ ಇಂತಹ ದೃಷ್ಟಾಂತಗಳಿದ್ದರೂ ಅದೆಲ್ಲವನ್ನು ತಿರಸ್ಕರಿಸಲು ಸೀಮಿತ ಎದೆಗಾರಿಕೆ ಸಾಕು. ಸಂದರ್ಶನ ನಡೆಸಿದವರು ಟಿವಿ ಚಾನೆಲ್‌ನ ಹಿರಿಯ ವರದಿಗಾರ್ತಿ ರಜನಿ ರಾವ್‌. ಉತ್ತರಿಸಿದವರು ಬೆಂಗಳೂರಿನ ಪಂಡಿತ್‌ ಸುಧಾಕರ ಚತುರ್ವೇದಿ.

“ಎಲ್ಲಿಯಾದರೂ ವೇದಗಳು ಜಾತೀಯತೆಯನ್ನು ಪ್ರತಿಪಾದಿಸಿದ್ದರೆ ತೋರಿಸಲಿ’ ಎಂದು ಗಾಂಧೀಜಿ ಸಹಿತ ಹಲವರಿಗೆ ಸವಾಲು ಹಾಕಿದವರು. ದಯಾನಂದ ಸರಸ್ವತಿಯವರ ಆರ್ಯಸಮಾಜದ ಮೂಲಕ ಜೀವನದುದ್ದಕ್ಕೂ ವೇದಗಳ ಮೇಲಿದ್ದ ಈ ಅಪಪ್ರಚಾರವನ್ನು ಸಾರಾಸಗಟಾಗಿ ಅಲ್ಲಗಳೆಯುತ್ತ, ಮಾತಿನಂತೆ ನಡೆದು ತೋರಿದವರು. ಜಾತಿ ತಾರತಮ್ಯವಿಲ್ಲದೆ ಆಸಕ್ತರಿಗೆ ವೇದ ಕಲಿಸಿದರು. ವೇದ ಪಂಡಿತರೆನಿಸಿಕೊಂಡವರೂ ಸಹಿತ ವೇದಪರವಾದಿಗಳು-ವೇದವಿರೋಧಿಗಳು- ಉದಾಸೀನರು ಇವರೆಲ್ಲರೂ ಚತುರ್ವೇದಿಯವರಿಂದ ಕಲಿಯುವುದಿದೆ, ಯಾವುದದು? ಜೀವನವೇ ಯಜ್ಞ! ಪತ್ರಕರ್ತೆಗೆ ಕೊಟ್ಟ ಉತ್ತರದಲ್ಲಿ “120 ವರ್ಷ ಬದುಕದೆ ಇದ್ದರೆ ನನ್ನ ದೋಷವೇ ವಿನಾ ವೇದಗಳ ದೋಷವಲ್ಲ’ ಎಂಬ ಅಭಿಪ್ರಾಯವೂ ಇತ್ತು.

Advertisement

ತುಮಕೂರು ಕ್ಯಾತ್ಸಂದ್ರದವರಾದ ಸುಧಾಕರ್‌ ಬಾಲ್ಯದಲ್ಲಿಯೇ ಊರು ಬಿಟ್ಟು ಹರಿದ್ವಾರದ ಕಾಂಗರಿ ಗುರುಕುಲದಲ್ಲಿ ನಾಲ್ಕೂ ವೇದಗಳನ್ನು ಅಧ್ಯಯನ ನಡೆಸಿ ನಿಜಾರ್ಥದಲ್ಲಿ ಚತುರ್ವೇದಿ ಎನಿಸಿಕೊಂಡರು, ಕುಲನಾಮವಲ್ಲ. 1915ರಲ್ಲಿ ಗುರುಕುಲಕ್ಕೆ ಗಾಂಧೀಜಿ ಭೇಟಿ ನೀಡಿದಾಗ ಪರಿಚಯವಾಯಿತು. ಹಿಂದಿ, ಸಂಸ್ಕೃತ, ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡಬಲ್ಲವರಾದ ಕಾರಣ ಗಾಂಧೀಜಿಯವರಿಗೆ ಆಕರ್ಷಣೆಯಾಗಿ ತಮ್ಮ ಜತೆ ಕರೆದರು. ಕೊನೆಯತನಕವೂ ಅವರೊಡನಿದ್ದು ನಿತ್ಯ ವಾದ- ಪ್ರತಿವಾದ, ಜಗಳ-ಆತ್ಮೀಯತೆಗಳನ್ನು ಅನುಭವಿಸಿದವರು, ಗಾಂಧೀಜಿಯವರು “ಕರ್ನಾಟಕೀ’ ಎಂದೇ ಕರೆಯುತ್ತಿದ್ದರು. ಗಾಂಧೀಜಿಯವರಿಗೆ ಮುನ್ಶಿರಾಮ್‌ (ಸ್ವಾಮಿ ಶ್ರದ್ಧಾನಂದ) “ಮಹಾತ್ಮಾ’ ವಿಶೇಷಣ ಕೊಡಿಸಲು ಇವರೇ ಕಾರಣ. ಗಾಂಧೀಜಿಯವರ ಪತ್ರಕಾರನಾಗಿ ವೈಸರಾಯ್‌ಗಳಿಗೂ ಪತ್ರ ಬರೆದಿದ್ದ ಚತುರ್ವೇದಿ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ನಡೆದ ಘರ್ಷಣೆಗಳಲ್ಲಿ ಮರಣವನ್ನಪ್ಪಿದ ಸಾವಿರಾರು ಜನರಿಗೆ ಅಂತ್ಯಸಂಸ್ಕಾರವನ್ನು ನಡೆಸಿದ್ದರು. 1919ರ ಎ. 19ರಂದು ನಡೆದ ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡದಲ್ಲಿ ಬ್ರಿಟಿಷ್‌ ದಾಖಲೆ ಪ್ರಕಾರ 667 ಜನ ಸತ್ತಿದ್ದರೂ ಸಾವಿರಕ್ಕೂ ಹೆಚ್ಚು ಜನರ ಸಾಮೂಹಿಕ ಅಂತಿಮ ಸಂಸ್ಕಾರ ಮಾಡಿದವರು ಚತುರ್ವೇದಿ. ವೇದಬಲ್ಲವರು ಎಂಬ ಕಾರಣಕ್ಕೆ ಈ ಕೆಲಸವನ್ನು ಹಚ್ಚಿದ್ದು ಗಾಂಧೀಜಿಯವರೇ.

“ತ್ಯಾಗವೇ ಪುರಸ್ಕಾರ’ ಎಂದಿದ್ದ ಅಸಾಮಾನ್ಯ
1965ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಸಾಯುವವರೆಗೂ ಚತುರ್ವೇದಿ ದಿಲ್ಲಿಗೆ ಕಾಂಗ್ರೆಸ್‌ನ ಎಲ್ಲ ಸಭೆಗಳಿಗೆ ಹೋಗುತ್ತಿದ್ದರು. ಗಾಂಧೀಜಿ ನಿಧನದ ಬಳಿಕ ಬೆಂಗಳೂರಿನಲ್ಲಿ ನೆಲೆಸಿ 1960ರಿಂದ 80-90ರ ದಶಕದವರೆಗೆ ರಾಜ್ಯದ ಮೂಲೆಮೂಲೆಗಳಿಗೆ ವೇದ ಪ್ರಚಾರಕ್ಕಾಗಿ ಸಾಮಾನ್ಯರಂತೆ ಓಡಾಡುತ್ತಿದ್ದರೂ ಗಾಂಧೀಜಿ, ಮೋತಿಲಾಲ್‌ ನೆಹರೂ, ಜವಾಹರಲಾಲ್‌ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಬಾಬು ರಾಜೇಂದ್ರ ಪ್ರಸಾದ್‌, ರಾಧಾಕೃಷ್ಣನ್‌, ವಲ್ಲಭಬಾಯಿ ಪಟೇಲ್‌, ಇಂದಿರಾಗಾಂಧಿ, ಸಂಜಯ ಗಾಂಧಿ, ಮೊರಾರ್ಜಿ ದೇಸಾಯಿಯಂತಹ ಮಹಾನಾಯಕರ ಸಂಪರ್ಕವಿದ್ದ ವ್ಯಕ್ತಿ ಎಂದು ಯಾರಿಗೂ ಗೋಚರಿಸಲಿಲ್ಲ. 123 ವರ್ಷದ ಜಾಗತಿಕ ಹಿರಿಯ ವ್ಯಕ್ತಿ, ಮೂರು ಶತಕಗಳ ಅವಿಭಜಿತ ಭಾರತ ಚರಿತ್ರೆಯ ಜೀವಂತ ಸಾಕ್ಷಿ ಎಂದೂ ಸೆಲೆಬ್ರೆಟಿ ಆಗಲಿಲ್ಲ. ಅವರನ್ನು ನೋಡುವುದೇ ಭಾಗ್ಯವಾಗಿತ್ತಾದರೂ ಹಾಗೆನಿಸಲಿಲ್ಲ. ವಲ್ಲಭಬಾಯಿ ಪಟೇಲರು ಸರಕಾರದ ಯಾವುದಾದರೂ ಹುದ್ದೆ ಪಡೆದುಕೊಳ್ಳಿ ಎಂದಾಗ “ತ್ಯಾಗವೇ ಪುರಸ್ಕಾರ’ ಎಂದು ಉತ್ತರಿಸಿ ಅಧಿಕಾರದಾಹಿಗಳಿಗೆ ಸಂದೇಶ ನೀಡಿದವರು.

ಸ್ವಾತಂತ್ರ್ಯಕ್ಕಾಗಿ ಕಾದು ಆಗದ ಮದುವೆ!
ಸುಧಾಕರ ಚತುರ್ವೇದಿ ಸ್ವಾ ತಂತ್ರ್ಯ ಸಿಗುವವರೆಗೆ ಮದುವೆಯಾಗುವುದಿಲ್ಲವೆಂದು ಶಪಥ ಮಾಡಿದ್ದರು. ಸ್ವಾತಂತ್ರ್ಯ ಸಿಗುವುದು ತಡವಾಯಿತು, ವರ್ಷವೂ 50 ದಾಟಿತು. “ಇನ್ನು ಹೆಣ್ಣು ಕೊಡುವವರಾರು?’ ಎಂದು ಹಾಸ್ಯದ ಹೊನಲು ಹರಿಸುತ್ತಿದ್ದರು. ಏತನ್ಮಧ್ಯೆ ಮದುವೆಯಾಗಬೇಕೆಂದುಕೊಂಡಿದ್ದ ಯುವತಿ ಕ್ವೆಟ್ಟಾ (ಈಗ ಪಾಕಿಸ್ಥಾನದ ಭಾಗ)ಗೆ ಭೂಕಂಪ ಸಂತ್ರಸ್ತರ ಸೇವೆಗೆಂದು ಹೋದವಳು ಮರಳಿ ಬರಲೇ ಇಲ್ಲವಂತೆ. ಪರಿಣಾಮವೇ ಅವಿವಾಹಿತ ಬದುಕು. ದಲಿತ ಬಾಲಕನನ್ನು ದತ್ತಕ್ಕೆ ತೆಗೆದುಕೊಂಡು ವಿದ್ಯಾಭ್ಯಾಸ ಕೊಟ್ಟು ಬೆಳೆಸಿದರು, ವೇದಗಳ ಜಾತ್ಯತೀತ ತಣ್ತೀವನ್ನು ಸ್ವಂತ ಜೀವನದಲ್ಲಿ ಜಾರಿಗೊಳಿಸಿದರು. ಬೆಳಗ್ಗೆ ಮತ್ತು ಸಂಜೆ ಒಂದು ಬಾಳೆಹಣ್ಣು, ಮಧ್ಯಾಹ್ನ ತುಸು ಊಟವನ್ನು ಮಾಡುತ್ತಿದ್ದರು, ನಿತ್ಯ ಹೋಮ ನಡೆಸುತ್ತಿದ್ದರು.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next