ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಬಹುನಿರೀಕ್ಷೆ ಹುಟ್ಟಿಸಿದ ಚಿತ್ರಗಳಲ್ಲಿ “ದಿ ವಿಲನ್’ ಕೂಡ ಒಂದು. ಶಿವರಾಜಕುಮಾರ್ ಹಾಗೂ ಸುದೀಪ್ ಮೊದಲ ಬಾರಿಗೆ ಜೊತೆಯಾಗಿ ನಟಿಸಿದ ಸಿನಿಮಾ ಎಂಬುದು ಒಂದು ಕಾರಣವಾದರೆ, ಆರು ವರ್ಷಗಳ ನಂತರ ಪ್ರೇಮ್ ನಿರ್ದೇಶನ ಮಾಡಿದ ಸಿನಿಮಾ ಎಂಬುದು ಇನ್ನೊಂದು ಕಾರಣ. ಹೀಗೆ ನಿರೀಕ್ಷೆಗಳ ಮೂಟೆಯೊಂದಿಗೆ ಬಂದ ಚಿತ್ರ ಕಲೆಕ್ಷನ್‌ನಲ್ಲಿ ಜೋರು ಸದ್ದು ಮಾಡಿತು.
ಆರಂಭದಲ್ಲಿ ಚಿತ್ರತಂಡ ಕೂಡಾ ಖುಷಿಯಿಂದ ಚಿತ್ರದ ಕಲೆಕ್ಷನ್, ಕನ್ನಡ ಸಿನಿಮಾವೊಂದು ಈ ಮಟ್ಟದ ಕಲೆಕ್ಷನ್ ಮಾಡಿದ ರೀತಿಯ ಬಗ್ಗೆ ಮಾತನಾಡಿತು. ಈಗ ಚಿತ್ರ 50 ದಿನ ಪೂರೈಸಿದೆ. ಆದರೆ, ಆ ಸಂಭ್ರಮ ಚಿತ್ರತಂಡದಲ್ಲಿ ಕಾಣುತ್ತಿಲ್ಲ. ಅಭಿಮಾನಿಗಳಷ್ಟೇ ಫೇಸ್‌ಬುಕ್, ಟ್ವೀಟರ್‌ನಲ್ಲಿ “ದಿ ವಿಲನ್’ ಪೋಸ್ಟರ್ ಹಾಕುತ್ತಾ ಸಂಭ್ರಮಿಸುತ್ತಿದ್ದಾರೆ. ಚಿತ್ರವೊಂದು 50 ದಿನ ಓಡಿದರೂ ಅದಕ್ಕೆ ಸಂಬಂಧಪಟ್ಟವರು ಆಸಕ್ತಿ ತೋರಿಸದೇ ಇರುವುದು ಸುದೀಪ್ ಅವರಿಗೆ ಬೇಸರ ತಂದಂತಿದೆ.
ಸುದೀಪ್ ತಮ್ಮ ಅಭಿಮಾನಿಯೊಬ್ಬರಿಗೆ ಉತ್ತರಿಸಿದ ಟ್ವೀಟರ್‌ನಲ್ಲಿ ಆ ಬೇಸರ ಎದ್ದು ಕಾಣುತ್ತಿದೆ. ಟ್ವೀಟರ್‌ನಲ್ಲೊಬ್ಬರು “ದಿ ವಿಲನ್’ ಚಿತ್ರದ 50 ದಿನ ಸಂಭ್ರಮದ ಕುರಿತಾಗಿ ಪೋಸ್ಟರ್‌ವೊಂದನ್ನು ಡಿಸೈನ್ ಮಾಡಿ ಅದನ್ನು ಸುದೀಪ್ ಅವರೊಂದಿಗೆ ಹಂಚಿಕೊಂಡಿದ್ದರು. ಇದಕ್ಕೆ ಉತ್ತರಿಸಿರುವ ಸುದೀಪ್, “ನೀವುಗಳೆಲ್ಲ ಪ್ರೀತಿಯಿಂದ ಪೋಸ್ಟರ್ ಮಾಡುತ್ತಿರುವುದನ್ನು ನೋಡಿ ಖುಷಿಯಾಗುತ್ತಿದೆ.
ಆದರೆ, ಚಿತ್ರಕ್ಕೆ ಸಂಬಂಧಪಟ್ಟವರು ಕಾರಣಾಂತಗಳಿಂದ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ, “ನಾನು ಯಾವತ್ತೂ ಹೇಳುವಂತೆ, ನಮ್ಮ ಸುತ್ತಮುತ್ತ ಅನೇಕ ಪಾಠಗಳಿರುತ್ತವೆ. ಅವುಗಳಿಂದ ಪಾಠ ಕಲಿತು ಮುಂದೆ ಸಾಗುತ್ತಿರಬೇಕು. ವಿಲನ್ ಸಿನಿಮಾ ಸಾಕಷ್ಟು ಒಳ್ಳೆಯ ನೆನಪುಗಳನ್ನು ನನಗೆ ಕೊಟ್ಟಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಚಿತ್ರ 50 ದಿನ ಪೂರೈಸಿದರೂ ಚಿತ್ರಕ್ಕೆ ಸಂಬಂಧಿಸಿದವರು ಆಸಕ್ತಿ ತೋರಿಸುತ್ತಿಲ್ಲ ಎಂಬ ಬೇಸರವನ್ನು ಸುದೀಪ್ ಹೊರಹಾಕಿದ್ದಾರೆ.