Advertisement

ಸುದೀಪ್‌ ಮುಕ್ತ ಮುಕ್ತ

11:37 AM Oct 14, 2017 | |

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಸುದೀಪ್‌ ಹಾಲಿವುಡ್‌ ಚಿತ್ರದಲ್ಲಿ ನಟಿಸುವುದಕ್ಕೆ ಆಸ್ಟ್ರೇಲಿಯಾಗೆ ಹಾರಬೇಕಿತ್ತು. ಆದರೆ, ಸ್ವಲ್ಪ  ನಿಧಾನವಾಗಿದೆ. “ರೈಸನ್‌’ ಚಿತ್ರತಂಡದವರು ಇದೇ 22ಕ್ಕೆ ಬೆಂಗಳೂರಿಗೇ ಬರುತ್ತಾರಂತೆ. ಸುದೀಪ್‌ ಅವರ ಫೋಟೋ ಸೆಷನ್‌ ಇಲ್ಲೇ  ನಡೆಯಲಿದೆಯಂತೆ. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ಚಿತ್ರದ ಕುರಿತು ಒಂದು ಪತ್ರಿಕಾಗೋಷ್ಠಿ ನಡೆಯುವ ಸಾಧ್ಯತೆಯೂ ಇದೆಯಂತೆ. 

Advertisement

ಹಾಲಿವುಡ್‌  ಚಿತ್ರದ ಜೊತೆಗೆ ಚಿರಂಜೀವಿ ಅಭಿನಯದ “ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲೂ ಸುದೀಪ್‌ ಅಭಿನಯಿಸಬೇಕಿತ್ತು. ಆದರೆ, ಅದಿನ್ನೂ  ಗೊಂದಲದಲ್ಲಿದೆ. “ಸದ್ಯಕ್ಕೆ ತುಂಬಾ ಕಮಿಟ್‌ಮೆಂಟ್‌ ಗಳಿವೆ. ಈ ಸಂದರ್ಭದಲ್ಲಿ 50-60 ದಿನಗಳ ಕಾಲ್‌ಶೀಟ್‌ ಕೊಡುವುದು ಜೋಕ್‌ ಅಲ್ಲ.  ಹಾಗಾಗಿ ಅದಿನ್ನೂ ಕನ್ಫರ್ಮ್ ಆಗಿಲ್ಲ. ಚರ್ಚೆ ನಡೆಯುತ್ತಿದೆ. ಇನ್ನೂ ಪೂರ್ತಿ ಒಪ್ಪಿಲ್ಲ. ಮುಂದಿನ ದಿನಗಳಲ್ಲಿ ನೋಡಬೇಕು’ ಎನ್ನುತ್ತಾರೆ ಸುದೀಪ್‌. 

ಅಂಬಿಗೆ ಹೇಳಿ ಮಾಡಿಸಿದ ಪಾತ್ರವಿದು: ಈ ಮಧ್ಯೆ ಅವರು ಅಂಬರೀಶ್‌ ಅಭಿನಯದಲ್ಲಿ “ಅಂಬಿ ನಿಂಗೆ ವಯಸ್ಸಾಯೊ¤à’ ಎಂಬ ಚಿತ್ರವನ್ನು  ನಿರ್ಮಿಸುವುದಕ್ಕೆ ಸಜ್ಜಾಗಿದ್ದಾರೆ. ತಮಿಳಿನ “ಪವರ್‌ ಪಾಂಡಿ’ ಚಿತ್ರದ ರೀಮೇಕ್‌ ಇದಾಗಿದ್ದು, ಚಿತ್ರಕ್ಕೆ “ಅಂಬಿ ನಿಂಗೆ ವಯಸ್ಸಾಯೊ¤à’ ಎಂಬ  ಹೆಸರನ್ನು ಸುದೀಪ್‌ ಅವರೇ ಇಟ್ಟಿದ್ದಾರಂತೆ. “ಅಂಬರೀಶ್‌ ಅವರಿಗೆ ಈ ಸಿನಿಮಾ ಮಾಡಬೇಕು ಅಂತ ತುಂಬಾ ಆಸೆ.

ಅವರ ಎನರ್ಜಿ ನೋಡಿದೆ.  ಬಹಳ ಫ್ರೆಶ್‌ ಆಗಿ ಕಾಣುತ್ತಾರೆ. ಅಷ್ಟೇ ಅಲ್ಲ, ಚರ್ಚೆಗಳಿಗೆ ಬಂದು ಕೂರುತ್ತಾರೆ. ಬಹಳ ಕಡಿಮೆ ನಾನು ಆ ತರಹ ನೋಡಿದ್ದು. ಎಷ್ಟೋ ಸರಿ, ಅವರೇ ಚರ್ಚೆಗೆ ಕರೀತಾರೆ. ಹೆಸರು ಬಹಳ ಚೆನ್ನಾಗಿದೆ ಅನಿಸ್ತು. ಟ್ರೈಲರ್‌ ಇನ್ನೂ ಚೆನ್ನಾಗಿರುತ್ತೆ. ಆ ಪಾತ್ರ ಅವರಿಗೆ ಹೇಳಿ  ಮಾಡಿಸಿದಂತಿದೆ. ಆ ಪಾತ್ರವನ್ನ ಅವರೇ ಮಾಡಬೇಕು. ಬಹುಶಃ ನಂದಕಿಶೋರ್‌ ಆ ಚಿತ್ರವನ್ನು ನಿರ್ದೇಶಿಸಬಹುದು’ ಎನ್ನುತ್ತಾರೆ ಅವರು.

ಅವರ ಕನಸನ್ನು ನನಸು ಮಾಡುತ್ತಿದ್ದೇನೆ ಅಷ್ಟೆ: ಸುದೀಪ್‌ ನಿರ್ದೇಶನ ಮಾಡದೆ ಕೆಲವು ವರ್ಷಗಳೇ ಆಗಿವೆ. “ಮಾಣಿಕ್ಯ’ ನಂತರ ಯಾವೊಂದು  ಚಿತ್ರವನ್ನೂ ಅವರು ನಿರ್ದೇಶಿಸಿಲ್ಲ. ನಿರ್ದೇಶನ ಮಾಡುವ ಆಸೆ ಅವರಿಗೆ ಕಡಿಮೆಯಾಯಿತಾ ಎಂದರೆ, ಸಮಯ ಬಂದಾಗ ಖಂಡಿತಾ ನಿರ್ದೇಶನ ಮಾಡುತ್ತೇನೆ ಎಂದು ಹೇಳುತ್ತಾರೆ ಅವರು.

Advertisement

“ನನ್ನಿಂದ ಒಂದು ಪಾತ್ರ ಮಾಡಬೇಕು ಎಂದು ಬಯಸುವ ಬಹಳಷ್ಟು ಜನರನ್ನ ನಾನು ನೋಡುತ್ತಿದ್ದೀನಿ. ಬಹಳಷ್ಟು ಜನ ನನ್ನಿಂದ ಏನೋ ಮಾಡಿಸಬೇಕು ಅಂತ ಕನಸು ಕಟ್ಟಿಕೊಂಡು ಬರುತ್ತಿದ್ದಾರೆ. ಅವರಿಗೆ ಸ್ಪಂದಿಸುತ್ತಿದ್ದೀನಿ  ಅಷ್ಟೇ. ಒಬ್ಬ ನಟ ಸಾಯೋದು ಅವನು ಫ್ಲಾಪ್‌ ಆದಾಗ ಅಥವಾ ಅವನ ಮಾರ್ಕೆಟ್‌ ಬಿದ್ದಾಗ ಅಲ್ಲ, ಅವನಿಗೆ ಯಾರೂ ಪಾತ್ರ ಬರೀತಿಲ್ಲ ಎನಿಸಿದಾಗ.

ಯಾರೋ ನಮಗೋಸ್ಕರ ಕಥೆ ಮತ್ತು ಪಾತ್ರ ಬರೆಯುತ್ತಿದ್ದಾರೆ ಅಂದರೆ ನಾವು ಬದಕುದ್ದೀವಿ ಅಂತ ಅರ್ಥ. ಸದ್ಯಕ್ಕೆ ತುಂಬಾ ಜನ  ನನಗಾಗಿ ಪಾತ್ರ ಬರೆಯುತ್ತಿದ್ದಾರೆ. ನಾನು ಅವರ ಕನಸುಗಳನ್ನು ನನಸು ಮಾಡುವ ಪ್ರಯತ್ನ ಮಾಡುತ್ತಿದ್ದೀನಿ. ಸಮಯ ಬಂದಾಗ ಖಂಡಿತಾ  ನಿರ್ದೇಶನ ಮಾಡುತ್ತೀನಿ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ ಅವರು.

ರಾಜಕೀಯಕ್ಕೆ ಬರಲ್ಲ: ಇನ್ನು ಉಪೇಂದ್ರ ರಾಜಕೀಯ ಪಕ್ಷ ಸ್ಥಾಪಿಸಿರುವ ಹಿನ್ನೆಲೆಯಲ್ಲಿ, ಸುದೀಪ್‌ ಏನಾದರೂ ಅವರ ಜೊತೆಗೆ ಪ್ರಚಾರಕ್ಕೆ  ಹೋಗುತ್ತಾರಾ ಎಂಬ ಪ್ರಶ್ನೆ ಬರಬಹುದು. ಇಲ್ಲ ಎನ್ನುತ್ತಾರೆ ಅವರು. “ಅವರು ಪಕ್ಷ ಸ್ಥಾಪಿಸಿದ್ದಕ್ಕೆ ಅವರಿಗೆ ವಿಶ್‌ ಮಾಡುತ್ತೇನೆ.

ಬಹಳ ಒಳ್ಳೆಯ  ಗೆಳೆಯ ಅವರು. ಅವರಿಗೆ ಅನ್ನಿಸಿದ್ದನ್ನು ಅವರು ಮಾಡುತ್ತಿದ್ದಾರೆ. ಆ ಬಗ್ಗೆ ತುಂಬಾ ಖುಷಿ ಇದೆ. ಆದರೆ, ಪ್ರಚಾರ ಎಲ್ಲಾ ಇಲ್ಲ. ನನಗೆ ಐಡಿಯಾ  ಇಲ್ಲದಿರುವುದನ್ನು ನಾನು ಮಾಡುವುದಿಲ್ಲ’ ಎನ್ನುತ್ತಾರೆ ಅವರು. ಮುಂದೊಂದು ದಿನ ಏನಾದರೂ ಅವರು ರಾಜಕೀಯಕ್ಕೆ ಬರಬಹುದಾ ಎಂದರೆ, “ನಿಜ ಹೇಳಬೇಕೆಂದರೆ, ಮುಂದೆ ಒಂದು ದಿನ ಒಂದು ವ್ಯವಸ್ಥಿತ ಜೀವನ ನಡೆಸುವ ಆಸೆ ಇದೆ.

ಸಿನಿಮಾ ಇರೋವರೆಗೂ ಮಾಡುತ್ತೇನೆ. ಆ ನಂತರ ಎಲ್ಲದರಿಂದ ದೂರ ಒಂದು ತಣ್ಣನೆಯ ಜೀವನ ನಡೆಸಬೇಕು ಅಂತಾಸೆ. ಆಗ ಏನು ಮಾಡುತ್ತೀನಿ ಅಂತ ಗೊತ್ತಿಲ್ಲ. ಆದರೆ, ಹಾಗಿರಬೇಕು  ಅಂತ ನನಗೆ ಆಸೆ’ ಎಂದು ತಮ್ಮ ಆಸೆಯನ್ನು ಹೇಳಿಕೊಳ್ಳುತ್ತಾರೆ ಅವರು.

“ಆತನ ಪ್ಯಾಶನ್‌ಗೆ ತಲೆಬಾಗಬೇಕು’
ಸುದೀಪ್‌ ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ “ದಿ ವಿಲನ್‌’ ಚಿತ್ರದ ಇನ್ನೊಂದು ಹಂತದ ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದಾರೆ. ಈಗಾಗಲೇ ಅವರು  “ದಿ ವಿಲನ್‌’ ಚಿತ್ರಕ್ಕಾಗಿ ಪ್ರೇಮ್‌ ಜೊತೆಗೆ ಸಾಕಷ್ಟು ಸುತ್ತಾಡಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು, ಲಂಡನ್‌, ಬ್ಯಾಂಕಾಕ್‌, ಶಿವಮೊಗ್ಗ,  ಬೆಳಗಾವಿ ಅಂತ ಸಾಕಷ್ಟು ಸಮಯ ಕಳೆದಿದ್ದಾರೆ.

ಇಷ್ಟು ದಿನಗಳಲ್ಲಿ ಪ್ರೇಮ್‌ ಒಬ್ಬ ಪ್ಯಾಶನೇಟ್‌ ನಿರ್ದೇಶಕ ಎಂದು ಅರ್ಥ ಮಾಡಿಕೊಂಡಿದ್ದಾರೆ. “ಪ್ರೇಮ್‌ ತುಂಬಾ ಬಿಲ್ಡಪ್‌ ಕೊಡುತ್ತಾರೆ, ಶೋ ಆಫ್ ಮಾಡುತ್ತಾರೆ ಅಂತ ಕೇಳಿದ್ದೆ. ಆದರೆ, ಅವರ ಜೊತೆಗೆ ಕೆಲಸ ಮಾಡಿದ ಮೇಲೆ ಆತ ಎಷ್ಟು ಪ್ಯಾಶನೇಟ್‌ ಅಂತ ಅರ್ಥವಾಯಿತು.

ಅವರ ಪ್ಯಾಶನ್‌ಗೆ ತಲೆ ಬಾಗಲೇ ಬೇಕು. ಸದಾ ಸಿನಿಮಾ ಬಗ್ಗೆಯೇ ಯೋಚನೆ ಮಾಡುತ್ತಿರುತ್ತಾರೆ. ಆ ಮನುಷ್ಯ ಒಂದು ಕಡೆ ಕೂರಲ್ಲ. ಸರಿಯಾಗಿ ಊಟ ಮಾಡಲ್ಲ. ನಾನು ಬೈದು ಊಟ ಮಾಡಿಸ್ತೀನಿ. ಇನ್ನೂ ಒಂದು ವಿಶೇಷ ಅಂದರೆ, ಆತ ಯಾರಿಗೂ ಬೈಯಲ್ಲ. ಎಲ್ಲರಿಂದಲೂ ಪ್ರೀತಿ ಇಂದ ಕೆಲಸ ತೆಗೆಯುತ್ತಾರೆ. ಅಂತಹ ನಿರ್ದೇಶಕರ ಜೊತೆಗೆ ಕೆಲಸ ಮಾಡುವುದಕ್ಕೆ ನಿಜಕ್ಕೂ ಖುಷಿ. 

ಇನ್ನು ಶಿವರಾಜಕುಮಾರ್‌ ಜೊತೆಗೆ ಕೆಲಸ ಮಾಡೋದು ನಿಜಕ್ಕೂ ಸಂತೋಷ. ಅವರು ಯಾವಾಗ ಬರ್ತಾರೆ, ಯಾವಾಗ ಹೋಗುತ್ತಾರೆ  ಅನ್ನೋದೇ ಗೊತ್ತಾಗಲ್ಲ. ಅವರು ಯಾವತ್ತೂ ಬರುವಾಗ ಅಹಂ ತರುವುದಿಲ್ಲ. ಹಾಗಾಗಿ ಬಹಳ ಖುಷಿಯಾಗತ್ತೆ ಅವರ ಜೊತೆಗೆ ಕೆಲಸ  ಮಾಡೋಕೆ. ಇನ್ನು ಪ್ರೇಮ್‌, ನಮ್ಮಿಬ್ಬರ ಪಾತ್ರವನ್ನ ಬಹಳ ಚೆನ್ನಾಗಿ ಬ್ಯಾಲೆನ್ಸ್‌ ಮಾಡಿದ್ದಾರೆ’ ಎಂದು ಖುಷಿಯಾಗುತ್ತಾರೆ ಸುದೀಪ್‌.

ನಾನು ಡಿಕ್ಟೇಟರ್‌ಆಗೋದಕ್ಕೆ ಇಷ್ಟವಿಲ್ಲ!
ಸುದೀಪ್‌ಗೆ ತಮ್ಮ ಮಗಳು ಸಾನ್ವಿ ಏನಾಗಬೇಕೆದು ಇಷ್ಟ? ಈ ಕುರಿತು ಅವರನ್ನು ಕೇಳಿದರೆ, ತಮಗೆ ಡಿಕ್ಟೇಟರ್‌ ಆಗುವುದಕ್ಕೆ ಇಷ್ಟವಿಲ್ಲ  ಎನ್ನುತ್ತಾರೆ ಅವರು. “ಅವಳೊಬ್ಬ ಟ್ಯಾಲೆಂಟೆಡ್‌ ಹುಡುಗಿ. ಪೇಂಟಿಂಗ್‌ ಮತ್ತು ಗಾಯನ ಅಂದರೆ ಅವಳಿಗೆ ಬಹಳ ಇಷ್ಟ.

ಅವಳಿಗೆ ಬೆಂಬಲ ಕೊಡೋದಕ್ಕೆ ಇಷ್ಟಪಡುತ್ತೀನಿ. ಡಿಕ್ಟೇಟರ್‌ ಆಗುವುದಕ್ಕೆ ಇಷ್ಟಪಡುವುದಿಲ್ಲ. ಅವಳಿಗೆ ಏನು ಆಸೆಯೋ ಅದು ಮಾಡಲಿ. ಹಿಂದೆ ನಿಂತು ಬೆಂಬಲ  ಕೊಡುತ್ತೀನಿ’ ಎನ್ನುತ್ತಾರೆ ಸುದೀಪ್‌.

Advertisement

Udayavani is now on Telegram. Click here to join our channel and stay updated with the latest news.

Next