ಟ್ವಿಟರ್‌ನಲ್ಲಿ ಸುದೀಪ್ ಬಹಳ ಆ್ಯಕ್ಟೀವ್ ಆಗಿರುವುದು, ಅವರನ್ನು ಲಕ್ಷಲಕ್ಷ ಅನುಯಾಯಿಗಳನ್ನು ಅನುಸರಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ಸುದೀಪ್ ಟ್ವಿಟರ್‌ನಲ್ಲಿ ಹೊಸ ದಾಖಲೆಯನ್ನೇ ಮಾಡಿದ್ದಾರೆ. ಇದೀಗ ಅವರನ್ನು ಫಾಲೋ ಮಾಡುತ್ತಿರುವವರ ಸಂಖ್ಯೆ 10 ಲಕ್ಷ ದಾಟಿದೆ ಎನ್ನುವುದು ವಿಶೇಷ.
ಹೌದು, ಟ್ವಿಟರ್‌ನಲ್ಲಿ ಸುದೀಪ್ ಅವರಿಗೆ ಇದೀಗ ಒಂದು ಮಿಲಿಯನ್ ಅನುಯಾಯಿಗಳಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಕಲಾವಿದರು ಮತ್ತು ತಂತ್ರಜ್ಞರ ಪೈಕಿ ಅತೀ ಹೆಚ್ಚು ಫಾಲೋವರ್ಸ್‌ಗಳು ಸುದೀಪ್ ಅವರ ಹಿಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಟ್ವಿಟರ್‌ನಲ್ಲಿ ಸಕ್ರಿಯವಾಗಿರುವ ಕಲಾವಿದರು ಬಹಳ ಕಡಿಮೆಯೆಂದೇ ಹೇಳಬೇಕು.
ಸುದೀಪ್ ಬಿಟ್ಟರೆ ಜಗ್ಗೇಶ್, ಉಪೇಂದ್ರ, ದರ್ಶನ್, ಗಣೇಶ್, ಹರಿಪ್ರಿಯಾ, ರಮೇಶ್ ಅರವಿಂದ್, ಯಶ್, ಶ್ರೀಮುರಳಿ ಸೇರಿದಂತೆ ಇನ್ನೊಂದಿಷ್ಟು ಹೆಸರುಗಳು ಸಿಗುತ್ತವೆ. ಅವರೆಲ್ಲಾ ಟ್ವಿಟರ್‌ನಲ್ಲಿ ಸಕ್ರಿಯವಾಗಿರುವುದಷ್ಟೇ ಅಲ್ಲ, ಹಲವು ಅನುಯಾಯಿಗಳನ್ನು ಹೊಂದಿದ್ದಾರೆ.
ಮಿಕ್ಕಂತೆ ಇನ್ನೊಂದಿಷ್ಟು ಕಲಾವಿದರು ಟ್ವಿಟರ್‌ನಲ್ಲಿ ಅಕೌಂಟ್ ಹೊಂದಿದ್ದಾರಾದರೂ, ಅವರು ಅಷ್ಟೇನೂ ಸಕ್ರಿಯವಾಗಿಲ್ಲ. ಆದರೆ, ಸುದೀಪ್ ಮಾತ್ರ ಸಕ್ರಿಯವಾಗಿರುವುದಷ್ಟೇ ಅಲ್ಲ, ಟ್ವಿಟರ್ ಮೂಲಕ ಅನೇಕ ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುತ್ತಾರೆ ಮತ್ತು ತಮ್ಮ ಅಭಿಮಾನಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಅದೇ ಕಾರಣಕ್ಕೆ ಮಿಕ್ಕೆಲ್ಲಾ ಕಲಾವಿದರುಗಳಿಗೆ ಹೋಲಿಸಿದರೆ, ಕನ್ನಡ ಚಿತ್ರರಂಗದಲ್ಲಿ ಸುದೀಪ್ ಅವರಿಗೆ ಹಿಂಬಾಲಕರ ಸಂಖ್ಯೆ ಜಾಸ್ತಿ ಇದೆ ಎಂದೇ ಹೇಳಬಹುದು. ಸುದೀಪ್ ಅವರನ್ನು 10 ಲಕ್ಷ ಮಂದಿ ಹಿಂಬಾಲಕರಿದ್ದರೆ, ಅವರು ಮಾತ್ರ 39 ಮಂದಿಯನ್ನು ಅನುಸರಿಸುತ್ತಿದ್ದಾರೆ. ಇನ್ನು ಇದುವರೆಗೂ ಅವರು ಟ್ವೀಟ್ ಮಾಡಿರುವ ಸಂಖ್ಯೆ 9,500 ಸಾವಿರ ಮೀರುತ್ತದೆ.